ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಯಾಣಿಕ ವಾಹನಗಳ ಸಗಟು ಮಾರಾಟ ಏರಿಕೆ

ಹೊಸ ಮಾದರಿಯ ವಾಹನಗಳ ಬಿಡುಗಡೆಯಿಂದಾಗಿ ಮಾರಾಟದಲ್ಲಿ ಹೆಚ್ಚಳ
Published 1 ಜುಲೈ 2024, 15:56 IST
Last Updated 1 ಜುಲೈ 2024, 15:56 IST
ಅಕ್ಷರ ಗಾತ್ರ

ನವದೆಹಲಿ: ಟೊಯೊಟ, ಮಾರುತಿ ಸುಜುಕಿ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಕಿಯಾ, ಬಜಾಜ್‌ನ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜೂನ್‌ ತಿಂಗಳಲ್ಲಿ ಏರಿಕೆಯಾಗಿದೆ. ಇದೇ ವೇಳೆ ಎಂ.ಜಿ. ಮೋಟರ್ಸ್‌, ಟಾಟಾ, ಹುಂಡೈ, ಔಡಿ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುಕಟ್ಟೆಗೆ ಹೊಸ ಮಾದರಿಯ ವಾಹನಗಳ ಬಿಡುಗಡೆಯಿಂದಾಗಿ ಮಾರಾಟದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಕಂಪನಿಗಳು ಸೋಮವಾರ ತಿಳಿಸಿವೆ.

ಎಸ್‌ಯುವಿ ಮತ್ತು ಎಂಪಿವಿ ವಾಹನಗಳಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದೆ. ಗ್ರಾಮೀಣ ಭಾಗದ ಕಡೆಗೂ ವಹಿವಾಟು ವಿಸ್ತರಿಸಿದ್ದರಿಂದ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಟೊಯೊಟ ಕಿರ್ಲೋಸ್ಕರ್ ಮೋಟರ್ಸ್‌ನ ಶಬರಿ ಮನೋಹರ್ ತಿಳಿಸಿದ್ದಾರೆ. 

ಟೊಯೊಟ: ಟೊಯೊಟ ಕಿರ್ಲೋಸ್ಕರ್‌ ಮೋಟರ್‌ನ 27,474 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 19,608 ವಾಹನಗಳು ಮಾರಾಟವಾಗಿದ್ದು, ಈ ಮಾರಾಟಕ್ಕೆ ಹೋಲಿಸಿದರೆ ಶೇ 40ರಷ್ಟು ಏರಿಕೆಯಾಗಿದೆ. ದೇಶೀಯವಾಗಿ 25,752 ವಾಹನ ಮಾರಾಟವಾಗಿದ್ದರೆ, 1,722 ವಾಹನಗಳು ರಫ್ತಾಗಿವೆ.

ಮಾರುತಿ ಸುಜುಕಿ: ಮಾರುತಿ ಸುಜುಕಿ ಇಂಡಿಯಾದ 1.79 ಲಕ್ಷ ವಾಹನಗಳು ಮಾರಾಟವಾಗಿದ್ದು, ಶೇ 12ರಷ್ಟು ಏರಿಕೆಯಾಗಿದೆ. ದೇಶೀಯವಾಗಿ ಒಟ್ಟು 1.37 ಲಕ್ಷ ಮಾರಾಟವಾಗಿದ್ದು, ವಾಹನಗಳ ರಫ್ತು 19,770 ರಿಂದ 31,033ಕ್ಕೆ ಏರಿಕೆಯಾಗಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ: ಮಹೀಂದ್ರ ಆ್ಯಂಡ್‌ ಮಹೀಂದ್ರ ವಾಹನಗಳ ಮಾರಾಟದಲ್ಲಿ ಶೇ 11ರಷ್ಟು ಏರಿಕೆಯಾಗಿದ್ದು, 69,397 ವಾಹನಗಳು ಮಾರಾಟವಾಗಿವೆ. ಹಿಂದಿನ ಜೂನ್‌ನಲ್ಲಿ 62,429 ಮಾರಾಟವಾಗಿದ್ದವು. ದೇಶೀಯ ವಾಹನಗಳ ಮಾರಾಟವು 32,588ರಿಂದ 40,022ಕ್ಕೆ ಏರಿಕೆಯಾಗಿದೆ. ರಫ್ತು ಪ್ರಮಾಣ ಶೇ 4ರಷ್ಟು ಏರಿಕೆಯಾಗಿದ್ದು, 2,597 ವಾಹನ ಮಾರಾಟವಾಗಿವೆ.

ಕಿಯಾ: ಕಿಯಾ ಇಂಡಿಯಾದ ವಾಹನಗಳ ಮಾರಾಟದಲ್ಲಿ ಶೇ 10ರಷ್ಟು ಏರಿಕೆಯಾಗಿದ್ದು, 21,300 ವಾಹನ ಮಾರಾಟವಾಗಿವೆ.

ಬಜಾಜ್‌: ಬಜಾಜ್‌ ಆಟೊದ 3.58 ಲಕ್ಷ ವಾಹನಗಳ ಮಾರಾಟವಾಗಿದ್ದು, ಶೇ 5ರಷ್ಟು ಹೆಚ್ಚಳವಾಗಿದೆ. ದೇಶೀಯ ಮಾರಾಟವು 1.99 ಲಕ್ಷದಿಂದ 2.16 ಲಕ್ಷಕ್ಕೆ ಏರಿಕೆಯಾಗಿದೆ. ರಫ್ತು ಶೇ 1ರಷ್ಟು ಏರಿಕೆಯಾಗಿದ್ದು, 1.42 ಲಕ್ಷ ವಾಹನ ಮಾರಾಟವಾಗಿವೆ.

ಜೆಎಸ್‌ಡಬ್ಲ್ಯು ಎಂ.ಜಿ ಮೋಟರ್‌:  ಜೆಎಸ್‌ಡಬ್ಲ್ಯು ಎಂ.ಜಿ ಮೋಟರ್‌ ಇಂಡಿಯಾ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇ 9ರಷ್ಟು ಇಳಿಕೆಯಾಗಿದ್ದು 4644 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 5125 ವಾಹನಗಳು ಮಾರಾಟವಾಗಿದ್ದವು.

ಟಾಟಾ ಮೋಟರ್ಸ್‌: ಟಾಟಾ ಮೋಟರ್ಸ್‌ನ 74147 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 80383 ಮಾರಾಟವಾಗಿದ್ದವು. ಈ ಮಾರಾಟಕ್ಕೆ ಹೋಲಿಸಿದರೆ ಶೇ 8ರಷ್ಟು ಇಳಿಕೆಯಾಗಿದೆ. ವಿದ್ಯುತ್‌ ಚಾಲಿತ ವಾಹನಗಳು ಸೇರಿದಂತೆ ಪ್ರಯಾಣಿಕ ವಾಹನಗಳ ಮಾರಾಟವು ಶೇ 8ರಷ್ಟು ಇಳಿಕೆಯಾಗಿದ್ದು 43624 ವಾಹನ ಮಾರಾಟವಾಗಿದೆ. ವಾಣಿಜ್ಯ ವಾಹನಗಳ ಮಾರಾಟವು 33148 ರಿಂದ 30623ಕ್ಕೆ ಇಳಿದಿದೆ.

ಔಡಿ: ಔಡಿ ಇಂಡಿಯಾದ ವಾಹನಗಳ ಚಿಲ್ಲರೆ ಮಾರಾಟವು ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 6ರಷ್ಟು ಇಳಿಕೆಯಾಗಿದ್ದು 1431 ವಾಹನ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1524 ವಾಹನ ಮಾರಾಟವಾಗಿದ್ದವು.

ಹುಂಡೈ: ಹುಂಡೈ ಮೋಟರ್‌ ಇಂಡಿಯಾದ 64803 ವಾಹನ ಮಾರಾಟವಾಗಿದ್ದು ಶೇ 1ರಷ್ಟು ಕಡಿಮೆಯಾಗಿದೆ. ವಾಹನಗಳ ರಫ್ತು 15600 ರಿಂದ 14700ಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT