ಸೋಮವಾರ, ಮೇ 25, 2020
27 °C
ಸ್ಫೂರ್ತಿ ನೀಡಿದ ‘ಆಸಿಯಾನ್‌’ ಶೃಂಗಸಭೆ

ನವೋದ್ಯಮಿಗಳಿಗೆ ಸ್ಫೂರ್ತಿ ‘ಆಸಿಯಾನ್‌’ ಶೃಂಗಸಭೆ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಬೆಂಗಳೂರಿನಲ್ಲಿ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಆಸಿಯಾನ್‌ ಶೃಂಗಸಭೆಯು ತನ್ನ ಉದ್ದೇಶಿತ ಗುರಿ ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿದೆ. ದೇಶದ ರಾಜಧಾನಿ ದೆಹಲಿಯ ಆಚೆ ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಂತಹ ದೊಡ್ಡ ಮಟ್ಟದ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿನ ‘ಎಫ್‌ಕೆಸಿಸಿಐ’ ಕಾರ್ಯವೈಖರಿಯು ದೇಶ – ವಿದೇಶ ಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್‌) ಮತ್ತು ಇತರ ರಾಷ್ಟ್ರಗಳ ವಾಣಿಜ್ಯೋದ್ಯಮ ಸಂಘಗಳ ಮೂರು ದಿನಗಳ ಸಮ್ಮೇಳನದ ಕನಸು ಕಂಡು, ವ್ಯವಸ್ಥಿತವಾಗಿ ಆತಿಥ್ಯ ವಹಿಸಿ, ಯಶಸ್ವಿಯಾಗಿ ನೆರವೇರಿಸಿದ ‘ಎಫ್‌ಕೆಸಿಸಿಐ’ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ಅವರು ಸಮ್ಮೇಳನದ ಉದ್ದೇಶ, ಸಾಧನೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಈ ಶೃಂಗಮೇಳದ ಕನಸಿಗೆ ಕಾರಣವೇನು?

ದೆಹಲಿಯಲ್ಲಿಯೇ ನಡೆಯುತ್ತಿದ್ದ ಇಂತಹ ಸಮ್ಮೇಳನಗಳನ್ನು ಬೆಂಗಳೂರಿನಲ್ಲಿಯೂ ನಡೆಸಬೇಕು. ಅದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ನೀರೆರೆಯಬೇಕು ಎನ್ನುವ ಆಶಯ ನನ್ನದಾಗಿತ್ತು. ‘ಎಫ್‌ಕೆಸಿಸಿಐ’ನ ಉಪಾಧ್ಯಕ್ಷನಾಗಿದ್ದಾಗಲೇ ಇಂತಹ ಕನಸು ಕಂಡಿದ್ದೆ. ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಕಟಿಸಿದ ನನ್ನ ಮೊದಲ ನಿರ್ಧಾರವೂ ಇದೇ ಆಗಿತ್ತು.

* ಸಂಘಟನೆಗೆ ಎದುರಾದ ಸವಾಲುಗಳೇನು?

ಅವುಗಳನ್ನು ಒಂದೆರಡು ವಾಕ್ಯಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಬಿಡಿ. ಸಮಾವೇಶವನ್ನು ಅಚ್ಚುಕಟ್ಟಾಗಿ ನೆರವೇರಿಸುವುದಕ್ಕಿಂತ ವಿದೇಶಿ ಹೂಡಿಕೆದಾರರನ್ನು ಕರೆತರುವುದು ಮುಖ್ಯ ಸವಾಲಾಗಿತ್ತು.

ಅವರ ಪಾಲ್ಗೊಳ್ಳುವಿಕೆಗೆ ರಾಜತಾಂತ್ರಿಕ ಅನುಮತಿ ಪಡೆಯುವ, ರಾಜ್ಯ ಸರ್ಕಾರದಿಂದ ಭದ್ರತೆ, ಶಿಷ್ಟಾಚಾರದ ಪಾಲನೆ ಮತ್ತಿತರ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರ ಮುಖ್ಯವಾಗಿತ್ತು. ಎರಡೂ ಸರ್ಕಾರಗಳಿಂದ ಅಗತ್ಯ ನೆರವು ಸಿಕ್ಕಿತ್ತು.

* ಮೂಲ ಆಶಯವೇನು?

ಅನಿವಾಸಿ ಭಾರತೀಯರು (ಎನ್‌ಆರ್‌ಐ) ಮತ್ತು ಅನಿವಾಸಿ ಕನ್ನಡಿಗರು (ಎನ್‌ಆರ್‌ಕೆ) ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲು ಪ್ರೇರಣೆ ನೀಡುವುದು, ಕನ್ನಡಿಗರಿಗೆ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗ ಅವಕಾಶಗಳು ದೊರೆಯು
ವಂತೆ ಮಾಡುವುದು.

* ನಿಮ್ಮ ಕಾರ್ಯಕ್ರಮಗಳೇನು?

ಎಫ್‌ಕೆಸಿಸಿಐನಲ್ಲಿ ಎನ್‌ಆರ್‌ಐ ವೇದಿಕೆ ಸ್ಥಾಪಿಸುವುದು. ಅದರ ನೆರವಿನಿಂದ ಪರಸ್ಪರ ವಿಚಾರ ವಿನಿಮಯ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಶ್ರಮಿಸಲು ಉದ್ದೇಶಿಸಲಾಗಿದೆ. 

* ಮೇಳದ ವೈಶಿಷ್ಟ್ಯತೆ ಏನು?

ರಾಜ್ಯಕ್ಕೆ ಹರಿದು ಬರುವ ಬಂಡವಾಳವನ್ನು ಬೆಂಗಳೂರಿನ ಆಚೆಗೆ ಜಿಲ್ಲಾ ಕೇಂದ್ರಗಳಿಗೆ ಕೊಂಡೊಯ್ಯುವುದು ಮುಖ್ಯ ಆಶಯವಾಗಿತ್ತು. ವಿವಿಧ ಜಿಲ್ಲೆಗಳಲ್ಲಿನ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಉದ್ದಿಮೆ ಸ್ಥಾಪನೆಯ ಅನುಕೂಲತೆ ಪರಿಚಯಿಸುವುದು, ಸ್ಥಳೀಯರಿಗೆ ಉದ್ಯೋಗ ಅವಕಾಶ ಸೃಷ್ಟಿಸುವುದು, ನಗರಗಳಿಗೆ ಅವರ ವಲಸೆ ತಪ್ಪಿಸುವುದು. ಸರ್ಕಾರ ನಡೆಸುವ ಜಾಗತಿಕ ಹೂಡಿಕೆದಾರರ ಸಮಾವೇಶಗಳಲ್ಲಿ ಬಂಡವಾಳದ ಮೊತ್ತ ಲೆಕ್ಕಕ್ಕೆ ಬರುತ್ತದೆ. ವಾಣಿಜ್ಯೋದ್ಯಮ ಮಹಾಸಂಘಗಳ ಶೃಂಗಸಭೆಗಳಲ್ಲಿ ಹೂಡಿಕೆ ಬಗ್ಗೆ ಇಂಗಿತ ವ್ಯಕ್ತವಾಗುತ್ತದೆ. ಬೇರೆ, ಬೇರೆ ದೇಶಗಳಲ್ಲಿ ಸ್ಥಳೀಯರಿಗೆ ಲಭ್ಯ ಇರುವ ವಹಿವಾಟು ವಿಸ್ತರಣೆಯ ಸಾಧ್ಯತೆಗಳ ಬಗ್ಗೆ ಸ್ಪಷ್ಟತೆ ಕಂಡು ಬರುತ್ತದೆ. ರಾಜ್ಯದಿಂದ 52 ದೇಶಗಳಿಗೆ ಸರಕು ಮತ್ತು ಸೇವೆ ರಫ್ತಾಗುತ್ತಿವೆ. ಈ ದೇಶಗಳಲ್ಲಿ ರಾಜ್ಯದ ಉದ್ದಿಮೆಗಳ ವಿಸ್ತರಣೆಗೆ ಇರುವ ಅವಕಾಶಗಳನ್ನು ಬಾಚಿಕೊಳ್ಳಲೂ ಮೇಳವು ವೇದಿಕೆ ಕಲ್ಪಿಸಿದೆ.

* ಯಾರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ?

ಆಫ್ರಿಕಾದ ದೇಶಗಳು, ಜೆಕ್‌ ಗಣರಾಜ್ಯ, ಜಾರ್ಜಿಯಾ, ಇಥಿಯೋಪಿಯಾ, ವಿಯೆಟ್ನಾಂ, ಲಾವೋಸ್‌ ಮತ್ತಿತರ ದೇಶಗಳಿಂದ ಹೆಚ್ಚಿನ ಸ್ಪಂದನ ಸಿಕ್ಕಿದೆ. ಯುಎಇ, ಟೊರೊಂಟಾದ ಪ್ರತಿನಿಧಿಗಳ ಭಾಗವಹಿಸುವಿಕೆಯು ಮೇಳದ ಯಶಸ್ಸಿಗೆ ಕಾರಣವಾಗಿದೆ. ಮೇಳದಲ್ಲಿ ಆಫ್ರಿಕಾ ದೇಶಗಳಿಗೆ ಒತ್ತು ನೀಡಿ ಎನ್ನುವ ಹಕ್ಕೊತ್ತಾಯವೂ ಕೇಳಿಬಂದಿತ್ತು.

* ಏನಿದು ಜಿಟುಬಿ?

ದೇಶ – ವಿದೇಶಗಳ ಉದ್ಯಮಿಗಳ ಮಧ್ಯೆ ವಾಣಿಜ್ಯ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಉದ್ಯಮಿಗಳು ಪರಸ್ಪರ ಮುಖಾಮುಖಿಯಾಗಲು, ರಫ್ತು ಹಾಗೂ ಆಮದು ವಹಿವಾಟುದಾರರ ಮಧ್ಯೆ (ಬಿಟುಬಿ) ಮತ್ತು ಸರ್ಕಾರಗಳ ಮಧ್ಯೆ (ಜಿಟುಜಿ) ಮಾತುಕತೆ ನಡೆಸಲು ಇಲ್ಲಿ ಅವಕಾಶ ಒದಗಿಸಲಾಗಿತ್ತು. ರಾಜ್ಯದ ಹಲವಾರು ಉತ್ಪನ್ನಗಳನ್ನು ವಿದೇಶಿಯರಿಗೆ ಪರಿಚಯಿಸಲಾಗಿದೆ. ಇದರಿಂದ ಸ್ಥಳೀಯ ಉದ್ದಿಮೆದಾರರಿಗೆ ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆಯಾಗಲಿದೆ.

* ಭವಿಷ್ಯದ ಕಾರ್ಯಕ್ರಮಗಳು ಏನು?

ರಾಜ್ಯದ ಆರ್ಥಿಕ ಮುನ್ನಡೆಗೆ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಮೇಳವು ಹೊಸ ಅಡಿಪಾಯ ಹಾಕಿದೆ. ಇಂತಹ ಪ್ರಯತ್ನ ಇಲ್ಲಿಗೇ ನಿಲ್ಲಬಾರದು. ಹೂಡಿಕೆದಾರರ ಆಸಕ್ತಿ ಕಾರ್ಯಗತಗೊಳ್ಳಲು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರವೇ ಇಂತಹ ಸಮ್ಮೇಳನ ಏರ್ಪಡಿಸಬೇಕು.

* ಸ್ಥಳೀಯರಿಗೆ ಆಗಿರುವ ಲಾಭಗಳೇನು?

ನಗರದ ಪ್ರತಿಷ್ಠಿತ ಎಂಬಿಎ ಕಾಲೇಜ್‌ ವಿದ್ಯಾರ್ಥಿಗಳಿಗೆ ಅಧಿವೇಶನಗಳಲ್ಲಿ ಭಾಗವಹಿಸಲು ಉಚಿತ ಅವಕಾಶ ಕಲ್ಪಿಸಿಕೊಡಲಾಗಿತ್ತು. 2,500ರಷ್ಟು ಯುವಕ ಯುವತಿಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಯುವಕರಲ್ಲಿ ನವೋದ್ಯಮದ ಕನಸು ಬಿತ್ತುವಲ್ಲಿ ಮೇಳವು ಸ್ಫೂರ್ತಿದಾಯಕವಾಗಿ ಕಾರ್ಯನಿರ್ವಹಿಸಿದೆ. ಯಶಸ್ವಿ ಉದ್ಯಮಿಗಳು ಹಾಗೂ ಯುವ ಉದ್ಯಮಿಗಳ ಮಧ್ಯೆ ಸಂಪರ್ಕ ಕೊಂಡಿಯಾಗಿಯೂ ಮೇಳ ಕಾರ್ಯನಿರ್ವಹಿಸಿದೆ.

* ನಿಮ್ಮ ನಿರೀಕ್ಷೆಗಳೇನು?

‘ಎಫ್‌ಕೆಸಿಸಿಐ’ ನಿರೀಕ್ಷಿಸಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಒಂದೆರಡು ವರ್ಷಗಳಲ್ಲಿ ಹೊಸ ಹೊಸ ಉದ್ದಿಮೆಗಳು ಸ್ಥಾಪನೆಗೊಂಡರೆ ಸಮ್ಮೇಳನ ನಡೆಸಿದ್ದಕ್ಕೂ ಸಾರ್ಥಕ ಭಾವ ಮೂಡುತ್ತದೆ. ಸಮ್ಮೇಳನದ ಯಶಸ್ಸಿಗೆ ‘ಎಫ್‌ಕೆಸಿಸಿಐ’ನ ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿ ಶ್ರಮಿಸಿದ್ದಾರೆ. ಇನ್ನೂ ಅನೇಕ ಸ್ನೇಹಿತರು, ಉದ್ಯಮಿಗಳು ನನ್ನ ಬೆನ್ನಿಗೆ ನಿಂತು ಸಹಕರಿಸಿದ್ದಾರೆ.

* ಯಶಸ್ಸಿಗೆ ಸಹಕರಿಸಿದವರು ಯಾರು?

ವಾಣಿಜ್ಯೋದ್ಯಮ ಮಂಡಳಿಯ ನಿರ್ದೇಶಕ ಮಂಡಳಿ, ಸಿಬ್ಬಂದಿಯ ಶ್ರದ್ಧೆ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಮೇಳ ಯಶಸ್ವಿಯಾಗಿ ಸಂಪನ್ನವಾಗಿದೆ. ವಿವಿಧ ತಂಡಗಳನ್ನು ರಚಿಸಿ, ಅವರಿಗೆಲ್ಲ ಪ್ರತ್ಯೇಕ ಜವಾಬ್ದಾರಿ ವಹಿಸಿದ್ದರಿಂದ ಮೇಳ ಯಶಸ್ವಿಯಾಗಿದೆ.

* ಯಶಸ್ಸಿಗೆ ನಿದರ್ಶನ ಏನು?

ಮೇಳದ ಫಲಶ್ರುತಿಯನ್ನು ತಕ್ಷಣಕ್ಕೆ ಅಳೆಯುವುದು ಸರಿಯಲ್ಲ. ಯುವ ಉದ್ಯಮಿಗಳ ಪಾಲಿಗೆ ದಾರಿ ದೀಪವಾಗಿದೆ. ರಾಜ್ಯದಲ್ಲಿ ಉದ್ದಿಮೆ ಆರಂಭಿಸಲು ಒಲವು ತೋರಿಸಿದ ವಿವರಗಳನ್ನು ಸಿದ್ಧಪಡಿಸಲಾಗಿದೆ. ಹೂಡಿಕೆದಾರರ ಜತೆ ಕೈಗಾರಿಕಾ ಸಚಿವ ಕೆ. ಜಿ. ಜಾರ್ಜ್‌ ಫಲಪ್ರದವಾದ ಮಾತುಕತೆ ನಡೆಸಿದ್ದಾರೆ. ‘ಕೆಐಎಡಿಬಿ’ಯಲ್ಲಿ ಇರುವ 90 ಸಾವಿರ ಎಕರೆಗಳಷ್ಟು ಭೂ ಬ್ಯಾಂಕ್‌ ಸದ್ಬಳಕೆ ಮಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ‘ಏಕ ಗವಾಕ್ಷಿ’ ಮೂಲಕ ಉದ್ದಿಮೆದಾರರಿಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಹೋಟೆಲ್‌, ಆಹಾರ ಸಂಸ್ಕರಣೆ, ಸೌರಶಕ್ತಿ ಉತ್ಪಾದನೆ ಕ್ಷೇತ್ರದಲ್ಲಿ ಹಣ ಹೂಡಲು ಅನೇಕರು ಮುಂದೆ ಬಂದಿದ್ದಾರೆ. ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆಗೆ ಜಾಗ ಕೇಳಿದ್ದಾರೆ.

ಯಾವುದೇ ಯೋಜನೆ ಕಾರ್ಯಗತಗೊಳ್ಳಲು ಸಮಯಾವಕಾಶ ನೀಡಬೇಕಾಗುತ್ತದೆ. ಒಂದೆರಡು ವರ್ಷಗಳಲ್ಲಿ ಇದರ ಪರಿಣಾಮ ಕಂಡು ಬರಲಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳು ಇರುವುದನ್ನು ವಿದೇಶಿಗರಿಗೆ ಮನದಟ್ಟು ಮಾಡಿಕೊಡಲಾಗಿದೆ. ಹೂಡಿಕೆಗೆ ಮನಸ್ಸು ಮಾಡಿದವರು, ಇಂಗಿತ ವ್ಯಕ್ತಪಡಿಸಿದವರ ಬೆನ್ನು ಹತ್ತಿ ಕೆಲಸ ಮಾಡಿದರೆ, ‘ಏಕ ಗವಾಕ್ಷಿ’ ಮೂಲಕ ಯೋಜನೆಗಳಿಗೆ ಮಂಜೂರಾತಿ ಕಲ್ಪಿಸಿದರೆ ಹೂಡಿಕೆ ಪ್ರಸ್ತಾವಗಳು ಸಾಕಾರಗೊಳ್ಳಲಿವೆ. ಸಮ್ಮೇಳನದ ಯಶಸ್ಸಿನ ಬಗ್ಗೆ ನಾವು ಭ್ರಮಾಲೋಕದಲ್ಲಿ ಇಲ್ಲ. ಆದರೆ, ವಿದೇಶಿಯರಲ್ಲಿ ಹೂಡಿಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡಿಸುವಲ್ಲಿ ಶೃಂಗಮೇಳವು ಯಶಸ್ವಿಯಾಗಿದೆ. ₹ 1 ಲಕ್ಷ ಕೋಟಿ ಹೂಡಿಕೆ ಬಗ್ಗೆ ಒಪ್ಪಂದ ನಡೆದಿವೆ. ₹ 2 ಲಕ್ಷ ಕೋಟಿ ಹೂಡಿಕೆ ಬಗ್ಗೆ ಆಸಕ್ತಿ ವ್ಯಕ್ತವಾಗಿದೆ. ಇವರ ಬೆನ್ನುಹತ್ತಿ ಹೋದರೆ ಯೋಜನೆಗಳು ಖಂಡಿತವಾಗಿಯೂ ಸಾಕಾರಗೊಳ್ಳಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು