ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸಂಭ್ರಮದಲ್ಲಿ ವಿಜಯ ಮುದ್ರಣಾಲಯ

ಮುದ್ರಣ ಉದ್ಯಮ; ಮುದ್ದೇಬಿಹಾಳದ ನಾವದಗಿ ಸಹೋದರರ ಯಶೋಗಾಥೆ..!
Last Updated 24 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಮುದ್ದೇಬಿಹಾಳ:‘45 ವರ್ಷದ ಹಿಂದೆ ನಮ್ಮದೊಂದು ಪುಸ್ತಕದ ಅಂಗಡಿಯಿತ್ತು. ಪುಸ್ತಕಗಳ ಖರೀದಿಗೆಂದು ಬಾಗಲಕೋಟೆ, ಗದಗಕ್ಕೆ ಹೋದಾಗ ಅಲ್ಲಿನ ಎಲ್ಲ ಪುಸ್ತಕಗಳ ಅಂಗಡಿಗಳ ಮಾಲೀಕರು ತಮ್ಮದೇ ಒಂದೊಂದು ಮುದ್ರಣಾಲಯವನ್ನು ಆರಂಭಿಸಿದ್ದರು...’

‘ಇದೇ ರೀತಿ ನಾನೂ ಒಂದು ‘ವಿಜಯ ಮುದ್ರಣಾಲಯ’ ಆರಂಭಿಸಿದೆ. ಮಾಲೀಕನಾಗುವ ಜತೆಯಲ್ಲೇ ಕಾರ್ಮಿಕನೂ ಆದೆ. ಅಚ್ಚು ಮೊಳೆ ಜೋಡಿಸುತ್ತಲೇ ಎಲ್ಲವನ್ನೂ ಕಲಿಯಲಾರಂಭಿಸಿದೆ. ಇದೀಗ ಆಫ್‌ಸೆಟ್‌ ಮುದ್ರಣದ ತಂತ್ರಜ್ಞಾನ ಪರಿಚಿತಗೊಂಡ ಬಳಿಕ ಎಲ್ಲವೂ ಸುಲಲಿತವಾಗಿದೆ’ ಎಂದು ತಮ್ಮ ಮುದ್ರಣ ಉದ್ಯಮದ ಯಶಸ್ಸು, ನೆನಪಿನ ಬುತ್ತಿ ಬಿಚ್ಚಿಟ್ಟವರು ವಿಜಯ ಆಫ್ ಸೆಟ್ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಬಿ.ಆರ್.ನಾವದಗಿ (ಬಸಣ್ಣ ಕಾಕಾ).

‘ಮುದ್ರಣ ರಂಗದಲ್ಲಿ ಯಶಸ್ಸು ಕಂಡವರು ತುಂಬಾ ಕಡಿಮೆ. ಇದಕ್ಕೆ ನಿರಂತರ ಶ್ರಮ ಬೇಕು. ಎಷ್ಟೋ ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದೇನೆ. ಒಂದಿನಿತು ವ್ಯಾಕರಣ ತಪ್ಪಿಲ್ಲದಂತೆ ಮುದ್ರಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಯಾವುದೇ ತಪ್ಪಿಲ್ಲದಂತೆ, ಪ್ರೂಫ್ ರೀಡಿಂಗ್ ಮಾಡಿ ಮುದ್ರಾ ರಾಕ್ಷಸನ ಹಾವಳಿ ತಪ್ಪಿಸಿ ಒಳ್ಳೆಯ ಮುದ್ರಣದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ’ ಎಂದು ತಮ್ಮ ಉದ್ಯಮದ ಅನುಭವ ಬಿಚ್ಚಿಟ್ಟರು.

‘ಪುಸ್ತಕ ಪ್ರಕಟಣೆ ಎಂದ ತಕ್ಷಣ ನೆನಪಿಗೆ ಬರುವುದು ಗದಗ. ಅಲ್ಲಿ ಸಿಗುವ ಎಲ್ಲ ಸೇವೆಗಳು, ತಂತ್ರಜ್ಞಾನ, ಗುಣಮಟ್ಟದ ಕಾಗದ, ನೀಟಾದ ಕೆಲಸ ಎಲ್ಲವೂ ಒಂದೆಡೆ ಸಿಗುವುದರಿಂದ, ನೂರಾರು ಪುಸ್ತಕಗಳು ಮುದ್ರಣ ಕಂಡಿವೆ. ಇದು ಒಂದರ್ಥದಲ್ಲಿ ಕನ್ನಡದ ಸೇವೆ, ಸಾಹಿತ್ಯದ ಸೇವೆ’ ಎಂದು ಗದಗದ ಮುದ್ರಣ ಉದ್ಯಮದ ಸಾಹಸಗಾಥೆಯನ್ನು ನೆನಪು ಮಾಡಿಕೊಂಡರು ಬಸಣ್ಣ.

‘ನಮ್ಮ ತಾಲ್ಲೂಕಿನ ಬಹುತೇಕ ಸಾಹಿತಿಗಳು ತಮ್ಮ ಪುಸ್ತಕಗಳನ್ನು, ಸ್ಮರಣ ಸಂಚಿಕೆಗಳನ್ನು, ಹನಿಗವನ, ಕಥಾ ಸಂಕಲನಗಳನ್ನು ನಮ್ಮಲ್ಲಿಯೇ ಪ್ರಕಟ ಮಾಡಿದ್ದಾರೆ. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಒಂದು ದೊಡ್ಡ ಪ್ರಿಂಟಿಂಗ್ ಯಂತ್ರ, ಟೂ ಕಲರ್ ಮುದ್ರಣ ಯಂತ್ರ, ಸಿಂಗಲ್ ಕಲರ್ ಮುದ್ರಣ ಯಂತ್ರ ಹಾಗೂ ಕಲರ್ ಡಿಜಿಟಲ್ ಯಂತ್ರ ಇವೆ. ತಂತ್ರಜ್ಞಾನ ಬದಲಾದಂತೆ ವಿಜಯ ಆಫ್ ಸೆಟ್ ಪ್ರಿಂಟಿಂಗ್ ಸಹ ಅಪಡೇಟ್ ಆಗುತ್ತಿದೆ’ ಎಂದು ತಮ್ಮ ಉದ್ಯಮದ ಯಶಸ್ಸನ್ನು ಬಣ್ಣಿಸಿದರು.

ಪ್ರಥಮದ ಖ್ಯಾತಿ

1999ರಲ್ಲಿ ತಾಲ್ಲೂಕಿನಲ್ಲಿಯೇ ಪ್ರಥಮ ಬಾರಿಗೆ ಆಫ್‌ಸೆಟ್ ಪ್ರಿಂಟಿಂಗ್ ಪ್ರೆಸ್ ಸ್ಥಾಪನೆ ಮಾಡಿದ ಸಾಧನೆ ಇವರದ್ದು. ನಾವದಗಿ ಸಹೋದರರು ಕೈ ಇಟ್ಟ ಎಲ್ಲ ಕೆಲಸ ಸರಳವಾಗಿದೆ. ಈ ಮುದ್ರಣಾಲಯಕ್ಕೆ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ, ಇಳಕಲ್ಲದ ಡಾ.ಮಹಾಂತ ಸ್ವಾಮೀಜಿ, ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ, ಸಂತೆಕೆಲೂರ ಘನಮಠೇಶ್ವರ ಸ್ವಾಮೀಜಿಗಳು ಸಹ ಭೇಟಿ ನೀಡಿದ್ದಾರೆ.

ಇವರ ಅಚ್ಚುಕಟ್ಟಾದ ಕೆಲಸ ಕಂಡು ಹರಸಿದ್ದಾರೆ. ನಿತ್ಯ ಆರಕ್ಕೂ ಹೆಚ್ಚು ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ದಕ್ಷತೆ, ಗುಣಮಟ್ಟ, ನಂಬಿಕೆ ಸೇವೆಯ ಫಲವಾಗಿ ಸರ್ಕಾರದ, ವಿಶೇಷವಾಗಿ ಶಿಕ್ಷಣ ಇಲಾಖೆಯ ಮುದ್ರಣದ ಕೆಲಸ... ಉತ್ತರ ಕರ್ನಾಟಕದ ಬಹುತೇಕ ಕೆಲಸ ಈ ಮುದ್ರಣಾಲಯಕ್ಕೆ ಸಿಗುತ್ತಿದೆ.

ಬಿ.ಆರ್.ನಾವದಗಿ ಅವರ ಮೂರು ಜನ ಮಕ್ಕಳಲ್ಲಿ ಹಿರಿಯ ಮಗ ಸಂಗಮೇಶ ಹೊರಗಿನ ಆರ್ಡರ್ ತರುವ, ಮುದ್ರಿಸಿದ ಸಾಮಗ್ರಿಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಅವಳಿ ಸಹೋದರರಾದ ವಿಜಯ ಹಾಗೂ ಮಹಾಂತೇಶ, ಇವರಲ್ಲಿ ವಿಜಯ ಡಿ.ಟಿ.ಪಿ. (ಪ್ರಿ ಪ್ರೆಸ್) ಕೆಲಸ ಮಾಡಿದರೆ, ಮಹಾಂತೇಶ ಮುದ್ರಣದ ಕೆಲಸ ನೋಡಿಕೊಳ್ಳುತ್ತಾರೆ.

ಪರಸ್ಪರ ನಂಬಿಕೆ, ಸಮನ್ವಯತೆಯ ಕೆಲಸದ ಮೂಲಕ, ಮನೆ ಮಂದಿಯೇ ಸೇರಿ ಮಾಡಿದರೆ, ಒಂದು ಉತ್ತಮ ಉದ್ಯಮ ನಡೆಸಬಹುದು ಎನ್ನುವುದಕ್ಕೆ ಈ ಸಹೋದರರು ಮಾದರಿಯಾಗಿದ್ದಾರೆ.

ಸಂಪರ್ಕ ಸಂಖ್ಯೆ: ಸಂಗಮೇಶ–9886251368, ಮಹಾಂತೇಶ–9986138681

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT