ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು | ಪ್ರಶ್ನೋತ್ತರ: ನಿವೃತ್ತ ಜೀವನಕ್ಕಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ

Last Updated 2 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಕಾಲೇಜು ಪ್ರಾಧ್ಯಾಪಕಿ. ನಿವೃತ್ತ ಜೀವನಕ್ಕಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಬೇಕೆಂದಿದ್ದೇನೆ. ಇದರಲ್ಲಿ ಟೈರ್ 1 ಹಾಗೂ ಟೈರ್ 2 ಎಂಬ ವರ್ಗಗಳು ಇವೆ ಎಂದು ಕೇಳಿದ್ದೇನೆ. ನಾನು ಯಾವುದನ್ನು ಆಯ್ಕೆ ಮಾಡಬೇಕು ಹಾಗೂ ಇವುಗಳ ವೈಶಿಷ್ಟ್ಯ ಏನು? ಯಾವುದು ನಮಗೆ ಅಧಿಕ ಲಾಭದಾಯಕ ಹಾಗೂ ಹೆಚ್ಚು ಭದ್ರತೆ ಹೊಂದಿದೆ ಎಂಬುದನ್ನು ತಿಳಿಸಿ.

-ವಿಜಯಲಕ್ಷ್ಮಿ ಕಲ್ಮಠ,ಗುಳೇದಗುಡ್ಡ

ಉತ್ತರ: ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ಅಡಿಯಲ್ಲಿ ಸಂಗ್ರಹವಾದ ಮೊತ್ತವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (‍ಪಿಎಫ್‌ಆರ್‌ಡಿಎ) ಅನುಮೋದನೆ ಪಡೆದ ಹೂಡಿಕೆ ಮಾರ್ಗಸೂಚಿ ಪ್ರಕಾರ ಸರ್ಕಾರಿ ಬಾಂಡ್‌ಗಳು, ಬಿಲ್‌ಗಳು, ಕಾರ್ಪೊರೇಟ್ ಡಿಬೆಂಚರ್‌ಗಳು ಮತ್ತು ಷೇರುಗಳನ್ನು ಒಳಗೊಂಡಿರುವ ವೈವಿಧ್ಯಮಯ ಪೋರ್ಟ್‌ಫೋಲಿಯೊಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎನ್‌ಪಿಎಸ್‌ ಖಾತೆಯನ್ನು ತೆರೆಯಲು ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯನ್ನು (ಪ್ರಾಣ್) ಹೊಂದಿರಬೇಕಾಗುತ್ತದೆ. ಎನ್‌ಪಿಎಸ್‌ ಚಂದಾದಾರರ ಜೀವಿತಾವಧಿಯಲ್ಲಿ ಎನ್‌ಪಿಎಸ್ ಸಂಬಂಧಿತ ಯಾವುದೇ ವ್ಯವಹಾರಕ್ಕೆ ಇದನ್ನು ಬಳಸಿಕೊಳ್ಳಬೇಕು. ಯೋಜನೆಯನ್ನು ಎರಡು ಹಂತಗಳಾಗಿ ರೂಪಿಸಲಾಗಿದೆ:

1) ‘ಟೈರ್ 1’ ಹೂಡಿಕೆಯ ಅಡಿ, 60 ವರ್ಷ ವಯಸ್ಸಿನ ನಂತರವಷ್ಟೇ ಹೂಡಿಕೆದಾರರಿಗೆ ಹಣ ಹಿಂಪಡೆಯುವುದಕ್ಕೆ ಅವಕಾಶ ಕೊಡಲಾಗುತ್ತದೆ. ಇದರಲ್ಲಿ ಮಾಡುವ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿಸಿಡಿ(1) ಅಡಿ ತೆರಿಗೆ ವಿನಾಯಿತಿ ಇದೆ. ಇಲ್ಲಿ ವಾರ್ಷಿಕವಾಗಿ ₹ 1.50 ಲಕ್ಷದ ತನಕ ತೆರಿಗೆ ವಿನಾಯಿತಿ ಪಡೆಯಬಹುದು. ಟೈರ್ 1 ಖಾತೆ ಹೊಂದಿರುವವರ ₹ 50 ಸಾವಿರದವರೆಗಿನ ಹೂಡಿಕೆಗೆ ಸೆಕ್ಷನ್ 80 ಸಿಸಿಡಿ1(ಬಿ) ಅಡಿ ಪ್ರತಿ ವರ್ಷ ಹೆಚ್ಚುವರಿ ತೆರಿಗೆ ವಿನಾಯಿತಿ ಇದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ ಹೂಡಿಕೆ ಮೊತ್ತ ₹ 1,000.
₹ 500 ತೊಡಗಿಸಿ ಖಾತೆ ತೆರೆಯಬಹುದು. ನಿವೃತ್ತಿಯ ಸಮಯದಲ್ಲಿ ಹಿಂಪಡೆಯುವ ಒಟ್ಟು ಮೊತ್ತದ ಮೇಲೆ ತೆರಿಗೆ ಇರುವುದಿಲ್ಲ.

2) ‘ಟೈರ್ 2’ ಖಾತೆಯಲ್ಲಿನ ಹೂಡಿಕೆಯನ್ನು ಯಾವುದೇ ನಿರ್ಬಂಧಗಳಿಲ್ಲದೆ ಯಾವುದೇ ಸಮಯದಲ್ಲಿ ಹಿಂಪಡೆಯಬಹುದು. ಹೂಡಿಕೆದಾರರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಹಣ ವಾಪಸ್ ಪಡೆಯುವ ಅವಕಾಶ ಇರುವುದು ಇದರ ವಿಶೇಷ. ಪ್ರತಿ ವರ್ಷ ಕನಿಷ್ಠ ಮೊತ್ತ ಪಾವತಿಯ ಅಗತ್ಯವಿಲ್ಲ. ಆದರೆ ಈ ಖಾತೆಯಲ್ಲಿ ಹೂಡಿಕೆ ಮಾಡುವ ಮುನ್ನ ಟೈರ್ 1 ಖಾತೆ ತೆರೆಯಬೇಕು. ಇಲ್ಲಿನ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಹೀಗಾಗಿ, ಇದು ಹೂಡಿಕೆ ಮಾತ್ರದ ಖಾತೆ.

ಈ ಎರಡೂ ಹೂಡಿಕೆಗಳು ಪ್ರತ್ಯೇಕ ಹಾಗೂ ಅವುಗಳ ಉದ್ದೇಶ ವಿಭಿನ್ನ. ಟೈರ್ 1 ಹೂಡಿಕೆ ದೀರ್ಘಾವಧಿಯದು. ಟೈರ್ 2 ಹೂಡಿಕೆ ಯಾವುದೇ ಸಮಯ ಹಿಂಪಡೆಯಬಹುದಾದ ಹೂಡಿಕೆ. ದೀರ್ಘಾವಧಿ ಹೂಡಿಕೆಗಳಲ್ಲಿ ಹೆಚ್ಚಿನ ಪ್ರತಿಶತ ಮೊತ್ತವನ್ನು ಈಕ್ವಿಟಿ ವಿಭಾಗಕ್ಕೆ ತೊಡಗಿಸುವ ಮೂಲಕ ಹೂಡಿಕೆಯ ಮೌಲ್ಯವನ್ನು ಹೆಚ್ಚಿಸಬಹುದು. ಟೈರ್ 2 ಖಾತೆಯನ್ನು ದೀರ್ಘಾವಧಿಯ ಖಾತೆಯಾಗಿಯೂ ಬಳಸಿಕೊಳ್ಳಬಹುದು. ಖಾತೆಯನ್ನು ಆಧಾರ್ ಹಾಗೂ ಬ್ಯಾಂಕ್ ಖಾತೆಯ ವಿವರದೊಂದಿಗೆ ಎನ್‌ಪಿಎಸ್ ಪೋರ್ಟಲ್ ಮೂಲಕ ನೀವೇ ತೆರೆಯಬಹುದು. ಯೋಚಿಸಿ ನಿರ್ಧಾರ ಕೈಗೊಳ್ಳಿ.

****

ಪ್ರಶ್ನೆ: ನಾನು ಈ ಹಿಂದೆ ಒಂದು ಬ್ಯಾಂಕ್ ಮೂಲಕ ಎಸ್ಐಪಿ ಹೂಡಿಕೆ ಮಾಡಿದ್ದೆ. ಈಗ ಆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲ. ನಾನು ಈಗ ಎಸ್ಐಪಿ ಹಣ ಹಿಂಪಡೆಯಬೇಕು. ಬ್ಯಾಂಕ್ ಖಾತೆಯನ್ನು ಮತ್ತೆ ಸಕ್ರಿಯ ಮಾಡಿಕೊಳ್ಳಬೇಕೆ? ಬೇರೆ ಖಾತೆಗೆ ಹಣ ಬರುವಂತೆ ಮಾಡಲಾಗದೆ?

ಹೆಸರು ಬೇಡ,ಬೆಂಗಳೂರು

ಉತ್ತರ: ಸಾಮಾನ್ಯವಾಗಿ, ಬ್ಯಾಂಕ್ ಗ್ರಾಹಕರು ಅನೇಕ ಖಾತೆಗಳನ್ನು ಹೊಂದಿದ್ದಾಗ ಅಥವಾ ಒಂದು ಸ್ಥಳದಿಂದ ಇನ್ನೊಂದೆಡೆಗೆ ಉದ್ಯೋಗ ನಿಮಿತ್ತ ವರ್ಗಾವಣೆಯಾದಾಗ ತಮ್ಮ ಎಲ್ಲ ಖಾತೆಗಳನ್ನು ಚಾಲ್ತಿಯಲ್ಲಿಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ. ಖಾತೆಯಲ್ಲಿ ಎರಡು ವರ್ಷಗಳಿಂದ ಹೊರಗಿನ ಜಮಾ-ಪಾವತಿ ವ್ಯವಹಾರ ನಡೆಯದಿದ್ದಲ್ಲಿ ಅಂತಹ ಖಾತೆಗಳನ್ನು ಬ್ಯಾಂಕ್‌ಗಳು ಗ್ರಾಹಕರ ಹಿತದೃಷ್ಟಿಯಿಂದ ನಿಷ್ಕ್ರಿಯಗೊಳಿಸುತ್ತವೆ. ಇದರ ಉದ್ದೇಶ, ಗ್ರಾಹಕರ ನಿಷ್ಕ್ರಿಯ ಖಾತೆ ಉಪಯೋಗಿಸಿ ಯಾವುದೇ ಒಳ-ಹೊರಗಿನ ವ್ಯಕ್ತಿಗಳು ಅಕ್ರಮ ವ್ಯವಹಾರ ನಡೆಸುವುದನ್ನು ತಡೆಗಟ್ಟುವುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಬ್ಯಾಂಕ್‌ಗಳು ಗ್ರಾಹಕರಿಂದ ವಸೂಲು ಮಾಡುವ ಶುಲ್ಕ, ಅಥವಾ ಗ್ರಾಹಕರಿಗೆ ನೀಡುವ ಶಿಲ್ಕಿನ ಮೇಲಿನ ಬಡ್ಡಿಯನ್ನು ಹೊರಗಿನ ವ್ಯವಹಾರವೆಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಖಾತೆಯನ್ನು ಸದಾ ಚಾಲ್ತಿಯಲ್ಲಿಡಲು ಅದನ್ನು ನಿಮ್ಮ ನಿತ್ಯದ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿರಬೇಕು ಅಥವಾ ನಿಮ್ಮದೇ ಇತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿರಬೇಕು.

ಮೇಲಿನ ಸನ್ನಿವೇಶದಲ್ಲಿ ನಿಮಗೆ ಎರಡು ಅವಕಾಶಗಳಿವೆ.

1) ನಿಮ್ಮ ಎಸ್ಐಪಿ ಹೂಡಿಕೆಯನ್ನು ನಿರ್ವಹಿಸು ತ್ತಿರುವ ಫಂಡ್ ಹೌಸ್‌ಗೆ ಅಥವಾ ಸಮೀಪದ ಕ್ಯಾಮ್ಸ್ (CAMS) ಕೇಂದ್ರಕ್ಕೆ ನಿಮ್ಮ ಬೇರೆ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡುವ ಮೂಲಕ ನಿಮ್ಮ ಹೂಡಿಕೆಯನ್ನು ತ್ವರಿತವಾಗಿ ಪಡೆಯಬಹುದು. ಇದಕ್ಕಾಗಿ ನಿಮ್ಮ ಇತರ ಖಾತೆಯ, ರದ್ದು ಮಾಡಲಾದ ಚೆಕ್ (cancelled cheque) ಜೊತೆ ಅರ್ಜಿ ಸಲ್ಲಿಸುವ ಮೂಲಕ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದು. ಬ್ಯಾಂಕ್ ಮ್ಯಾಂಡೇಟ್ ಬದಲಾವಣೆ ಸೇವೆಯನ್ನು ಕ್ಯಾಮ್ಸ್ ಆನ್ಲೈನ್ ಪೋರ್ಟಲ್ (https://www.camsonline.com) ಮೂಲಕವೂ ಕೆಲವು ಮೌಲ್ಯಮಾಪನ ಮಿತಿಯೊಳಗೆ ಬರುವ ಫೋಲಿಯೊಗಳಿಗೆ ಮಾಡಬಹುದು.

2)→ಗ್ರಾಹಕರು ಸೂಕ್ತ ಅರ್ಜಿಯೊಡನೆ ತಮ್ಮ ಭಾವ ಚಿತ್ರ, ಗುರುತು ಪತ್ರ, ಪ್ಯಾನ್, ಆಧಾರ್ ಇತ್ಯಾದಿ ಅಗತ್ಯ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಿ, ನಿಷ್ಕ್ರಿಯ ಖಾತೆಯನ್ನು ಪುನಃ ಚಾಲ್ತಿಗೊಳಿಸಬಹುದು. ಇದಕ್ಕಾಗಿ ಕೆಲವೊಮ್ಮೆ ಗ್ರಾಹಕರು ಮೇಲೆ ತಿಳಿಸಿದ ದಾಖಲೆಗಳೊಡನೆ ಬ್ಯಾಂಕ್ ಶಾಖೆಗೆ ಖುದ್ದಾಗಿ ಭೇಟಿ ನೀಡಬೇಕಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001 ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT