ಶುಕ್ರವಾರ, ಜೂನ್ 5, 2020
27 °C

ಐಟಿಆರ್: ಹೊಸ ಬದಲಾವಣೆಗಳೇನು?

ನರಸಿಂಹ ಬಿ Updated:

ಅಕ್ಷರ ಗಾತ್ರ : | |

Prajavani

2018-19ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಸಲು ಜುಲೈ 31, 2019 ಕೊನೆಯ ದಿನ.  ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಲು ಅಣಿಯಾಗುವುದಕ್ಕಿಂತ ಈಗಲೇ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಹೆಚ್ಚುವರಿ ತೆರಿಗೆ ಕಡಿತಗೊಂಡಿದ್ದ ಪಕ್ಷದಲ್ಲಿ ಆ ಹಣವನ್ನು ಬೇಗ ವಾಪಸ್ ಪಡೆಯಲು ಸುಲಭವಾಗುತ್ತದೆ.

ನಿಮ್ಮ ಆದಾಯ ತೆರಿಗೆ ಲೆಕ್ಕಪತ್ರ ವಿವರದ ಅರ್ಜಿ ನಮೂನೆಗಳು ಈ ಬಾರಿ ಕೆಲ ಬದಲಾವಣೆಗಳನ್ನು ಒಳಗೊಂಡಿವೆ. ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ‘ಫಾರಂ 16’ ನಲ್ಲಿ ಕೆಲ ಮಾರ್ಪಾಡುಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳ ಕುರಿತು ಇಲ್ಲಿ ವಿವರಿಸಲಾಗಿದೆ.

‘ಫಾರಂ 16’ ನಲ್ಲಿ ತೆರಿಗೆಗೆ ಒಳಪಡುವ ಭತ್ಯೆಗಳ ವಿವರ ಸಲ್ಲಿಕೆಯಲ್ಲಿನ ಮಾರ್ಪಾಡುಗಳು ಹೀಗಿವೆ. ವೇತನದಾರರು ಈ ಬಾರಿ ಕೆಲ ಹೆಚ್ಚುವರಿ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ವಿನಾಯ್ತಿ ಪಡೆಯಲಾಗಿರುವ ಭತ್ಯೆಗಳ ವಿವರಗಳನ್ನು ‘ಫಾರಂ 16’ ನಲ್ಲಿ ನಮೂದಿಸಬೇಕಾಗುತ್ತದೆ. ಸಾಮಾನ್ಯವಾಗಿ ತೆರಿಗೆ ಪಾವತಿಸುವ ವೇತನದಾರರು ಬಾಡಿಗೆ ಭತ್ಯೆ (ಎಚ್‌ಆರ್‌ಎ), ಪ್ರಯಾಣ ಭತ್ಯೆ (ಎಲ್ ಟಿಎ), ಗ್ರಾಚ್ಯುಟಿ ಅಥವಾ ರಜೆ ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ.

ಈ ಭತ್ಯೆಗಳ ಮೇಲೆ ತೆರಿಗೆದಾರರಿಗೆ ಭಾಗಶಃ ಅಥವಾ ಪೂರ್ಣ ವಿನಾಯ್ತಿ ಲಭಿಸುತ್ತದೆ. ಈ ಪ್ರತಿಯೊಂದು ಭತ್ಯೆಯ ವಿವರಗಳನ್ನು ಪ್ರತ್ಯೇಕವಾಗಿ ಫಾರಂನಲ್ಲಿ ದಾಖಲಿಸಬೇಕಾಗುತ್ತದೆ. ಅಂದರೆ ನೀವು ಬಾಡಿಗೆ ಭತ್ಯೆ (ಎಚ್‌ಆರ್‌ಎ), ಪ್ರಯಾಣ ಭತ್ಯೆ (ಎಲ್‌ಟಿಎ) ಮತ್ತು ಗ್ರಾಚ್ಯುಟಿ ವಿನಾಯಿತಿಯನ್ನು ತೆರಿಗೆ ಲೆಕ್ಕಪತ್ರ ವಿವರದಲ್ಲಿ ತೋರಿಸಬೇಕಾಗುತ್ತದೆ. ಇದೇ ರೀತಿ ತೆರಿಗೆಗೆ ಒಳಪಡದ ಭತ್ಯೆಗಳ ವಿವರಗಳನ್ನು ‘ಫಾರಂ 16’ ನಲ್ಲಿ ನೀಡಬೇಕಾಗುತ್ತದೆ.

ಉದ್ಯೋಗಿಗಳಿಗೆ ‘ಫಾರಂ 16’ ನೀಡುವಾಗ ಕಂಪನಿಗಳು ತೆರಿಗೆಗೆ ಒಳಪಡದ ಭತ್ಯೆಯ ಮೌಲ್ಯವನ್ನು ಒಂದೊಂದಾಗಿ ವಿವರಿಸಿ ದಾಖಲಿಸಬೇಕಾಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 80 ರ ವಿನಾಯಿತಿಗಳನ್ನು ಪ್ರತ್ಯೇಕವಾಗಿ ತೋರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ‘ಫಾರಂ 16’ ಆದಾಯ ತೆರಿಗೆ ಲೆಕ್ಕಪತ್ರ ವಿವರಕ್ಕೆ ತಾಳೆಯಾಗುತ್ತದೆ.

ಬದಲಾವಣೆಗೆ ಕಾರಣವೇನು?: ವೇತನದಾರರ ವಿನಾಯ್ತಿ ಪಡೆದಿರುವ ಭತ್ಯೆಗಳಿಗೂ ಮತ್ತು ಕಂಪನಿ ಮೂಲದಲ್ಲೇ ತೆರಿಗೆ ಕಡಿತಕ್ಕೂ ( ಟಿಡಿಎಸ್ ) ಸರಿಯಾದ ತಾಳೆಯಾಗುತ್ತಿರಲಿಲ್ಲ. ಹೀಗಾಗಿ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಕಂಪನಿ ತನ್ನ ಉದ್ಯೋಗಿಗಳಿಗೆ ನೀಡಿರುವ ವೇತನ ಮತ್ತು ಮೂಲದಲ್ಲೇ ಕಡಿತ ಮಾಡಿರುವ ತೆರಿಗೆ ವಿವರವನ್ನು ಫಾರಂ 16 ನೀಡುತ್ತದೆ. ಕಂಪನಿ ಕೂಡ ಉದ್ಯೋಗಿಯ ವೇತನದ ಆಧಾರದಲ್ಲಿ ಕಡಿತ ಮಾಡಿರುವ ತೆರಿಗೆಯ ಸಂಪೂರ್ಣ ವಿವರವನ್ನು ನೀಡಬೇಕಾಗುತ್ತದೆ. ಈ ಟಿಡಿಎಸ್ ವಿವರವನ್ನು ‘ಫಾರಂ 24ಕ್ಯೂ’ ಎಂದು ಕರೆಯಲಾಗುತ್ತದೆ.

ಮೇಲೆ ವಿವರಿಸಲಾಗಿರುವ ಎಲ್ಲ ಬದಲಾವಣೆಗಳನ್ನು ‘ಫಾರಂ 24ಕ್ಯೂ’ ನಲ್ಲಿಯೂ ಅನುಕರಿಸಲಾಗಿದೆ. ಹೊಸ ಪದ್ಧತಿಯಿಂದ ಫಾರಂ 16, ಆದಾಯ ತೆರಿಗೆ ಲೆಕ್ಕಪತ್ರ ವಿವರ ಮತ್ತು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಒಂದಕ್ಕೊಂದು ತಾಳೆಯಾಗಲಿವೆ.

ಏಪ್ರಿಲ್ ಪೂರ್ತಿ ಅಸ್ಥಿರತೆ ಕಂಡ ಪೇಟೆ

ಷೇರುಪೇಟೆ ಸೂಚ್ಯಂಕಗಳು ಏಪ್ರಿಲ್ ತಿಂಗಳಲ್ಲಿ ಭಾರಿ ಏರಿಳಿತ ಕಂಡಿವೆ. ಲೋಕಸಭಾ ಚುನಾವಣೆ ಮತ್ತು ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಷೇರು ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ.

ಪ್ರಮುಖ ಕಂಪನಿಗಳ ಮೇಲೆ ಅವಲಂಬನೆ: ಒಂದು ತಿಂಗಳ ಅವಧಿಯಲ್ಲಿ ನಿಫ್ಟಿ (50) ಸೂಚ್ಯಂಕವು 11,550 ರಿಂದ 11,856 ಅಂಶಗಳ ನಡುವೆ ವಹಿವಾಟು ನಡೆಸಿದರೆ, ಸೆನ್ಸೆಕ್ಸ್ 38,585 ರಿಂದ 39,489 ರ ನಡುವೆ ಏರಿಳಿತ ದಾಖಲಿಸಿತು.

ಏಪ್ರಿಲ್ 23 ರಿಂದ ಸೆನ್ಸೆಕ್ಸ್ ಕೇವಲ ಶೇ 0.8 ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ 1.12 ರಷ್ಟು ಮುನ್ನಡೆದಿದೆ. ಪ್ರಮುಖ ಕಂಪನಿಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿ., ಕೋಟಕ್ ಮಹೀಂದ್ರಾ ಬ್ಯಾಂಕ್ ನ ಷೇರುಗಳು ನಿಫ್ಟಿ (50) ಸೂಚ್ಯಂಕದ ಏರಿಕೆಗೆ 168 ಅಂಶಗಳ ಕೊಡುಗೆ ನೀಡಿವೆ. ಇನ್ನುಳಿದ 46 ಕಂಪನಿಗಳ ಷೇರುಗಳು ನಿಫ್ಟಿ ಸೂಚ್ಯಂಕವನ್ನು 18 ಅಂಶಗಳಷ್ಟು ಕೆಳಗೆ ತಳ್ಳಿವೆ.

ಉತ್ತಮ ಫಲಿತಾಂಶ ನೀಡದ ಮಿಡ್ ಕ್ಯಾಪ್ ಷೇರುಗಳು: ನಿಫ್ಟಿಯ ಇನ್ನಿತರ ಸೂಚ್ಯಂಕಗಳಾದ ನಿಫ್ಟಿ ಮಿಡ್ ಕ್ಯಾಪ್ ಶೇ 1.5 ರಷ್ಟು ಕುಸಿದಿದ್ದರೆ, ನಿಫ್ಟಿ ಜ್ಯೂನಿಯರ್ ಶೇ 1 ರಷ್ಟು ಇಳಿಕೆ ಕಂಡಿದೆ.

ಜನವರಿಯಿಂದ ನಿಫ್ಟಿ ( 50) ಸೂಚ್ಯಂಕ ಮಾತ್ರ ಶೇ 8 ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಮಿಡ್ ಕ್ಯಾಪ್ ಮತ್ತು ನಿಫ್ಟಿ ಜ್ಯೂನಿಯರ್ ಕ್ರಮವಾಗಿ ಶೇ 2.3 ಮತ್ತು ಶೇ 1.8 ರಷ್ಟು ಇಳಿಕೆ ದಾಖಲಿಸಿವೆ. ಇದು ಮಿಡ್ ಕ್ಯಾಪ್ ಷೇರುಗಳು ಉತ್ತಮ ಫಲಿತಾಂಶ ನೀಡಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದೆ.

ವಾರದ ಫಲಿತಾಂಶದಲ್ಲೂ ಅನಿಶ್ಚಿತತೆ: ಕಳೆದ ವಾರದ ಮಾರುಕಟ್ಟೆ ವಹಿವಾಟಿನಲ್ಲೂ ಅನಿಶ್ಚಿತತೆ ಕಂಡುಬಂದಿತು. ಯೆಸ್ ಬ್ಯಾಂಕ್ ತನ್ನ ತ್ರೈಮಾಸಿಕ ವರದಿಯಲ್ಲಿ ಅನಿರೀಕ್ಷಿತ ನಷ್ಟ ತೋರಿಸಿದ್ದರಿಂದ ಕಂಪನಿಯ ಷೇರುಗಳು ಶೇ 26 ರಷ್ಟು ಕುಸಿದವು. ಇದರಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ (50) ಸೂಚ್ಯಂಕಗಳು ಕ್ರಮವಾಗಿ 38,963 ಮತ್ತು 11,712 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದವು.

ಮುನ್ನೋಟ: ಮಾರ್ಚ್ ತಿಂಗಳ ಕೈಗಾರಿಕಾ ಉತ್ಪಾದನೆಯ ಅಂಕಿ- ಅಂಶಗಳು ಹೊರಬೀಳಲಿವೆ. ಎಸ್‌ಬಿಐ, ಎಲ್‌ಆ್ಯಂಡ್‌ಟಿ, ಐಷರ್ ಮೋಟರ್ಸ್, ಏಷಿಯನ್ ಪೇಂಟ್ಸ್, ಕಂಪನಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ.

ಈ ವಾರವೂ ಪ್ರಮುಖ ಕಂಪನಿಗಳ ತ್ರೈಮಾಸಿಕ ವರದಿಗಳು ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ. ಚುನಾವಣೆ ಪ್ರಕ್ರಿಯೆ ಮುಗಿದು ಫಲಿತಾಂಶ ಹೊರಬೀಳುವವರೆಗೂ ಮಾರುಕಟ್ಟೆಯಲ್ಲಿ ಹಿಂಜರಿಕೆ ಇರಲಿದೆ. ಹೂಡಿಕೆದಾರರು ಅಳೆದು ತೂಗಿ ವಹಿವಾಟು ನಡೆಸುವ ಪರಿಸ್ಥಿತಿ ಸದ್ಯಕ್ಕೆ ಮುಂದುವರಿಯಲಿದೆ. 

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಉಪಾಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು