ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದೇ

Published 10 ಅಕ್ಟೋಬರ್ 2023, 22:51 IST
Last Updated 10 ಅಕ್ಟೋಬರ್ 2023, 22:51 IST
ಅಕ್ಷರ ಗಾತ್ರ

ಜಯಂತ ಪಾಟೀಲ

ಪ್ರಶ್ನೆ: ನನ್ನ ನಿವೃತ್ತಿ ವೇತನ 2023-24 ರ ಆರ್ಥಿಕ ವರ್ಷದಲ್ಲಿ ‌‌‌‌‌‌‌‌‌ಅಂದಾಜು ₹ 7,65,000 ಆಗುವ ಸಂಭವವಿದೆ. ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ (ಎಸ್‌ಸಿಎಸ್‌ಎಸ್) ಅಂದಾಜು ₹ 10,000 ಬಡ್ಡಿ ಬರುವ ನಿರೀಕ್ಷೆ ಇದೆ. ಬೇರೆ ಯಾವುದೇ ಆದಾಯವಿಲ್ಲ. ನನ್ನ ವಯಸ್ಸು 77. ಹೊಸ ಪದ್ದತಿಯ ಪ್ರಕಾರ ಆದಾಯ ತೆರಿಗೆ ಉಳಿತಾಯ ಮಾಡಲು ಅವಕಾಶ ಇದ್ದರೆ ತಿಳಿಸಿ.

ಉತ್ತರ: ನಿಮ್ಮ ನಿರೀಕ್ಷಿತ ಆದಾಯ, ಪಿಂಚಣಿ ಹಾಗೂ ಬಡ್ಡಿ ಆದಾಯದ ಮೂಲದಿಂದ ಇರುತ್ತದೆ. ಇನ್ನು ನಿಮ್ಮ ಪಿಂಚಣಿ ಆದಾಯಕ್ಕೆ ₹ 50000 ದಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಇರುತ್ತದೆ. ಉಳಿದ ಎಲ್ಲಾ ಮೊತ್ತಕ್ಕೆ ಹೊಸ ತೆರಿಗೆ ಪದ್ಧತಿ ಅನುಸರಿಸುವ ಸಂದರ್ಭದಲ್ಲಿ ತೆರಿಗೆ ಇರುತ್ತದೆ. ಇದರಂತೆ ₹ 7,25,000 ದ ಆದಾಯಕ್ಕೆ₹ 26,000 ದ ತೆರಿಗೆ ಇದೆ. ನಿಮ್ಮಲ್ಲಿ ಯಾವುದೇ ಹೂಡಿಕೆ ಇತ್ಯಾದಿ ಇಲ್ಲದ ಕಾರಣ ಹಳೆಯ ತೆರಿಗೆ ಪದ್ದತಿಗಿಂತ ಹೊಸ ತೆರಿಗೆ ಪದ್ಧತಿ ಲಾಭದಾಯಕ.

ಅರ್  ಮೈಲಾರಪ್ಪ , ಬೆಂಗಳೂರು
ಪ್ರಶ್ನೆ: ನಾನೊಬ್ಬ ನಿವೃತ್ತ ಸರ್ಕಾರಿ ನೌಕರ. ನಾನು ವಾರ್ಷಿಕವಾಗಿ ₹ 5.50 ಲಕ್ಷ ಪಿಂಚಣಿ ಪಡೆಯುತ್ತಿದ್ದೇನೆ. ಇದರ ಹೊರತಾಗಿ ಬೇರೆ ಯಾವ ಆದಾಯವೂ ಇಲ್ಲ. ಆದಾಯ ವಿವರಗಳನ್ನು ತೆರಿಗೆ ಇಲಾಖೆಗೆ ಸಲ್ಲಿಸುತ್ತಿದ್ದೇನೆ. ನನ್ನ ಸಂದೇಹ ಏನೆಂದರೆ, ನಾನು ಪಿಂಚಣಿ ಪಡೆಯುತ್ತಿರುವ ಬ್ಯಾಂಕಿನಿಂದ ಪಿಂಚಣಿ ಹಣವನ್ನು ನಗದಾಗಿ ಹಿಂಪಡೆದು ನನ್ನ ಹೆಸರಲ್ಲೇ ಇರುವ ಇನ್ನೊಂದು ಬ್ಯಾಂಕಿನ ಖಾತೆಗೆ ಜಮಾ ಮಾಡಿದರೆ ಅಂತಹ ಜಮಾವನ್ನು ಆದಾಯವೆಂದು ಪರಿಗಣಿಸಬೇಕೇ? ಒಂದು ವೇಳೆ ಆದಾಯವೆಂದು ಪರಿಗಣಿಸಬೇಕಿದ್ದರೆ, ಯಾವ ರೀತಿ ಜಮಾ ಮಾಡಿದರೆ ವಿನಾಯಿತಿ ಪಡೆಯಬಹುದು ಎಂಬುದನ್ನೂ ತಿಳಿಸಿಕೊಡಿ.

ಉತ್ತರ:ನೀವು ಈಗಾಗಲೇ ಹಿರಿಯ ನಾಗರಿಕರಾಗಿದ್ದು ಕೇವಲ ಪಿಂಚಣಿ ಆದಾಯ ಗಳಿಸುತ್ತಿದ್ದೀರಿ. ₹ 3 ಲಕ್ಷ ಕ್ಕಿಂತ ಮೇಲಿನ ಆದಾಯ ಇರುವ ಕಾರಣ  ರಿಟರ್ನ್ಸ್ ಸಲ್ಲಿಸಿ. ಪ್ರಸ್ತುತ ಹೊಸ ತೆರಿಗೆ ಪದ್ದತಿಯಡಿ ₹ 7 ಲಕ್ಷದ ತನಕದ ಆದಾಯಕ್ಕೆ  ಸೆಕ್ಷನ್ 87ಎ ಅಡಿ ರಿಬೇಟ್ ಸಹಿತ ವಿನಾಯಿತಿ ಇದೆ. ಹೀಗಾಗಿ ನಿಮಗೆ ಯಾವುದೇ ತೆರಿಗೆ ಬರುವ ಸಾಧ್ಯತೆ ಇಲ್ಲ.  

ನಿಮ್ಮ ಪ್ರಶ್ನೆಯೆಂದರೆ, ನಿಮ್ಮದೇ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ನಗದು ರೂಪದಲ್ಲಿ ಜಮಾಯಿಸಿದಾಗ ತೆರಿಗೆ ಬರುತ್ತದೆಯೇ ಎಂಬುದು. ಮೊದಲನೆಯದಾಗಿ ಇದು ಈಗಾಗಲೇ ತೆರಿಗೆಗೊಳಪಟ್ಟ ಅಥವಾ ವಿನಾಯಿತಿ ಮಿತಿಯಲ್ಲಿ ಒಳಪಟ್ಟ ಆದಾಯ. ಮಾತ್ರವಲ್ಲ, ಮೂಲ ಹಂತದಲ್ಲಿ ಜಮಾ ಆದ ಮೊತ್ತವನ್ನು ನಿಮ್ಮದೇ ಇತರ ಖಾತೆಗಳಿಗೆ ವರ್ಗಾವಣೆ ಮಾಡಿದಾಗ ಅದು ಮತ್ತೊಮ್ಮೆ ಆದಾಯದ ಸ್ವರೂಪ ಪಡೆಯುವುದಿಲ್ಲ.  ಹೀಗಾಗಿ, ಯಾವುದೇ ತೊಂದರೆ ಇಲ್ಲ.

ರುದ್ರಗೌಡ ಪಾಟೀಲ, ಗಜೇಂದ್ರಗಡ
ಪ್ರಶ್ನೆ
: ನಾನು ನಿವೃತ್ತಿಯಾಗಿದ್ದೇನೆ. ವಯಸ್ಸು 70. ಕೊಪ್ಪಳ ತಾಲೂಕಿನ ಭಾಗ್ಯನಗರ ಗ್ರಾಮ ಪಂಚಾಯತಿಯ ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿ ಒಂದು  ನಿವೇಶನವನ್ನು (47.5*43 ಅಳತೆ) ₹20,000 ಕ್ಕೆ ದಿನಾಂಕ 04/10/2000 ರಲ್ಲಿ ಖರೀದಿಸಿದ್ದೆ. ಸದರಿ ನಿವೇಶನವನ್ನು ₹7,60,000 ಗಳಿಗೆ ದಿನಾಂಕ 03/05/2023 ರಂದು ಮಾರಾಟ ಮಾಡಿರುತ್ತೇನೆ. ನಾನು ಈಗ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ವಾಸವಿರುತ್ತೇವೆ. ಇಬ್ಬರು ಗಂಡು ಮಕ್ಕಳಿದ್ದಾರೆ. ಹೀಗಾಗಿ ಈಗ ವಾಸವಿರುವ ಮನೆಯ ಮೇಲೆ ಮಹಡಿ ಮನೆ ಕಟ್ಟಬೇಕೆಂದು ನಿರ್ಧರಿಸಿದ್ದೇನೆ. ಅಂದರೆ, ನಿವೇಶನ ಮಾರಿದ ಹಣದಿಂದ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. ಅದಕ್ಕೆ ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದೇ ಎಂಬ ಬಗ್ಗೆ ತಿಳಿಸಬೇಕಾಗಿ ವಿನಂತಿ.

ಉತ್ತರ: ನೀವು ನಿವೇಶನ ಖರೀದಿಸಿದ ವರ್ಷದಿಂದ ಪ್ರಸ್ತುತ ಮಾರಾಟ ವರ್ಷದ ತನಕ ನಿಮ್ಮ ಆಸ್ತಿಯ ಮೌಲ್ಯ ವೃದ್ಧಿಯಾಗಿದೆ. ಅದೇ ರೀತಿ ನಿಮ್ಮ ಮೂಲ ಆಸ್ತಿಯ ಬೆಲೆ ₹ 20,000 ಆಗಿದ್ದರೂ ಅದರ ಪ್ರಸ್ತುತ ಬೆಲೆ ಹಣದುಬ್ಬರದ ಕಾರಣ ಹೆಚ್ಚಾಗಿರುತ್ತದೆ. ಅದನ್ನು  ಸರಿದೂಗಿಸಲು  ಹಣದುಬ್ಬರ ಸೂಚ್ಯಂಕದ ಅನುಪಾತದಲ್ಲಿ ಆಸ್ತಿಯ ಪ್ರಸ್ತುತ ಅಸಲು ಬೆಲೆಯನ್ನು ಮರು ನಿರ್ಧರಿಸಬೇಕು. ಈ ಮೊತ್ತ ಸುಮಾರು
₹ 70,000 ಆಗಿರುತ್ತದೆ. ಇದಕ್ಕೂ ಹೆಚ್ಚಿನ ಮೊತ್ತವನ್ನು ನಿಮ್ಮ ಬಂಡವಾಳ ಅಸ್ತಿ ಮಾರಾಟದ ಲಾಭವೆಂದು ಪರಿಗಣಿಸಲಾಗುತ್ತದೆ. ಅಂದರೆ ಹೆಚ್ಚು ಕಮ್ಮಿ ₹ 7 ಲಕ್ಷದ ಸಮೀಪ ನಿಮ್ಮ ಲಾಭಾಂಶ ಆಗಿರುತ್ತದೆ.

ಇನ್ನು ಇಂತಹ ಮೊತ್ತವನ್ನು ನಿಮ್ಮ ಹೊಸ ಮನೆಯ ನಿರ್ಮಾಣಕ್ಕೆ ಉಪಯೋಗಿಸಿಕೊಂಡಾಗ ತೆರಿಗೆ ವಿನಾಯಿತಿ ಸಿಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 54ಎಫ್ ಪ್ರಕಾರ,  ಮನೆಯ  ಹೊರತಾದ ಯಾವುದೇ ಆಸ್ತಿ ಮಾರಾಟಮಾಡಿ (ನಿಮ್ಮ ವಿಚಾರದಲ್ಲಿ ನಿವೇಶನ) ಹೊಸ ಮನೆಯ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡಿದರೆ, ಹೂಡಿಕೆ ಹಾಗೂ ಮಾರಾಟ ಮೌಲ್ಯದ ಅನುಪಾತದಲ್ಲಿ ತೆರಿಗೆ ರಿಯಾಯಿತಿ ಸಿಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ನಿಮ್ಮ ಹೊಸ ಕಟ್ಟಡದ ವೆಚ್ಚ ಈ ಮೊತ್ತಕ್ಕಿಂತ ಅಧಿಕವೇ ಇರಬಹುದು.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ, ನೀವು ಹಿರಿಯ ನಾಗರಿಕರಾಗಿರುವುದರಿಂದ ನಿಮ್ಮ ವಯೋಮಿತಿಗೆ ಸಂಬಂಧಿಸಿ ನಿಮ್ಮ ಮೂಲ ಆದಾಯದ ವಿನಾಯಿತಿ ಮಿತಿ ₹ 3 ಲಕ್ಷ. ಹೀಗಾಗಿ ಇದಕ್ಕಿಂತಲೂ  ನಿಮ್ಮ ಆದಾಯ ಅಧಿಕ ಇದ್ದ ಸಂದರ್ಭದಲ್ಲಿ ನೀವು ತೆರಿಗೆ ರಿಟರ್ನ್ಸ್ ಸಲ್ಲಿಸಿ, ಅನ್ವಯವಾಗುವ ವಿನಾಯಿತಿಯನ್ನು ಪಡೆಯಬೇಕಾಗುತ್ತದೆ. ನಿಮ್ಮ ಹೂಡಿಕೆ ತಡವಾಗುವುದಿದ್ದರೆ, ಮಧ್ಯಂತರ ಅವಧಿಯಲ್ಲಿ ನೀವು ಪ್ರತ್ಯೇಕವಾಗಿ  ಇದಕ್ಕೆ ಸಂಬಂಧಿಸಿದ ಕ್ಯಾಪಿಟಲ್ ಗೇನ್ ಖಾತೆಯನ್ನು ಬ್ಯಾಂಕಿನಲ್ಲಿ ತೆರೆದು ಹಣ ಜಮಾ ಮಾಡಬೇಕಾಗುತ್ತದೆ. ನಂತರ ಅಸ್ತಿ ಮಾರಾಟವಾದ ಮೂರು ವರ್ಷದೊಳಗೆ ಮನೆ ಕಟ್ಟಬೇಕಾಗುತ್ತದೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ ವಾಣಿಜ್ಯ ವಿಭಾಗ ಪ್ರಜಾವಾಣಿ ನಂ.75 ಮಹಾತ್ಮ ಗಾಂಧಿ ರಸ್ತೆ ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT