ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಾಸ್‌ಮಾತು' ಲೇಖನ 1: ದುಡಿಯೋರಿಗೆ ಸಂಪತ್ತು ಸೃಷ್ಟಿಸಿಕೊಳ್ಳುವ ದಾರಿ ಇಲ್ಲಿದೆ

Last Updated 3 ಫೆಬ್ರುವರಿ 2020, 9:32 IST
ಅಕ್ಷರ ಗಾತ್ರ
ADVERTISEMENT
""
""
""

ವಯಸ್ಸು ಯಾವುದೇ ಆಗಿರಲಿ ಕಾಸು ಉಳಿಸೋಕೆ ಕಾರಣಗಳಂತೂ ಇದ್ದೇ ಇರುತ್ವೆ. ಒಬ್ಬೊಬ್ಬರ ಅವಶ್ಯಕತೆ, ಹಣಕಾಸಿನ ಗುರಿಗಳು ಒಂದೊಂದು ಬಗೆ. ನಿಮ್ಮನ್ನು ಕಾಡುತ್ತಿರುವ ಇಂಥ ಹತ್ತಾರು ಪ್ರಶ್ನೆಗಳಿಗೆ ಪರಿಹಾರ ಆಗಬಲ್ಲ; ಪರ್ಸನಲ್ ಫೈನಾನ್ಸ್‌ ವಿಚಾರವನ್ನು ಮತ್ತಷ್ಟು ಸರಳಗೊಳಿಸಬಲ್ಲ ಲೇಖನಗಳ ಸರಣಿ 'ಕಾಸ್‌ಮಾತು'

ದುಡಿಯಬೇಕು. ದುಡಿದು ಉಣ್ಣಬೇಕು. ದುಡಿದಿದ್ದರಲ್ಲಿ ಒಂದಿಷ್ಟನ್ನು ಉಳಿಸಿಕೊಳ್ಳಬೇಕು. ಉಳಿತಾಯವನ್ನು ಬಳಸಿ ಸಂಪತ್ತು ಸೃಷ್ಟಿಸಬೇಕು. ಇವನ್ನೆಲ್ಲ ಹೇಳುವುದು ಸುಲಭ, ಸಂಪತ್ತು ಸೃಷ್ಟಿ ಸುಲಭವೇ? ಸಂಪತ್ತು ಸೃಷ್ಟಿಗೊಂದು ದಾರಿ ಬೇಕಲ್ಲ?

‘ನಮ್ಮ ದುಡಿಮೆಯ ಹಣದ ಸದ್ವಿನಿಯೋಗ ಹೇಗೆ’ ಎಂಬುದನ್ನು ನಮಗೆ ಯಾರೂ, ಎಲ್ಲಿಯೂ ಅಷ್ಟೇನೂ ವಿವರವಾಗಿ ಹೇಳಿಕೊಡುವುದಿಲ್ಲ. ಇದನ್ನು ನಾವು ಸಾಮಾನ್ಯವಾಗಿ ನಮ್ಮ ಜೀವನದ ಪಥ ಸಾಗಿದಂತೆ, ಹಣಕಾಸಿಗೆ ಸಂಬಂಧಿಸಿದಂತೆ ಒಂದೆರಡು ದೊಡ್ಡ ಎಡವಟ್ಟುಗಳನ್ನು ಮಾಡಿಕೊಂಡ ನಂತರವೇ ಕಲಿಯುತ್ತೇವೆ. ಇಷ್ಟೇ ಅಲ್ಲ, ಹಣದ ಉಳಿತಾಯ ಹಾಗೂ ಹಣದ ಹೂಡಿಕೆ ವಿಚಾರದಲ್ಲಿ ಸಾಕಷ್ಟು ಅಪನಂಬಿಕೆಗಳು ಕೂಡ ನಮ್ಮಲ್ಲಿ ಇವೆ. ಇವುಗಳೆಲ್ಲದರ ಪರಿಣಾಮ ಎಂಬಂತೆ, ತಮಗೆ ಹಣಕಾಸಿನ ಯಾವ ಮಾರ್ಗ ಹೆಚ್ಚು ಸೂಕ್ತವಾಗುತ್ತದೆ ಎಂಬ ವಿಚಾರದಲ್ಲಿ ಹೂಡಿಕೆದಾರರಲ್ಲಿ ಗೊಂದಲ ಮೂಡುತ್ತದೆ.

ಆದರೆ, ಎಲ್ಲರಿಗೂ ಅವರದೇ ಆದ ಕನಸುಗಳು, ಗುರಿಗಳು ಇರುತ್ತವೆ. ಪ್ರತಿ ವ್ಯಕ್ತಿಯ ಸ್ಥಿತಿ ಆಧರಿಸಿ ಶಿಕ್ಷಣ, ಮದುವೆ, ವೃತ್ತಿ, ನಿವೃತ್ತಿಯ ನಂತರದ ಜೀವನ, ಆರೋಗ್ಯ, ಪ್ರವಾಸ ಮತ್ತು ಇತರ ಹಣಕಾಸು ಸಂಬಂಧಿ ಗುರಿಗಳು ಬದಲಾಗುತ್ತವೆ. ನಮ್ಮ ವಯಸ್ಸು ಹೆಚ್ಚಾದಂತೆಲ್ಲಾ ನಮ್ಮ ಖರ್ಚು – ವೆಚ್ಚಗಳ ಆದ್ಯತೆ ಕೂಡ ಬದಲಾಗುತ್ತದೆ. ಕುಟುಂಬದ ಅಗತ್ಯಗಳಿಗೆ ನಾವು ಹಣ ಮೀಸಲಿಡಬೇಕಾಗುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ, ನಾವು ನಮ್ಮದೇ ಒಂದು ಮನೆ ಮಾಡಿಕೊಳ್ಳಬೇಕಾಗುತ್ತದೆ, ವಯಸ್ಸಾದ ತಂದೆ–ತಾಯಿಯನ್ನು ನೋಡಿಕೊಳ್ಳಬೇಕಾಗುತ್ತದೆ, ಆರೋಗ್ಯ ಸಂಬಂಧಿ ವೆಚ್ಚಗಳನ್ನು ನಿಭಾಯಿಸಬೇಕಾಗುತ್ತದೆ, ಮಕ್ಕಳ ಮದುವೆಯ ಖರ್ಚು ಹೊರಬೇಕಾಗುತ್ತದೆ...

ಇಷ್ಟೆಲ್ಲದರ ಜೊತೆಯಲ್ಲೇ ನಮ್ಮ ನಿವೃತ್ತಿ ನಂತರದ ಜೀವನದ ಖರ್ಚುಗಳನ್ನೂ ನಾವೇ ನೋಡಿಕೊಳ್ಳಬೇಕು.

ಆದರೆ, ಕೆಲವರು ‘ಹಣಕಾಸು’ ಎಂಬ ಪದ ಕೇಳಿದ ತಕ್ಷಣವೇ ಆತಂಕಕ್ಕೆ ಒಳಗಾಗುತ್ತಾರೆ. ಇದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗುತ್ತದೆ. ಏಕೆಂದರೆ, ಅವರು ‘ಹಣಕಾಸಿನ’ ವಿಚಾರಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ಬಹಳ ಕಾಲ ಇದನ್ನು ನಿರ್ಲಕ್ಷಿಸಿಬಿಟ್ಟಿರುತ್ತಾರೆ.

ಮಹಿಳೆಯರಂತೂ ಹಣಕಾಸಿಗೆ ಸಂಬಂಧಿಸಿದ ಬಹುತೇಕ ವಿಚಾರಗಳನ್ನು ತಮ್ಮ ತಂದೆ, ಪತಿ ಅಥವಾ ಸಹೋದರರ ಪಾಲಿಗೆ ಬಿಟ್ಟುಬಿಡುತ್ತಾರೆ. ‘ಹಣಕಾಸಿನ ವಿಚಾರ ನೋಡಿಕೊಳ್ಳುವುದು ಗಂಡಸರ ಕೆಲಸ, ಅದು ತೀರಾ ಸಂಕೀರ್ಣ ವಿಚಾರವಾಗಿರುವುದರಿಂದ ಅದು ನಮಗೆ ಅರ್ಥ ಆಗುವುದಿಲ್ಲ, ಹಣಕಾಸು ಅಂದರೆ ಬರೀ ಸಂಖ್ಯೆಗಳು...’ ಎನ್ನುವ ನಂಬಿಕೆಗಳು ಬಹುತೇಕ ಮಹಿಳೆಯರಲ್ಲಿ ಇರುವ ಕಾರಣ ಅವರು ತಮ್ಮ ಹಣಕಾಸಿನ ಸ್ಥಿತಿ ಏನು ಎಂಬುದನ್ನು ನೋಡಲೂ ಹೋಗುವುದಿಲ್ಲ.

ಆದರೆ, ವೈಯಕ್ತಿಕ ಹಣಕಾಸು ವಿಚಾರಗಳನ್ನು ನಿಭಾಯಿಸುವ ಶಕ್ತಿಯೊಂದು ತಮ್ಮಲ್ಲಿ ಹುಟ್ಟಿನಿಂದಲೇ ಬಂದಿರುತ್ತದೆ ಎಂಬುದನ್ನು ಹೆಣ್ಣುಮಕ್ಕಳು ಮರೆತುಬಿಟ್ಟಿರುತ್ತಾರೆ. ಹೆಣ್ಣುಮಕ್ಕಳು ತೀರಾ ಅತಿ ಎನಿಸುವ ರಿಸ್ಕ್‌ಗಳನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ, ಅವರು ತಮ್ಮಲ್ಲಿರುವ ಹಣವನ್ನು ಚೆನ್ನಾಗಿ ಉಳಿತಾಯ ಮಾಡಬಲ್ಲರು (ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಆಪತ್ಕಾಲಕ್ಕೆ ಇರಲಿ ಎಂದು ನಗದನ್ನು ಉಳಿಸಿಟ್ಟುಕೊಂಡಿದ್ದು ನೋಟು ಅಮಾನ್ಯೀಕರಣದ ಹೊತ್ತಿನಲ್ಲಿ ಹೇಗೆ ಹೊರಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳಿ), ಹೆಣ್ಣುಮಕ್ಕಳು ಹಲವು ದೃಷ್ಟಿಕೋನಗಳಿಂದ ಯೋಚಿಸಬಲ್ಲರು. ಯೋಜನೆಗಳನ್ನು ಚೆನ್ನಾಗಿ ರೂಪಿಸಬಲ್ಲರು (ಪ್ರತಿದಿನ ಅವರು ಕುಟುಂಬಕ್ಕಾಗಿ ಮಾಡುವ ಯೋಚನೆ, ಯೋಜನೆಗಳನ್ನು ಒಮ್ಮೆ ಗಮನಿಸಿ).

ದುಡಿಯಲು ಶುರು ಮಾಡಿದ ತಕ್ಷಣ ಹಣ ಉಳಿತಾಯ ಮಾಡಬೇಕಿಲ್ಲ ಅಥವಾ ಅದರಲ್ಲಿ ಒಂದು ಪಾಲನ್ನು ಹೂಡಿಕೆಗೆ ಬಳಕೆ ಮಾಡಬೇಕಿಲ್ಲ ಎಂದು ಜನ ಭಾವಿಸುವುದೂ ಇದೆ. ಕುಟುಂಬದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ತಮ್ಮ ಹೆಗಲಿಗೆ ವರ್ಗಾವಣೆ ಆಗುವವರೆಗೆ ಹಣ ಹೂಡಿಕೆ ಅಥವಾ ಉಳಿತಾಯವನ್ನು ಮುಂದೂಡಬಹುದು ಎಂದು ಅವರು ಯೋಚಿಸುವುದೂ ಇದೆ. ಬಡ್ಡಿಗೆ ಚಕ್ರಬಡ್ಡಿ ಸಿಕ್ಕು, ಠೇವಣಿ ಇಟ್ಟ ಹಣ ವರ್ಷಗಳು ಕಳೆದಂತೆ ಬೃಹತ್ ಮೊತ್ತವಾಗುವ ಲೆಕ್ಕವನ್ನು ಶಾಲೆಗೆ ಹೋಗುವಾಗ ಕಲಿತಿದ್ದು ನೆನಪಿದೆಯೇ? ಹೂಡಿಕೆ ಆರಂಭಿಸುವುದನ್ನು ಮುಂದೂಡುವ ಮೂಲಕ ಯುವಕರು, ಚಕ್ರಬಡ್ಡಿಯ ಪರಿಣಾಮವಾಗಿ ತಮ್ಮ ಹೂಡಿಕೆ ಹಣ ಮುಂದೊಂದು ದಿನ ಬೃಹತ್ ಮೊತ್ತವಾಗಿ ಬೆಳೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ.

* ನಿಮ್ಮ ಖರ್ಚುಗಳೆಲ್ಲ ಮುಗಿದ ನಂತರ ಮಿಕ್ಕುವ ಅಲ್ಪಸ್ವಲ್ಪ ಹಣವನ್ನು ಉಳಿತಾಯಕ್ಕೆ ಹಾಕಬೇಡಿ. ಉಳಿತಾಯ ಮಾಡಿದ ನಂತರ ಮಿಗುವ ಹಣವನ್ನು ಖರ್ಚಿಗಾಗಿ ಇಟ್ಟುಕೊಳ್ಳಿ.

– ವಾರನ್ ಬಫೆಟ್

ಕೆಲವರು ತಮ್ಮ ಹೂಡಿಕೆ ಹಾಗೂ ಉಳಿತಾಯದ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವಾಗ ಆರೋಗ್ಯ ಸೇವೆಗಳು, ಶಿಕ್ಷಣ ಸೇರಿದಂತೆ ಅಗತ್ಯ ವೆಚ್ಚಗಳಲ್ಲಿ ಆಗುವ ಏರಿಕೆಯನ್ನು ಸರಿಯಾಗಿ ಗಮನದಲ್ಲಿ ಇರಿಸಿಕೊಳ್ಳದೆ ತಪ್ಪು ಮಾಡಿಬಿಡುತ್ತಾರೆ. ಅತಿಯಾಗಿ ಸಾಲ ಮಾಡುವುದು, ದೀರ್ಘಾವಧಿ ಪರಿಣಾಮಗಳ ಬಗ್ಗೆ ಆಲೋಚನೆ ಮಾಡದಿರುವುದು, ಸುರಕ್ಷಿತ ಹೂಡಿಕೆ ತಾಣಗಳ ಬಗ್ಗೆ ಮಾತ್ರ ಆಲೋಚಿಸುವುದು, ತೆರಿಗೆ ಉಳಿಸುವ ಉದ್ದೇಶಕ್ಕೆ ಮಾತ್ರ ಉಳಿತಾಯ ಮಾಡುವುದು... ಇಂತಹ ಅಲ್ಪಕಾಲೀನ ಉದ್ದೇಶಗಳನ್ನಷ್ಟೇ ಈಡೇರಿಸುವ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ನಿವೃತ್ತಿ ನಂತರದ ಜೀವನದ ಬಗ್ಗೆ ಆಲೋಚಿಸುವಾಗ ಕೂಡ ಬಹುತೇಕರು ವೆಚ್ಚದಲ್ಲಿ ಆಗುವ ಹೆಚ್ಚಳವನ್ನು ಗಮನದಲ್ಲಿ ಇರಿಸಿಕೊಳ್ಳುವುದಿಲ್ಲ.

ಆರೋಗ್ಯ ಸೇವೆಗಳ ಖರ್ಚು, ಹಣದುಬ್ಬರದ ಕಾರಣದಿಂದಾಗಿ ಆಗುವ ವೆಚ್ಚ ಹೆಚ್ಚಳವನ್ನು ಗಮನಿಸಿ ನಿವೃತ್ತಿಯ ನಂತರ ಕೂಡ ನೆಮ್ಮದಿಯ ಬದುಕಿಗೆ ಬೇಕಿರುವ ಆದಾಯ ಮೂಲವನ್ನು ಸೃಷ್ಟಿ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಯೋಚನೆ ಮಾಡಿರುವುದಿಲ್ಲ.

ಮೂಲಕ ವೈಯಕ್ತಿಕ ಹಣಕಾಸು ತೀರ್ಮಾನಗಳ ಬಗ್ಗೆ ಮಹಿಳೆಯರು ಹಾಗೂ ಯುವಕರಲ್ಲಿ ಅರಿವು ಮೂಡಿಸುವುದು ಉದ್ದೇಶ ನಮ್ಮ ಬರಹಗಳ ಉದ್ದೇಶ. ಕೆಲವು ಹೂಡಿಕೆ ಮಾರ್ಗಗಳನ್ನು ನಾವು ಸರಳಗೊಳಿಸಿ ವಿವರಿಸಿದ್ದೇವೆ, ಕೆಲವು ಅಂಕಿ–ಸಂಖ್ಯೆಗಳನ್ನು ಬಿಡಿಸಿ ಹೇಳಿದ್ದೇವೆ, ಹೂಡಿಕೆಯ ವಿವಿಧ ಆಯ್ಕೆಗಳು ಯಾವವು ಎಂಬುದನ್ನು ಹೇಳಿದ್ದೇವೆ, ಕೈಯಲ್ಲಿರುವ ಹಣದಲ್ಲಿ ಎಷ್ಟನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿಸಿದ್ದೇವೆ, ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ವೆಚ್ಚಗಳಿಗೆ ಸನ್ನದ್ಧರಾಗಿ ಇರುವುದು ಹೇಗೆ ಎಂಬ ಬಗ್ಗೆ ಅವಲೋಕನ ಇದೆ.

ವೈಯಕ್ತಿಕ ಹಣಕಾಸಿನ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಗಂಭೀರ ಅವಲೋಕನ ನಡೆಸಲು ಇದು ಪ್ರೇರಣೆ ಆಗುತ್ತದೆ, ಹಣಕಾಸಿನ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಂಡು ಒತ್ತಡ ಇಲ್ಲದ ಜೀವನ ನಡೆಸಲು ಅನುಕೂಲ ಆಗುವುದರ ಜೊತೆಗೆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲಿಕ್ಕೂ ಸಾಧ್ಯವಿದೆ.

ಯೌವನದ ದಿನಗಳಲ್ಲಿ ದುಡಿಯಬೇಕು. ದುಡಿದು ಗಳಿಸಿದ್ದರಲ್ಲಿ ಒಂದಿಷ್ಟು ಪಾಲನ್ನು ಉಳಿಸಿಕೊಳ್ಳಬೇಕು. ಹಾಗೆ ಉಳಿತಾಯ ಮಾಡಿದ್ದನ್ನು, ಉಳಿತಾಯ ಖಾತೆಯಲ್ಲೇ ಇರಿಸಿಕೊಳ್ಳುವುದಲ್ಲ. ಅದರಲ್ಲಿ ಒಂದಿಷ್ಟನ್ನು ನಿಶ್ಚಿತ ಠೇವಣಿಗಳಲ್ಲಿ ಇರಿಸಬೇಕು. ಅಲ್ಲಿ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿ ದೊರೆಯುತ್ತದೆ. ಹಾಗಂತ, ಉಳಿತಾಯ ಮಾಡಲು ಸಾಧ್ಯವಿರುವ ಅಷ್ಟೂ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇರಿಸುವುದು ಸರಿಯಲ್ಲ. ಹಣದುಬ್ಬರದ ಪ್ರಮಾಣ ಹೆಚ್ಚುತ್ತಿರುವಾಗ, ಒಂದಿಷ್ಟು ಹಣವನ್ನು ಈಕ್ವಿಟಿಯಂತಹ ಹೆಚ್ಚಿನ ಲಾಭ ತಂದುಕೊಡುವ ಕಡೆಯಲ್ಲೂ ಹೂಡಿಕೆ ಮಾಡಬೇಕು.

ಉಳಿತಾಯ ಅಂದರೆ, ಸುಮ್ಮನೆ ಹಣ ಉಳಿಸುವುದಲ್ಲ. ಅದನ್ನು ನಿರ್ದಿಷ್ಟ ಉದ್ದೇಶಗಳಿಗೆ ಉಳಿತಾಯ ಮಾಡಬೇಕು. ಆರೋಗ್ಯ ಸಂಬಂಧಿ ಖರ್ಚುಗಳಿಗೆ ಒಂದಿಷ್ಟು, ಮನೆ ಕಟ್ಟಲು ಒಂದಿಷ್ಟು, ವಾಹನ ಖರೀದಿ ಮಾಡಲು ಒಂಚೂರು, ನಿವೃತ್ತಿ ನಂತರದ ಜೀವನವನ್ನು ಆರಾಮವಾಗಿ ಕಳೆಯಲು ಒಂದು ಇಡುಗಂಟು ಸೃಷ್ಟಿ ಮಾಡಿಕೊಳ್ಳಲು ಸ್ವಲ್ಪ ಹೆಚ್ಚಿನ ಹಣ, ಮೈಮೇಲೆ ಇರುವ ಸಾಲ ತೀರಿಸಲು ಮತ್ತೊಂದಿಷ್ಟು ಹಣ, ಪ್ರವಾಸಕ್ಕೆ– ಮನರಂಜನೆಗೆ ಎಂದು ಒಂಚೂರು ಹಣ... ಹೀಗೆ ನಾವೇ ಗುರಿಗಳನ್ನು ಹಾಕಿಕೊಂಡು ಹಣ ಉಳಿಸಬೇಕು...

(ಉಳಿಸೋಕೆ, ಗಳಿಸೋಕೆ ಹಣಕಾಸಿನ ಗುರಿ ಬೇಕಲ್ಲವೇ?– ಈ ಕುರಿತು ಮುಂದಿನ ಕಾಸ್‌ಮಾತು ಲೇಖನ ಸರಣಿಯಲ್ಲಿನಿರೀಕ್ಷಿಸಿ.ಓದ್ತಿರಿ: http://www.prajavani.net/personal-finance)

ಲೇಖಕರ ಬಗ್ಗೆ-

ವಿನಿತಾ ಜೈನ್

‘ಪೇ ಇಟ್‌ ಫಾರ್ವರ್ಡ್‌’ ಕಂಪನಿಯ ಸಹಸ್ಥಾಪಕಿಯರಲ್ಲಿ ಒಬ್ಬರಾದ ವಿನಿತಾ, ‘ಹಣಕಾಸಿನ ವಿಚಾರಗಳ ಕುರಿತ ಆಸಕ್ತಿ ನನಗೆ ಶಾಲಾ ದಿನಗಳಿಂದಲೂ ಇತ್ತು. ಆ ದಿನಗಳಿಂದಲೂ ನಾನು ಹಣವನ್ನು ಗೌರವಿಸುವುದನ್ನು ಆರಂಭಿಸಿದೆ’ ಎಂದು ಹೇಳಿಕೊಳ್ಳುತ್ತಾರೆ. ಇಂದು ಇವರು ಚಾರ್ಟರ್ಡ್‌ ಅಕೌಂಟೆಂಟ್‌ ಕೂಡ ಹೌದು, ಪ್ರಮಾಣೀಕೃತ ಹಣಕಾಸು ಸಲಹೆಗಾರ್ತಿ ಕೂಡ ಹೌದು.

ಅನು ಸೇಠ್

ಸಾಫ್ಟ್‌ವೇರ್‌ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಿದ ಅನು, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. 2002ರಲ್ಲಿ ವಿಶ್ವ ಬ್ಯಾಂಕ್‌ನ ಒಂದು ಅಧ್ಯಯನದಲ್ಲಿ ಪಾಲ್ಗೊಂಡ ನಂತರ ಅರ್ಥಶಾಸ್ತ್ರದ ಕುರಿತು ಇವರಿಗೆ ಆಸಕ್ತಿ ಚಿಗುರಿತು. ವೃತ್ತಿ ಜೀವನದಲ್ಲಿ ಬ್ರೇಕ್‌ ತೆಗೆದುಕೊಂಡ ನಂತರ ಅನು, ತಾವೇ ಹೂಡಿಕೆದಾರರೂ ಆದರು. ಇವರು ಕೂಡ ‘ಪೇ ಇಟ್‌ ಫಾರ್ವರ್ಡ್‌’ನ ಸಂಸ್ಥಾಪಕರಲ್ಲಿ ಒಬ್ಬರು.

ಪ್ರೀತಾ ವಾಲಿ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಪಡೆದಿರುವ ಪ್ರೀತಾ ವಾಲಿ, ಜಾಹೀರಾತು ಏಜೆನ್ಸಿಗಳಲ್ಲಿ, ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಕೋಲ್ಕತ್ತಾದಲ್ಲಿ ಇದ್ದಾಗ ಇಬ್ಬರು ಸ್ನೇಹಿತರ ಒತ್ತಾಯಕ್ಕೆ ಮಣಿದು ಹಣಕಾಸು ಸಾಕ್ಷರತಾ ತರಗತಿ ಸೇರಿದರು. ‘ಇದಕ್ಕೆ ಸೇರಿದ ಸಂದರ್ಭದಲ್ಲಿ, ತರಗತಿಯ ಮಹತ್ವ ನನಗೆ ಗೊತ್ತಾಗಲಿಲ್ಲ. ಆದರೆ, ನಾನು ಅರ್ಥಶಾಸ್ತ್ರವನ್ನು ಇಷ್ಟಪಡುತ್ತಿದ್ದೇನೆ ಎಂಬುದು ನನಗೆ ದಿನಗಳು ಕಳೆದಂತೆ ಗೊತ್ತಾಯಿತು’ ಎಂದು ಪ್ರೀತಾ ಹೇಳಿಕೊಳ್ಳುತ್ತಾರೆ. ಈಗ ‘ಪೇ ಇಟ್‌ ಫಾರ್ವರ್ಡ್‌’ ಕಂಪನಿಯ ಮೂಲಕ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ತರಗತಿಗಳನ್ನು ನಡೆಸುತ್ತಿದ್ದಾರೆ.

ಸಂಗ್ರಹಾನುವಾದ: ವಿಜಯ್‌ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT