ಮಂಗಳವಾರ, ಮಾರ್ಚ್ 31, 2020
19 °C

ಹ್ಯಾನ್ಲೆ ಸೊಲುಷನ್ಸ್‌ನ ವಿಶಿಷ್ಟ ಆ್ಯಪ್‌

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಮೊಬೈಲ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಬೆಂಗಳೂರಿನ ಸ್ಟಾರ್ಟ್‌ಅಪ್‌ ಹ್ಯಾನ್ಲೆ ಸೊಲುಷನ್ಸ್‌, ವಿಶಿಷ್ಟ ಬಗೆಯ ಆಹ್ವಾನ ಕಿರುತಂತ್ರಾಂಶ (Invitation App) ಅಭಿವೃದ್ಧಿಪಡಿಸಿದೆ. ಇದೇ ಮೊದಲ ಬಾರಿಗೆ ಇಂತಹ ಆ್ಯಪ್‌ ಅಭಿವೃದ್ಧಿಪಡಿಸಿರುವುದು ಇದರ ಹೆಗ್ಗಳಿಕೆಯಾಗಿದೆ.

ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರ್‌ ಆಗಿರುವ ಈ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಕನ್ನಡಿಗ ಬಿಪಿನ್‌ ಅಂದಾನಿ ಅವರು ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ವರ್ಷಗಳ ಹಿಂದೆ ಬ್ಯಾಂಕಿಂಗ್‌ ಸಾಫ್ಟ್‌ವೇರ್‌ ಕಂಪನಿ ಸೆಪಿಟ್‌ (SEPIT) ಸ್ಥಾಪಿಸಿದ್ದ ಬಿಪಿನ್‌ ಅವರು, 12 ವರ್ಷಗಳ ಕಾಲ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿದ್ದರು. ಆನಂತರ ಅದನ್ನು ಇಂಡೊನೇಷ್ಯಾದ ಬಹುರಾಷ್ಟ್ರೀಯ ಸಂಸ್ಥೆಯು ಖರೀದಿಸಿತ್ತು. ಖರೀದಿ ಒಪ್ಪಂದದ ‍ಪ್ರಕಾರ, ಎರಡು ವರ್ಷಗಳ ಕಾಲ ಆ ಸಂಸ್ಥೆಯ ಜತೆ ಕೆಲಸ ಮಾಡಿದ ನಂತರ ಬಿಪಿನ್‌ ಅವರು ಮೊಬೈಲ್‌ ಕಿರುತಂತ್ರಾಂಶ ಅಭಿವೃದ್ಧಿಪಡಿಸುವ ಹ್ಯಾನ್ಲೆ ಸೊಲುಷನ್ಸ್‌ ಆರಂಭಿಸಿದ್ದರು.

ಸದ್ಯದ ಧಾವಂತದ ಬದುಕಿನಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸಲು, ಆತ್ಮೀಯರನ್ನು ಆಹ್ವಾನಿಸಲು, ನೆನಪಿಸಲು, ಅತಿಥಿಗಳ ಪಾಲ್ಗೊಳ್ಳುವಿಕೆ ಖಾತರಿಪಡಿಸಿಕೊಳ್ಳುವುದು, ಆಹ್ವಾನಿತರು ಭಾಗವಹಿಸುವುದನ್ನು ತಪ್ಪಿಸಿಕೊಳ್ಳದಿರಲು, ಬಾರದಿರುವುದನ್ನು ಸಂಘಟಕರಿಗೆ ತಿಳಿಸುವಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಗೆ ನೂಯಿ ಆ್ಯಪ್‌ನಲ್ಲಿ (nooi app– The Invite App) ಪರಿಹಾರ ಇದೆ. ಸಮಾರಂಭದ ದಿನ, ಸಮಯ ಜ್ಞಾಪಿಸಿ ಭಾಗವಹಿಸುವುದನ್ನು, ಭಾಗವಹಿಸಲು ಸಾಧ್ಯವಿಲ್ಲದಿರುವುದನ್ನು ಸಂಘಟಕರ ಗಮನಕ್ಕೆ ತರುವುದಕ್ಕೂ ಈ ವಿಶಿಷ್ಟ ಆ್ಯಪ್‌ ನೆರವಾಗಲಿದೆ.

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ ಮೂಲಕ ಕಳಿಸಿಕೊಡುವ ಆಹ್ವಾನಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಸವಾಲಯಗಳಿಗೆ ಈ ಆ್ಯಪ್‌ನಲ್ಲಿ ಪರಿಹಾರ ಇದೆ. ಆಹ್ವಾನ ಪತ್ರ ನೋಡಿದ್ದಾರೊ ಇಲ್ಲವೊ, ಸಮಾರಂಭಕ್ಕೆ ಬರುತ್ತಾರೊ ಇಲ್ಲವೊ, ಎಷ್ಟು ಜನ ಬರಬಹುದು ಮತ್ತಿತರ ಸಂದೇಹಗಳಿಗೆ ಈ ಆ್ಯಪ್‌ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

‘ಯಾವುದೇ ಸಮಾರಂಭಕ್ಕೆ ಆತ್ಮೀಯರನ್ನು, ಆಸಕ್ತರನ್ನು ವೈಯಕ್ತಿಕ ನೆಲೆಯಲ್ಲಿ ಆಹ್ವಾನಿಸುವುದು ಮತ್ತು ಸಮಾರಂಭಗಳಲ್ಲಿ ಭಾಗವಹಿಸುವ ಪ್ರಕ್ರಿಯೆ ಸರಳಗೊಳಿಸುವುದೇ ಈ ಆ್ಯಪ್‌ ಅಭಿವೃದ್ಧಿಪಡಿಸಿರುವುದರ ಹಿಂದಿನ ಮುಖ್ಯ ಉದ್ದೇಶವಾಗಿದೆ’ ಎಂದು ಹ್ಯಾನ್ಲೆ ಸೊಲುಷನ್ಸ್‌ನ ಸ್ಥಾಪಕ ಮತ್ತು ಸಿಇಒ ಬಿಪಿನ್‌ ಅಂದಾನಿ ಹೇಳುತ್ತಾರೆ.

ಔತಣಕೂಟ, ಹುಟ್ಟುಹಬ್ಬ, ಮದುವೆ, ಸೋಷಿಯಲ್‌ ಕ್ಲಬ್‌, ಕಾರ್ಪೊರೇಟ್‌ಗಳ ಕಾರ್ಯಕ್ರಮ, ಸಾರ್ವಜನಿಕ ಸಭೆಗಳಿಗೆ ಸಂಘಟಕರು ಆಹ್ವಾನ ಪತ್ರ ಕಳಿಸಿಕೊಟ್ಟಾಗ ಭಾಗವಹಿಸುವವರಿಗೆ ಅವುಗಳನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವುದೇ ದೊಡ್ಡ ತಲೆನೋವಾಗಿರುತ್ತದೆ. ದಿನಾಂಕ, ವೇಳೆ ಮರೆಯದಿರುವುದು, ಸಮಾರಂಭದ ಸ್ಥಳ ಪತ್ತೆ ಹಚ್ಚುವುದು, ಸಮಾರಂಭದ ಇತರ ವಿವರಗಳು, ಸಂಘಟಕರ ಜತೆ ಸಂವಹನ ನಡೆಸಲು, ಇತರ ಆಹ್ವಾನಿತರ ಜತೆ ಸಮಾರಂಭದ ಬಗ್ಗೆ ಚರ್ಚಿಸುವುದು ಅಷ್ಟೊಂದು ಸುಲಭವಲ್ಲ. ಇಂತಹ ಎಲ್ಲ ಸಮಸ್ಯೆಗಳಿಗೆ ನೂಯಿ ಆ್ಯಪ್‌ನಲ್ಲಿ (nooi app) ಉತ್ತರ ಇದೆ. ನೂಯಿ ಎಂದರೆ ಆಫ್ರಿಕಾದ ಭಾಷೆಯಲ್ಲಿ ಆಹ್ವಾನ ಎಂದರ್ಥ.

ಕೌಟುಂಬಿಕ ಕಾರ್ಯಕ್ರಮಗಳಿಂದ ಹಿಡಿದು, ಸಾರ್ವಜನಿಕ ಸಭೆ – ಸಮಾರಂಭಗಳನ್ನು ಆಯೋಜಿಸುವವರಿಗೂ ಆಹ್ವಾನ ಪತ್ರ ಕಳಿಸುವುದು, ಭಾಗವಹಿಸುವಂತೆ ನೆನಪಿಸುವುದು, ಕಾರ್ಯಕ್ರಮ ನಿರ್ವಹಿಸುವುದು ಯಾರಿಗೆ ಆದರೂ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಅಂತಹ ಹೊರೆಯನ್ನು ಈ ಆ್ಯಪ್‌ ಹಗುರಗೊಳಿಸಿದೆ. ದೊಡ್ಡ ಸಂಖ್ಯೆಯಲ್ಲಿ ಇರುವ ಆಹ್ವಾನಿತರಿಗೆ ಸಮಾರಂಭದ ಸಂಪೂರ್ಣ ವಿವರಗಳನ್ನು ಒಳಗೊಂಡ ಆಹ್ವಾನ ಪತ್ರ ತಲುಪಿಸುವುದು, ಸಮಾರಂಭ ನಡೆಯುವ ತಾಣದ ವಿವರಗಳನ್ನು ನೀಡುವುದಕ್ಕೂ ಇದು ನೆರವಾಗುವುದು. ಇಲ್ಲಿ ಮೊಬೈಲ್‌ ಸಂಖ್ಯೆಗಳನ್ನು ಇತರ ಆಹ್ವಾನಿತರ ಜತೆ ಹಂಚಿಕೊಳ್ಳಲು ಅವಕಾಶ ಇಲ್ಲ.

 ಆ್ಯಪ್‌ ಕಾರ್ಯನಿರ್ವಹಣೆ: ಸಂಘಟಕರು ತಾವು ಆಯೋಜಿಸುವ ಸಭೆ–ಸಮಾರಂಭಗಳಿಗೆ ತಮ್ಮ ಆತ್ಮೀಯರನ್ನು ಆಹ್ವಾನಿಸುವ ಮುನ್ನ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆಹ್ವಾನಿತರ ಮೊಬೈಲ್‌ ಸಂಖ್ಯೆ ನಮೂದಿಸಿ ಆಹ್ವಾನ ಕಳಿಸುತ್ತಿದ್ದಂತೆ ಆಹ್ವಾನಿತರ ಮೊಬೈಲ್‌ಗೆ ಎಸ್‌ಎಂಎಸ್‌ ಬರುತ್ತದೆ. ಅಲ್ಲಿ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ನ ಸಂಪರ್ಕ ಕೊಂಡಿ ಕೊಡಲಾಗಿರುತ್ತದೆ. ಆಹ್ವಾನಿತರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಮೊಬೈಲ್‌ಗೆ ಬರುವ ಒಂದು ಬಾರಿಯ ರಹಸ್ಯ ಸಂಖ್ಯೆ (ಒಟಿಪಿ) ನಮೂದಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.

ಆಹ್ವಾನಕ್ಕೆ ಸ್ಪಂದಿಸಿ ಭಾಗವಹಿಸುವ ಅಥವಾ ಬೇರೆನೊ ಕಾರಣಗಳಿಗೆ ಭಾಗವಹಿಸಲು ಆಗದಿದ್ದರೆ ಅದನ್ನು ಆಯ್ಕೆ ಮಾಡಿಕೊಂಡರೆ ಸಂಘಟಕರಿಗೆ ಆಹ್ವಾನಿತರು ಬರುವ / ಬರದಿರುವುದು ಸ್ಪಷ್ಟಗೊಳ್ಳುತ್ತದೆ. ಸಮಾರಂಭದ ಹಿಂದಿನ ದಿನ ಸಂಜೆ 6ಗಂಟೆಗೆ ಮರುದಿನ ಕಾರ್ಯಕ್ರಮ ಇರುವುದನ್ನು ನೆನಪಿಸುವ ಸಂದೇಶವು ಮೊಬೈಲ್‌ ಆ್ಯಪ್‌ನಲ್ಲಿ ಬರುತ್ತದೆ. ಸಮಾರಂಭದ ದಿನವೂ ಬೆಳಿಗ್ಗೆ 8 ಗಂಟೆಗೆ ನೆನಪೋಲೆ ಬರುತ್ತದೆ.

20ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇದ್ದರೆ ಈ ಆ್ಯಪ್‌ ಬಳಕೆ ಸದ್ಯಕ್ಕೆ ಉಚಿತವಾಗಿದೆ. 30ಕ್ಕಿಂತ ಹೆಚ್ಚಿಗೆ 300ರಷ್ಟು ಆಹ್ವಾನಿತರು ಇದ್ದರೆ ಅದಕ್ಕೆ ಕಾರ್ಯಕ್ರಮ ಸಂಘಟಕರು ₹ 340 ಪಾವತಿಸಬೇಕಾಗುತ್ತದೆ. ಎಕ್ಸೆಲ್‌ಶೀಟ್‌ನಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಿ ಆ್ಯಪ್‌ಗೆ ಜೋಡಿಸಬೇಕು. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿತರು ಇದ್ದರೆ ಆ ಬಗ್ಗೆ ಸಂಸ್ಥೆಯ ಗಮನಕ್ಕೆ ತಂದರೆ ನೆರವಿಗೆ ಬರುತ್ತಾರೆ.

ಆ್ಯಪ್‌ನಲ್ಲಿ ಇರುವ ‘ಮೇಲ್‌ ಬ್ಯಾಕ್‌’ ಸೌಲಭ್ಯ ಬಳಸಿ ಸಂಘಟಕರು ಕೂಡ ವೈಯಕ್ತಿಕ ನೆಲೆಯಲ್ಲಿ ಆಹ್ವಾನಿತರಿಗೆ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ರವಾನಿಸಬಹುದು. ಕಾರ್ಯಕ್ರಮದ ಮುಂಚಿನ ದಿನಗಳಲ್ಲಿ ಎಷ್ಟು ಬೇಕಾದರೂ ಸಂದೇಶಗಳನ್ನು ರವಾನಿಸಬಹುದು. ಸಮಾರಂಭ ಮುಗಿಯುತ್ತಿದ್ದಂತೆ ಆ ದಿನವೇ ಆ್ಯಪ್‌ನಲ್ಲಿ ನಮೂದಿಸಿದ್ದ ಘಟನೆಯ ವಿವರಗಳೆಲ್ಲ ಸ್ವಯಂಚಾಲಿತವಾಗಿ ಅಳಿಸಿ ಹೋಗುವುದು ಈ ಆ್ಯಪ್‌ನ ಇನ್ನೊಂದು ಬಹುದೊಡ್ಡ ಪ್ರಯೋಜನವಾಗಿದೆ. ಅನಗತ್ಯ ಮಾಹಿತಿಯನ್ನು ಬಳಕೆದಾರರು ಡಿಲಿಟ್ ಮಾಡುವ ತಲೆನೋವು ಕೂಡ ಇಲ್ಲಿ ಇಲ್ಲ.

ಕಾರ್ಪೊರೇಟ್‌ ಸಂಸ್ಥೆಗಳಿಗೂ ಇದು ಹೆಚ್ಚು ಉಪಯುಕ್ತವಾಗಿರಲಿದೆ. ಸಮಾರಂಭದ ಉಪನ್ಯಾಸ ಮತ್ತಿತರ ವಿವರಗಳನ್ನು ಮೇಲ್‌ ಬ್ಯಾಗ್‌ನಲ್ಲಿ ಅಟ್ಯಾಚ್‌ ಮಾಡಿ ಕಳಿಸಬಹುದು. ಆ್ಯಪ್‌ ಬಳಕೆದಾರರ ಮಾಹಿತಿ ಎಲ್ಲಿಯೂ ಸೋರಿಕೆ ಆಗದ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಬಳಕೆದಾರರ ಖಾಸಗಿತನ ಕಾಯ್ದುಕೊಳ್ಳಲಾಗುವುದು. ಆಹ್ವಾನಿತರು ಮಾತ್ರ ತಮ್ಮ ತಮ್ಮಲ್ಲಿ  ಸಂದೇಶ ವಿನಿಮಯ ಮಾಡಿಕೊಳ್ಳಬಹುದು.

ಸಮಾರಂಭದ ಆಹ್ವಾನದ ಜತೆ ಆ್ಯಪ್‌ನಲ್ಲಿ ಕಾರ್ಯಕ್ರಮ ನಡೆಯುವ ಸ್ಥಳ, ಅಲ್ಲಿಗೆ ಹೋಗುವ ಮಾರ್ಗದ ವಿವರ, ಕ್ಯಾಬ್‌ ಬುಕ್‌ ಮಾಡಲು ಓಲಾ, ಉಬರ್‌ ಆ್ಯಪ್‌, ಕಾರ್ಯಕ್ರಮದ ಆಡಿಯೊ ವಿವರಗಳೆಲ್ಲ ಇರುತ್ತವೆ. ವಿಡಿಯೊ ಆಹ್ವಾನ ಪತ್ರಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

‘ಪ್ರತಿಯೊಬ್ಬ ಆಹ್ವಾನಿತರಿಗೆ ಪ್ರತ್ಯೇಕ ಕ್ಯುಆರ್‌ ಕೋಡ್ ಸೃಷ್ಟಿಯಾಗಿರುತ್ತದೆ. ಕಾರ್ಪೊರೇಟ್‌ ಸಮಾರಂಭಗಳು ನಡೆಯುವ ಸ್ಥಳದಲ್ಲಿ ಕ್ಯುಆರ್‌ ಕೋಡಿ ಸ್ಕ್ನಾನಿಂಗ್ ಮಾಡುವ ಸೌಲಭ್ಯ ಇದೆ ಅಳವಡಿಸಿದ್ದರೆ ಆಹ್ವಾನ ಇಲ್ಲದ ಅನಪೇಕ್ಷಿತರ ಭಾಗವಹಿಸುವಿಕೆಯನ್ನು ತಪ್ಪಿಸಬಹುದು. ಈ ವೇಳೆಯೊಳಗೆ ಭಾಗವಹಿಸುವುದನ್ನು ಖಚಿತಪಡಿಸಿ ಎನ್ನುವ ಆಹ್ವಾನಿತರ ಕೋರಿಕೆಗೂ ಇಲ್ಲಿ ಅವಕಾಶ ಇದೆ. ಆ್ಯಪ್‌ ಬಳಕೆ ಹೆಚ್ಚಿದಂತೆ ಪ್ರತಿಕ್ರಿಯಿಸುವ ಪ್ರವೃತ್ತಿ ಹೆಚ್ಚಬಹುದು’ ಎಂದು ಬಿಪಿನ್‌ ಅವರು ಆಶಾವಾದ ವ್ಯಕ್ತಪಡಿಸುತ್ತಾರೆ.

ಬೆಂಗಳೂರಿನ ಕೆಲವು ರೆಸ್ಟೊರೆಂಟ್‌ಗಳೂ ಈ ಆ್ಯಪ್‌ನ ಜತೆ ಕೈಜೋಡಿಸಿವೆ. ಔತಣಕೂಟಗಳನ್ನು ಏರ್ಪಡಿಸುವವರಿಗೆ ಉಚಿತ ಕೂಪನ್‌ ಕೊಡಲಾಗುತ್ತಿದೆ. ಜನಸಾಮಾನ್ಯರೂ ಸುಲಭವಾಗಿ ಬಳಸುವ ಬಗೆಯಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆ್ಯಪ್‌ ಅಭಿವೃದ್ಧಿಪಡಿಸುವ ಆಲೋಚನೆಯೂ ಇದೆ ಎಂದೂ ಬಿಪಿನ್‌ ಅಂದಾನಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು