ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಮಾರುಕಟ್ಟೆ ಪ್ರವೇಶಿಸಿದ ಮಾವು

ಎಪಿಎಂಸಿಗೆ ಆಂಧ್ರದಿಂದ ಆವಕ; ಮಹಾರಾಷ್ಟ್ರದಿಂದ ಮಾವಿನ ನೇರ ಖರೀದಿ
Last Updated 5 ಏಪ್ರಿಲ್ 2019, 5:51 IST
ಅಕ್ಷರ ಗಾತ್ರ

ವಿಜಯಪುರ:ಹಣ್ಣುಗಳ ರಾಜ ಮಾವು ಹದಿನೈದು ದಿನ ವಿಳಂಬವಾಗಿ ವಿಜಯಪುರದ ಮಾರುಕಟ್ಟೆ ಪ್ರವೇಶಿಸಿದೆ. ಸಹಜವಾಗಿಯೇ ಆರಂಭದ ದಿನಗಳಲ್ಲಿ ಹಣ್ಣಿನ ದರ ಕೊಂಚ ತುಟ್ಟಿಯಿದೆ.

ವಿಜಯಪುರ ಎಪಿಎಂಸಿ ಮಾರುಕಟ್ಟೆಗೆ ಆಂಧ್ರದ ಅನಂತಪುರ, ಹಿಂದೂಪುರ ಭಾಗದ ಮಾವಿನಕಾಯಿ ಆವಕವಾಗುತ್ತಿದ್ದು; ಹಣ್ಣಿನ ಮಾರುಕಟ್ಟೆಗೆ ನೆರೆಯ ಮಹಾರಾಷ್ಟ್ರದ ರತ್ನಗಿರಿ, ದೇವಘಡ, ನಮ್ಮ ಬೆಂಗಳೂರು ಭಾಗದ ಮಾವಿನ ಹಣ್ಣು ಆವಕವಾಗುತ್ತಿದೆ.

ಇದೀಗ ವಿಜಯಪುರದಲ್ಲಿ ಮಾವಿನ ಸುಗ್ಗಿ ಆರಂಭಗೊಂಡಿದೆ. ಯುಗಾದಿ ಹಬ್ಬ ಕಳೆದ ಬಳಿಕ ಹಂಗಾಮು ಬಿರುಸುಗೊಳ್ಳಲಿದೆ. ಬಸವನ ಜಯಂತಿ ವೇಳೆಗೆ ಇಡೀ ಮಾರುಕಟ್ಟೆ ಮಾವು ಮಯವಾಗಿರಲಿದೆ. ಜೂನ್‌ ಎರಡನೇ ವಾರದಲ್ಲಿ ಮಾವು ಮಾರುಕಟ್ಟೆಗೆ ವಿದಾಯ ಹೇಳಲಿದೆ ಎಂಬುದು ಹಣ್ಣಿನ ವ್ಯಾಪಾರಿಗಳ ಅನಿಸಿಕೆ.

‘ಮಾರ್ಚ್‌ 31ರ ಭಾನುವಾರ ಆಂಧ್ರಪ್ರದೇಶದ ಮಾವಿನಕಾಯಿ ವಿಜಯಪುರ ಎಪಿಎಂಸಿಗೆ ಬರುವ ಮೂಲಕ ಮಾವಿನ ಮಾರುಕಟ್ಟೆ ಕಾರ್ಯಾರಂಭಿಸಿತು. ಆರಂಭದಲ್ಲೇ ಹಿಂದೂಪುರ, ಅನಂತಪುರ ಭಾಗದ ವ್ಯಾಪಾರಿಗಳು 1500 ಟ್ರೇ ಮಾವಿನಕಾಯಿ ತಂದಿದ್ದರು.’

‘ಸ್ಥಳೀಯ ವ್ಯಾಪಾರಿಗಳು ಉತ್ಸಾಹದಿಂದ ಮಾರುಕಟ್ಟೆಯಲ್ಲಿ ಖರೀದಿ ನಡೆಸಿದರು. ಈ ವಾರಾಂತ್ಯದಲ್ಲಿ ಮಾರುಕಟ್ಟೆಯಲ್ಲಿ ಹಣ್ಣು ಜನರಿಗೆ ಸಿಗಲಿದೆ’ ಎಂದು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಮೇಲ್ವಿಚಾರಕ ಸುರೇಶ ಮೊಹಿತೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏ.3ರ ಬುಧವಾರ ಸಹ ಮಾರುಕಟ್ಟೆಗೆ 1500 ಟ್ರೇ ಮಾವಿನಕಾಯಿ ಆಂಧ್ರದಿಂದ ಬಂದಿತ್ತು. ಸ್ಥಳೀಯ ವ್ಯಾಪಾರಿಗಳು ಹಣ್ಣು ಮಾಡಿ ಮಾರಾಟ ಮಾಡಲಿಕ್ಕಾಗಿಯೇ ಮುಗಿಬಿದ್ದು ಮಾವಿನಕಾಯಿ ಖರೀದಿಸಿದರು. ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮಗಳಲ್ಲಿನ ವ್ಯಾಪಾರಿಗಳು ಮಾರುಕಟ್ಟೆಗೆ ಬಂದಿದ್ದರಿಂದ, ವಹಿವಾಟು ಬಿರುಸಿನಿಂದ ನಡೆಯಿತು’ ಎಂದು ಮೊಹಿತೆ ಮಾಹಿತಿ ನೀಡಿದರು.

‘ಹತ್ತರಿಂದ ಹದಿನೈದು ದಿನ ಕಳೆದರೆ, ಇಲ್ಲಿನ ಮಾರುಕಟ್ಟೆಗೆ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚೆನ್ನಪಟ್ಟಣ ಭಾಗದ ಮಾವಿನ ಹಣ್ಣು ರಾಶಿ ರಾಶಿ ಮಾರುಕಟ್ಟೆಗೆ ಬರಲಿದೆ. ಆಗ ಧಾರಣೆಯೂ ಗ್ರಾಹಕರಿಗೆ ಕೈಗೆಟುಕಲಿದೆ’ ಎಂದು ಸುರೇಶ ಹೇಳಿದರು.

‘ವಿಜಯಪುರದ ಹಣ್ಣಿನ ಮಾರುಕಟ್ಟೆಗೆ ಮಾವು ಬರಲಾರಂಭಿಸಿ ಎಂಟು ದಿನವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಆರಂಭದಲ್ಲೇ ಧಾರಣೆ ತುಟ್ಟಿಯಿದೆ. ಗ್ರಾಹಕರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಬರುತ್ತಿಲ್ಲ.

ಯುಗಾದಿ ಹಬ್ಬದ ಬಳಿಕ ಹೆಚ್ಚಿನ ಪ್ರಮಾಣದ ಹಣ್ಣು ಮಾರುಕಟ್ಟೆಗೆ ಆವಕವಾಗಲಿದೆ. ಗ್ರಾಹಕರು ಮುಗಿಬಿದ್ದು ಹಣ್ಣು ಖರೀದಿಗೆ ಬರಲಿದ್ದಾರೆ. ನಮ್ಮ ವಹಿವಾಟು ಸಹ ಆಗ ಬಿರುಸುಗೊಳ್ಳಲಿದೆ’ ಎಂದು ಮಾವಿನ ಹಣ್ಣಿನ ವ್ಯಾಪಾರಿ ಸದ್ದಾಂ ಬಾಗವಾನ ತಿಳಿಸಿದರು.

ಗುಣಮಟ್ಟದ ಹಣ್ಣಿಲ್ಲ..!

‘ಮಳೆಯ ಕೊರತೆ, ಬರದ ಹೊಡೆತಕ್ಕೆ ಮಾರುಕಟ್ಟೆಗೆ ಗುಣಮಟ್ಟದ ಮಾವು ಬರುತ್ತಿಲ್ಲ. ಕಾಯಿ ಬಲಿಯುವುದಕ್ಕೂ ಮುನ್ನವೇ ಕೊಯ್ಲು ಮಾಡಿಕೊಂಡು ತರುತ್ತಿರುವುದೇ ಹೆಚ್ಚಿದೆ. ಇದನ್ನೇ ಸ್ಥಳೀಯ ವ್ಯಾಪಾರಿಗಳು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಈ ಕಾಯಿಯನ್ನು ಹಣ್ಣು ಮಾಡಲು ಸಹ ರಾಸಾಯನಿಕ ಸಿಂಪಡಣೆಯ ತಂತ್ರಕ್ಕೆ ವ್ಯಾಪಾರಿಗಳು ಮಾರು ಹೋಗಿದ್ದಾರೆ. ಇಂಥಹ ಹಣ್ಣು ಹೆಚ್ಚು ದಿನ ಬಾಳಿಕೆ ಬರಲ್ಲ. ತಿನ್ನಲು ಯೋಗ್ಯವಾಗಿರಲ್ಲ’ ಎಂದು ವಿಜಯಪುರ ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮಾವಿನ ಮರದಲ್ಲೇ ಬಲಿತ ಮಾವಿನ ಕಾಯಿ ಕೊಯ್ಲು ಮಾಡಿ, ವ್ಯವಸ್ಥಿತವಾಗಿ ಗಾಳಿಯಾಡದಂತೆ ಒಂದೆಡೆ ಬಟ್ಟಿಯಲ್ಲಿ ಹಾಕಿ, ನಾಲ್ಕೈದು ದಿನದ ಬಳಿಕ ಅವನ್ನು ತೆಗೆದರೆ, ರುಚಿಯಾದ ಮಾವಿನ ಹಣ್ಣು ಸವಿಯಲು ಸಿದ್ಧ. ಈ ರೀತಿಯ ಹಣ್ಣು ಮಾರುಕಟ್ಟೆಗೆ ಬರಲು ಇನ್ನೂ ಕೊಂಚ ದಿನ ಸಮಯ ಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT