ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷ್ಣಾಂಶ ತಾಳಿಕೆ ಗೋಧಿ ತಳಿ ಬಿತ್ತನೆ

Published 25 ಡಿಸೆಂಬರ್ 2023, 15:51 IST
Last Updated 25 ಡಿಸೆಂಬರ್ 2023, 15:51 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷ ಗೋಧಿ ಬೆಳೆಗಾರರು ಬಿಸಿಗಾಳಿಯಿಂದ ಬೆಳೆ ನಷ್ಟ ಅನುಭವಿಸಿದ್ದರು. ಹಾಗಾಗಿ, ಈ ಬಾರಿ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ತಳಿಗಳ ಬಿತ್ತನೆಗೆ ಮೊರೆ ಹೋಗಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯದ ಆಯುಕ್ತ ಪಿ.ಕೆ. ಸಿಂಗ್‌ ತಿಳಿಸಿದ್ದಾರೆ.

ರೈತರು ಈ ವರ್ಷ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಗೋಧಿ ತಳಿಗಳನ್ನು 30.86 ದಶಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಗೋಧಿ ಚಳಿಗಾಲದ ಪ್ರಮುಖ ಆಹಾರದ ಬೆಳೆಯಾಗಿದೆ. ಸಾಮಾನ್ಯವಾಗಿ ನವೆಂಬರ್‌ನಲ್ಲಿ ಬಿತ್ತನೆಯಾಗಲಿದ್ದು, ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಕಟಾವು ನಡೆಯಲಿದೆ.

‘ಡಿಸೆಂಬರ್‌ 22ರ ವೇಳೆಗೆ 30.86 ದಶಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗೋಧಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 31.44 ದಶಲಕ್ಷ ಟನ್‌ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು’ ಎಂದು ಸಚಿವಾಲಯದ ಅಂಕಿ–ಅಂಶಗಳು ತಿಳಿಸಿವೆ.

‘ಕೆಲವು ಪ್ರದೇಶಗಳಲ್ಲಿ ಭತ್ತದ ಕಟಾವು ವಿಳಂಬವಾಗಿದೆ. ಹಾಗಾಗಿ, ಗೋಧಿ ಬಿತ್ತನೆಗೆ ವಿಳಂಬವಾಗಿದೆ’ ಎಂದು ಸಿಂಗ್‌ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. 

ಗೋಧಿ ಬೆಳೆಗಾರರು ಕಳೆದ ವರ್ಷ ಅನುಭವಿಸಿದ್ದ ಬಿಸಿಗಾಳಿಯ ಪರಿಣಾಮವನ್ನು ಸರ್ಕಾರ ಗಮನದಲ್ಲಿಟ್ಟುಕೊಂಡಿದೆ. ಹಾಗಾಗಿ, ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ತಳಿಗಳ ಬಿತ್ತನೆಗೆ ಕ್ರಮವಹಿಸಿದೆ. ಶೇ 60ರಷ್ಟು ಪ್ರದೇಶದಲ್ಲಿ ಈ ತಳಿಯ ಬಿತ್ತನೆಯಾಗಿದೆ ಎಂದು ವಿವರಿಸಿದ್ದಾರೆ.

ಉಷ್ಣಾಂಶ ತಾಳಿಕೆಯ ತಳಿಗಳ ಬಿತ್ತನೆಗೆ ಒತ್ತು ನೀಡಿದ್ದೇವೆ. ಕಳೆದ ವರ್ಷ ಶೇ 45ರಷ್ಟು ಪ್ರದೇಶದಲ್ಲಷ್ಟೇ ಈ ತಳಿಯ ಬಿತ್ತನೆ ನಡೆದಿತ್ತು. ಬೇಸಿಗೆಯಲ್ಲಿ ನಡೆಯುವ ಕಟಾವು ವೇಳೆ ಎದುರಾಗುವ ಬಿಸಿಲ ಬೇಗೆಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ.

ಅಂಕಿ–ಅಂಶದ ಪ್ರಕಾರ ಉತ್ತರಪ್ರದೇಶದಲ್ಲಿ ಗೋಧಿ ಬಿತ್ತನೆ ಪ್ರದೇಶ ಡಿಸೆಂಬರ್‌ 22ರವರೆಗೆ 90.44 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಹಿಂದಿನ ಇದೇ ಅವಧಿಯಲ್ಲಿ 90.29 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಮಧ್ಯಪ್ರದೇಶದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, 80.17 ಲಕ್ಷ ಹೆಕ್ಟೇರ್‌ಗೆ ಆಗಿದೆ. ಹಿಂದಿನ ವರ್ಷ 80.39 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿತ್ತು. ಪಂಜಾಬ್‌ ಮತ್ತು ಹರಿಯಾಣದಲ್ಲಿ ಬಿತ್ತನೆಯು ಹಿಂದಿನ ವರ್ಷದ ಮಟ್ಟದಲ್ಲಿದ್ದು, ಕ್ರಮವಾಗಿ 30.49 ಲಕ್ಷ ಮತ್ತು 20.31 ಲಕ್ಷ ಹೆಕ್ಟೇರ್‌ ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT