ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ಕಂಪನಿ: ಹೂಡಿಕೆಗೆ ಮುನ್ನ...

Last Updated 29 ನವೆಂಬರ್ 2020, 19:39 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ (ಐ.ಟಿ.) ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆದಾರರು ಈ ವಲಯದ ಕಂಪನಿಗಳ ಷೇರುಗಳ ಮೇಲೆ ವಿಶೇಷ ಗಮನ ನೀಡುತ್ತಾರೆ. ಕೊರೊನಾ ಕಾರಣದಿಂದ ಮಾರುಕಟ್ಟೆ ಸೂಚ್ಯಂಕಗಳು ಕುಸಿತ ಕಂಡಾಗ ಐ.ಟಿ. ವಲಯದ ಷೇರುಗಳು ಮಾತ್ರ ಒಂದಿಷ್ಟು ಸ್ಥಿರವಾಗಿದ್ದವು. ಮಾಹಿತಿ ತಂತ್ರಜ್ಞಾನದ ಕಂಪನಿಗಳು ಜಾಗತಿಕ ನೆಲೆ ಹೊಂದಿರುವುದರಿಂದ ದೇಶಿಯ ಮಾರುಕಟ್ಟೆಗಳ ಮೇಲೆ ಅವು ಅಷ್ಟು ಅವಲಂಬಿತವಾಗಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಐ.ಟಿ. ಕಂಪನಿಗಳ ಮೇಲೆ ಹೂಡಿಕೆ ಮಾಡುವಾಗ ಕೆಲವು ಅನುಪಾತ ಮತ್ತು ಅಂಕಿ-ಅಂಶಗಳನ್ನು ಗಮನಿಸಬೇಕಾಗುತ್ತದೆ. ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

1. ನಿರ್ವಹಣಾ ಲಾಭಾಂಶ (ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್): ಕಂಪನಿ ತನ್ನ ಪ್ರಮುಖ ವ್ಯವಹಾರದಿಂದ ಬರುವ ವರಮಾನದಿಂದ ಎಷ್ಟು ಲಾಭ ಮಾಡುತ್ತಿದೆ ಎನ್ನುವುದನ್ನು ನಿರ್ವಹಣಾ ಲಾಭಾಂಶವು ತಿಳಿಸುತ್ತದೆ. ನಿರ್ವಹಣಾ ಲಾಭಾಂಶ ಹೆಚ್ಚುತ್ತಾ ಸಾಗಿದಂತೆ ಕಂಪನಿಯ ಲಾಭಾಂಶವೂ ಹೆಚ್ಚಳವಾಗುತ್ತದೆ. ಐ.ಟಿ. ಕಂಪನಿಗಳು ಸೇವಾ ವಲಯದಲ್ಲಿ ಇರುವುದರಿಂದ ಉದ್ಯೋಗಿಗಳ ಮೇಲಿನ ವೆಚ್ಚವೇ ಹೆಚ್ಚಿಗೆ ಇರುತ್ತದೆ. ಹಾಗಾಗಿ ಈ ಮಾನದಂಡ ಬಹಳ ಮುಖ್ಯವಾಗುತ್ತದೆ.

2. ಷೇರಿನ ಮೇಲಿನ ಗಳಿಕೆ ಅನುಪಾತ (ರಿಟರ್ನ್ ಆನ್ ಈಕ್ವಿಟಿ ರೇಷಿಯೋ- ROE): ಸಾಮಾನ್ಯ ಷೇರುದಾರರು ಹೊಂದಿರುವ ಷೇರುಗಳ ಮೇಲೆ ಪಡೆಯುವ ಲಾಭಾಂಶವನ್ನು ಷೇರಿನ ಮೇಲಿನ ಗಳಿಕೆ ಅನುಪಾತ ಎನ್ನಲಾಗುತ್ತದೆ. ಷೇರುದಾರರಿಂದ ಹಣ ಪಡೆದಿರುವ ಕಂಪನಿ ಅದನ್ನು ಹೂಡಿಕೆ ಮಾಡಿ ಎಷ್ಟರ ಮಟ್ಟಿಗೆ ಅದರಿಂದ ಲಾಭ ಮಾಡುತ್ತಿದೆ ಎಂಬುದು ಈ ಅನುಪಾತದಿಂದ ತಿಳಿಯುತ್ತದೆ. ಐ.ಟಿ. ವಲಯದಲ್ಲಿ ಹೂಡಿಕೆ ಮಾಡುವಾಗ ಈ ಮಾನದಂಡ ಬಹಳ ಮುಖ್ಯವಾಗುತ್ತದೆ. ಹೂಡಿಕೆ ಮೇಲಿನ ಗಳಿಕೆ ಅನುಪಾತ ಹೆಚ್ಚಿಗೆ ಇಲ್ಲದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಮೊತ್ತ ನಷ್ಟವಾಗುತ್ತದೆ.

3. ರೂಪಾಯಿ ಮೌಲ್ಯ ಕುಸಿತ ಮತ್ತು ಲಾಭಾಂಶ ಘೋಷಣೆ: ಐ.ಟಿ. ಕಂಪನಿಗಳು ಬೇರೆ ಬೇರೆ ದೇಶಗಳಲ್ಲಿ ನೆಲೆ ಹೊಂದಿರುವುದರಿಂದ ಡಾಲರ್ ಎದುರು ರೂಪಾಯಿ ಮಾಲ್ಯ ಕುಸಿತದ ಲಾಭ ಸಿಗುತ್ತದೆ. ಐ.ಟಿ. ಕಂಪನಿಗಳಿಂದ ಸೇವೆ ಪಡೆದುಕೊಳ್ಳುವವರು ಡಾಲರ್ ಮೂಲಕ ಪಾವತಿ ಮಾಡುವುದರಿಂದ ವರ್ಷದಿಂದ ವರ್ಷಕ್ಕೆ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಐ.ಟಿ. ಕಂಪನಿಗಳು ಹೂಡಿಕೆದಾರರಿಗೆ ಒಳ್ಳೆಯ ಲಾಭಾಂಶ ಘೋಷಣೆ ಮಾಡುತ್ತವೆ.

ದಾಖಲೆ ಏರಿಕೆ, ಇರಲಿ ಎಚ್ಚರಿಕೆ

ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ, ಕೋವಿಡ್-19ಕ್ಕೆ ಲಸಿಕೆ ಶೀಘ್ರವೇ ಲಭ್ಯವಾಗುವ ಭರವಸೆ, ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿರುವುದು, ಹೀಗೆ ಹಲವು ಅಂಶಗಳ ಕಾರಣದಿಂದಾಗಿ ಷೇರುಪೇಟೆ ಸೂಚ್ಯಂಕಗಳು ನವೆಂಬರ್ ತಿಂಗಳಲ್ಲಿ ದಾಖಲೆ ಮಟ್ಟದ ಏರಿಕೆ ಕಂಡಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮೊದಲ ಬಾರಿಗೆ ಕ್ರಮವಾಗಿ 44,827 ಮತ್ತು 13,145 ಅಂಶಗಳಿಗೆ ತಲುಪಿ ಇತಿಹಾಸ ಸೃಷ್ಟಿಸಿವೆ. ಇನ್ನು ನವೆಂಬರ್ 27ಕ್ಕೆ ಕೊನೆಗೊಂಡ ವಾರದ ಲೆಕ್ಕಾಚಾರಕ್ಕೆ ಬಂದರೆ, 44,149 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 0.6ರಷ್ಟು ಹೆಚ್ಚಳ ಕಂಡಿದ್ದರೆ, 12,968 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.9ರಷ್ಟು ಜಿಗಿದಿದೆ.

ವಲಯವಾರು ಪ್ರಗತಿಯಲ್ಲಿ ನೋಡಿದಾಗ ನಿಫ್ಟಿ ಐ.ಟಿ. ಹೊರತುಪಡಿಸಿ ಎಲ್ಲಾ ವಲಯಗಳೂ ಗಳಿಕೆ ಕಂಡಿವೆ. ನಿಫ್ಟಿ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 6.3ರಷ್ಟು ಹೆಚ್ಚಳ ದಾಖಲಿಸಿದ್ದರೆ, ಮಿಡ್ ಕ್ಯಾಪ್ ಶೇ 4ರಷ್ಟು ಚೇತರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಸೂಚ್ಯಂಕಗಳೂ ಉತ್ತಮ ಸಾಧನೆ ತೋರಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನವೆಂಬರ್ ತಿಂಗಳಿನಲ್ಲಿ ₹ 60 ಸಾವಿರ ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಅದಾನಿ ಪೋರ್ಟ್ಸ್ ಶೇ 9.6ರಷ್ಟು, ಒಎನ್‌ಜಿಸಿ ಶೇ 9.6ರಷ್ಟು, ಟಾಟಾ ಸ್ಟೀಲ್ ಶೇ 7.9ರಷ್ಟು, ಟಾಟಾ ಮೋಟರ್ಸ್ ಶೇ 6.6ರಷ್ಟು, ಇಂಡಸ್ ಇಂಡ್ ಬ್ಯಾಂಕ್
ಶೇ 5.7ರಷ್ಟು ಗಳಿಸಿವೆ.

ಏರ್‌ಟೆಲ್ ಶೇ 3.9ರಷ್ಟು, ಎಚ್‌ಡಿಎಫ್‌ಸಿ ಶೇ 3.4ರಷ್ಟು, ಬಿಪಿಸಿಎಲ್ ಶೇ 2.8ರಷ್ಟು ಮತ್ತು ಎಚ್‌ಡಿಎಫ್‌ಸಿ ಲೈಫ್ ಶೇ 2.6ರಷ್ಟು ಕುಸಿದಿವೆ.

ದಾಖಲೆ ಏರಿಕೆ, ಇರಲಿ ಎಚ್ಚರಿಕೆ: ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಾಗ ಅಲೋಚನೆ, ಲೆಕ್ಕಾಚಾರ ಮತ್ತು ಅರಿತು ಹೂಡಿಕೆ ಮಾಡುವ ಪ್ರವೃತ್ತಿ ಕಡಿಮೆಯಾಗುತ್ತದೆ. ಗಾಳಿ ಸುದ್ದಿಗಳಿಗೆ ಕಿವಿಗೊಟ್ಟು ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಾರೆ. ಈ ರೀತಿಯ ನಷ್ಟ ತಪ್ಪಿಸಬೇಕಾದರೆ ಕೆಳಗಿನ ಅಂಶಗಳು ಗಮನದಲ್ಲಿರಲಿ.

1. ಮಾರುಕಟ್ಟೆಯಲ್ಲಿ ಗೂಳಿ ಓಟವಿದೆ ಎಂದು ಲಾಭದ ಆಸೆಗೆ ಬಿದ್ದು ದೊಡ್ಡ ಮೊತ್ತದ ಹೂಡಿಕೆ ಮಾಡಲು ಮುಂದಾಗಬೇಡಿ. ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಿದ್ದರೆ ಹಂತ ಹಂತವಾಗಿ ಹೂಡಿಕೆ ಮಾಡುವ ಜತೆಗೆ, ವೈವಿಧ್ಯತೆ ಕಾಯ್ದುಕೊಳ್ಳಿ. ಉತ್ತಮ ಕಂಪನಿಗಳಲ್ಲಿ ಮಾತ್ರ ಹಣ ತೊಡಗಿಸಿ.

2. ಲಾಭದ ಆಸೆಗೆ ಬಿದ್ದು ಒಳ್ಳೆಯ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಿ ಕಡಿಮೆ ಬೆಲೆಗೆ ಸಿಗುವ, ಭವಿಷ್ಯದ ಮುನ್ನೋಟ ಇಲ್ಲದಿರುವ ಕಂಪನಿಗಳ ಷೇರುಗಳನ್ನು ಖರೀದಿಸಬೇಡಿ.

3. ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಅಗತ್ಯಕ್ಕಿಂತ ಹೆಚ್ಚು ರಿಸ್ಕ್ ತೆಗೆದುಕೊಂಡು ಹೈರಿಸ್ಕ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಡಿ. ‘ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಳ್ಳಬೇಡಿ’ ಎಂಬ ಗಾದೆ ಮಾತನ್ನು ನೆನಪಿಟ್ಟುಕೊಳ್ಳಿ.

ಮುನ್ನೋಟ: ಡಿಸೆಂಬರ್ 2ರಂದು ಬರ್ಗರ್ ಕಿಂಗ್ ಇಂಡಿಯಾ ಲಿ.,ನ ಐಪಿಒ ಹೂಡಿಕೆಗೆ ತೆರೆದುಕೊಳ್ಳಲಿದೆ. ನವೆಂಬರ್ ತಿಂಗಳ ವಾಹನ ಮಾರಾಟ ದತ್ತಾಂಶ ಈ ವಾರ ಹೊರಬೀಳಲಿದೆ. ಜೀ ಲರ್ನ್ ಲಿ., ಕೆಬಿಎಸ್ ಇಂಡಿಯಾ ಲಿ., ಇಂಡಿಯಾ ನಿವೇಶ್ ಲಿ., ಈಸ್ಟ್ ವೆಸ್ಟ್ ಹೋಲ್ಡಿಂಗ್ಸ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT