ಗುರುವಾರ , ಮೇ 28, 2020
27 °C
ಕಚ್ಚಾ ತೈಲ ಬೆಲೆ ಏರಿಕೆ ಪ್ರಭಾವ

ಷೇರುಪೇಟೆ ಸೂಚ್ಯಂಕ 483 ಅಂಶ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಚೇತರಿಕೆ ಕಂಡಿರುವುದರಿಂದ ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ಗುರುವಾರ ಖರೀದಿ ಉತ್ಸಾಹ ಕಂಡು ಬಂದಿತು.

ಮುಂಬೈ ಷೇರುಪೇಟೆಯ ವಹಿವಾಟುದಾರರೂ ಇದೇ ಕಾರಣಕ್ಕೆ ಖರೀದಿಗೆ ಗಮನ ಹರಿಸಿದ್ದರು. ಹೀಗಾಗಿ ಸಂವೇದಿ ಸೂಚ್ಯಂಕವು 483 ಅಂಶಗಳ ಹೆಚ್ಚಳ ಕಂಡಿತು. ಕೇಂದ್ರ ಸರ್ಕಾರವು ಸದ್ಯದಲ್ಲೇ ಇನ್ನೊಂದು ಉತ್ತೇಜನಾ ಕೊಡುಗೆ ಪ್ರಕಟಿಸಲಿದೆ ಎನ್ನುವ ನಿರೀಕ್ಷೆಯೂ ಹೂಡಿಕೆದಾರರ ಉತ್ಸಾಹ ಹೆಚ್ಚಿಸಿತು.

ಭಾರತೀಯ ರಿಸರ್ವ್ ಬ್ಯಾಂಕ್‌, ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮೂಲಕ ಸರ್ಕಾರಿ ಸಾಲ ಪತ್ರಗಳನ್ನು ಹೆಚ್ಚುವರಿಯಾಗಿ ಖರೀದಿಸಲು ನಿರ್ಧರಿಸಿರುವುದು ಕೂಡ ಷೇರು ವಹಿವಾಟುದಾರರಲ್ಲಿ ಹುಮ್ಮಸ್ಸು ಮೂಡಿಸಿತು.

ಈ ಎಲ್ಲ ಕಾರಣಗಳಿಂದ ಸೂಚ್ಯಂಕವು ಶೇ 1.54ರಷ್ಟು ಏರಿಕೆ ಕಂಡು 31,863 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 126 ಅಂಶ ಏರಿಕೆ ದಾಖಲಿಸಿ 9,313 ಅಂಶಗಳಿಗೆ ತಲುಪಿತು.

ಐ.ಟಿ ಮತ್ತು ಬ್ಯಾಂಕಿಂಗ್‌ ಷೇರುಗಳು ಗರಿಷ್ಠ ಲಾಭ ಮಾಡಿಕೊಂಡವು. ಕೋಟಕ್‌ ಬ್ಯಾಂಕ್‌ ಶೇ 8ರಷ್ಟು ಗಳಿಕೆ ಕಂಡಿತು. ನಂತರದ ಸ್ಥಾನದಲ್ಲಿ ಟಿಸಿಎಸ್‌, ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌ ಮತ್ತು ಒಎನ್‌ಜಿಸಿಗಳಿದ್ದವು.

ರೂಪಾಯಿ ಬೆಲೆ 62 ಪೈಸೆ ಚೇತರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆಯು ಡಾಲರ್ ಎದುರು 62 ಪೈಸೆ ಹೆಚ್ಚಾಗಿ ₹ 76.06ಕ್ಕೆ ತಲುಪಿತು.

ತೈಲ ಬೆಲೆ ಚೇತರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ನ ಬೆಲೆ ಶೇ 6.97ರಷ್ಟು ಹೆಚ್ಚಳಗೊಂಡು ಪ್ರತಿ ಬ್ಯಾರಲ್‌ಗೆ 14.72 ಡಾಲರ್‌ಗೆ ಮತ್ತು ಬ್ರೆಂಟ್‌ ತೈಲದ ಬೆಲೆ ಶೇ 5.25ರಷ್ಟು ಏರಿಕೆಯಾಗಿ 21.44 ಡಾಲರ್‌ಗೆ ತಲುಪಿದೆ.

ಚೀನಾದ ಆಮದು ಹೆಚ್ಚಳ: ತೈಲ ಬಳಕೆಯಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವ ಚೀನಾ, ತನ್ನ ತೈಲ ಸಂಗ್ರಹ ಹೆಚ್ಚಿಸಲು ಖರೀದಿ ಪ್ರಮಾಣ ಹೆಚ್ಚಿಸಿದೆ. ಅಗ್ಗದ ಬೆಲೆಗೆ ಸಿಗುತ್ತಿರುವ ತೈಲದ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು, ಮಾರ್ಚ್‌ನಲ್ಲಿ ಶೇ 4.5ರಷ್ಟು ಹೆಚ್ಚು ಆಮದು ಮಾಡಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು