ಬಿಕ್ಕಟ್ಟಿನ ಸಂದರ್ಭದಲ್ಲಿ ಹೂಡಿಕೆ ಹೇಗೆ?

ಆರ್ಥಿಕ ಹಿಂಜರಿತ, ಹಣಕಾಸಿನ ಬಿಕ್ಕಟ್ಟು, ಆಹಾರ ಕೊರತೆ, ನಿರುದ್ಯೋಗ, ರಾಜಕೀಯ ಬಿಕ್ಕಟ್ಟು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಷೇರು ಮಾರುಕಟ್ಟೆಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತವೆ. ಸದ್ಯ ಷೇರುಪೇಟೆ ಹೂಡಿಕೆದಾರರ ತಲೆಬಿಸಿಗೆ ಕಾರಣವಾಗಿರುವ ವಿಚಾರ ಉಕ್ರೇನ್–ರಷ್ಯಾ ನಡುವಿನ ಯುದ್ಧ. ಯುದ್ಧವು ಆ ಎರಡು ದೇಶಗಳ ನಡುವೆ ನಡೆಯುತ್ತಿದ್ದರೂ ಅದರ ಪರಿಣಾಮ ಮಾತ್ರ ಎಲ್ಲ ಜಾಗತಿಕ ಮಾರುಕಟ್ಟೆಗಳ ಮೇಲೆ ಆಗುತ್ತಿದೆ.
ಸಾಮಾನ್ಯವಾಗಿ ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಣ್ಣ (ರಿಟೇಲ್) ಹೂಡಿಕೆದಾರರು ತಮ್ಮ ಹೂಡಿಕೆ ಮೊತ್ತ ಕರಗಿಹೋಗಬಹುದೆಂಬ ಆತಂಕಕ್ಕೆ ಬಿದ್ದು ಎಲ್ಲ ಷೇರುಗಳನ್ನು ಇದ್ದ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವುದಿದೆ. ತಮ್ಮ ಬಳಿ ಇರುವ ಉತ್ತಮ ಕಂಪನಿಗಳ ಷೇರುಗಳು ಕೂಡ ಭಾರೀ ಕುಸಿತ ಕಾಣುವುದನ್ನು ಕಂಡು ಕಂಗಾಲಾಗುತ್ತಾರೆ. ಇಷ್ಟು ಪೀಠಿಕೆ ಓದಿದ ಮೇಲೆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅನುಸರಿಸಬೇಕಾದ ಹೂಡಿಕೆ ತಂತ್ರ ಯಾವುದು ಎಂಬ ಪ್ರಶ್ನೆ ನಿಮಗೆ ಎದುರಾಗಿರುತ್ತದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಯತ್ನ ನಡೆಸೋಣ.
ಯುದ್ಧ ಮತ್ತು ಷೇರು ಹೂಡಿಕೆ: ಯುದ್ಧದ ಸಂದರ್ಭದಲ್ಲಿ ಕೆಲವು ವಲಯಗಳ ಕಂಪನಿಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಸಾಧಿಸಿದರೆ, ಕೆಲವು ಕಂಪನಿಗಳು ಸಂಕಷ್ಟದ ಸನ್ನಿವೇಷ ಎದುರಿಸುತ್ತವೆ. ವ್ಯಾಪಾರ ವ್ಯವಹಾರಕ್ಕೆ ಅಡಚಣೆ, ಹಣದುಬ್ಬರ, ಕಚ್ಚಾ ವಸ್ತುಗಳ ಲಭ್ಯತೆ ಹೀಗೆ ಅನೇಕ ಅಂಶಗಳು ಕಂಪನಿಗಳ ಲಾಭಾಂಶದ ಮೇಲೆ ಪರಿಣಾಮ ಬೀರುತ್ತವೆ. ಉದಾಹರಣೆಗೆ ಕಮಾಡಿಟಿ ಮಾರುಕಟ್ಟೆಯಲ್ಲಿ ಉಕ್ರೇನ್ ಮತ್ತು ರಷ್ಯಾ ಪ್ರಮುಖ ಪಾತ್ರ ವಹಿಸುತ್ತವೆ. ಉಕ್ರೇನ್ ದೊಡ್ಡ ಪ್ರಮಾಣದಲ್ಲಿ ಗೋಧಿ ಮತ್ತು ಅಡುಗೆ ಎಣ್ಣೆ ಉತ್ಪಾದಿಸುವ ದೇಶ. ರಷ್ಯಾ ಅತಿಹೆಚ್ಚು ನಿಕಲ್ (ಬಿಳಿಲೋಹ) ಉತ್ಪಾದಿಸುತ್ತದೆ. ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದೆ. ತೈಲ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಯುದ್ಧದ ಕಾರಣದಿಂದ ಇವುಗಳ ಉತ್ಪಾದನೆ ಕುಂಠಿತವಾದಾಗ ಅದು ಬೆಲೆ ಏರಿಕೆಗೆ ದಾರಿ ಮಾಡಿಕೊಡುತ್ತದೆ.
ಈ ಬೆಳವಣಿಗೆಯಿಂದ ಷೇರುಪೇಟೆಯಲ್ಲಿರುವ ಕಮಾಡಿಟಿ ಆಧಾರಿತ ಕಂಪನಿಗಳಿಗೆ ಒಂದಿಷ್ಟು ಲಾಭವಾದರೂ ಬೆಲೆ ಏರಿಕೆಯಿಂದ ಬಹುಪಾಲು ಕಂಪನಿಗಳ ಲಾಭಾಂಶದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಷೇರುಪೇಟೆ ಸೂಚ್ಯಂಕಗಳು ಶೇಕಡ 30ರಿಂದ ಶೇ 50ರವರೆಗೆ ಏರಿಳಿತ ಕಾಣುವುದಿದೆ. ಆದರೆ ಬಿಕ್ಕಟ್ಟಿನ ಕಾರ್ಮೋಡ ಸರಿದ ಒಂದೇ ವರ್ಷದಲ್ಲಿ ಮಾರುಕಟ್ಟೆ ಸೂಚ್ಯಂಕಗಳು ಚೇತರಿಸಿಕೊಂಡಿರುವುದು ಕಂಡುಬಂದಿದೆ. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ದೊಡ್ಡ ಕುಸಿತದ ಬಳಿಕ ದೊಡ್ಡ ಪ್ರಮಾಣದ ಓಟವನ್ನು ಮಾರುಕಟ್ಟೆಗಳು ಕಂಡಿವೆ ಎಂಬುದು ಗೊತ್ತಾಗುತ್ತದೆ.
ಷೇರುಪೇಟೆ ಗಣನೀಯ ಕುಸಿತ ಕಂಡಾಗ ಏನು ಮಾಡಬೇಕು:? ‘ಬೇರೆಯವರು ದುರಾಸೆಯಿಂದ ಹೂಡಿಕೆ ಮಾಡುವಾಗ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಿ; ಬೇರೆಯವರು ಹೆದರಿಕೊಳ್ಳುವಾಗ ನೀವು ದುರಾಸೆಯಿಂದ ಹೂಡಿಕೆ ಮಾಡಿ’ ಎಂದು ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಷೇರುಪೇಟೆ ಕುಸಿತ ಕಂಡಾಗ ಉತ್ತಮ ಕಂಪನಿಗಳ ಷೇರುಗಳನ್ನು ದೀರ್ಘಾವಧಿಗೆ ಖರೀದಿಸಲು ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ ಎನ್ನುವುದೇ ಈ ಮಾತಿನ ತಾತ್ಪರ್ಯ. ಆದರೆ ಒಳ್ಳೆಯ ಕಂಪನಿಗಳನ್ನು ಗುರುತಿಸುವಾಗ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಅವುಗಳ ಹಣಕಾಸಿನ ಸ್ಥಿತಿಗತಿ. ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ ಎನ್ನುವ ಮಾಹಿತಿ ಸೇರಿದಂತೆ ಭವಿಷ್ಯದ ಮುನ್ನೋಟದ ಅಂದಾಜು ನಿಮ್ಮಲ್ಲಿರಬೇಕು.
ಮಾರುಕಟ್ಟೆ ಕುಸಿತದ ಹಾದಿಯಲ್ಲಿರುವಾಗ ಹಣಕಾಸಿಗೆ ಸಂಬಂಧಿಸಿದ ಕಂಪನಿಗಳು, ಜ್ಯುವೆಲರಿ ಕಂಪನಿಗಳು, ಆಟೋಮೋಬೈಲ್ ಕಂಪನಿಗಳು, ಸಿನಿಮಾ ಥಿಯೇಟರ್ ನಡೆಸುವ ಕಂಪನಿಗಳು, ಟ್ರಾವೆಲ್ ಉದ್ಯಮದ ಕಂಪನಿಗಳನ್ನು ಹೂಡಿಕೆಗೆ ಹೆಚ್ಚು ಪರಿಗಣಿಸದಿರುವುದು ಒಳಿತು. ದಿನಬಳಕೆ ವಸ್ತುಗಳಾದ ಅಕ್ಕಿ, ಸೋಪು, ಪೇಸ್ಚ್, ಗೋಧಿ, ಔಷಧ ಮುಂತಾದ ಕಂಪನಿಗಳಲ್ಲಿ ಹೂಡಿಕೆ ಪರಿಗಣಿಸಬಹುದು.
ನಷ್ಟ ಸರಿದೂಗಿಸಿಕೊಳ್ಳಿ: ಬಿಕ್ಕಟ್ಟಿನ ಸಂದರ್ಭಗಳಲ್ಲಿ ಷೇರು ಹೂಡಿಕೆ ಮಾಡುವಾಗ ಬಳಸಿಕೊಳ್ಳಬೇಕಾದ ತಂತ್ರಗಳಲ್ಲಿ ಷೇರು ಹೂಡಿಕೆ ನಷ್ಟ ಸರಿದೂಗಿಸುವ ಪ್ರಕ್ರಿಯೆಯೂ ಒಂದು. ನಷ್ಟವನ್ನು ಸರಿದೂಗಿಸುವುದು (Set off of losses) ಅಂದರೆ ನಿರ್ದಿಷ್ಟ ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಾಗ ಆದ ಲಾಭ ಮತ್ತು ನಷ್ಟವನ್ನು ಹೂಂದಾಣಿಕೆ ಮಾಡುವ ಪ್ರಕ್ರಿಯೆ.
ಆದರೆ ನೆನಪಿರಲಿ ದೀರ್ಘಾವಧಿ ಬಂಡವಾಳ ನಷ್ಟ (LTCL- Long Term Capital Loss) ಆದಾಗ ಅದನ್ನು ದೀರ್ಘಾವಧಿ ಬಂಡವಾಳ ಗಳಿಕೆ (LTCG) ಜತೆ
ಮಾತ್ರ ಸರಿದೂಗಿಸಬಹುದು. ಆದರೆ
ಅಲ್ಪಾವಧಿ ಬಂಡವಾಳ ನಷ್ಟ (STCL – Short Term Capital Loss) ಉಂಟಾದಾಗ ಅದನ್ನು ಅಲ್ಪಾವಧಿ ಬಂಡವಾಳ
ಗಳಿಕೆ (STCG) ಅಥವಾ ದೀರ್ಘಾವಧಿ ಬಂಡವಾಳ ಗಳಿಕೆ (LTCG) ಜತೆ ಹೂಂದಿಸಬಹುದು.
ಉದಾಹರಣೆ-1: ನೀವು ಒಂದು ವರ್ಷದಲ್ಲಿ 10 ಬಾರಿ ಷೇರುಗಳ ಮಾರಾಟ ಮಾಡಿದ್ದು, ಅದರಲ್ಲಿ ಎಂಟು ಬಾರಿ ಲಾಭ ಎರಡು ಬಾರಿ ನಷ್ಟ ಅನುಭವಿಸಿದ್ದೀರಿ ಎಂದಿಟ್ಟುಕೊಳ್ಳಿ. ಎಂಟು ಬಾರಿ ಷೇರುಗಳ ಮಾರಾಟ ಮಾಡಿದಾಗ ₹ 60 ಸಾವಿರ ಲಾಭವಾಗಿದೆ ಎಂದು ಭಾವಿಸೋಣ. ಇನ್ನುಳಿದ ಎರಡು ಬಾರಿ ಷೇರುಗಳನ್ನು ಮಾರಾಟ ಮಾಡಿದಾಗ ₹ 50 ಸಾವಿರ ನಷ್ಟವಾಗಿದೆ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ ನೀವು ₹ 60 ಸಾವಿರ ಲಾಭದ ಮೇಲೆ ತೆರಿಗೆ ಕಟ್ಟಬೇಕಿಲ್ಲ. ₹ 60 ಸಾವಿರದಲ್ಲಿ ₹ 50 ಸಾವಿರವನ್ನು (ಅಂದರೆ, ನಷ್ಟದ ಮೊತ್ತ) ಕಳೆದು ₹ 10 ಸಾವಿರದ ಮೇಲೆ ಮಾತ್ರ ಶೇ 15ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.