ಮಂಗಳವಾರ, ಸೆಪ್ಟೆಂಬರ್ 22, 2020
20 °C

ಷೇರುಪೇಟೆಗೆ ಜೀವಕಳೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ವಹಿವಾಟುದಾರರ ಆತಂಕ ದೂರ ಮಾಡಲು ಸರ್ಕಾರ  ಕಾರ್ಯಪ್ರವೃತ್ತವಾಗಲಿದೆ ಎನ್ನುವ ವರದಿಗಳು, ಷೇರು ಪೇಟೆಯ ಗುರುವಾರದ ವಹಿವಾಟಿನಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದವು.

ಬೆಳಗಿನ ವಹಿವಾಟಿನಲ್ಲಿ ಸಾಧಾರಣ ಆರಂಭ ಕಂಡಿದ್ದ ಷೇರುಪೇಟೆ ಸಂವೇದಿ ಸೂಚ್ಯಂಕವು, ಆನಂತರ ಬ್ಯಾಂಕಿಂಗ್‌, ಐ.ಟಿ, ಮತ್ತು ಇಂಧನ ವಲಯದ ಷೇರುಗಳ ನೇತೃತ್ವದಲ್ಲಿ ಗಮನಾರ್ಹ ಚೇತರಿಕೆ ದಾಖಲಿಸಿತು.

ದಿನದಂತ್ಯದಲ್ಲಿ 637 ಅಂಶಗಳಷ್ಟು ಏರಿಕೆ ಕಂಡು 37,327 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 177 ಅಂಶಗಳ ಹೆಚ್ಚಳ ಸಾಧಿಸಿ 11,032 ಅಂಶಗಳಿಗೆ ತಲುಪಿತು. ಈ ವರ್ಷದ ಮೇ 20ರ ನಂತರದ ದಿನದ ಗರಿಷ್ಠ ಏರಿಕೆ ಇದಾಗಿದೆ.

ಇಂಧನ, ಆಟೊಮೊಬೈಲ್‌, ತೈಲ – ಅನಿಲ, ಹಣಕಾಸು, ಎಫ್‌ಎಂಸಿಜಿ, ಲೋಹ ಒಳಗೊಂಡಂತೆ ಎಲ್ಲ ವಲಯಗಳ ಷೇರುಗಳ ಬೆಲೆ ಏರಿಕೆ ಕಂಡವು.

ಎಚ್‌ಸಿಎಲ್‌ ಟೆಕ್‌, ಟಾಟಾ ಮೋಟರ್ಸ್‌, ಬಜಾಜ್‌ ಆಟೊ, ಆರ್‌ಐಎಲ್‌, ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌ ಷೇರುಗಳು ಗರಿಷ್ಠ ಶೇ 6.43ರವರೆಗೆ ಲಾಭ ಬಾಚಿಕೊಂಡವು.

ಟಾಟಾ ಸ್ಟೀಲ್‌, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಮಾತ್ರ ಶೇ 3.77ರವರೆಗೆ ನಷ್ಟ ಕಂಡವು.

ವಿದೇಶಿ ಹೂಡಿಕೆದಾರರ (ಎಫ್‌ಪಿಇ) ಮೇಲೆ ಬಜೆಟ್‌ನಲ್ಲಿ ವಿಧಿಸಲಾಗಿದ್ದ ಗರಿಷ್ಠ ಮಟ್ಟದ ಸರ್ಚಾರ್ಜ್‌ ಅನ್ನು ಸರ್ಕಾರ ಹಿಂದಕ್ಕೆ ಪಡೆಯಲಿದೆ ಎನ್ನುವ ವರದಿಗಳು ಈ ಹಂತದಲ್ಲಿ ಪೇಟೆಗೆ ಅಗತ್ಯವಾಗಿದ್ದ ಖರೀದಿ ಉತ್ಸಾಹ ತುಂಬುವಲ್ಲಿ ಸಫಲವಾದವು. ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಬಗ್ಗೆಯೂ ಸರ್ಕಾರ ಮರುಚಿಂತನೆ ಮಾಡುವ ನಿರೀಕ್ಷೆ ಇದೆ.

ಜುಲೈನಲ್ಲಿ ಮಂಡನೆಯಾಗಿದ್ದ ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವಗಳ ಕಾರಣಕ್ಕೆ ಷೇರುಪೇಟೆಯಲ್ಲಿ ನಿರಂತರವಾಗಿ ಮಾರಾಟ ಕುಸಿತ ಕಂಡುಬಂದಿತ್ತು. ವಿದೇಶಿ ಹೂಡಿಕೆದಾರರು ಬಂಡವಾಳದ ಹೊರ ಹರಿವಿಗೆ ಆದ್ಯತೆ ನೀಡಿದ್ದರು. ಇದರಿಂದ ಬಂಡವಾಳ ಮಾರುಕಟ್ಟೆ ಮತ್ತು ರೂಪಾಯಿ ವಿನಿಮಯ ದರದ ಮೇಲೆ ಒತ್ತಡ ಹೆಚ್ಚಿತ್ತು.

ರೂಪಾಯಿ ಚೇತರಿಕೆ

ಡಾಲರ್‌ ಎದುರು  ಸತತ 5 ದಿನಗಳಿಂದ ಕುಸಿತ ಕಂಡಿದ್ದ ರೂಪಾಯಿ ವಿನಿಮಯ ದರವು 20 ಪೈಸೆಗಳಷ್ಟು ಏರಿಕೆ ಕಂಡು ₹ 70.60ಕ್ಕೆ ತಲುಪಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು