ಭಾನುವಾರ, ಆಗಸ್ಟ್ 14, 2022
20 °C

ಹಣಕಾಸು ಸಾಕ್ಷರತೆ: ಏನಿದು ಸಾವರಿನ್‌ ಗೋಲ್ಡ್‌ ಬಾಂಡ್‌?

ರಾಜೇಶ್ ಕುಮಾರ್ ಟಿ. ಆರ್. Updated:

ಅಕ್ಷರ ಗಾತ್ರ : | |

ಭಾರತೀಯರಿಗೆ ಚಿನ್ನ ಅಂದ್ರೆ ಪ್ರಂಚಪ್ರಾಣ. ಹಬ್ಬದ ಸೀಸನ್ ಶುರುವಾದರಂತೂ ಮುಗೀತು, ತಮ್ಮ ಶಕ್ತಿಗನುಗುಣವಾಗಿ ಎಲ್ಲರೂ ‘ಚಿನ್ನದ ಬೇಟೆ’ಗೆ ನಿಲ್ಲುತ್ತಾರೆ. ಇಂತಹ ಸಂದರ್ಭದಲ್ಲಿ ಆಭರಣ ಚಿನ್ನ ಖರೀದಿಯೋ, ಇಲ್ಲ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆಯೋ ಎನ್ನುವ ಪ್ರಶ್ನೆ ಹೂಡಿಕೆದಾರರಿಗೆ ಎದುರಾಗುತ್ತದೆ.
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲೇ ಗೊಂದಲಕ್ಕೆ ಬಿದ್ದು ಬಹುತೇಕ ಹೂಡಿಕೆದಾರರು ಆಭರಣ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಬನ್ನಿ, ಈ ಸಂಚಿಕೆಯಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಬಗ್ಗೆ ಪೂರ್ಣ ಮಾಹಿತಿ ತಿಳಿಯೋಣ.

ಏನಿದು ಸಾವರಿನ್ ಗೋಲ್ಡ್ ಬಾಂಡ್: ಚಿನ್ನದ ಮೌಲ್ಯಕ್ಕೆ ಪ್ರತಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡುವ ಬಾಂಡ್‌ಗಳನ್ನು ಸಾವರಿನ್ ಗೋಲ್ಡ್ ಬಾಂಡ್ ಎಂದು ಕರೆಯಬಹುದು. ಈ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ಆರ್‌ಬಿಐ ವಿತರಿಸುತ್ತದೆ. ಘನರೂಪದ ಚಿನ್ನಕ್ಕೆ ಪ್ರತಿಯಾಗಿ ಬಾಂಡ್ ಗಳನ್ನು ವಿತರಿಸಲಾಗುತ್ತದೆ. ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ.

ಯಾರು ಹೂಡಿಕೆ ಮಾಡಬಹುದು, ಮಿತಿ ಎಷ್ಟು: ಭಾರತದ ಪ್ರಜೆಗಳು, ಹಿಂದೂ ಅವಿಭಕ್ತ ಕುಟುಂಬಗಳು, ಟ್ರಸ್ಟ್‌ಗಳು, ಚಾರಿಟೆಬಲ್ ಸಂಸ್ಥೆಗಳು ಹೂಡಿಕೆ ಮಾಡಬಹುದು. ವ್ಯಕ್ತಿಗಳು ಮತ್ತು ಅವಿಭಕ್ತಿ ಕುಟುಂಬಗಳು ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ 4 ಕೆ.ಜಿ. ವರೆಗೆ ಹೂಡಿಕೆ ಮಾಡಬಹುದು. ಟ್ರಸ್ಟಿಗಳಿಗೆ 20 ಕೆ.ಜಿ. ವರೆಗೆ ಹೂಡಿಕೆಗೆ ಅವಕಾಶವಿದೆ.

ಮೆಚ್ಯೂರಿಟಿ ಮತ್ತು ತೆರಿಗೆ: ಬಾಂಡ್ 8 ವರ್ಷಗಳ ನಂತರ ಮೆಚ್ಯೂರಿಟಿಗೆ ಒಳಪಡುತ್ತದೆ. ಐದೂವರೆ ವರ್ಷಗಳ ನಂತರ ಮೆಚ್ಯೂರಿಟಿ ಅವಧಿಗೆ ಮುನ್ನ ಬಾಂಡ್ ನಗದೀಕರಣಕ್ಕೆ ಅವಕಾಶವಿದೆ.

ಆಭರಣ ಚಿನ್ನ-ಗೋಲ್ಡ್ ಬಾಂಡ್ ಹೂಡಿಕೆ; ಯಾವುದು ಉತ್ತಮ?

ಗೋಲ್ಡ್ ಬಾಂಡ್‌ನಲ್ಲಿ ಡಬಲ್ ಲಾಭ: ಆಭರಣ ಚಿನ್ನದ ಮೇಲೆ ಹೂಡಿಕೆ ಮಾಡಿದಾಗ ಚಿನ್ನದ ಬೆಲೆ ಹೆಚ್ಚಳವಾದಾಗ ಮಾತ್ರ ಗಳಿಕೆ ಸಾಧ್ಯವಾಗುತ್ತದೆ. ಆದರೆ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಿದಾಗ ಚಿನ್ನದ ಬೆಲೆ ಹೆಚ್ಚಳವಾದಾಗ ಅದರ ಲಾಭ ಸಿಗುವ ಜೊತೆಗೆ ವಾರ್ಷಿಕ ಶೇ 2.5 ರಷ್ಟು ಬಡ್ಡಿ ಲಾಭಾಂಶವೂ ಲಭಿಸುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಯಾಗುತ್ತದೆ.

ಮೇಕಿಂಗ್ ಚಾರ್ಜಸ್‌ನ ಹೊರೆ ಇಲ್ಲ: ಆಭರಣ ಚಿನ್ನ ಖರೀದಿಸಿದಾಗ ಶೇ 10 ರಿಂದ ಶೇ 30 ರ ವರೆಗೆ ಮೇಕಿಂಗ್ ಚಾರ್ಜಸ್ ನೀಡಬೇಕಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಿದರೆ ಈ ಹೊರೆ ಇರುವುದಿಲ್ಲ.

ಗೋಲ್ಡ್ ಬಾಂಡ್‌ಗೆ ಶೇ 100 ರಷ್ಟು ಖಾತ್ರಿ: ಆಭರಣ ಚಿನ್ನ ಖರೀದಿಸುವಾಗ ಅದರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ನೀವೇ ತಲೆಕೆಡಿಸಿಕೊಳ್ಳಬೇಕು. ಸಾವರಿನ್ ಗೋಲ್ಡ್ ಬಾಂಡ್‌ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿವುದರಿಂದ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಶೇ 100 ರಷ್ಟು ಖಾತ್ರಿ ಇರುತ್ತದೆ.
ಜಿಎಸ್‌ಟಿ ಹೊರೆ ಇಲ್ಲ: ಆಭರಣ ಚಿನ್ನ ಖರೀದಿಸಿದಾಗ ಜಿಎಸ್‌ಟಿ ಕಟ್ಟುವ ಜೊತೆಗೆ, ಬಂಗಾರ ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ವೆಚ್ಚ ಭರಿಸಬೇಕಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಿದರೆ ಜಿಎಸ್‌ಟಿಯೂ ಇಲ್ಲ, ಲಾಕರ್ ಶುಲ್ಕದ ಗೊಡವೆಯೂ ಇಲ್ಲ.

ಕನಿಷ್ಠ 1 ಗ್ರಾಂ ಹೂಡಿಕೆಯೂ ಸಾಧ್ಯ: ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಕನಿಷ್ಠ 1 ಗ್ರಾಂ ನಿಂದಲೂ ಹೂಡಿಕೆಗೆ ಅವಕಾಶವಿದೆ. ಆಭರಣದ ಉದ್ದೇಶಕ್ಕಾದರೆ ಒಂದೆರಡು ಗ್ರಾಂ ಚಿನ್ನ ಖರೀದಿಯಿಂದ ಲಾಭವಿಲ್ಲ.

ಅನಿಶ್ಚಿತತೆ ನಡುವೆಯೂ ಸೂಚ್ಯಂಕಗಳ ಗಳಿಕೆ

ಸತತ ಎರಡು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಅನಿಶ್ಚಿತತೆಯ ನಡುವೆಯೂ ಗಳಿಕೆಯ ಲಯಕ್ಕೆ ಮರಳಿವೆ. ಜೂನ್ 24 ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ.  ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 2.66 ರಷ್ಟು ಜಿಗಿದಿದೆ. ನಿಫ್ಟಿ(50) ಶೇ 2.65 ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಚೇತರಿಕೆ, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಹಣದುಬ್ಬರ ನಿಯಂತ್ರಣದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸಕಾರಾತ್ಮಕ ಹೇಳಿಕೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಸುಧಾರಣೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್‌ಇ ವಾಹನ ಸೂಚ್ಯಂಕ ಶೇ 7 ರಷ್ಟು ಜಿಗಿದಿದೆ. ಎಫ್‌ಎಂಸಿಜಿ, ಟಿಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ವಲಯದ ಸೂಚ್ಯಂಕಗಳು ತಲಾ ಶೇ 3 ರಷ್ಟು ಗಳಿಕೆ ದಾಖಲಿಸಿವೆ. ಲೋಹ ಸೂಚ್ಯಂಕ ಶೇ 4.9 ರಷ್ಟು ಕುಸಿದಿದೆ. ಇನ್ನು ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.6 ರಷ್ಟು ಹೆಚ್ಚಳ ಕಂಡರೆ. ಮಿಡ್ ಕ್ಯಾಪ್ ಶೇ 2.3 ಮತ್ತು ಲಾರ್ಜ್ ಕ್ಯಾಪ್ ಶೇ 2.6 ರಷ್ಟು ಸುಧಾರಿಸಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹11,511.77 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 11,670.62 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಐಷರ್ ಮೋಟರ್ಸ್ ಶೇ 10, ಹಿಂದೂಸ್ಥಾನ್ ಯುನಿಲಿವರ್ ಶೇ 9, ಮಾರುತಿ ಸುಜುಕಿ ಶೇ 9, ಮಹೀಂದ್ರ ಅಂಡ್ ಮಹೀಂದ್ರ ಶೇ 7.5, ಏಷಿಯನ್ ಪೇಂಟ್ಸ್ ಶೇ 7 , ಟೈಟಾನ್ ಶೇ 6 ಮತ್ತು ಟಿಸಿಎಸ್ ಶೇ 6 ರಷ್ಟು ಹೆಚ್ಚಳ ಕಂಡಿವೆ. ಯುಪಿಎಲ್ ಶೇ 4, ರಿಲಯನ್ಸ್ ಶೇ 3.5 ಮತ್ತು ಹಿಂಡಾಲ್ಕೋ ಶ್ 3.5 ರಷ್ಟು ತಗ್ಗಿವೆ.

ಮುನ್ನೋಟ: ಜಾಗತಿಕವಾಗಿ ಎಲ್ಲ ದೇಶಗಳನ್ನು ಹಣದುಬ್ಬರ ಕಾಡುತ್ತಿರುವುದು ನಿಜ. ಆದರೆ ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಗಳು ಹಣದುಬ್ಬರಕ್ಕಿಂತ ಹೆಚ್ಚಾಗಿ ಆರ್ಥಿಕ ಪ್ರಗತಿ ಕುಂಠಿತವಾಗುವ ಬಗ್ಗೆ ಆಂತಂಕದಲ್ಲಿವೆ. ಕಳೆದ ವಾರ ಷೇರುಪೇಟೆ ಪ್ರಗತಿ ಸಾಧಿಸಿದ್ದರೂ ಅನಿಶ್ಚಿತ ವಾತಾವರಣ ಮುಂದುವರಿಯಲಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ. ಇದಲ್ಲದೆ ಜಾಗತಿಕ ವಿದ್ಯಮಾನಗಳು, ಜಿಎಸ್‌ಟಿ ಮಂಡಳಿಯ ಸಭೆ ಸೇರಿ ಇನ್ನಿತರ ಬೆಳವಣಿಗೆಗಳು ಷೇರುಪೇಟೆ ಮೇಲೆ ಪ್ರಭಾವ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು