ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಚಲೋ ಧಾರಣೆಯಿದೆ; ರೈತರಲ್ಲಿ ಹತ್ತಿಯ ಫಸಲಿಲ್ಲ..!

ಹತ್ತಿಯ ಹಂಗಾಮು ಆರಂಭ; ವಿಜಯಪುರ ಮಾರುಕಟ್ಟೆಗೆ ಆವಕ ಶುರು
Last Updated 13 ಡಿಸೆಂಬರ್ 2018, 16:30 IST
ಅಕ್ಷರ ಗಾತ್ರ

ವಿಜಯಪುರ: ಹತ್ತಿಯ ಹಂಗಾಮು ಆರಂಭಗೊಂಡಿದೆ. ಇನ್ನೂ ಮೂರುವರೆ ತಿಂಗಳು ಹತ್ತಿ ವ್ಯಾಪಕ ಪ್ರಮಾಣದಲ್ಲಿ ವಿಜಯಪುರ ಎಪಿಎಂಸಿಗೆ ಆವಕವಾಗಲಿದೆ.

ಹಿಂದೊಮ್ಮೆ ಹತ್ತಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಮುಂಗಾರು ಹಂಗಾಮಿನ ಪ್ರಮುಖ ಉತ್ಪನ್ನವಾಗಿ ಎಲ್ಲೆಡೆ ಬೆಳೆಯಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ತೊಗರಿ, ಕಡಲೆ ವಾಣಿಜ್ಯದ ದೃಷ್ಟಿಯಿಂದ ಲಾಭದಾಯಕವಾಗುತ್ತಿದ್ದಂತೆ, ಹತ್ತಿಯ ಬಿತ್ತನೆ ಜಿಲ್ಲೆಯಲ್ಲಿ ಕುಂಠಿತಗೊಳ್ಳಲಾರಂಭಿಸಿತು.

ಜಿಲ್ಲೆಯ ವ್ಯಾಪ್ತಿಯಲ್ಲಿ ಹತ್ತಿಯನ್ನೇ ಪ್ರಮುಖವಾಗಿ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದುದರಿಂದ, ಇಂದಿಗೂ ನಗರ ಕೇಂದ್ರೀತವಾಗಿ 30ಕ್ಕೂ ಹೆಚ್ಚು ಜಿನ್ನಿಂಗ್‌ ಮಿಲ್‌ಗಳು ಕಾರ್ಯಾಚರಿಸುತ್ತಿವೆ. ದರಬಾರ, ಕಾಡಾದಿ ಜಿನ್ನಿಂಗ್‌ ಮಿಲ್‌ಗಳಿಗೆ ಶತಮಾನದ ಇತಿಹಾಸವಿದೆ. ಬೃಹತ್ ಮಿಲ್‌ಗಳು ಇಲ್ಲಿವೆ. ದಶಕದಿಂದ ಈಚೆಗೆ ಹತ್ತಿ ಬೆಳೆಯುವ ಪ್ರದೇಶ ಕುಂಠಿತಗೊಳ್ಳುತ್ತಿದೆ.

‘ಪ್ರಸ್ತುತ ವರ್ಷ ಜಿಲ್ಲೆಯಲ್ಲಿ 8000 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಲಾಗಿತ್ತು. ಎಕರೆಗೆ ಐದರಿಂದ ಆರು ಕ್ವಿಂಟಲ್ ಇಳುವರಿ ಸಿಕ್ಕಿದೆ. ಮಳೆ ಅಭಾವ, ಕಾಲುವೆಯಲ್ಲಿ ಸಕಾಲಕ್ಕೆ ನೀರು ಹರಿಯದಿದ್ದರಿಂದ 12000ದಿಂದ 13000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿದ್ದ ಹತ್ತಿ, ಈ ಬಾರಿ ನಾಲ್ಕೈದು ಸಾವಿರ ಹೆಕ್ಟೇರ್‌ನಷ್ಟು ಭೂಮಿಯಲ್ಲಿ ಬಿತ್ತನೆಯಾಗಲೇ ಇಲ್ಲ’ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕ ಎ.ಪಿ.ಬಿರಾದಾರ ತಿಳಿಸಿದರು.

19510 ಕ್ವಿಂಟಲ್ ಆವಕ

ಹತ್ತಿಯ ಹಂಗಾಮು ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯ ಎಲ್ಲೆಡೆ ಹಾಗೂ ನೆರೆಯ ಯಾದಗಿರಿ, ಕಲಬುರ್ಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದಲೂ ಹತ್ತಿ ವಿಜಯಪುರದ ಎಪಿಎಂಸಿಗೆ ಆವಕವಾಗಿದೆ. ಈ ವರ್ಷದ ಹಂಗಾಮು ಆರಂಭಗೊಂಡ ಬೆನ್ನಿಗೆ ಇದೂವರೆಗೂ 19510 ಕ್ವಿಂಟಲ್‌ ಹತ್ತಿ ಬಂದಿದೆ.

ಸಿಂದಗಿ, ಜೇವರ್ಗಿ, ಸುರಪುರ, ಶಹಾಪುರ, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕುಗಳ ರೈತರು ತಾವು ಬೆಳೆದಿದ್ದ ಹತ್ತಿಯನ್ನು ಮಾರಾಟಕ್ಕಾಗಿ ವಿಜಯಪುರ ಎಪಿಎಂಸಿಗೆ ತರುತ್ತಿದ್ದಾರೆ. ಇಲ್ಲಿರುವ 18ರಿಂದ 20ಕ್ಕೂ ಹೆಚ್ಚಿನ ವ್ಯಾಪಾರಿಗಳು ಹತ್ತಿಯ ವಹಿವಾಟು ನಡೆಸುತ್ತಿದ್ದಾರೆ ಎಂದು ವಿಜಯಪುರ ಎಪಿಎಂಸಿಯ ಸಹಾಯಕ ನಿರ್ದೇಶಕ ಎಚ್.ಎಸ್‌.ಅವಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ವರ್ಷ ಹತ್ತಿ ಕ್ವಿಂಟಲ್‌ಗೆ ₹ 3000ದಿಂದ ₹ 6179ರವರೆಗೂ ಮಾರಾಟವಾಗಿದೆ. ಒಟ್ಟು 31302 ಕ್ವಿಂಟಲ್‌ ಉತ್ಪನ್ನ ಮಾರುಕಟ್ಟೆಗೆ ಬಂದಿದೆ. ಪ್ರಸ್ತುತ ಹಂಗಾಮಿನಲ್ಲಿ ಒಂದು ಕ್ವಿಂಟಲ್ ಹತ್ತಿ ಬೆಲೆ ₹ 2540ರಿಂದ ₹ 5948ರವರೆಗೂ ಇದೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ 2018–19ನೇ ಸಾಲಿಗೆ ₹ 5150 ನಿಗದಿಪಡಿಸಿದೆ.

ಮುಕ್ತ ಮಾರುಕಟ್ಟೆಯಲ್ಲೇ ಕೇಂದ್ರದ ಕನಿಷ್ಠ ಬೆಂಬಲ ಬೆಲೆಗಿಂತ ಹತ್ತಿಯ ಧಾರಣೆ ಹೆಚ್ಚಿರುವುದರಿಂದ ರೈತರು ಬರದ ಸಂಕಷ್ಟದಲ್ಲೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತಿದೆ ಎಂಬ ಸಂತಸದಲ್ಲಿ ಮಾರಾಟ ಮಾಡುತ್ತಿದ್ದಾರೆ’ ಎಂದು ಎಪಿಎಂಸಿಯ ಸಿಬ್ಬಂದಿ ಚಂದ್ರಶೇಖರ ಬಳ್ಳೊಳ್ಳಿ ಮಾಹಿತಿ ನೀಡಿದರು.

‘ವಿಜಯಪುರ ಮಾರುಕಟ್ಟೆಯಲ್ಲಿ ಖರೀದಿಯಾಗುವ ಹತ್ತಿ ಧಾರವಾಡ, ಗೋಕಾಕ, ರಾಣಿಬೆನ್ನೂರು, ಹುಬ್ಬಳ್ಳಿ ಸೇರಿದಂತೆ ಸ್ಥಳೀಯ ಜಿನ್ನಿಂಗ್ ಮಿಲ್‌ಗಳಿಗೂ ಪೂರೈಕೆಯಾಗಲಿದೆ’ ಎಂದು ಬಳ್ಳೊಳ್ಳಿ ಹೇಳಿದರು.

ಈ ಬಾರಿ ವಹಿವಾಟು 30%

‘ಹತ್ತಿಯ ವಹಿವಾಟು ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕ್ಷೀಣಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 30% ವಹಿವಾಟು ನಡೆದರೆ ಹೆಚ್ಚು ಎಂಬಂಥ ಸನ್ನಿವೇಶವಿದೆ. ನಮ್ಮಲ್ಲಿರುವ ಜಿನ್ನಿಂಗ್‌ ಮಿಲ್‌ಗಳ ಬೇಡಿಕೆ ಪೂರೈಸಲಾಗುತ್ತಿಲ್ಲ’ ಎನ್ನುತ್ತಾರೆ ವಿಜಯಪುರ ಎಪಿಎಂಸಿ ವ್ಯಾಪಾರಿ ಗಂಗಾಧರ ಜೋಗುರ.

‘ಮಳೆಯೇ ಬರಲಿಲ್ಲ. ಹೊಲದಲ್ಲೇ ಹತ್ತಿ ಗಿಡ ಒಣಗಿತು. ಇಳುವರಿಯೂ ಅಷ್ಟಕ್ಕಷ್ಟೇ ಎಂಬ ಅಳಲು ರೈತ ಸಮೂಹದ್ದು. ಮಾರುಕಟ್ಟೆಗೂ ಸಹ ಹತ್ತಿ ಹಿಂದಿನಂತೆ ಆವಕವಾಗುತ್ತಿಲ್ಲ. ಈ ವೇಳೆಗೆ ಸಾಕಷ್ಟು ಪ್ರಮಾಣದ ಉತ್ಪನ್ನ ಬರಬೇಕಿತ್ತು. ಆದರೆ ಈ ಬಾರಿ ಬಂದಿಲ್ಲ’ ಎಂದು ಅವರು ತಿಳಿಸಿದರು.

‘ಮಾರುಕಟ್ಟೆಗೆ ಆವಕ ಕಡಿಮೆಯಿದೆ. ಆದರೆ ಧಾರಣೆ ಚಲೋ ಇದೆ. ₹ 3500ರಿಂದ ₹ 6000 ದರ ಒಂದು ಕ್ವಿಂಟಲ್‌ಗಿದೆ. ರೈತರ ಬಳಿ ಫಸಲೇ ಇಲ್ಲವಾಗಿದೆ’ ಎಂದು ಜೋಗುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT