ಭಾನುವಾರ, ಜುಲೈ 25, 2021
28 °C
ಮಾರುಕಟ್ಟೆಗಿಳಿದ ಯುವ ಮನಸ್ಸು

ಕೊರೊನಾ ಆತಂಕದಲ್ಲೂ ಹುಮ್ಮಸ್ಸು; ದಿ ರೋಮಿಂಗ್ ಕೆಫೆಯ ‘ಹಿಲ್ಸ್‌ ಕಾಫಿ’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರಿಗರಿಗೆ ಅತ್ಯುತ್ತಮ ರುಚಿಯ ಫಿಲ್ಟರ್ ಕಾಫಿ ಕೊಡಬೇಕು ಎಂಬ ಹುಮ್ಮಸ್ಸಿನಿಂದ ಮೂವರು ಗೆಳೆಯರು ‘ದಿ ರೋಮಿಂಗ್ ಕೆಫೆ’ ಆರಂಭಿಸಿದ್ದು, ‘ಹಿಲ್ಸ್‌ ಕಾಫಿ’ ಬ್ರ್ಯಾಂಡ್‌ನಡಿ ಬುಧವಾರದಿಂದ (ಜುಲೈ 15)  ಮಾರುಕಟ್ಟೆ ಪ್ರವೇಶಿಸಿದ್ದಾರೆ.

ವಾಹನವೊಂದನ್ನೇ ಕೆಫೆಯನ್ನಾಗಿ ರೂಪಿಸಿಕೊಂಡಿದ್ದಾರೆ. ವಾಯು ವಿಹಾರಿಗಳ ಮೆಚ್ಚಿನ ತಾಣ ಕುಕ್ಕರಹಳ್ಳಿ ಕೆರೆಯ ಆಸುಪಾಸಿನಲ್ಲಿ ತಾಜಾ ಕಾಫಿ ಮಾರುವ ಮೂಲಕ ಉದ್ಯಮದ ಹಾದಿಯನ್ನು ಕಂಡುಕೊಂಡಿದ್ದಾರೆ. ಮುಂಜಾನೆ–ಮುಸ್ಸಂಜೆ ಕುಕ್ಕರಹಳ್ಳಿ ಕೆರೆ ಬದಿ ಕಾಫಿ ಮಾರಾಟ ಮಾಡಿದರೆ, ಉಳಿದ ಅವಧಿಯಲ್ಲಿ ನ್ಯಾಯಾಲಯದ ಬಳಿ ತಮ್ಮ ವಹಿವಾಟು ನಡೆಸಲಿದ್ದಾರೆ.

‘ಮೂವರು ಗೆಳೆಯರು ಸೇರಿ ಹೊಸ ಉದ್ಯಮಕ್ಕೆ ಕೈ ಹಾಕಿದ್ದೇವೆ. ₹10.50 ಲಕ್ಷ ಬಂಡವಾಳ ಹೂಡಿದ್ದೇವೆ. ಕೆಫೆ ರೂಪಿಸಲು ಸೆಕೆಂಡ್ ಹ್ಯಾಂಡ್ ವಾಹನವೊಂದನ್ನು ₹2 ಲಕ್ಷಕ್ಕೆ ಖರೀದಿಸಿದ್ದು, ನಮಗೆ ಬೇಕಾದ ರೀತಿ ರೂಪುರೇಷೆ ನೀಡಲಿಕ್ಕಾಗಿಯೇ ₹3.5 ಲಕ್ಷ ಖರ್ಚು ಮಾಡಿದ್ದೇವೆ’ ಎಂದು ಪಾಲುದಾರರಲ್ಲೊಬ್ಬರಾದ ನಯನ್‌ಕುಮಾರ್ ತಿಳಿಸಿದರು.

‘ಚಿಕ್ಕಮಗಳೂರಿನಿಂದ ಕಾಫಿ ಪುಡಿಯನ್ನು ತರಿಸಿಕೊಳ್ತೇವೆ. 100 ಎಂಎಲ್ ಫಿಲ್ಟರ್‌ ಕಾಫಿ ದರ ₹12. ಸಾವಯವ ಬೆಲ್ಲದಿಂದ ತಯಾರಿಸಿದ ಕಾಫಿಗೆ ₹15. ಬ್ಲಾಕ್ ಕಾಫಿಯೂ ₹12ಕ್ಕೆ ಲಭ್ಯ. ಗ್ರೀನ್ ಟೀ ಸಹ ₹15ಕ್ಕೆ ಕೊಡುತ್ತೇವೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಬೇಕಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಶುಂಠಿ ಹಾಗೂ ಬೆಳ್ಳುಳ್ಳಿ ಮಿಶ್ರಣದ, ಮನೆಯಲ್ಲೇ ತಯಾರಿಸಿದ ಕಷಾಯವನ್ನು ಮಾರಾಟ ಮಾಡಲಿದ್ದೇವೆ’ ಎಂದು ಹೇಳಿದರು.

‘ಕಾಫಿ ಪಾರ್ಸೆಲ್‌ಗೂ ಲಭ್ಯ. ಅರ್ಧ ಲೀಟರ್, ಮುಕ್ಕಾಲು ಲೀಟರ್‌ನ ಟೆಟ್ರಾ ಪ್ಯಾಕ್‌ನಲ್ಲಿ ಪಾರ್ಸೆಲ್ ಕೊಡ್ತೇವಿ. 4 ತಾಸು ಬಿಸಿ ಇರಲಿದೆ ಈ ಕಾಫಿ. ಇದಕ್ಕೆ ಹೆಚ್ಚುವರಿ ಶುಲ್ಕ ₹30 ವಿಧಿಸುತ್ತೇವಷ್ಟೇ. ಕುಕ್ಕೀಸ್‌ಗಳಾದ ಕಾರಾ ಬಿಸ್ಕತ್, ಸಿಹಿ ಬಿಸ್ಕತ್‌, ಕೋಡುಬಳೆಯ ಪ್ಯಾಕೇಟ್‌ಗಳು ನಮ್ಮಲ್ಲೇ ಸಿಗಲಿವೆ’ ಎಂದರು ಪ್ರಿಯದರ್ಶಿನಿ.

‘ಈ ಹಿಂದೆ ಜಿಮ್‌ ನಡೆಸುತ್ತಿದ್ದೆ. ಕೊರೊನಾ ಸೋಂಕು ಹರಡುವಿಕೆಯಿಂದ ಜಿಮ್ ಮುಚ್ಚಿತು. ಹೀಗಾಗಿ, ಕಾಫಿ ಮಾರ್ಕೆಟಿಂಗ್‌ ಮಾಡಲು ಮುಂದಾದೆ. ಸ್ನೇಹಿತರು ಕೈ ಜೋಡಿಸಿದ್ದಾರೆ’ ಎಂದು ನಯನ್‌ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.