ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗೆ ದೈತೋಟ ಸಲಹೆ

Last Updated 19 ಜುಲೈ 2022, 17:16 IST
ಅಕ್ಷರ ಗಾತ್ರ

ವಾಸು, ತ್ಯಾಗರಾಜನಗರ, ಬೆಂಗಳೂರು

l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ಈಗ ನನಗೆ ಸುಮಾರು 65 ವರ್ಷ ವಯಸ್ಸು. ನನ್ನ ನಿವೃತ್ತಿಯ ಸಮಯದಲ್ಲಿ ಬಂದ ಹಣ ₹ 3 ಲಕ್ಷ ಇದೆ. ಈ ಹಣವನ್ನು ಬ್ಯಾಂಕ್ ನಿಶ್ಚಿತ ಠೇವಣಿಯಲ್ಲಿ ಇಡಬೇಕೆಂದಿದ್ದೇನೆ. ಆದರೆ ಬ್ಯಾಂಕ್ ಅಥವಾ ಯಾವುದೇ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ನನಗೆ ಅಗತ್ಯ ಸಲಹೆಯನ್ನು ಯಾರೂ ನೀಡುತ್ತಿಲ್ಲ. ಈ ಇಳಿ ವಯಸ್ಸಿನಲ್ಲಿ ಇಷ್ಟೊಂದು ಮೊತ್ತವನ್ನು ಎಲ್ಲಿ ಹೂಡಿಕೆ ಮಾಡಿದರೆ ನಾನು ನೆಮ್ಮದಿಯಿಂದ ಇರಬಹುದು?

ಉತ್ತರ: ಯಾವುದೇ ವ್ಯಕ್ತಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತನ್ನ ಜೀವಿತದ ಅವಧಿಯಲ್ಲಿ ತನ್ನ ಸುಪರ್ದಿಯಲ್ಲಿ ಸುರಕ್ಷಿತವಾಗಿ ಇರಿಸಿಕೊಳ್ಳಬೇಕೆಂದು ಆಶಿಸುವುದು ಸಹಜ. ಇಂದು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಥವಾ ಉತ್ತಮ ಖಾಸಗಿ ಬ್ಯಾಂಕ್‌ಗಳಲ್ಲಿ ನಿಮ್ಮ ಹಣವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿವಿಧ ಕಂತುಗಳಲ್ಲಿ ಬೇರೆ ಬೇರೆ ಕಾಲಾವಧಿಗೆ ಅನುಗುಣವಾಗಿ ಠೇವಣಿಯಾಗಿ ಇರಿಸಬಹುದು. ಇದು ನಿಮ್ಮ ವ್ಯವಹಾರದ ಅಗತ್ಯ, ಅನುಕೂಲಗಳಿಗೆ ತಕ್ಕಂತೆ ಇರಲಿ. ಅದಕ್ಕಾಗಿ ನಿಮಗೆ ಸಮೀಪದಲ್ಲಿರುವ ಬ್ಯಾಂಕ್ ಆಯ್ಕೆ ಮಾಡಿ. ಇದರಿಂದ ನಿಮಗೆ ವಾರ್ಷಿಕವಾಗಿ ಶೇಕಡ 5ರಿಂದ ಶೇ 6.50ರವರೆಗೆ ಬಡ್ಡಿ ಲಭಿಸೀತು.

ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಆಗದಿದ್ದರೆ, ಸಮೀಪದ ಯಾವುದೇ ಅಂಚೆ ಕಚೇರಿಯಲ್ಲಿ ಈ ಮೊತ್ತ ಹೂಡಿಕೆ ಮಾಡಬಹುದು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೆಷ್ಟೋ ವರ್ಷಗಳ ವಿಶ್ವಾಸಾರ್ಹತೆ ಇರುವ, ಕೇಂದ್ರ ಸರ್ಕಾರದ ಸಂಸ್ಥೆಯಾಗಿರುವ ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡಲು ಭದ್ರತೆಯ ದೃಷ್ಟಿಯಿಂದ ಯಾವ ಸಂದೇಹವೂ ಬೇಡ. ಎಲ್ಲ ವಯೋಮಾನಗಳ ವ್ಯಕ್ತಿಗಳಿಗೆ ವಿವಿಧ ಬಗೆಯ ಹೂಡಿಕೆಗಳಿಗೆ ಇಲ್ಲಿ ಅವಕಾಶವಿದೆ. ನೀವು ಹಿರಿಯ ನಾಗರಿಕರಾಗಿರುವುದರಿಂದ ಈ ವರ್ಗದ ವ್ಯಕ್ತಿಗಳಿಗಾಗಿರುವ ಪ್ರತ್ಯೇಕ ಹೂಡಿಕೆಗೂ ಇಲ್ಲಿ ಅವಕಾಶವಿದೆ. ಇಲ್ಲಿ ನಿಮಗೆ ವಾರ್ಷಿಕವಾಗಿ ಶೇಕಡ 5.50ರಿಂದ ಶೇ 7.40ರತನಕ ಹೂಡಿಕೆಯ ಕಾಲಾವಧಿ ಹಾಗೂ ಯೋಜನೆಗೆ ಅನುಗುಣವಾಗಿ ಬಡ್ಡಿ ಲಭಿಸೀತು. ಇದಕ್ಕಾಗಿ ನಿಮ್ಮ ಸಮೀಪದ ಅಂಚೆ ಕಚೇರಿ ಸಂಪರ್ಕಿಸಿ.

ರಮೇಶ ಸಣ್ಣದೇವರು, ಮಲ್ಲೇಶ್ವರ, ಬೆಂಗಳೂರು

l ಪ್ರಶ್ನೆ: ತಾವು ಹಿಂದಿನ ಅಂಕಣಗಳಲ್ಲಿ ಉತ್ತಮ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಬೇಕೆಂದು ಹೇಳಿದ್ದೀರಿ. ‘ಉತ್ತಮ ಕಂಪನಿ’ ಷೇರುಗಳನ್ನು ಆಯ್ಕೆ ಮಾಡುವ ಬಗೆ ತಿಳಿಸಿ.

ಉತ್ತರ: ಹೂಡಿಕೆದಾರ ಲಾಭ ಮಾಡುವ ಉದ್ದೇಶದಿಂದ ಷೇರುಗಳನ್ನು ಆಯ್ಕೆ ಮಾಡುವ ಮೊದಲು ಕೆಲವು ಮೂಲ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಂಡರೆ ಸಂಭಾವ್ಯ ಆರ್ಥಿಕ ಅಪಾಯದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಅಥವಾ ಉತ್ತಮ ಲಾಭ ಗಳಿಸಬಹುದು. ಇದಕ್ಕಾಗಿ ನೀವು ಹೂಡಿಕೆ ಮಾಡುವ ಮೊದಲು ಉದ್ದೇಶಿತ ಕಂಪನಿಯ ಬಗ್ಗೆ ಒಂದಿಷ್ಟು ಪರಾಮರ್ಶೆಯನ್ನು ಈ ಕೆಳಗಿನ ಅಂಶವನ್ನು ಪರಿಗಣಿಸಿ ಮಾಡಬಹುದು.

1. ಉದ್ದೇಶಿತ ಕಂಪನಿ ಯಾವ ಕ್ಷೇತ್ರದಲ್ಲಿದೆಯೋ ಆ ಕ್ಷೇತ್ರ ಹಾಗೂ ಕಂಪನಿ ಉತ್ತಮ ಬೆಳವಣಿಗೆ ತೋರುತ್ತಿರಬೇಕು. ಉದಾಹರಣೆಗೆ, ಐ.ಟಿ. ಕ್ಷೇತ್ರ ಉತ್ತಮ ಅಭಿವೃದ್ಧಿಯ ಲಕ್ಷಣ ಹೊಂದಿದ್ದರೆ ಮಾತ್ರ ನೀವು ಆ ವಲಯದ ಷೇರುಗಳನ್ನು ಕೊಳ್ಳುವುದು ಸೂಕ್ತ. ಕೆಲವೊಮ್ಮೆ ಆಯಾ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಒಟ್ಟು ವ್ಯವಹಾರ ಸೊರಗಬಹುದು. ಅಂತಹ ಸಂದರ್ಭದಲ್ಲಿ ಕಂಪನಿ ಹಿಂದೆ ಎಷ್ಟೇ ಚೆನ್ನಾಗಿ ಲಾಭ ನೀಡಿದ್ದರೂ, ಕ್ಷೇತ್ರಕ್ಕೆ ಸಂಬಂಧಿತ ತಾತ್ಕಾಲಿಕ, ಮಧ್ಯಂತರ ಅಡಚಣೆಗಳು ಷೇರು ಮೌಲ್ಯವನ್ನು ಬಾಧಿಸದೆ ಇರದು. ಅಂತಹ ಸಂದರ್ಭದಲ್ಲಿ ನಿರ್ಧಾರವನ್ನು ತುಸು ಮುಂದೂಡಬೇಕು.

2. ಆಯ್ಕೆ ಮಾಡುವ ಕಂಪನಿ ಯಾವುದೇ ಕಾನೂನು ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ತೊಂದರೆ ಎದುರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಯಾ ಕ್ಷೇತ್ರದಲ್ಲಿ ಉತ್ತಮ ಅನುಭವವಿರುವ ಹಾಗೂ ವಿಶ್ವಾಸಾರ್ಹತೆ ಇರುವ ಆಡಳಿತ ಮಂಡಳಿ ಸದಸ್ಯರಿದ್ದಾಗಲಷ್ಟೇ ಯಾವುದೇ ಸಂಸ್ಥೆ ಸಮರ್ಥವಾಗಿ ಮುನ್ನಡೆಯಬಲ್ಲದು. ಕಂಪನಿಯ ಭವಿಷ್ಯದ ಯೋಜನೆಗಳ ಬಗೆಗಿನ ಸಮಗ್ರ ಮಾಹಿತಿಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಹೂಡಿಕೆದಾರರ ವಿಭಾಗದಲ್ಲಿ ಪ್ರಕಟಿಸಲಾಗುತ್ತದೆ. ಇದನ್ನು ಪ್ರತಿ ತ್ರೈಮಾಸಿಕ ಅವಧಿಗೊಮ್ಮೆ ಗಮನಿಸುತ್ತಿರಿ. ಹಿಂದಿನ ಭರವಸೆಗಳು ನಿಜವಾಗಿವೆಯೇ ಎಂಬುದೂ ಇಲ್ಲಿ ಮುಖ್ಯ. ಇವೆಲ್ಲದರ ಪ್ರತಿಫಲನ ತ್ರೈಮಾಸಿಕ ಫಲಿತಾಂಶ ಪ್ರಕಟವಾದಂತೆ ಷೇರುಗಳ ಬೆಲೆಯಲ್ಲಿ ಗೊತ್ತಾಗುತ್ತದೆ. ಮಾರುಕಟ್ಟೆ ಯಾವತ್ತೂ ಇಂತಹ ವಿಚಾರಗಳನ್ನು ಪೂರ್ವಭಾವಿಯಾಗಿ ಗ್ರಹಿಸಿಕೊಳ್ಳುತ್ತದೆ.

3. ಕಂಪನಿ ಅತಿಯಾಗಿ ಸಾಲ ಮಾಡಿರದೆ, ವ್ಯಾವಹಾರಿಕವಾಗಿ ಆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು. ಮುಂದಿನ ನಾಲ್ಕೈದು ಸಾಲುಗಳಲ್ಲಿ ಉತ್ತಮ ಆರ್ಥಿಕ ಪ್ರಗತಿಯ ನಿರೀಕ್ಷೆ ಇರುವ, ತಂತ್ರಜ್ಞಾನ ಬಳಕೆಯೊಡನೆ ಆರ್ಥಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಂಪನಿಗಳನ್ನು ಆಯ್ಕೆ ಮಾಡಿ. ಇದಕ್ಕಾಗಿ ಕಂಪನಿ ಅಥವಾ ವಿಶ್ಲೇಷಣಾ ಸಂಸ್ಥೆಗಳು ಪ್ರಕಟಿಸುವ ಆರ್ಥಿಕ ವರದಿ ಹಾಗೂ ದತ್ತಾಂಶ, ಆರ್ಥಿಕ ಅನುಪಾತದ ಅಂಕಿ–ಅಂಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ. ಇದನ್ನು ಅರ್ಥಮಾಡಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳಿ.

ನಾವು ದಿನನಿತ್ಯ ಉಪಯೋಗಿಸುವ ಮೊಬೈಲ್, ವಾಹನ, ಟಿ.ವಿ ಇತ್ಯಾದಿ ಸವಕಳಿಯಾಗುವ ಉಪಕರಣಗಳನ್ನು ಖರೀದಿಸುವ ಮೊದಲು ಆ ವಸ್ತುವಿನ ತಾಂತ್ರಿಕ ವಿಚಾರ ಅಷ್ಟಾಗಿ ಗೊತ್ತಿಲ್ಲದಿದ್ದರೂ ಹಲವು ಅಂಗಡಿಗಳಿಗೆ ಭೇಟಿ ನೀಡಿ ಆಮೂಲಾಗ್ರವಾಗಿ, ಅದರ ಬಣ್ಣದಿಂದ ತೊಡಗಿ ಬೆಲೆಯ ತನಕ ವಿಮರ್ಶಿಸುವ ನಾವು, ಅದೇ ಸೂತ್ರವನ್ನು ಹೂಡಿಕೆಯ ವಿಚಾರ ಬಂದಾಗ ಅಳವಡಿಸಿಕೊಳ್ಳಲು ಹಿಂಜರಿಯುತ್ತೇವೆ. ಯಾವುದೇ ವ್ಯವಹಾರವನ್ನು ಒಂದಷ್ಟು ಸರಳ ರೀತಿಯಲ್ಲಿ, ಅಂಕಿ–ಅಂಶಗಳ ಆಧಾರದಲ್ಲಿ ತಿಳಿಯುವ, ಆ ಮೂಲಕ ನಮ್ಮ ನಿರ್ಧಾರಗಳಿಗೆ ಗಟ್ಟಿ ನೆಲೆಯನ್ನು ರೂಪಿಸಿಕೊಳ್ಳುವ ಪರಿಣತಿ ಪಡೆದುಕೊಳ್ಳಬೇಕು. ನಮ್ಮಲ್ಲಿ ಆ ಪ್ರವೃತ್ತಿ ಎಲ್ಲಿಯತನಕ ಬೆಳೆಯುವುದಿಲ್ಲವೋ ಅಲ್ಲಿಯತನಕ, ಸರಿಯಾದ ಕಂಪನಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಲ್ಲಿ, ಸಕಾಲದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಹಾಗೂ ಅವುಗಳನ್ನು ನಮ್ಮ ಒಳಗಣ್ಣಿನಿಂದ ಗ್ರಹಿಸುವಲ್ಲಿ ಸಮರ್ಥರಾಗಲಾರೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT