ಭಾನುವಾರ, ನವೆಂಬರ್ 17, 2019
23 °C
ಕಲಬುರ್ಗಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಹಿನ್ನೆಲೆ l ಡಿಸೆಂಬರ್‌ನಲ್ಲಿ ಕಟಾವು

ತೊಗರಿ: ಸಮೃದ್ಧ ಫಸಲು ನಿರೀಕ್ಷೆ

Published:
Updated:
Prajavani

ಕಲಬುರ್ಗಿ: ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ತೊಗರಿಯ ಸಮೃದ್ಧ ಫಸಲು ನಿರೀಕ್ಷಿಸಲಾಗಿದ್ದು, ಡಿಸೆಂಬರ್‌ ಮೊದಲ ವಾರದಲ್ಲಿ ಕಟಾವು ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ.

ಜಿಲ್ಲೆಯ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ‘ಟಿಎಸ್‌3ಆರ್‌’ ತಳಿಯ ತೊಗರಿ ಬಿತ್ತನೆ ಮಾಡಲಾಗಿದೆ. ಈ ತಳಿಯ ತೊಗರಿ ಬೀಜಗಳು ರೋಗ ನಿರೋಧಕ ಗುಣ ಹೊಂದಿದ್ದರಿಂದ ಈ ಬಾರಿ ಕೀಟಬಾಧೆಯೂ ಅಷ್ಟಾಗಿ ಇಲ್ಲ ಎನ್ನುತ್ತಿದ್ದಾರೆ ಕೃಷಿ ವಿಜ್ಞಾನಿಗಳು.  

‘ಚಿಂಚೋಳಿ, ಕಾಳಗಿ, ಸೇಡಂ, ಅಫಜಲಪುರ, ಜೇವರ್ಗಿ, ಆಳಂದ ತಾಲ್ಲೂಕುಗಳಲ್ಲಿ ತೊಗರಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಕಳೆದ ಬಾರಿ ಬರ ಇದ್ದುದರಿಂದ ಜಿಲ್ಲೆಯಲ್ಲಿ 20 ಲಕ್ಷ ಕ್ವಿಂಟಲ್‌ ತೊಗರಿ ಇಳುವರಿ ಬಂದಿತ್ತು. ಈ ಬಾರಿ ಮಳೆ–ಬೆಳೆ ಎರಡೂ ಚೆನ್ನಾಗಿರುವುದರಿಂದ ಸುಮಾರು 35 ಲಕ್ಷ ಕ್ವಿಂಟಲ್‌ ತೊಗರಿ ಇಳುವರಿಯ ನಿರೀಕ್ಷೆ ಇದೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ.

‘ಕೆಲ ವರ್ಷಗಳ ಹಿಂದೆ ಗುಳ್ಯಾಳ, ಮಾರುತಿ, ಆಶಾ ತಳಿಯ ತೊಗರಿಯನ್ನು ಕಲಬುರ್ಗಿ, ಯಾದಗಿರಿ, ಬೀದರ್‌ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಕೀಟವು ತೊಗರಿ ದಂಟಿನ ಮಧ್ಯದಲ್ಲಿ ರಂಧ್ರ ಕೊರೆದು,  ಪೋಷಕಾಂಶಗಳನ್ನು ಹೀರಿಕೊಳ್ಳುತ್ತಿತ್ತು. ಇದರಿಂದಾಗಿ ರೈತರಿಗೆ ಬೆಳೆ ನಷ್ಟವಾಗುತ್ತಿತ್ತು’ ಎಂದರು.

‘ ಈ ಸಮಸ್ಯೆ ನಿವಾರಿಸಲೆಂದೇ ಟಿಎಸ್‌3ಆರ್‌ ನೂತನ ತಳಿಯನ್ನು ಅಭಿವೃದ್ಧಿಪಡಿಸಲಾಯಿತು. ತೊಗರಿ ದಂಟುಗಳು ಹಾಗೂ ಕಾಯಿಯ ತೊಗಟೆ ಬಹಳ ದಪ್ಪ ಇರುವುದರಿಂದ ಕೀಟವು ಒಳಗೆ ಪ್ರವೇಶಿಸಲು ಆಗುವುದಿಲ್ಲ. ಸೂಕ್ತ ಆಹಾರ ಸಿಗದೇ ಇದ್ದುದರಿಂದ ಆ ಕೀಟವು 24 ಗಂಟೆಯಲ್ಲೇ ಸಾವನ್ನಪ್ಪುತ್ತದೆ. ಇಂತಹ ರೋಗ ನಿರೋಧಕ ಶಕ್ತಿಯ ಈ ತಳಿ, ಮಳೆಯಿಂದಾಗಿ ಇನ್ನಷ್ಟು ಹುಲುಸಾಗಿ ಬೆಳೆದಿದೆ’ ಎಂದು ಸೂಗುರ ವಿವರಿಸಿದರು.

ಪ್ರತಿಕ್ರಿಯಿಸಿ (+)