ವಿಪ್ರೊ ನಿವ್ವಳ ಲಾಭ ₹ 2,494 ಕೋಟಿ

ಶುಕ್ರವಾರ, ಮೇ 24, 2019
22 °C

ವಿಪ್ರೊ ನಿವ್ವಳ ಲಾಭ ₹ 2,494 ಕೋಟಿ

Published:
Updated:
Prajavani

ಬೆಂಗಳೂರು: ದೇಶದ ಮೂರನೆ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ಸಂಸ್ಥೆಯಾಗಿರುವ ವಿಪ್ರೊ, 2018–19ರ ಸಾಲಿನ ಜನವರಿ – ಮಾರ್ಚ್‌ ಅವಧಿಯ ನಾಲ್ಕನೆ ತ್ರೈಮಾಸಿಕದಲ್ಲಿ ₹ 2,494 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 1,800 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿಯ ಲಾಭದ ಪ್ರಮಾಣವು ಶೇ 38.4ರಷ್ಟು ಏರಿಕೆಯಾಗಿದೆ. ಇದು ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷಿತ ಮಟ್ಟದಲ್ಲಿಯೇ ಇದೆ.

ವರಮಾನವು ವರ್ಷದ ಹಿಂದಿನ ₹ 13,768 ಕೋಟಿಗೆ ಹೋಲಿಸಿದರೆ, ಈ ಬಾರಿ ಶೇ 8.9ರಷ್ಟು ಹೆಚ್ಚಳಗೊಂಡು ₹ 15,006 ಕೋಟಿಗಳಷ್ಟಾಗಿದೆ.

2018–19ನೆ ಹಣಕಾಸು ವರ್ಷದಲ್ಲಿನ ಸಂಸ್ಥೆಯ ಒಟ್ಟಾರೆ ನಿವ್ವಳ ಲಾಭವು ಶೇ 12.6ರಷ್ಟು ಹೆಚ್ಚಳಗೊಂಡು ₹ 9,018 ಕೋಟಿಗೆ ತಲುಪಿದೆ. ವರಮಾನವು ಶೇ 7.5ರಷ್ಟು ಏರಿಕೆಯಾಗಿ ₹ 58,584 ಕೋಟಿಗಳಷ್ಟಾಗಿದೆ.

‘ನಮ್ಮ ತಂಡಗಳು ವಹಿವಾಟು ಹೆಚ್ಚಳದ ಕಾರ್ಯತಂತ್ರವನ್ನು ಸಮರ್ಥವಾಗಿ ಜಾರಿಗೆ ತಂದಿರುವುದರಿಂದ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಲಾಭದ ಪ್ರಮಾಣವು ಹೆಚ್ಚಳ ಸಾಧಿಸುತ್ತಿದೆ’ ಎಂದು ಸಂಸ್ಥೆಯ ಸಿಇಒ ಅಬಿದಲಿ ನೀಮೂಚವಾಲಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ವಹಿವಾಟು ಬೆಳವಣಿಗೆಗೆ ಸಂಬಂಧಿಸಿದಂತೆ ನಾವು ಸುಭದ್ರ ತಳಹದಿ ಹಾಕಿದ್ದೇವೆ. ಡಿಜಿಟಲ್‌, ಸೈಬರ್‌ ಸುರಕ್ಷತೆ, ಎಂಜಿನಿಯರಿಂಗ್‌ ಸರ್ವೀಸ್‌ ಮತ್ತು ಕ್ಲೌಡ್‌ನಲ್ಲಿ ನಿರಂತರವಾಗಿ ಹೂಡಿಕೆ ಹೆಚ್ಚಿಸಲಾಗಿದೆ. ಇದು ಐ.ಟಿ ಮಾರುಕಟ್ಟೆಯಲ್ಲಿ ಸಂಸ್ಥೆಯು ಯಶಸ್ಸಿನ ಓಟ ಮುಂದುವರೆಸಲು ನೆರವಾಗಿದೆ’ ಎಂದು ಹೇಳಿದ್ದಾರೆ.

ಷೇರು ಮರು ಖರೀದಿ

₹ 10,500 ಕೋಟಿ ಮೊತ್ತದ ಷೇರುಗಳನ್ನು ಮರು ಖರೀದಿಸಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಅನುಮೋದನೆ ನೀಡಿದೆ.

ಪ್ರತಿ ಷೇರಿಗೆ ₹ 325ರ ದರದಲ್ಲಿ 32.3 ಕೋಟಿ ಷೇರುಗಳನ್ನು ಖರೀದಿಸಲಾಗುವುದು ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !