ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ, ಹಣಕಾಸು ಷೇರುಗಳ ಗಳಿಕೆ: ಮುಂದುವರಿದ ಸಕಾರಾತ್ಮಕ ವಹಿವಾಟು

Last Updated 23 ಡಿಸೆಂಬರ್ 2021, 13:48 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿನ ಗಳಿಕೆ ಮತ್ತು ದೇಶಿ ಷೇರುಪೇಟೆಗಳಲ್ಲಿ ಐ.ಟಿ, ಹಣಕಾಸು ಹಾಗೂ ವಿದ್ಯುತ್ ವಲಯದ ಷೇರುಗಳ ಖರೀದಿ ಭರಾಟೆಯಿಂದಾಗಿ ಗುರುವಾರದ ವಹಿವಾಟಿನಲ್ಲಿ ದೇಶಿ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡವು.

ರೂಪಾಯಿ ಮೌಲ್ಯ ವೃದ್ಧಿಯಾಗಿರುವುದು ಸಹ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 385 ಅಂಶ ಏರಿಕೆ ಕಂಡಿದ್ದು 57,315 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 117 ಅಂಶಗಳಷ್ಟು ಏರಿಕೆ ಕಂಡು 17,072 ಅಂಶಗಳಿಗೆ ತಲುಪಿತು.

ಸೆನ್ಸೆಕ್ಸ್‌ನಲ್ಲಿ ಪವರ್ ಗ್ರಿಡ್‌ ಕಂಪನಿ ಷೇರು ಮೌಲ್ಯವು ಶೇಕಡ 3.40ರಷ್ಟು ಏರಿಕೆ ಆಗಿದೆ.

ರಿಯಲ್‌ ಎಸ್ಟೇಟ್‌, ಹಣಕಾಸು ಮತ್ತು ಐ.ಟಿ. ವಲಯದ ಷೇರುಗಳ ಗಳಿಕೆಯ ಜೊತೆಗೆ ಜಾಗತಿಕ ಮಾರುಕಟ್ಟೆಗಳ ಏರುಮುಖ ಚಲನೆಯನ್ನು ಅನುಸರಿಸಿ ದೇಶಿ ವರ್ತಕರು ವಹಿವಾಟು ನಡೆಸಿದ್ದಾರೆ ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ಅಮೆರಿಕದ ಜಿಡಿಪಿಯು ಮೂರನೇ ತ್ರೈಮಾಸಿಕದಲ್ಲಿ ಶೇ 2.3ರಷ್ಟು ವೃದ್ಧಿಯಾಗಿದೆ. ಇದು ನಿರೀಕ್ಷೆಗಿಂತಲೂ ಹೆಚ್ಚಿನ ಮಟ್ಟದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಎಸ್‌ಇನಲ್ಲಿ ರಿಯಲ್‌ ಎಸ್ಟೇಟ್‌, ತೈಲ ಮತ್ತು ಅನಿಲ, ವಿದ್ಯುತ್‌, ಐ.ಟಿ. ಮತ್ತು ಎಫ್‌ಎಂಸಿಜಿ ಸೂಚ್ಯಂಕಗಳು ಶೇ 2.21ರಷ್ಟು ಏರಿಕೆ ಕಂಡಿವೆ. ದೂರಸಂಪರ್ಕ ಮತ್ತು ಲೋಹ ವಲಯಗಳ ಸೂಚ್ಯಂಕಗಳು ಇಳಿಕೆ ಕಂಡಿವೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.01ರವರೆಗೆ ಏರಿಕೆ ಕಂಡಿವೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಸತತ ಆರನೇ ದಿನವೂ ಏರಿಕೆ ಕಂಡಿತು. ಗುರುವಾರ 28 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 75.26ರಂತೆ ವಿನಿಮಯಗೊಂಡಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.20ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 75.14 ಡಾಲರ್‌ಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT