ಮುಂಬೈ: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೆಚರ್ ಬ್ಯಾಂಕ್ ದಿವಾಳಿ ಆಗಿರುವುದು ಹಾಗೂ ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರವನ್ನು ಮತ್ತೆ ಏರಿಸಬಹುದು ಎಂಬ ಆತಂಕದ ಪರಿಣಾಮವಾಗಿ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಕುಸಿತ ದಾಖಲಾಯಿತು. ಷೇರುಪೇಟೆ ಸೂಚ್ಯಂಕಗಳು ಸತತ ನಾಲ್ಕು ದಿನಗಳಿಂದ ಇಳಿಕೆ ಕಾಣುತ್ತಿವೆ.
ಮಂಗಳವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 337 ಅಂಶದಷ್ಟು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 111 ಅಂಶದಷ್ಟು ಇಳಿಕೆ ಕಂಡಿವೆ. ಐ.ಟಿ, ಆಟೊಮೊಬೈಲ್ ಮತ್ತು ಹಣಕಾಸು ವಲಯದ ಷೇರುಗಳು ಹೆಚ್ಚು ಕುಸಿತ ಕಂಡಿವೆ.
ವಿದೇಶಿ ಬಂಡವಾಳದ ಹೊರಹರಿವು, ಹೂಡಿಕೆದಾರರು ಹೆಚ್ಚು ರಿಸ್ಕ್ ಇರುವಲ್ಲಿ ಹಣ ತೊಡಗಿಸಲು ಹಿಂದೇಟು ಹಾಕುತ್ತಿರುವುದು ಹಾಗೂ ಬಡ್ಡಿ ದರ ಏರಿಕೆಯು ಜಾಗತಿಕ ಆರ್ಥಿಕ ಚೇತರಿಕೆಗೆ ಅಡ್ಡಿ ಆಗಬಹುದು ಎಂಬ ಆತಂಕವು ಸೂಚ್ಯಂಕಗಳ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಪ್ಯಾಸಿಫಿಕ್ ವಲಯದ ಹೆಚ್ಚಿನ ಹಣಕಾಸು ಸಂಸ್ಥೆಗಳು ಅಮೆರಿಕದಲ್ಲಿ ದಿವಾಳಿಯೆದ್ದಿರುವ ಬ್ಯಾಂಕ್‌ಗಳ ಜೊತೆ ಹೆಚ್ಚಿನ ವಹಿವಾಟು ಹೊಂದಿಲ್ಲ ಎಂದು ಮೂಡಿಸ್ ಸಂಸ್ಥೆ ಹೇಳಿದೆ. ಏಷ್ಯಾದಲ್ಲಿ ಶಾಂಘೈ, ಟೋಕಿಯೊ, ಹಾಂಗ್‌ಕಾಂಗ್ ಮತ್ತು ಸೋಲ್ ಷೇರುಪೇಟೆಗಳು ಕುಸಿತ ಕಂಡಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 79.51 ಡಾಲರ್‌ಗೆ ತಲುಪಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.