ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕುಟೋದ್ಯಮದ ಯಶೋಗಾಥೆ

Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

ಎರಡನೆ ತಲೆಮಾರಿನ ಉದ್ಯಮಿಯಾಗಿರುವ ನರೇಂದ್ರ ಕೆ. ಪಿ. ಅವರು, ದೇಶದ ಕುಕ್ಕುಟೋದ್ಯಮದಲ್ಲಿ ಕೋಳಿ ಮರಿ ತಯಾರಿಕೆ, ಸಾಕಾಣಿಕೆ, ರೈತರಿಗೆ ತರಬೇತಿ, ಸಂಸ್ಕರಣೆ ಮತ್ತು ತಾಜಾ ಕೋಳಿ ಮಾಂಸ ರಿಟೇಲ್‌ ಸರಣಿ ಮಾರಾಟದ ಏಕೈಕ ಬ್ರ್ಯಾಂಡ್‌ ಆಗಿರುವ ನಂದುಸ್‌ ಚಿಕನ್‌ (Nandu’s Chicken) ಮುಖ್ಯಸ್ಥರಾಗಿ ಕುಟುಂಬದ ಉದ್ದಿಮೆಗೆ ಆಧುನಿಕತೆಯ ಸ್ಪರ್ಶ ನೀಡಿ ವಿಸ್ತರಿಸುತ್ತಿದ್ದಾರೆ.

ತಮ್ಮ ತಂದೆ 55 ವರ್ಷಗಳ ಹಿಂದೆ ಸ್ಥಾಪಿಸಿದ್ದ ನಂದಾ ಗ್ರೂಪ್‌ನ ಕೋಳಿ ಸಾಕಾಣಿಕೆ ಉದ್ದಿಮೆಗೆ ಸದ್ಯದ ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ತಂತ್ರಜ್ಞಾನ ಮತ್ತು ಆಧುನಿಕತೆಯ ಸ್ಪರ್ಶ ನೀಡಿ ದಕ್ಷಿಣ ಭಾರತದಲ್ಲಿ ವಹಿವಾಟನ್ನು ವ್ಯಾಪಕವಾಗಿ ವಿಸ್ತರಿಸುತ್ತಿದ್ದಾರೆ.

2005ರಲ್ಲಿ ದುಬೈನಲ್ಲಿ ಕೋಳಿ ಬೆಳೆಸಿ ಸ್ಥಳೀಯವಾಗಿ ಮಾರಾಟ ಮಾಡಿದ ದೇಶದ ಮೊದಲ ಸಂಸ್ಥೆಯೂ ಇದಾಗಿದೆ. ಓಮಾನ್‌ನಲ್ಲಿಯೂ ವಹಿವಾಟು ವಿಸ್ತರಿಸಿದ ಹೆಗ್ಗಳಿಕೆಯನ್ನೂ ಹೊಂದಿದೆ. ಕೋಳಿ ಬೆಳೆಸುವುದರಿಂದ ಹಿಡಿದು ಸರಣಿ ಮಾರಾಟ ಮಳಿಗೆ ಮತ್ತು ಆನ್‌ಲೈನ್‌ ಮಾರಾಟ ನಿರ್ವಹಿಸುವ ಬೆಂಗಳೂರಿನ ವಿಶಿಷ್ಟ ಸಂಸ್ಥೆ ಇದಾಗಿದೆ. ಸಂಸ್ಥೆಯ ಕೋಳಿ ಮಾಂಸವು ಸ್ಟೆರೊಯ್ಡ್ಸ್‌, ಹಾರ್ಮೋನ್‌, ಆ್ಯಂಟಿಬಯೊಟಿಕ್‌ ರೆಸಿಜ್ಯೂಗಳಿಂದ ಮುಕ್ತವಾಗಿದೆ ಎಂದು ನರೇಂದ್ರ ಅವರು ಭರವಸೆ ನೀಡುತ್ತಾರೆ. ಕೋಳಿ ಮಾಂಸವು ಮಾರಾಟ ಮಳಿಗೆ ತಲುಪುವ ಎಲ್ಲ ಹಂತಗಳ ಮೇಲೆ ನಿಗಾ ಇರಿಸುವ ವಿಶಿಷ್ಟ ವ್ಯವಸ್ಥೆಯನ್ನು ಸಂಸ್ಥೆ ಅಳವಡಿಸಿಕೊಂಡಿದೆ. ಗುಣಮಟ್ಟದ ಮತ್ತು ತಾಜಾ ಮಾಂಸ ವಿತರಿಸಲು ಸಂಸ್ಥೆಯು ಬೆಂಗಳೂರಿನಲ್ಲಿ ತನ್ನದೇ ಆದ ಮಾರಾಟ ಮಳಿಗೆಗಳನ್ನೂ ಹೊಂದಿದೆ.

ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಮತ್ತು ಬ್ರೀಡರ್ಸ್‌ ಸಂಘದ ಮಾರುಕಟ್ಟೆ ಮುಖ್ಯಸ್ಥರಾಗಿಯೂ ನರೇಂದ್ರ ಕಾರ್ಯನಿರ್ವಹಿಸಿದ್ದಾರೆ. ಬಿಎಂಎಸ್‌ ಕಾಲೇಜಿನ ಬಿ.ಇ ಪದವೀಧರ ಮತ್ತು ಟೆಕ್ಸಾಸ್‌ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರಾಗಿರುವ ಇವರು, ಒಂದು ದಶಕದ ಕಾಲ ಇವರು ತಮ್ಮ ಕುಟುಂಬದ ಉದ್ದಿಮೆಗೆ ಹೊರತಾದ ಸಂಸ್ಥೆಗಳಲ್ಲಿ ಕೆಲಸ ಮಾಡಿ ವೃತ್ತಿ ಅನುಭವ ಪಡೆದುಕೊಂಡಿದ್ದಾರೆ. ಮಾಲೀಕನಾಗುವ ಮುಂಚೆ ಉದ್ಯೋಗಿಯ ಅನುಭವ ಪಡೆಯುವುದು ಅವರ ಉದ್ದೇಶವಾಗಿತ್ತು. ಐದು ದಶಕಗಳ ಹಿಂದೆ ಸ್ಥಾಪನೆಗೊಂಡಿದ್ದ ಕುಟುಂಬದ ಉದ್ದಿಮೆಯಲ್ಲಿ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿ, ಇ– ಕಾಮರ್ಸ್‌ ವಹಿವಾಟು ಜಾರಿಗೆ ತಂದಿದ್ದಾರೆ. ಗುಣಮಟ್ಟದ ಸರಕು ಬಯಸುವ ಗ್ರಾಹಕರ ಅಗತ್ಯ ಈಡೇರಿಸುವ ಬಗೆಯಲ್ಲಿ ಸಂಸ್ಥೆಯ ವಹಿವಾಟನ್ನು ವಿಸ್ತರಿಸುತ್ತಿದ್ದಾರೆ.

ಮೊಟ್ಟೆ ತಯಾರಿಸಿ ಮರಿಗಳನ್ನು ಮಾಡಿ ಸ್ಥಳೀಯ ರೈತರಿಗೆ ಮಾರಾಟ ಮಾಡುವುದರಿಂದ ಹಿಡಿದು ಮಾಂಸದ ಕೋಳಿಗಳನ್ನು (ಬಾಯ್ಲರ್‌) ಬೆಳೆಸಿ, ಮಾಂಸ ಸಂಸ್ಕರಿಸಿ ಸಗಟು ವಹಿವಾಟು ಮಾಡುತ್ತಿದ್ದ ಸಂಸ್ಥೆಯು 2016ರಿಂದೀಚೆಗೆ ತನ್ನದೇ ಬ್ರ್ಯಾಂಡ್‌ ಹೆಸರಿನಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದೆ. ತಯಾರಿಸುವ ಮರಿಗಳಲ್ಲಿ ಶೇ 10ರಷ್ಟನ್ನು ಸಂಸ್ಥೆಯೇ ಮಾಂಸದ ಕೋಳಿಗಾಗಿ (ಬಾಯ್ಲರ್‌) ಬೆಳೆಸುತ್ತಿದೆ. ಬೆಂಗಳೂರಿನ ಈ ಸಂಸ್ಥೆ ದಕ್ಷಿಣ ಭಾರತದಲ್ಲಿ ತನ್ನ ವಹಿವಾಟನ್ನು ವ್ಯಾಪಕವಾಗಿ ವಿಸ್ತರಿಸಿದೆ.

ನರೇಂದ್ರ ಅವರ ತಂದೆ ನಂದಕುಮಾರ್‌ ಅವರು ಉದ್ದಿಮೆ ವಲಯದಲ್ಲಿ ನಂದಾ ಎಂದೇ ಚಿರಪರಿಚಿತರು. ಅವರೇ ಕಟ್ಟಿ ಬೆಳೆಸಿದ್ದ ಸಂಸ್ಥೆಯ ಬ್ರ್ಯಾಂಡ್‌ಗೆ ‘ನಂದುಸ್‌ ಚಿಕನ್‌’ ಎಂದೇ ಹೆಸರಿಡಲಾಗಿದೆ. ಕೋಳಿ ಮರಿಗಳನ್ನು ಬೆಳೆಸುವ, ಸಾಕುವ, ಮಾಂಸ ಸಂಸ್ಕರಣೆ ಹಂತ ಮತ್ತು ತಾಜಾ ಮಾಂಸ ಮಾರಾಟ– ಹೀಗೆ ಪ್ರತಿಯೊಂದು ಹಂತಗಳಲ್ಲಿ ಪಾರದರ್ಶಕತೆ, ಆಧುನಿಕತೆ ಅಳವಡಿಸಿಕೊಂಡಿದೆ.

ಹೊಸೂರು, ಸರ್ಜಾಪುರ ಸುತ್ತಮುತ್ತಲಿನ 35 ರೈತರಿಗೆ ಕೋಳಿ ಮರಿಗಳನ್ನು ವಿತರಿಸಿ ಸಾಕಾಣಿಕೆ ಬಗ್ಗೆ ತರಬೇತಿ ನೀಡಿ ಅವರಿಂದ ನೇರವಾಗಿ ಕೋಳಿಗಳನ್ನು ಖರೀದಿಸಲಾಗುತ್ತಿದೆ. ವರ್ಷದಲ್ಲಿ 6 ಹಂತಗಳಲ್ಲಿ ಇನ್ನೂ ಕೆಲವರು 7 ಹಂತಗಳಲ್ಲಿ ಕೋಳಿ ಬೆಳೆಸಿ ಉತ್ತಮ ವರಮಾನ ಗಳಿಸಲು ಸಂಸ್ಥೆ ನೆರವಾಗುತ್ತಿದೆ. ರೈತರಿಗೆ ಸಮರ್ಪಕ ತರಬೇತಿ ನೀಡಿ ನಿರ್ವಹಣೆಗೆ ನೆರವಾಗುತ್ತಿದೆ. ಜೈವಿಕ ಸುರಕ್ಷತೆ ಕುರಿತೂ ಗಮನ ಹರಿಸಲಾಗುತ್ತಿದೆ. ಪಶುವೈದ್ಯರು ಮತ್ತು ತಂತ್ರಜ್ಞರು ಒಟ್ಟಾರೆ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಹಂತದಲ್ಲಿ ನಿಗಾ ಇರಿಸುವ ವ್ಯವಸ್ಥೆ ಇಲ್ಲಿದೆ.

ಆಹಾರವು ಗ್ರಾಹಕರನ್ನು ತಲುಪಲು ಎಷ್ಟು ದೂರ ಕ್ರಮಿಸಿದೆ (ಫುಡ್‌ ಮೈಲ್ಸ್‌) ಎನ್ನುವುದನ್ನು ಆಧರಿಸಿ ಅದರ ಗುಣಮಟ್ಟ ನಿರ್ಧಾರವಾಗುತ್ತದೆ. ಇದೇ ಕಾರಣಕ್ಕೆ ಕೋಳಿ ಸಾಕಾಣಿಕೆದಾರರ ಹತ್ತಿರದಲ್ಲಿಯೇ ಕಸಾಯಿಖಾನೆಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನ ಮಾರುಕಟ್ಟೆಗೆ ತ್ವರಿತವಾಗಿ ಮಾಂಸ ಪೂರೈಸಲು ಇದರಿಂದ ಸಾಧ್ಯವಾಗಲಿದೆ ಎಂಬುದು ಅವರ ಅಭಿಮತವಾಗಿದೆ.

‘ಈಗ ಜನರ ಕೋಳಿ ಮಾಂಸ ಖರೀದಿ ವಿಧಾನ ಬದಲಾಗಿದೆ. ಗುಣಮಟ್ಟ, ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಸಂಸ್ಥೆಯ ಚಿಕನ್‌ ಮಾರಾಟ ಮಳಿಗೆಗಳೆಲ್ಲ ಸಂಸ್ಥೆಯ ಮಾಲೀಕತ್ವದಲ್ಲಿ ಇವೆ. ನಗರದಲ್ಲಿನ ಮಳಿಗೆಗಳ ಸಂಖ್ಯೆಯನ್ನು 2020ರ ಮಾರ್ಚ್‌ ವೇಳೆಗೆ 50ಕ್ಕೆ ಏರಿಸಲು ಉದ್ದೇಶಿಸಲಾಗಿದೆ. ರೆಡಿ ಟು ಕುಕ್‌, ರೆಡಿ ಟು ಈಟ್‌ ಬ್ರ್ಯಾಂಡ್‌ನಡಿ 25ಕ್ಕೂ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇನ್ನೂ 75 ಬಗೆಯ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ ಇದೆ. ಆನ್‌ಲೈನ್‌ ಖರೀದಿಗೂ ಅವಕಾಶ ಇದೆ. ಗ್ರಾಹಕರು ಮೊಬೈಲ್‌ ಆ್ಯಪ್‌ ಮತ್ತು ಅಂತರ್ಜಾಲದ ಮೂಲಕ ಸಲ್ಲಿಸುವ ಬೇಡಿಕೆಗೆ ಸಮೀಪದ ಮಳಿಗೆಯಿಂದ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ' ಎಂದೂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT