ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಏರ್‌ಪೋರ್ಟ್‌ಗೆ ‘ಉಡಾನ್‌’ ಜೀವಕಳೆ

ಪುಣೆ, ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭ
Last Updated 15 ಮೇ 2019, 20:15 IST
ಅಕ್ಷರ ಗಾತ್ರ

ಬೆಳಗಾವಿ: ‘ಉಡಾನ್‌–3’ ಯೋಜನೆಗೆ ಆಯ್ಕೆಯಾದ ನಂತರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣ ಜೀವ ಕಳೆ ಪಡೆದುಕೊಂಡಿದ್ದು, ಮುಂಬೈ, ತಿರುಪತಿ ಹಾಗೂ ಮೈಸೂರು ನಗರಗಳಿಗೆ ಜೂನ್‌ನಲ್ಲಿ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

ಪ್ರಸ್ತುತ ಸ್ಪೈಸ್‌ ಜೆಟ್‌ ಕಂಪನಿಯು ಬೆಳಗಾವಿ– ಹೈದರಾಬಾದ್ ನಡುವೆ ವಿಮಾನ ಹಾರಾಟ ನಡೆಸುತ್ತಿದೆ. ಸ್ಟಾರ್‌ ಏರ್‌ ಕಂಪನಿಯು ಅಹಮದಾಬಾದ್‌ಗೆ ಮತ್ತು ಅಲಯನ್ಸ್‌ ಏರ್‌ ವಿಮಾನವು ಬೆಂಗಳೂರು– ಬೆಳಗಾವಿ– ಪುಣೆ ಸಂಪರ್ಕಿಸಲಿದೆ. ಎರಡೂ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ.

ಮೇ 1ರಿಂದ, ಬೆಳಗಾವಿ– ಹೈದರಾಬಾದ್ ನಡುವೆ ವಾರದ ಎಲ್ಲ ದಿನವೂ ಸ್ಪೈಸ್ ಜೆಟ್ ವಿಮಾನ ಹಾರಾಟ ನಡೆಸುತ್ತಿದೆ. ಸಂಜೆ 5.35ಕ್ಕೆ ಇಲ್ಲಿಗೆ ಬರುವ ವಿಮಾನ, 5.55ಕ್ಕೆ ಹೈದರಾಬಾದ್‌ಗೆ ತೆರಳುತ್ತಿದೆ.‌

‘ಈ ವಿಮಾನಕ್ಕೆ ಗ್ರಾಹಕರಿಂದ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ 75ಕ್ಕಿಂತಲೂ ಹೆಚ್ಚಿನ ಸೀಟುಗಳು ಭರ್ತಿಯಾಗುತ್ತಿವೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈದರಾಬಾದ್‌ಗೆ ಬಿಡ್ ಮಾಡಿರುವ ಏರ್‌ ಇಂಡಿಗೋ, ತಿರುಪತಿ, ಮೈಸೂರು ಮತ್ತು ಹೈದಾರಾಬಾದ್‌ಗೆ ಬಿಡ್ ಮಾಡಿರುವ ಟ್ರೂ ಜೆಟ್ ಕಂಪನಿಗೆ ಪತ್ರ ಬರೆದು, ಕಾರ್ಯಾಚರಣೆ ಆರಂಭಿಸುವಂತೆ ಕೋರಲಾಗಿದೆ. ಬೆಳಗಾವಿ–ಮುಂಬೈಗೆ ಸ್ಪೈಸ್‌ ಜೆಟ್‌ ವಿಮಾನ ಹಾರಾಟಕ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಉತ್ತರ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವುದಕ್ಕೂ ಪ್ರಯತ್ನಗಳು ನಡೆಯುತ್ತಿವೆ’ ಎಂದು ತಿಳಿಸಿದರು.

ಇಲ್ಲಿಂದ ಪುಣೆಗೆ ವಿಮಾನ ಸಂಪರ್ಕ ಕಲ್ಪಿಸಬೇಕು ಎನ್ನುವುದು ಈ ಭಾಗದ ಕೈಗಾರಿಕೋದ್ಯಮಿಗಳ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಪುಣೆ ವಿಮಾನ ಪ್ರಯಾಣದ ಬುಕ್ಕಿಂಗ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಭಾಗದ ನೂರಾರು ಮಂದಿ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಪುಣೆಗೆ ಹೋಗುತ್ತಾರೆ. ಅಂಥವರಿಗೆ ‘ಉಡಾನ್‌’ ಯೋಜನೆಯಡಿ ರಿಯಾಯಿತಿ ದರದಲ್ಲಿ ದೊರೆಯುವ ವಿಮಾನಯಾನದ ಅವಕಾಶದಿಂದ ಪ್ರಯೋಜನವಾಗಲಿದೆ.

ಉಡಾನ್‌–3ಯಲ್ಲಿ ಇಲ್ಲಿಂದ ಮುಂಬೈ, ಪುಣೆ, ಸೂರತ್, ಕಡಪ, ಇಂದೋರ್, ಜೋಧ್‌ಪುರ, ಜೈಪುರ, ನಾಸಿಕ್ ಹಾಗೂ ನಾಗಪುರ ನಗರಗಳಿಗೂ ವಿಮಾನ ಸಂ‍ಪರ್ಕ ಕಲ್ಪಿಸುವುದಾಗಿ ಸಚಿವಾಲಯ ಪ್ರಕಟಿಸಿದೆ.

ಸ್ಟಾರ್‌ ಏರ್‌ ಕಂಪನಿಯು ಬೆಳಗಾವಿ– ಬೆಂಗಳೂರು ನಡುವೆ ನಿತ್ಯವೂ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ. ಇದು ‘ಉಡಾನ್‌–3’ ವ್ಯಾಪ್ತಿಗೆ ಸೇರಿಲ್ಲ. ಸರಾಸರಿ ಶೇ 75ಕ್ಕಿಂತಲೂ ಹೆಚ್ಚಿನ ಸೀಟುಗಳು ಭರ್ತಿಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT