ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಕುಸಿತಕ್ಕೆ ತಡೆ

1,627 ಅಂಶ ಚೇತರಿಕೆ ಕಂಡ ಸೂಚ್ಯಂಕ
Last Updated 20 ಮಾರ್ಚ್ 2020, 19:22 IST
ಅಕ್ಷರ ಗಾತ್ರ

ಮುಂಬೈ: ಈ ವಾರದ ನಾಲ್ಕು ವಹಿವಾಟು ದಿನಗಳಲ್ಲಿ ನಿರಂತರ ಕುಸಿತ ದಾಖಲಿಸಿದ್ದ ಷೇರುಪೇಟೆಯಲ್ಲಿ ಶುಕ್ರವಾರ ಖರೀದಿ ಉತ್ಸಾಹ ಮರಳಿತು.

‘ಕೊರೊನಾ–2’ ವೈರಸ್‌ನ ಹಾವಳಿ ಮಟ್ಟ ಹಾಕಲು ವಿಶ್ವದಾದ್ಯಂತ ಸರ್ಕಾರಗಳು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಚೇತರಿಕೆ ಕಂಡು ಬಂದಿದೆ. ಮುಂಬೈ ಷೇರುಪೇಟೆಯಲ್ಲಿಯೂ ಇದು ಪ್ರತಿಫಲನಗೊಂಡಿತು.

ದೇಶಿ ಆರ್ಥಿಕತೆಗೆ ಚೇತರಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಕಾರ್ಯಪಡೆ ರಚಿಸಿರುವುದು ಉತ್ತೇಜನಾ ಕೊಡುಗೆ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಿಸಿದೆ. ಕಾರ್ಯಪಡೆಯು ಶೀಘ್ರದಲ್ಲಿಯೇ ರಚನಾತ್ಮಕ ಪ್ರಸ್ತಾವಗಳನ್ನು ಪ್ರಕಟಿಸುವ ನಿರೀಕ್ಷೆ ಮೂಡಿಸಿದೆ. ಕಚ್ಚಾ ತೈಲ ಬೆಲೆ ಕುಸಿತದ ಪ್ರಯೋಜನವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ವಹಿವಾಟಿನ ಆರಂಭವೇ ಏರಿಳಿತದಿಂದ ಕೂಡಿತ್ತು. ಒಂದು ಹಂತದಲ್ಲಿ 2,485 ಅಂಶಗಳಿಗೆ ಏರಿಕೆ ಕಂಡಿದ್ದ ಸಂವೇದಿ ಸೂಚ್ಯಂಕವು, ದಿನದ ಅಂತ್ಯಕ್ಕೆ 1,627 ಅಂಶಗಳ ಹೆಚ್ಚಳದೊಂದಿಗೆ ವಹಿವಾಟು ಕೊನೆಗೊಳಿಸಿತು. ಇದು ದಿನವೊಂದರಲ್ಲಿನ ಗರಿಷ್ಠ ಏರಿಕೆಯಾಗಿದೆ. ಇದರಿಂದಾಗಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 6.32 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 482 ಅಂಶ ಚೇತರಿಕೆ ದಾಖಲಿಸಿ 8,745 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು.

ಈ ವಾರದಲ್ಲಿ ಸೂಚ್ಯಂಕ ಕಂಡ ನಷ್ಟವು 10 ವರ್ಷಗಳಲ್ಲಿನ ಗರಿಷ್ಠ ಮಟ್ಟವಾಗಿದೆ. ಒಎನ್‌ಜಿಸಿ ಷೇರು ಗರಿಷ್ಠ (ಶೇ 18) ಗಳಿಕೆ ಕಂಡಿತು. ಎಚ್‌ಯುಎಲ್‌, ಆರ್‌ಐಎಲ್‌, ಐಟಿಸಿ ಮತ್ತು ಏಷ್ಯನ್‌ ಪೇಂಟ್ಸ್‌ ಷೇರುಗಳು ಲಾಭ ಮಾಡಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT