ನವದೆಹಲಿ: ‘ತೆರಿಗೆದಾರರಿಗೆ ನೋಟಿಸ್ ಅಥವಾ ಪತ್ರ ರವಾನಿಸುವಾಗ ಆದಾಯ ತೆರಿಗೆ ಅಧಿಕಾರಿಗಳು ಸರಳ ಪದಗಳನ್ನು ಬಳಸಬೇಕು. ಅವರ ಮೇಲೆ ವಿವೇಚನೆಯಿಂದ ಅಧಿಕಾರ ಚಲಾಯಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಿವಿಮಾತು ಹೇಳಿದ್ದಾರೆ.
ಬುಧವಾರ ನಡೆದ 165ನೇ ಆದಾಯ ತೆರಿಗೆ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡುವುದಿಲ್ಲ. ಅಧಿಕಾರಿಗಳೊಂದಿಗೆ ಮುಖಾಮುಖಿ ಆಗುವುದಿಲ್ಲ. ನಾವು ಇಂತಹ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ ಎಂಬ ಬಗ್ಗೆ ಅಧಿಕಾರಿಗಳಿಗೆ ಅರಿವು ಇರಬೇಕು. ಅವರೊಟ್ಟಿಗೆ ನ್ಯಾಯೋಚಿತ ಹಾಗೂ ಸ್ನೇಹಪರದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ನೋಟಿಸ್‌ಗಳು ತೆರಿಗೆದಾರರಲ್ಲಿ ಭಯ ಹುಟ್ಟಿಸುವಂತಿರಬಾರದು. ಬೆದರಿಕೆಯ ಸಾಧನವಾಗಬಾರದು. ಯಾವ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂಬ ಬಗ್ಗೆ ಸರಳ ಹಾಗೂ ನೇರವಾಗಿ ಅವರಿಗೆ ಮನದಟ್ಟು ಮಾಡುವಂತಿರಬೇಕು ಎಂದು ಸಲಹೆ ನೀಡಿದರು.
ತೆರಿಗೆದಾರರನ್ನು ಪೇಚಿಗೆ ಸಿಲುಕಿಸಬಾರದು. ತೆರಿಗೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಸೂಕ್ತ ನೆಲೆಯಲ್ಲಿ ಕ್ರಮ ಜರುಗಿಸಬೇಕಿದೆ ಎಂದರು.
ಮರುಪಾವತಿ ವಿಳಂಬ ಸಲ್ಲದು. ಸಕಾಲದಲ್ಲಿ ಮರುಪಾವತಿಗೆ ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸೂಚಿಸಿದರು.
ಇಲಾಖೆಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ಅಧಿಕಾರಿಗಳು ತೆರಿಗೆ ವಸೂಲಾತಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಮರೆಯಬಾರದು ಎಂದರು.