ಮಂಗಳವಾರ, ಮೇ 18, 2021
22 °C

ಗುರಿ ಆಧಾರಿತ ಹೂಡಿಕೆ ಹೇಗೆ?

ಅಶ್ವಿನಿ ಅರುಲ್‌ರಾಜನ್‌ Updated:

ಅಕ್ಷರ ಗಾತ್ರ : | |

ತಮ್ಮ ಗಳಿಕೆಯಲ್ಲಿ ಒಂದಿಷ್ಟು ಉಳಿತಾಯವನ್ನು ಎಲ್ಲರೂ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ನಾವು ಮಾಡುವ ಉಳಿತಾಯಕ್ಕೆ ನಿರ್ದಿಷ್ಟವಾದ ಗುರಿ ಇರುವುದಿಲ್ಲ. ಇದರಿಂದಾಗಿ ಕೆಲವೊಮ್ಮೆ ಸಂಕಷ್ಟಕ್ಕೆ ಒಳಗಾಗುವ ಸಂದರ್ಭ ಎದುರಾಗುತ್ತದೆ. ಈ ಕಾರಣಕ್ಕೆ ಗುರಿ ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಹೂಡಿಕೆ ಅಥವಾ ಉಳಿತಾಯ ಮಾಡುವುದು ಮುಖ್ಯ.

ಯಾವ ಉದ್ದೇಶಕ್ಕೆ ಉಳಿತಾಯ ಮಾಡುತ್ತಿದ್ದೇನೆ ಎಂಬುದನ್ನು ಮೊದಲೇ ತಿಳಿದು, ಅದಕ್ಕೆ ಅನುಗುಣವಾಗಿ ಯೋಜನಾಬದ್ಧವಾಗಿ ಉಳಿತಾಯ ಮಾಡುವುದನ್ನು ‘ಗುರಿ ಆಧಾರಿತ ಉಳಿತಾಯ’ ಎನ್ನಬಹುದು. ಪ್ರತಿಯೊಬ್ಬನಿಗೂ ಹಲವಾರು ಗುರಿಗಳು ಇರುತ್ತವೆ. ಅವು ಅಲ್ಪಾವಧಿ ಆಗಿರಬಹುದು ಅಥವಾ ದೀರ್ಘಾವಧಿಯದ್ದೂ ಇರಬಹುದು. ಕೆಲವು ಪ್ರಮುಖವಾಗಿದ್ದರೆ ಇನ್ನೂ ಕೆಲವು ಅಷ್ಟು ಮುಖ್ಯ ಎನಿಸಲಾರವು. ಒಟ್ಟಿನಲ್ಲಿ ಗುರಿ ಯಾವುದೇ ಇರಲಿ ಅದನ್ನು ಸಾಧಿಸಬೇಕಾದರೆ ಯೋಜನಾಬದ್ಧ ಹೂಡಿಕೆ ಅಗತ್ಯ.

ಶಿಕ್ಷಣವೇ ಮುಂತಾದ ಕೆಲವು ವಿಚಾರಗಳಿಗೆ ಎಲ್ಲರೂ ಯೋಜನೆ ರೂಪಿಸಿರುತ್ತಾರೆ. ಆದರೆ ನಿವೃತ್ತಿಗೆ? ನಿವೃತ್ತಿಯ ನಂತರದ ಬದುಕಿನ ಬಗ್ಗೆ ಚಿಂತಿಸುವವರು ಅಥವಾ ಉಳಿತಾಯ ಮಾಡುವವರು ಬಹಳ ಕಡಿಮೆ. ಇಂಥ ವಿಚಾರಗಳ ಬಗ್ಗೆ ಗುರಿಯನ್ನು ನಿರ್ಧರಿಸಿ ಆ ಗುರಿಯನ್ನು ಸಾಧಿಸಬೇಕಾದರೆ ಮಾಡಬೇಕಾದ ಉಳಿತಾಯದ ಸಂದರ್ಭದಲ್ಲಿ ಯಾವ್ಯಾವ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ಇದೆ.

ಗುರಿ ನಿರ್ಧರಿಸುವುದು
ಇದು ಅತಿ ಸುಲಭ ಎಂದೆನಿಸಬಹುದು. ಆದರೆ, ಮೊದಲ ಮತ್ತು ಅತಿ ಮುಖ್ಯವಾದ ಹಂತವಿದು. ಶಿಕ್ಷಣ, ಮದುವೆ, ನಿವೃತ್ತಿ ಮುಂತಾದ ಅನೇಕ ಗುರಿಗಳು ನಮ್ಮ ಮುಂದಿವೆ.

ಇಂಥ ಎಲ್ಲ ಗುರಿಗಳ ಪಟ್ಟಿ ತಯಾರಿಸಿ. ಅವುಗಳಲ್ಲಿ ಅಲ್ಪಾವಧಿಯ ಗುರಿಗಳು, ಅಷ್ಟು ಮುಖ್ಯವಲ್ಲದ ಗುರಿಗಳನ್ನೂ ಸೇರಿಸಿಕೊಳ್ಳಿ. ಮುಂದಿನ ವರ್ಷ ವಿದೇಶ ಪ್ರಯಾಣ ಮಾಡಬೇಕು ಎಂಬ ನಿಮ್ಮ ಆಸೆಯೂ ಈ ಪಟ್ಟಿಯಲ್ಲಿ ಸೇರಿರಬಹುದು. ನಿಮ್ಮ ಪಾಲಿಗೆ ಅದೂ ಮುಖ್ಯವಾಗಿರುತ್ತದೆ. ಆದ್ದರಿಂದ ಪಟ್ಟಿಯಲ್ಲಿ ಅದಕ್ಕೂ ಸ್ಥಾನ ಕಲ್ಪಿಸಿ. ಹೀಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ದೀರ್ಘಾವಧಿಯ ಗುರಿಗಳನ್ನು ಗುರುತಿಸಿ ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದು ಕಾಲಾವಧಿಯನ್ನು ನಿರ್ಧರಿಸಿ.

ಮೊತ್ತ ನಿರ್ಧಾರ
ಇದು ಎರಡನೇ ಹಂತ. ಹಣದ ವಿಚಾರ ಬರುವುದು ಈ ಹಂತದಲ್ಲಿ. ನೀವು 55ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಲು ಬಯಸಿದರೆ ಸಾಲದು, ನಿವೃತ್ತಿಯ ಬಳಿಕ ಎಂತಹ ಜೀವನ ನಡೆಸಲು ಬಯಸುತ್ತೀರಿ. ಆ ಜೀವನ ಶೈಲಿಗೆ ನಿಮಗೆ ಎಷ್ಟು ಹಣಕಾಸಿನ ಅಗತ್ಯ ಬರಬಹುದು, ಆದಕ್ಕಾಗಿ ಈಗಿನಿಂದಲೇ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನೂ ಈ ಹಂತದಲ್ಲಿ ನಿರ್ಧರಿಸಬೇಕು. ಹೀಗೆ ಮೊತ್ತ ನಿರ್ಧಾರ ಮಾಡುವಾಗ ರೂಪಾಯಿ ಬೆಲೆ ಕುಸಿತ, ಹಣದುಬ್ಬರ ಮುಂತಾದ ವಿಚಾರಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಎಷ್ಟು ಉಳಿಸಬೇಕು
ಗುರಿ ನಿರ್ಧರಿಸಿ, ಅದರ ಸಾಧನೆಗೆ ಎಷ್ಟು ಉಳಿತಾಯ ಮಾಡಬೇಕು ಎಂದು ನಿರ್ಧರಿಸಿದ ನಂತರ ಈಗಾಗಲೇ ಎಷ್ಟು ಉಳಿತಾಯ ಮಾಡಿದ್ದೀರಿ ಎಂಬುದನ್ನು ಲೆಕ್ಕ ಹಾಕಿಕೊಳ್ಳಿ. ಆಗ ಇನ್ನು ಮುಂದೆ ಎಷ್ಟು ಉಳಿತಾಯ ಮಾಡಬೇಕು ಎಂಬುದು ಸ್ಪಷ್ಟವಾಗುತ್ತದೆ. ತುರ್ತು ಸಂದರ್ಭಕ್ಕಾಗಿ ಒಂದಿಷ್ಟು ಹಣವನ್ನು ತೆಗೆದಿಟ್ಟರೆ, ಉಳಿದ ಹಣವನ್ನು ನಿಮ್ಮ ಗುರಿ ಸಾಧನೆಯ ಉದ್ದೇಶದಿಂದ ಹೂಡಿಕೆ ಮಾಡಬಹುದು. ಹಳೆಯ ಹೂಡಿಕೆ ಅಥವಾ ಉಳಿತಾಯವನ್ನು ಬೇಕಾದರೆ ಅಲ್ಪಾವಧಿಯ ಅಗತ್ಯಗಳಿಗೆ ಬಳಸಿಕೊಳ್ಳಬಹುದು.

ಎಲ್ಲ ಲೆಕ್ಕಾಚಾರ ಮಾಡಿದಾಗ, ಮಾಡಬೇಕಾದ ಹೂಡಿಕೆಯ ಪ್ರಮಾಣ ತುಂಬ ದೊಡ್ಡದಾಗಿದೆ ಎನ್ನಿಸಬಹುದು. ಆದರೆ, ನಿಮ್ಮ ಗಳಿಕೆಯ ಸಾಮರ್ಥ್ಯ ಸದಾ ಕಾಲ ಹೀಗೆಯೇ ಇರುವುದಿಲ್ಲ ಎಂಬುದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹೂಡಿಕೆಯಲ್ಲಿ ಈಗ ಮಾಡುವ ಸಣ್ಣ ಏರಿಕೆಯೂ ಮುಂದೆ, ಗಳಿಕೆಯ ಮೇಲೆ ದೊಡ್ಡ ಪರಿಣಾಮ ಉಂಟುಮಾಡಬಲ್ಲದು. ಉದಾಹರಣೆಗೆ ಮುಂದಿನ 10 ವರ್ಷಗಳ ಕಾಲ ಪ್ರತಿ ತಿಂಗಳೂ ₹ 5000ದಂತೆ ‘ಎಸ್‌ಐಪಿ’ ಮೂಲಕ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಶೇ 12ರ ಬಡ್ಡಿ ಹಿಡಿದರೂ 10ವರ್ಷಗಳ ಬಳಿಕ ₹ 11.61 ಲಕ್ಷ ನಿಮ್ಮ ಕೈಸೇರುತ್ತದೆ. ಹೂಡಿಕೆಯನ್ನು ಇನ್ನೂ ₹ 2000 ಹೆಚ್ಚಿಸಿದಿರಿ ಎಂದಿಟ್ಟುಕೊಳ್ಳಿ, 10ವರ್ಷಗಳ ಬಳಿಕ ನಿಮ್ಮ ಕೈಸೇರುವ ಮೊತ್ತ ₹ 27.08 ಲಕ್ಷಗಳಾಗಿರುತ್ತವೆ.

ಹೂಡಿಕೆಗೆ ಸರಿಯಾದ ಆಯ್ಕೆ
ಇದು ಕೊನೆಯ ಹಂತ. ನಿಮ್ಮ ಅಪಾಯ (ರಿಸ್ಕ್‌) ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆಗೆ ಸೂಕ್ತವಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಿ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತ ಒಂದು ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಬೇಗ ಗುರಿ ಸಾಧಿಸಬೇಕೆಂಬ ಹಂಬಲದಿಂದ ಹೆಚ್ಚಿನ ಅಪಾಯವನ್ನು ಎದುರು ಹಾಕಿಕೊಳ್ಳುವುದೂ ಸೂಕ್ತವಲ್ಲ. ಯಾವ ಹೂಡಿಕೆಯಲ್ಲಿ ಅಪಾಯವಿದೆ ಎಂದು ತಿಳಿಯಲು ತಜ್ಞರ ಸಲಹೆ ಪಡೆಯಬಹುದು. ಎಷ್ಟು ಬೇಗ ಉಳಿತಾಯ ಆರಂಭಿಸುವಿರೋ ಲಾಭ ಅಷ್ಟೇ ಹೆಚ್ಚಾಗುವುದು.

(ಲೇಖಕಿ, ‘ಫಂಡ್ಸ್‌ಇಂಡಿಯಾಡಾಟ್‌ಕಾಂ’ನ ವಿಶ್ಲೇಷಕಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು