ರೂಪಾಯಿ ಕುಸಿತ, ಜಾಗತಿಕ ವಾಣಿಜ್ಯ ಸಮರದ ಆತಂಕ; ಸೂಚ್ಯಂಕ 509 ಅಂಶ ಇಳಿಕೆ

7

ರೂಪಾಯಿ ಕುಸಿತ, ಜಾಗತಿಕ ವಾಣಿಜ್ಯ ಸಮರದ ಆತಂಕ; ಸೂಚ್ಯಂಕ 509 ಅಂಶ ಇಳಿಕೆ

Published:
Updated:

ಮುಂಬೈ: ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಂಘರ್ಷವು ದೇಶದ ಷೇರು‍ಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ.

ವಾರದ ವಹಿವಾಟಿನ ಎರಡನೇ ದಿನವೂ ಷೇರುಪೇಟೆಗಳ ಮೇಲೆ ಕರಡಿ ತನ್ನ ಪ್ರಭಾವ ಬೀರಿತು. ಇದರಿಂದ ಎಫ್‌ಎಂಸಿಜಿ, ಲೋಹ, ವಾಹನ ಮತ್ತು ಹಣಕಾಸು ವಲಯದ ಷೇರುಗಳು ಹೆಚ್ಚಿನ ಮಾರಾಟದ ಒತ್ತಡಕ್ಕೆ ಒಳಗಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 509 ಅಂಶ ಕುಸಿತ ಕಂಡು ಒಂದು ತಿಂಗಳ ಕನಿಷ್ಠ ಮಟ್ಟವಾದ 37,413 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸತತ ಎರಡನೇ ದಿನವೂ ಸೂಚ್ಯಂಕ ಶೇ 1ಕ್ಕಿಂತ ಹೆಚ್ಚಿನ ಪ್ರಮಾಣದ ಇಳಿಕೆ ಕಂಡಿತು. ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿರುವುದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 151 ಅಂಶ ಇಳಿಕೆಯಾಗಿ 11,479 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಕಚ್ಚಾ ತೈಲ ದರ ಏರಿಕೆ, ರೂಪಾಯಿ ಕುಸಿತ ಮತ್ತು ವ್ಯಾಪಾರ ಕೊರತೆ ಅಂತರದಲ್ಲಿನ ಹೆಚ್ಚಳದ ಜತೆಗೆ ಜಾಗತಿಕ ವಾಣಿಜ್ಯ ಸಮರವು ದೇಶಿ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಈ ತಿಂಗಳಿನಲ್ಲಿ ಬಡ್ಡಿದರ ಏರಿಕೆ ಮಾಡಲಿದ್ದು ಅದರಿಂದ ಡಾಲರ್‌ ಮೌಲ್ಯ ವೃದ್ಧಿಯಾಗಲಿದೆ. ಹೀಗಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳು ಮತ್ತು ಸಾಲಪತ್ರಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಲಿದ್ದಾರೆ. ಇದರಿಂದಾಗಿಯೂ ವಹಿವಾಟು ಇಳಿಕೆ ಕಾಣಲಿದೆ ಎಂದು ದಲ್ಲಾಳಿಗಳು ವಿಶ್ಲೇಷಣೆ ಮಾಡಲಿದ್ದಾರೆ.

ಏಷ್ಯಾದ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.30ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 78.52 ಡಾಲರ್‌ಗೆ ಏರಿಕೆಯಾಗಿದೆ. ಏಷ್ಯಾ, ಯುರೋಪ್‌ ವಲಯಗಳಲ್ಲಿಯೂ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿದೆ.

 ಎರಡು ದಿನದಲ್ಲಿ ₹ 4 ಲಕ್ಷ ಕೋಟಿ ನಷ್ಟ: ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 4.14 ಲಕ್ಷ ಕೋಟಿಯಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 153 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ದುರುಪಯೋಗ ಮಾಡಿಕೊಳ್ಳಲು ಬಿಡುವುದಿಲ್ಲ: ‘ಷೇರುಪೇಟೆ ವಹಿವಾಟು ಚಂಚಲವಾಗಿದೆ. ಸಂಚುಕೋರರಿಗೆ ಇದನ್ನು ದುರುಪಯೋಗ ಮಾಡಿಕೊಳ್ಳಲು ಬಿಡುವುದಿಲ್ಲ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ಅಜಯ್‌ ತ್ಯಾಗಿ ಹೇಳಿದ್ದಾರೆ.

ಜಾಗತಿಕ ಮತ್ತು ದೇಶಿ ವಿದ್ಯಮಾನಗಳು ಹೂಡಿಕೆ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಇದರಿಂದಾಗಿ ವಹಿವಾಟು ಇಳಿಕೆ ಕಾಣುತ್ತಿದೆ. 

‘ದೇಶಿ ಮತ್ತು ಜಾಗತಿಕ ಷೇರುಪೇಟೆಗಳ ವಹಿವಾಟು ಚಂಚಲವಾಗಿವೆ. ಆರ್ಥಿಕ ವಿಪತ್ತು ನಿರ್ವಹಣೆ ವ್ಯವಸ್ಥೆ ಕಾರ್ಯೋನ್ಮುಖವಾಗಿದೆ. ಸಂಚುಕೋರರಿಗೆ ಯಾವುದೇ ರೀತಿಯಲ್ಲಿಯೂ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !