ಸೋಮವಾರ, ಫೆಬ್ರವರಿ 17, 2020
31 °C
ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಅಧಿಸೂಚನೆ ಪ್ರಕಟ

ವಾಹನ ನೋಂದಣಿ ಶುಲ್ಕ ಹೆಚ್ಚಳ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ವಾಹನಗಳ ನೋಂದಣಿ ಮತ್ತು ನವೀಕರಣ ಶುಲ್ಕದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೇಂದ್ರೀಯ ಮೋಟಾರು ವಾಹನಗಳ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಈ ಸಂಬಂಧ ಕರಡು ಅಧಿಸೂಚನೆ ಸಿದ್ಧಪಡಿಸಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ನೋಂದಣಿ ಮತ್ತು ನವೀಕರಣದ ಶುಲ್ಕದಲ್ಲಿ ಏರಿಕೆ ಮಾಡಲು ಉದ್ದೇಶಿಸಲಾಗಿದೆ.  ಬ್ಯಾಟರಿ ಚಾಲಿತ ವಾಹನಗಳ ನೋಂದಣಿ ಮತ್ತು ನವೀಕರಣ ಪ್ರಮಾಣಪತ್ರ ಪಡೆಯಲು ಶುಲ್ಕ ವಿನಾಯ್ತಿ ನೀಡಲಾಗಿದೆ.

ಆಮದು ಮಾಡಿಕೊಂಡಿರುವ ವಾಹನಗಳ (ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಚಕ್ರದ) ನೋಂದಣಿ ಶುಲ್ಕ ₹20 ಸಾವಿರ ಮತ್ತು ನವೀಕರಣ ಶುಲ್ಕ ₹40 ಸಾವಿರಕ್ಕೆ ನಿಗದಿಪಡಿಸಲು ಉದ್ದೇಶಿಸಲಾಗಿದೆ.

ಕರಡು ಅಧಿಸೂಚನೆಯ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಮತ್ತು ಸಲಹೆ ಕೇಳಲಾಗಿದೆ.

15 ವರ್ಷಕ್ಕಿಂತ ಹಳೆಯ ವಾಹನ ಗುಜರಿಗೆ
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ.

ಇಂತಹ ವಾಹನಗಳಿಗೆ ಒಂದು ವರ್ಷದ ಬದಲಾಗಿ ಆರು ತಿಂಗಳಿಗೊಮ್ಮೆ ಅರ್ಹತಾ (ಫಿಟ್‌ನೆಸ್‌) ಪ್ರಮಾಣ ಪತ್ರ ಪಡೆಯುವ ನಿಯಮ ಜಾರಿಗೊಳಿಸಲೂ ಉದ್ದೇಶಿಸಲಾಗಿದೆ. 

ಫಿಟ್‌ನೆಸ್‌ ಪ್ರಮಾಣಪತ್ರದ ಶುಲ್ಕದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಮಧ್ಯಮ ಅಥವಾ ಭಾರಿ ಮೋಟಾರು ವಾಹನಗಳ ನೋಂದಣಿ ಪ್ರಮಾಣ ಪತ್ರ ನವೀಕರಿಸಲು ಮ್ಯಾನ್ಯುಯಲ್‌ ಗಿಯರ್‌ ಇರುವ ವಾಹನಗಳಿಗೆ ₹1,200 ಮತ್ತು ಆಟೊ ಗಿಯರ್‌ ಇರುವ ವಾಹನಗಳಿಗೆ ₹2,000 ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

ಹೊಸ ವಾಹನ ಖರೀದಿಸುವವರು ತಮ್ಮ ಹಳೆಯ ವಾಹನವನ್ನು ಗುಜರಿಗೆ ಹಾಕಿರುವ ಪ್ರಮಾಣಪತ್ರವನ್ನು ನೀಡಿದರೆ ನೋಂದಣಿ ಶುಲ್ಕದಲ್ಲಿ ವಿನಾಯ್ತಿ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು