ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕಾಲದ ನಿಧಿ: ಬದಲಾದ ಸೂತ್ರ

Last Updated 30 ಜೂನ್ 2020, 8:12 IST
ಅಕ್ಷರ ಗಾತ್ರ

ಆಪತ್ಕಾಲದಲ್ಲಿ ನೆರವಿಗೆ ಬರುವ ರೀತಿಯಲ್ಲಿ ಒಂದಿಷ್ಟು ಹಣ ತೆಗೆದಿರಿಸಬೇಕು ಎಂಬುದು ವೈಯಕ್ತಿಕ ಹಣಕಾಸು ಸಲಹೆಗಾರರು ಯಾವಾಗಲೂ ಹೇಳುವ ಕಿವಿಮಾತು. ದುಡಿಯುವ ವ್ಯಕ್ತಿ ಕೆಲಸ ಕಳೆದುಕೊಂಡಾಗ ಅಥವಾ ಆತ ಅನಾರೋಗ್ಯಕ್ಕೆ ತುತ್ತಾಗಿ ಹಣ ಸಂಪಾದಿಸುವುದು ಸಾಧ್ಯವಿಲ್ಲದಂತಾದಾಗ ಈ ಹಣ ಬಳಕೆಗೆ ಬರುತ್ತದೆ. ಕುಟುಂಬದ ಕನಿಷ್ಠ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ.

ವಿಶ್ವಕ್ಕೆ ಎದುರಾಗಿರುವ ಕೋವಿಡ್‌–19 ಕಂಟಕ ಹಾಗೂ ಅದು ಅರ್ಥ ವ್ಯವಸ್ಥೆಯಲ್ಲಿ ಮೂಡಿಸಿರುವ ತಳಮಳವು ಆಪತ್ಕಾಲದ ನಿಧಿಯ ಅಗತ್ಯವನ್ನು ಒತ್ತಿ ಹೇಳಿದೆ. ಅಲ್ಲದೆ, ಆಪತ್ಕಾಲದ ನಿಧಿಯಾಗಿ ಎಷ್ಟು ಹಣ ತೆಗೆದಿರಿಸಬೇಕು ಎಂಬುದರ ಸೂತ್ರವನ್ನೂ ಕೋವಿಡ್–19 ಬದಲಿಸಿದೆ.

ಅರ್ಥ ವ್ಯವಸ್ಥೆಯು ಏರುಮುಖವಾಗಿದ್ದ ಕಾಲದಲ್ಲಿ ‘ಮೂರು ತಿಂಗಳುಗಳ ಖರ್ಚಿಗೆ ಬೇಕಾದಷ್ಟು ಹಣವನ್ನು ಆಪತ್ಕಾಲದ ನಿಧಿಯಾಗಿ ತೆಗೆದಿರಿಸಿ’ ಎಂದು ಹೇಳುತ್ತಿದ್ದ ವೈಯಕ್ತಿಕ ಹಣಕಾಸು ಸಲಹೆಗಾರರು ಈಗ, ‘ಸಾಧ್ಯವಾದರೆ ಒಂದು ವರ್ಷಕ್ಕೆ ಆಗುವಷ್ಟು ಹಣ ತೆಗೆದಿರಿಸಿ’ ಎನ್ನಲಾರಂಭಿಸಿದ್ದಾರೆ! ವಿಶ್ವದ ಅರ್ಥ ವ್ಯವಸ್ಥೆ ಹಿಂಜರಿತದತ್ತ ಮುಖ ಮಾಡಿರುವಾಗ, ವ್ಯಕ್ತಿ ಕೆಲಸ ಕಳೆದುಕೊಂಡರೆ ಹೊಸ ಕೆಲಸ ಗಿಟ್ಟಿಸಿಕೊಳ್ಳಲು ಹೆಚ್ಚಿನ ಅವಧಿ ಬೇಕಾಗುತ್ತಿದೆ, ಹಾಗಾಗಿ ಈ ಮಾತು ಎಂದು ಅವರು ಹೇಳುತ್ತಿದ್ದಾರೆ.

‘ಎಲ್ಲವೂ ಚೆನ್ನಾಗಿ ಇದ್ದಾಗ ನಾವು, ಮೂರು ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣ ಒಂದೆಡೆ ಇಟ್ಟುಕೊಳ್ಳಿ ಎಂದು ಸಲಹೆ ನೀಡುತ್ತಿದ್ದೆವು. ಕೊರೊನಾ ಲಾಕ್‌ಡೌನ್‌ಗೂ ಮೊದಲು ಕೂಡ ಅರ್ಥವ್ಯವಸ್ಥೆಯಲ್ಲಿ ತಳಮಳ ಶುರುವಾಗಿತ್ತು. ನಾವು ಆ ಸಂದರ್ಭದಲ್ಲಿ, ಐದರಿಂದ ಏಳು ತಿಂಗಳುಗಳ ಖರ್ಚಿಗೆ ಸಾಕಾಗುವಷ್ಟು ಹಣವನ್ನು ಆಪತ್ಕಾಲದ ನಿಧಿ ಎಂದು ಮೀಸಲಿಡಲು ಹೇಳುತ್ತಿದ್ದೆವು. ಆದರೆ, ಈಗಿನ ಸಂದರ್ಭದಲ್ಲಿನಾವು, ಒಂದು ವರ್ಷಕ್ಕೆ ಸಾಕಾಗುವಷ್ಟು ಹಣವನ್ನು ತೆಗೆದು ಇರಿಸಲು ಸಲಹೆ ನೀಡುತ್ತಿದ್ದೇವೆ’ ಎನ್ನುತ್ತಾರೆ ವೈಯಕ್ತಿಕ ಹಣಕಾಸು ಸಲಹೆಗಾರ್ತಿ ಪ್ರೀತಾ ವಾಲಿ.

ಲಾಕ್‌ಡೌನ್‌ ಪರಿಣಾಮವಾಗಿ ಹಲವು ಉದ್ಯಮಗಳಲ್ಲಿ ವೇತನ ಕಡಿತ ಜಾರಿಗೆ ಬಂದಿದೆ. ಕೆಲವು ಉದ್ಯಮಗಳು ಇನ್ನೂ ವಹಿವಾಟು ಆರಂಭಿಸಿಲ್ಲ. ಕೊರೊನಾದಿಂದಾಗಿ ಅತಿಹೆಚ್ಚಿನ ಆರ್ಥಿಕ ನಷ್ಟ ಅನುಭವಿಸಿದ ಉದ್ಯಮಗಳಲ್ಲಿ ಕೆಲಸ ಮಾಡುವವರು ಒಂದು ವರ್ಷದ ಖರ್ಚುಗಳಿಗೆ ಸಾಕಾಗುವಷ್ಟು ಹಣವನ್ನು ಪ್ರತ್ಯೇಕವಾಗಿ ಇರಿಸಿದ್ದಿದ್ದರೆ ಒಳ್ಳೆಯದಿತ್ತು. ಅವರು ಪುನಃ ಕೆಲಸ ಶುರು ಮಾಡಿದ ನಂತರವಾದರೂ ಈ ಕೆಲಸ ಮಾಡಿದರೆ ಚೆನ್ನ ಎಂದು ಪ್ರೀತಾ ಹೇಳುತ್ತಾರೆ.

ಒಂದು ತಿಂಗಳ ಖರ್ಚನ್ನು ಲೆಕ್ಕ ಹಾಕುವಾಗ, ಮನೆ ಬಾಡಿಗೆ, ದಿನಸಿ ಖರ್ಚು, ಮಕ್ಕಳ ಶಾಲಾ ಶುಲ್ಕ ಸೇರಿದಂತೆ ತಿಂಗಳ ಅಗತ್ಯ ವೆಚ್ಚಗಳನ್ನೆಲ್ಲ ಒಗ್ಗೂಡಿಸಬೇಕು. ಸಾಲದು ಕಂತು ಪಾವತಿ ಇದ್ದರೆ ಅದನ್ನೂ ತಿಂಗಳ ಖರ್ಚಿನ ಬಾಬ್ತಿಗೆ ಸೇರಿಸುವುದನ್ನು ಮರೆಯಬಾರದು ಎಂದು ಅವರು ಹೇಳುತ್ತಾರೆ.

ಕುಟುಂಬದ ಹಣಕಾಸಿನ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಕೊರೊನಾ ನಂತರದ ಕಾಲಘಟ್ಟದಲ್ಲಿ, ಒಂದು ವರ್ಷದ ಕನಿಷ್ಠ ಖರ್ಚು–ವೆಚ್ಚಗಳಿಗೆ ಅಗತ್ಯವಿರುವ ಹಣವನ್ನು ತೆಗೆದಿರಿಸುವುದು ಅನಿವಾರ್ಯ ಎನ್ನುವ ಮಾತನ್ನು ಚಾರ್ಟರ್ಡ್‌ ಅಕೌಂಟೆಂಟ್ ವಿಶ್ವಾಸ್ ಎನ್. ಪ್ರಭು ಕೂಡ ಹೇಳುತ್ತಾರೆ. ‘ವ್ಯಕ್ತಿಯೊಬ್ಬ ಉದ್ಯೋಗ ಕಳೆದುಕೊಂಡರೆ ತಕ್ಷಣಕ್ಕೆ ಹೊಸ ಉದ್ಯೋಗ ಹುಡುಕಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ಇಷ್ಟು ಹಣವನ್ನು ಆಪತ್ಕಾಲಕ್ಕೆಂದು ಮೀಸಲಿಡುವುದು ಒಳಿತು’ ಎಂದು ಅವರು ಹೇಳುತ್ತಾರೆ.

ಆಪತ್ ಧನವನ್ನು ಷೇರುಗಳಲ್ಲಿ ಯಾವ ಕಾರಣಕ್ಕೂ ಹೂಡಿಕೆ ಮಾಡಬಾರದು. ಅದನ್ನು ನಿಶ್ಚಿತ ಠೇವಣಿ ಅಥವಾ ಲಿಕ್ವಿಡ್ ಫಂಡ್‌ ರೂಪದಲ್ಲಿ ಇರಿಸುವುದು ಉತ್ತಮ ಎಂದು ಪ್ರಭು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT