ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕರ ಪ್ರತಿಭಟನೆ: 2 ಸಾವಿರ ಬಂಕ್‌ನಲ್ಲಿ ದಾಸ್ತಾನು ಖಾಲಿ

ಕಠಿಣ ಕಾನೂನು ವಿರುದ್ಧ ತೀವ್ರಗೊಂಡ ಟ್ರಕ್‌ ಚಾಲಕರ ಪ್ರತಿಭಟನೆ
Published 2 ಜನವರಿ 2024, 16:19 IST
Last Updated 2 ಜನವರಿ 2024, 16:19 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಾಣಿಜ್ಯ ವಾಹನ, ಟ್ರಕ್‌ ಮತ್ತು ಟ್ಯಾಂಕರ್‌ ಚಾಲಕರು ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಮಂಗಳವಾರ ಗ್ರಾಹಕರಿಗೆ ತಟ್ಟಿದೆ. 

ಇಂಧನ ಪೂರೈಕೆ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. 

‘ದೇಶದ ಪಶ್ಚಿಮ ಮತ್ತು ಉತ್ತರ ಭಾರತ ಭಾಗದಲ್ಲಿನ ಎರಡು ಸಾವಿರಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಲ್ಲಿ ದಾಸ್ತಾನು ಖಾಲಿಯಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ’ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಕೆಲವು ಬಂಕ್‌ಗಳ ಮುಂಭಾಗ ‘ಇಂಧನ ಖಾಲಿಯಾಗಿದೆ’ ಎಂದು ಬರೆದಿರುವ ಫಲಕಗಳನ್ನು ತೂಗು ಹಾಕಲಾಗಿತ್ತು.

ಮಹಾರಾಷ್ಟ್ರದಲ್ಲಿ ಹೋರಾಟ ತೀವ್ರ: 

ಮಹಾರಾಷ್ಟ್ರದ ಮುಂಬೈ, ಥಾಣೆ, ನಾಗ್ಬುರದಲ್ಲಿ ಹೋರಾಟ ತೀವ್ರಗೊಂಡಿದೆ. 

‘ಸೋಮವಾರದಿಂದಲೇ ಚಾಲಕರು ಆರಂಭಿಸಿರುವ ಹೋರಾಟದಿಂದಾಗಿ ಇಂಧನ ಪೂರೈಕೆಗೆ ತೊಂದರೆಯಾಗಿದೆ’ ಎಂದು ಮುಂಬೈನ ಪೆಟ್ರೋಲ್‌ ಡೀಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಚೇತನ್‌ ಮೋದಿ ತಿಳಿಸಿದ್ದಾರೆ.

ನಾಗ್ಬುರದಲ್ಲಿ ನಡೆದ ಹೋರಾಟಕ್ಕೆ ಶಿವಸೇನಾ (ಯುಬಿಟಿ) ಸ್ಥಳೀಯ ಘಟಕವು ಬೆಂಬಲ ಘೋಷಿಸಿದೆ. ವಿವಿಧ ಲಾರಿ ಚಾಲಕರ ಸಂಘಗಳು ಪಾಲ್ಗೊಂಡಿವೆ.

5 ಲಕ್ಷ ವಾಹನಗಳಿಗೆ ತೊಂದರೆ:

ಮಧ್ಯಪ್ರದೇಶದ ಭೋಪಾಲ್‌, ಇಂದೋರ್‌, ಗ್ವಾಲಿಯರ್, ಜಬಲ್ಪುರದಲ್ಲೂ ಪ್ರತಿಭಟನೆ ಮುಂದುವರಿಯಿತು.  

‘ಮಧ್ಯಪ್ರದೇಶದಲ್ಲಿ ದೊಡ್ಡ ಮತ್ತು ಸಣ್ಣ ಪ್ರಮಾಣದ ವಾಹನಗಳು ಸೇರಿದಂತೆ ಸುಮಾರು 5 ಲಕ್ಷ ವಾಹನಗಳು ರಸ್ತೆಗೆ ಇಳಿದಿಲ್ಲ. ಕೇಂದ್ರವು ಸಂಹಿತೆಯಡಿ ನಿಗದಿಪಡಿಸಿರುವ ಶಿಕ್ಷೆ ಮತ್ತು ದಂಡವನ್ನು ವಾ‍ಪಸ್ ಪಡೆಯಬೇಕು’ ಎಂದು ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ (ಪಶ್ಚಿಮ ವಿಭಾಗ) ವಿಜಯ್‌ ಕಲ್ರಾ ಒತ್ತಾಯಿಸಿದ್ದಾರೆ. 

ಗುಜರಾತ್‌ನ ಖೇಡಾ, ವಲ್ಸಾದ್, ಗಿರ್ ಸೋಮನಾಥ್, ಭರೂಚ್ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲಿ ಚಾಲಕರು ಹೆದ್ದಾರಿ ತಡೆ ನಡೆಸಿದರು. 

ಹೈದರಾಬಾದ್‌ನ ಕೆಲವು ಬಂಕ್‌ಗಳಲ್ಲೂ ಇಂಧನ ಸಮಸ್ಯೆ ತಲೆದೋರಿದೆ. 

ಜಮ್ಮು ಮತ್ತು ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿನ ಶೇ 90ರಷ್ಟು ಪೆಟ್ರೋಲ್‌ ಬಂಕ್‌ಗಳ ಮೇಲೆ ಹೋರಾಟವು ಪರಿಣಾಮ ಬೀರಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಕ್‌ಗೆ ಇಂಧನ ಪೂರೈಸುವ 1,500 ಟ್ಯಾಂಕರ್‌ಗಳ ಸೇವೆ ಸ್ಥಗಿತಗೊಂಡಿದೆ.  

ರಿಕ್ಷಾ ಚಾಲಕರ ಬೆಂಬಲ: ಹಿಮಾಚಲ ಪ್ರದೇಶದ ಧರ್ಮಶಾಲ, ಕುಲು–ಮನಾಲಿ, ಬಿಲಾಸ್‌ಪುರ, ಹಮೀರ್‌ಪುರ, ಚಂಬಾ, ಉನಾ ಮತ್ತು ಶಿಮ್ಲಾದಲ್ಲಿ ಪ್ರತಿಭಟನೆ ನಡೆಯಿತು.

ಹರಿಯಾಣದಲ್ಲಿ ನಡೆದ ಹೋರಾಟದಲ್ಲಿ ಖಾಸಗಿ ಬಸ್‌ ಚಾಲಕರು ಸೇರಿದಂತೆ ಕೆಲವು ಆಟೊ ರಿಕ್ಷಾ ಚಾಲಕರ ಸಂಘಗಳು ಕೈಜೋಡಿಸಿವೆ. 

‘ಪಂಜಾಬ್‌ನಲ್ಲಿ 4 ಸಾವಿರಕ್ಕೂ ಹೆಚ್ಚು ಬಂಕ್‌ಗಳ ಸೇವೆಯಲ್ಲಿ ವ್ಯತ್ಯಯಗೊಂಡಿದೆ’ ಎಂದು ಪಂಜಾಬ್‌ ಪೆಟ್ರೋಲಿಯಂ ಡೀಲರ್‌ ಅಸೋಸಿಯೇಷನ್‌ನ ಪ‍್ರಧಾನ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT