ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಹೊರೆ ಇಳಿಸೋದು ಹೇಗೆ?

Last Updated 29 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಎಷ್ಟೋ ಮಂದಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಆದರೆ ಅವರ ಜೇಬು ಚಿಕ್ಕದಿರುವ ಕಾರಣ ಸಾಲದ ಮೊರೆ ಹೋಗುತ್ತಾರೆ. ಕನಸಿನ ಬೆನ್ನೇರಿ ಹೋಗುವಾಗ ಎಷ್ಟು ಸಾಲ ಮಾಡಬೇಕು? ಸಾಲದ ಹೊರೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಅನೇಕರು ತಮಗೆ ತಾವು ಕೇಳಿಕೊಳ್ಳುವುದಿಲ್ಲ. ಪರಿಣಾಮ, ಸಾಲ ಕ್ರಮೇಣ ಅವರಿಗೆ ಶೂಲವಾಗಿ ಪರಿಣಮಿಸುತ್ತದೆ. ಇಂತಹ ಸಂದರ್ಭದಲ್ಲಿ ಸಾಲದ ವರ್ತುಲದಿಂದ ಪಾರಾಗುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲು ಹೆಚ್ಚು ಬಡ್ಡಿ ದರದ ಸಾಲ ತೀರಿಸಿ: ನೀವು ಮಾಡಿರುವ ಸಾಲಗಳ ಪಟ್ಟಿ ಮಾಡಿಕೊಂಡು. ಜಾಸ್ತಿ ಬಡ್ಡಿ ದರ ಇರುವ ಸಾಲವನ್ನು ಆದಷ್ಟು ಬೇಗ ಮರುಪಾವತಿ ಮಾಡಲು ಯೋಜನೆ ರೂಪಿಸಿ. ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲ ಮಾಡಿದ್ದರೆ ಮೊದಲು ವೈಯಕ್ತಿಕ ಸಾಲ ಮತ್ತು ವಾಹನ ಸಾಲವನ್ನು ಪೂರ್ತಿ ಪಾವತಿಸಿ ನಂತರದಲ್ಲಿ ಗೃಹ ಸಾಲ ಮರುಪಾವತಿಗೆ ಚಿಂತಿಸುವುದು ಸೂಕ್ತ.

ಉದಾಹರಣೆಗೆ ಪ್ರಸ್ತುತ ಸ್ಥಿತಿಯಲ್ಲಿ ಗೃಹ ಸಾಲದ ಬಡ್ಡಿ ದರ ಶೇ 8.5 ರಿಂದ ಶೇ 9ರ ಆಸುಪಾಸಿನಲ್ಲಿದೆ. ವಾಹನ ಸಾಲ ಶೇ 9 ರಿಂದ ಶೇ 14ರ ವರೆಗೆ ಇದೆ. ಆದರೆ ವೈಯಕ್ತಿಕ ಸಾಲದ ಬಡ್ಡಿ ದರ ಶೇ 13 ರಿಂದ 17 ರ ವರೆಗೂ ಇದೆ. ಈ ಸನ್ನಿವೇಶದಲ್ಲಿ ಮೊದಲು ವೈಯಕ್ತಿಕ ಸಾಲ ಮತ್ತು ವಾಹನ ಸಾಲ ತೀರಿಸಲು ಗಮನಕೊಟ್ಟು ನಂತರದಲ್ಲಿ ಗೃಹ ಸಾಲ ಮರುಪಾವತಿಗೆ ಗಮನಹರಿಸಬಹುದು.

ಆದಾಯ ಹೆಚ್ಚಿದಂತೆ ಸಾಲದ ಮರುಪಾವತಿ ಹೆಚ್ಚಿಸಿ: ನಮ್ಮ ಆದಾಯ ಹೆಚ್ಚಿದಂತೆ ಸಾಲದ ಮಾಸಿಕ ಕಂತು (ಇಎಂಐ) ಹೆಚ್ಚಿಸುವುದು ಜಾಣ ನಡೆ. ಉದಾಹರಣೆಗೆ ನಿಮಗೆ ಈ ವರ್ಷ ವೇತನ ಶೇ 10 ರಷ್ಟು ಪರಿಷ್ಕರಣೆ ಆಯಿತು ಎಂದು ಭಾವಿಸೋಣ. ಆಗ ಹೆಚ್ಚಳದ
ಶೇ 7 ರಷ್ಟು ಹಣವನ್ನು ನಿಮ್ಮ ಮಾಸಿಕ ಪಾವತಿ ಕಂತು ಹೆಚ್ಚಿಸಲು ನೀವು ಬಳಸಬಹುದು. ಸಾಲ ಮರುಪಾವತಿಯಲ್ಲಿ ವರ್ಷಗಳ ಕಡಿಮೆಯಾದಷ್ಟು ಬಡ್ಡಿ ಪಾವತಿ ಪ್ರಮಾಣ ತಗ್ಗುತ್ತದೆ. ಉದಾಹರಣೆಗೆ 20 ವರ್ಷಗಳ ಅವಧಿಗೆ ನೀವು ಶೇ 9 ರ ಬಡ್ಡಿದರದಲ್ಲಿ ₹ 20 ಲಕ್ಷ ಸಾಲವನ್ನು ತೆಗೆದುಕೊಂಡು ಮಾಸಿಕ ₹17,994 ಅನ್ನು ಮಾಸಿಕ ಕಂತಿನ ರೂಪದಲ್ಲಿ ಪಾವತಿಸುತ್ತೀರಿ ಎಂದು ಭಾವಿಸೋಣ. ಈ ಮಾಸಿಕ ಕಂತಿನ ಪ್ರಮಾಣವನ್ನು ನೀವು ₹ 20,285 ಕ್ಕೆ ಹೆಚ್ಚಳ ಮಾಡಿದರೆ ಸಾಕು 15 ವರ್ಷಗಳಲ್ಲೇ ಸಾಲ ಮರುಪಾವತಿ ಪೂರ್ಣಗೊಳ್ಳುತ್ತದೆ.

ಹೆಚ್ಚುವರಿ ಆದಾಯಗಳಿಕೆ ಬಳಸಿಕೊಳ್ಳಿ: ಬೋನಸ್ ಹಣ, ವಿಮೆ ಮೆಚ್ಯೂರಿಟಿ ಹಣ ಬಂದಕೂಡಲೇ ಬೇಡದ ವಸ್ತುಗಳ ಖರೀದಿಗೆ ದುಡ್ಡು ಹಾಕುವ ಬದಲು ಸಾಲ ಮರುಪಾವತಿಗೆ ಬಳಸಿಕೊಳ್ಳಿ. ಕೆಲ ಸಾಲಗಳಲ್ಲಿ ಅವಧಿಪೂರ್ವ ಮರುಪಾವತಿಗೆ ಶುಲ್ಕಗಳಿರುತ್ತವೆ ಎನ್ನುವುದನ್ನು ಮರೆಯಬೇಡಿ.

ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ: ಅಗತ್ಯ ವಸ್ತುಗಳ ಮೇಲೆ ಮಾತ್ರ ಖಚ್ಚು ಮಾಡಿ, ಐಷಾರಾಮಿ ಖರ್ಚುಗಳಿಗೆ ತಡೆಯೊಡ್ಡದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅನಗತ್ಯ ವಸ್ತುಗಳನ್ನು ಮಾರಾಟ ಮಾಡಿ. ಪರೋಕ್ಷವಾಗಿ ಇದರಿಂದ ಸಾಲ ಮರುಪಾವತಿಗೂ ನೆರವಾಗುತ್ತದೆ.

ಪರ್ಯಾಯ ಸಂಪನ್ಮೂಲಗಳನ್ನು ಹುಡುಕಿ: ಪರಿಸ್ಥಿತಿ ಹದಗೆಟ್ಟಿದ್ದರೆ ನಿಮ್ಮ ವಿಮೆ ಪಾಲಿಸಿಯ ಮೇಲೆ ಅಥವಾ ಪಿಪಿಎಫ್ ಖಾತೆಯ ಮೇಲೆ ಸಾಲ ಪಡೆದು ದುಬಾರಿ ಬಡ್ಡಿ ದರ ಇರುವ ಸಾಲಗಳನ್ನು ತೀರಿಸುವ ಬಗ್ಗೆ ಚಿಂತಿಸಬಹುದು. ಪಿಪಿಎಫ್ ಹೂಡಿಕೆಯ ನಂತರದಲ್ಲಿ ಮೂರನೇ ಆರ್ಥಿಕ ವರ್ಷದಿಂದ ಸಾಲ ಪಡೆದುಕೊಳ್ಳಲು ಅವಕಾಶವಿದೆ. ಪಾಲಿಸಿಗಳ ಬಾಂಡ್ ಮೌಲ್ಯದ ಮೇಲೆ ಮೇಲೆ ಶೇ 50 ರಿಂದ 60 ರಷ್ಟು ಸಾಲ ಪಡೆಯಲು ಸಾಧ್ಯ.

ನಾಲ್ಕು ತಿಂಗಳಲ್ಲೇ ಉತ್ತಮ ಗಳಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ತೆರಿಗೆ ಕಡಿತ ಘೋಷಣೆ ಮಾಡಿದ ಬಳಿಕ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ವಾರದ ಅವಧಿಯಲ್ಲಿ ಸುಮಾರು ಶೇ 2 ರಷ್ಟು ಏರಿಕೆ ದಾಖಲಿಸಿರುವ ಸೆನ್ಸೆಕ್ಸ್ ಮತ್ತು ನಿಫ್ಟಿ ನಾಲ್ಕು ತಿಂಗಳ ಅವಧಿಯಲ್ಲಿ ಉತ್ತಮ ಗಳಿಕೆಯನ್ನೂ ದಾಖಲಿಸಿವೆ. 38,822 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ 808 ಅಂಶಗಳ ಏರಿಕೆ ದಾಖಲಿಸಿದೆ.11,512 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ 238 ಅಂಶ ಗಳಿಸಿಕೊಂಡಿದೆ.

ಗಳಿಕೆ-ಇಳಿಕೆ: ವಾರದ ಅವಧಿಯಲ್ಲಿ ಬಿಪಿಸಿಎಲ್, ಬಜಾಜ್ ಫಿನ್ ಸರ್ವ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್‌ ಅಗ್ರ ಸ್ಥಾನದಲ್ಲಿದ್ದು ಶೇ 16 ರ ವರೆಗೆ ಏರಿಕೆ ಕಂಡಿವೆ. ಯೆಸ್ ಬ್ಯಾಂಕ್ , ಟಾಟಾ ಮೋಟರ್ಸ್, ಜೀ, ಎಸ್‌ಬಿಐ ಮತ್ತು ಹಿಂಡಾಲ್ಕೊ ಕಂಪನಿಗಳು ಶೇ 12 ರಷ್ಟು ಕುಸಿದಿವೆ. ಪ್ರಮುಖವಾಗಿ ಬಿಪಿಸಿಎಲ್ ಶೇ 16.33 ರಷ್ಟು ಗಳಿಸಿದ್ದರೆ ಯೆಸ್ ಬ್ಯಾಂಕ್ ಶೇ 12.6 ರಷ್ಟು ಹಿನ್ನಡೆ ಕಂಡಿದೆ.

ದಾಖಲೆ ಬರೆದ ಬಜಾಜ್ ಫೈನಾನ್ಸ್: ಬಜಾಜ್ ಫೈನಾನ್ಸ್‌ನ ಷೇರುಗಳು ₹ 4,064 ಕ್ಕೆ ಜಿಗಿದು ಹೊಸ ದಾಖಲೆ ಸೃಷ್ಟಿಸಿವೆ. ವಾರದ ಅವಧಿಯಲ್ಲೇ ಶೇ 10 ರಷ್ಟು ಏರಿಕೆ ದಾಖಲಿಸಿರುವ ಷೇರುಗಳು 2019 ನೇ ವರ್ಷದಲ್ಲೇ ಶೇ 54 ರಷ್ಟು ಏರಿಕೆ ಕಂಡಿವೆ. ಕಳೆದ 7 ವರ್ಷಗಳಿಂದ ಬಜಾಜ್ ಫೈನಾನ್ಸ್‌ ಷೇರುಗಳು ಹೂಡಿಕೆದಾರರಿಗೆ ಸಕಾರಾತ್ಮಕ ಗಳಿಕೆ ಕೊಟ್ಟಿವೆ.

6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಯೆಸ್ ಬ್ಯಾಂಕ್: ಯೆಸ್ ಬ್ಯಾಂಕ್ ಷೇರುಗಳು ₹ 48.50 ಕ್ಕೆ ಕುಸಿದು ಆರು ವರ್ಷಗಳ ಕನಿಷ್ಠ ಮಟ್ಟಕ್ಕಿಳಿದಿವೆ. ಯೆಸ್ ಬ್ಯಾಂಕ್‌ನ ಪ್ರವರ್ತಕ ಕಂಪನಿ ಯೆಸ್ ಕ್ಯಾಪಿಟಲ್ ತನ್ನ ಶೇ 2 ರಷ್ಟು ಪಾಲುದಾರಿಕೆಯನ್ನು ಮಾರಾಟ ಮಾಡಿದ ಪರಿಣಾಮ ಕುಸಿತ ಉಂಟಾಗಿದೆ.

ರೆಲ್ವೆ ಇಲಾಖೆಯ ಐಆರ್‌ಸಿಟಿಸಿಯಿಂದ ಐಪಿಒ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಟಿಸಿ) ಆರಂಭಿಕ ಸಾರ್ವಜನಿಕ ಹೂಡಿಕೆಯಿಂದ (ಐಪಿಒ) ₹ 645 ಕೋಟಿ ಸಂಗ್ರಹಕ್ಕೆ ಮುಂದಾಗಿದ್ದು ಸೆಪ್ಟೆಂಬರ್ 30 ರಂದು ಐಪಿಒ ಪಡೆದುಕೊಳ್ಳಬಹುದಾಗಿದೆ. ಪ್ರತಿ ಷೇರಿನ ಬೆಲೆ ₹ 315 ರಿಂದ ₹ 320 ಇರಲಿದೆ. ಅಕ್ಟೋಬರ್ 3ಕ್ಕೆ ಐಪಿಒ ಅವಧಿ ಕೊನೆಗೊಳ್ಳಲಿದೆ.

ಮುನ್ನೋಟ: ಸೆಪ್ಟೆಂಬರ್ 30 ರಂದು ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಏಪ್ರಿಲ್‌ನಿಂದ ಆಗಸ್ಟ್ ವರೆಗಿನ ವಿತ್ತೀಯ ಕೊರತೆ ವರದಿ ಈ ವಾರ ಹೊರಬರಲಿದೆ. ಆರ್‌ಬಿಐಹಣಕಾಸು ನೀತಿ ಸಮಿತಿಯ ಬಡ್ಡಿ ದರ ನಿರ್ಧಾರಅಕ್ಟೋಬರ್ 4 ರಂದು ಹೊರಬೀಳಲಿದೆ. ಇದರ ಜತೆಗೆ ಎರಡನೇ ತ್ರೈಮಾಸಿಕ ಅವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದ್ದು ಇನ್ನೇನು ಕಂಪನಿಗಳ ಫಲಿತಾಂಶಗಳ ಅವಧಿ ಆರಂಭಗೊಳ್ಳಲಿದೆ. ಈ ಎಲ್ಲ ಅಂಶಗಳು ಸೇರಿ ಜಾಗತಿಕ ಮಾರುಕಟ್ಟೆಗಳಲ್ಲಿನ ವಿದ್ಯಮಾನಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT