ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಗೋಲ್ಡ್: ಸುರಕ್ಷಿತ ಹೂಡಿಕೆ

Last Updated 26 ಜುಲೈ 2011, 19:30 IST
ಅಕ್ಷರ ಗಾತ್ರ

ಚಿನ್ನವೆಂದರೆ ಯಾರಿಗೆ ಇಷ್ಟವಿಲ್ಲ? ಭಾರತೀಯರಾದ ನಮಗಂತೂ ತೊಟ್ಟಿಲಿಗೆ ಹಾಕಿದಾಗಿನಿಂದ ಹಿಡಿದು ಮಸಣಕ್ಕೆ ಹೋಗುವವರೆಗೂ ಚಿನ್ನದ ನಂಟು. ಈ ಹಳದಿ ಲೋಹ ನಮ್ಮ ಮೇಲೆ ಮಾಡಿದ ಮೋಡಿ ಅಷ್ಟಿಷ್ಟಲ್ಲ.

ಇದನ್ನು ಕೊಳ್ಳಲು ನಮಗೆ ಒಂದು ನೆಪ ಬೇಕಷ್ಟೇ. ಆಷಾಢ, ಶ್ರಾವಣ, ದೀಪಾವಳಿ, ಮದುವೆ, ಜನನ, ನಾಮಕರಣ, ಯಶಸ್ಸು, ಕೊಡುಗೆ, ವೇತನ ಏರಿಕೆ, ಬೋನಸ್ಸು, ಈಚೆಗೆ ಅಡಿಯಿಟ್ಟಿರುವ ಅಕ್ಷಯ ತೃತಿಯ `ಸಮೂಹ ಸನ್ನಿ~ ಹೀಗೆ ನಾನಾ ಕಾರಣಗಳಿಗಾಗಿ ಬಂಗಾರದ ಹಿಂದೆ ನಮ್ಮದು ನಿರಂತರ ಓಟ-ಮಿಂಚಿನ ಓಟ!

ಕಳೆದ ಒಂದು ದಶಕದ ಅವಧಿಯಲ್ಲಿ ಚಿನ್ನದ ಬೆಲೆ ಆರು ಪಟ್ಟು ಹೆಚ್ಚಾಗಿದೆ. ಕಳೆದ ಕೆಲ ತಿಂಗಳಿಂದ ಬಂಗಾರದ ಬೆಲೆ ಹತ್ತು ಗ್ರಾಂಗೆ ರೂ 22 ಸಾವಿರದ ಗಡಿ ದಾಟಿ  ಮುನ್ನಡೆದಿದೆ. ದೀಪಾವಳಿ ಹೊತ್ತಿಗೆ ರೂ 25 ಸಾವಿರ  ದಾಟುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಕೆಲ ವರ್ಷಗಳ ಹಿಂದೆ ಚಿನ್ನದ ಮೇಲೆ ಹಣ ಹೂಡಿದವರು ಇಂದು ಉತ್ತಮ ಲಾಭಾಂಶ ಪಡೆದಿದ್ದಾರೆ.
 
ಐದು ವರ್ಷಗಳ (2005-2010) ಅವಧಿಯಲ್ಲಿ ಬೆಲೆಯ ಸಾಧನೆ (ಪ್ರೈಸ್ ಪರ್‌ಫಾರ್ಮೆನ್ಸ್) ಅವಲೋಕಿಸಿದಾಗ ಚಿನ್ನದ ಮೇಲಿನ ಹೂಡಿಕೆಗೆ ಬಂದ ಲಾಭ (+22), ಷೇರುಪೇಟೆಯ ಹೂಡಿಕೆಯ ಲಾಭಾಂಶಕ್ಕಿಂತಲೂ (+17) ಹೆಚ್ಚು.

ಈಗೆಲ್ಲಾ ವಿದ್ಯುನ್ಮಾನ ಜಮಾನಾ. ಇ-ಮೇಲ್, ಇ-ಪೇಪರ್, ಇ-ಆಸ್ಪತ್ರೆ, ಇ-ಸ್ಟೇಟ್‌ಮೆಂಟ್ ಲಭ್ಯವಿರುವಾಗ ಚಿನ್ನವನ್ನು `ಇ~ ಬಿಟ್ಟೀತಾ? ಬಂಗಾರವನ್ನೇನೋ ಖರೀದಿಸಬಹುದು; ಆದರೆ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಖರೀದಿಸಿದ ಚಿನ್ನವನ್ನು ಕಳ್ಳರಿಂದ ಕಾಪಿಡುವುದೇ ಸವಾಲು. ಇಂಥ ಅಪಾಯದಿಂದ ಪಾರಾಗಲು ಈಗ ಹೊಸ ಆಯ್ಕೆಯೊಂದಿದೆ. ಅದುವೇ `ಇ-ಗೋಲ್ಡ್~ ಆಯ್ಕೆ.

ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ (ಇದು ನ್ಯಾಷನಲ್ `ಸ್ಟಾಕ್~ ಎಕ್ಸ್‌ಚೇಂಜ್ ಅಲ್ಲ) `ಇ-ಚಿನ್ನ~ದ ಆಯ್ಕೆ ಸೌಲಭ್ಯ ಒದಗಿಸಿದ್ದು ಇದರ ಮುಖಾಂತರ  ಆಯಾ ದಿನದ ಬೆಲೆಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನ ಖರೀದಿಸಬಹುದು.

`ಇ-ಚಿನ್ನ~ ಪಡೆಯುವುದು ಹೇಗೆ
`ಇ-ಚಿನ್ನ~ವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ (ಯೂನಿಟ್‌ಗಳಲ್ಲಿ) ಪಡೆಯಲು ಅವಕಾಶವಿರುವುದರಿಂದ ನೀವು ಡಿಮ್ಯೋಟ್ ಖಾತೆಯನ್ನು ಹೊಂದಿರುವುದು ಕಡ್ಡಾಯ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನೀವು ಹೊಂದಿರಬಹುದಾದ ಡಿಮ್ಯೋಟ್ ಖಾತೆ ಹಾಗೂ ಇ-ಗೋಲ್ಡ್ ಡಿಮ್ಯೋಟ್ ಖಾತೆ ಬೇರೆ ಬೇರೆ ಎಂಬುದು ನೆನಪಿರಲಿ.

ಆದ್ದರಿಂದ ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ನಿಗಮ(ಎನ್‌ಎಸ್‌ಇಎಲ್) ದಿಂದ ಅಂಗೀಕೃತಗೊಂಡ ಡಿಪಾಸಿಟರಿ ಪಾರ್ಟಿಸಿಪಂಟ್ (ಡಿಪಿ) ಬಳಿ ನೀವು ಪ್ರತ್ಯೇಕ ಡಿಮ್ಯೋಟ್ ಖಾತೆ ತೆರೆಯಬೇಕು.

ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ವೆಬ್‌ಸೈಟ್
http://www.nationalspotexchange.com/EmpanelledDPs.pdf ಈ.ಛ್ಛ ನಲ್ಲಿ ಡಿಪಿಗಳ ಪಟ್ಟಿಯನ್ನು ನೀವು ನೋಡಬಹುದು.

ಈ ಡಿಮ್ಯೋಟ್ ಖಾತೆ ಅಲ್ಲದೇ `ಎನ್‌ಎಸ್‌ಇಎಲ್~ನಿಂದ ಅಂಗೀಕೃತಗೊಂಡ ಬ್ರೋಕರ್‌ಗಳಲ್ಲಿ ನೀವು ಗ್ರಾಹಕರ ಖಾತೆಯನ್ನೂ ತೆರೆಯಬೇಕು. ರಾಜ್ಯದಲ್ಲಿ ಬೆಂಗಳೂರು ಮತ್ತು ದಾವಣಗೆರೆಗಳಲ್ಲಿ `ಎನ್‌ಎಸ್‌ಇಎಲ್~ ಬ್ರೋಕರ್‌ಗಳಿದ್ದಾರೆ.
ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 11-30 ರ ವರೆಗೆ ಚಿನ್ನದ ವಹಿವಾಟು (ಟ್ರೇಡಿಂಗ್) ನಡೆಸಬಹುದು.

ಈ ವಹಿವಾಟು ಸಮಯದಲ್ಲಿ ನೀವು ನೋಂದಾಯಿಸಿಕೊಂಡಿರುವ ಬ್ರೋಕರ್‌ಗೆ ದೂರವಾಣಿ ಕರೆ ಮಾಡಿ ಖರೀದಿ ನಡೆಸಬಹುದು ಅಥವಾ ನಿಮ್ಮ `ಎನ್‌ಎಸ್‌ಇಎಲ್~ ಸದಸ್ಯ ಬಳಕೆದಾರ ಹೆಸರು (ಯೂಸರ್ ನೇಮ್) ಮತ್ತು ರಹಸ್ಯ ಸಂಖ್ಯೆ (ಪಾಸ್‌ವರ್ಡ್) ಬಳಸಿಯೂ ಚಿನ್ನ ಖರೀದಿಸಬಹುದು.

ಖರೀದಿ ವೆಚ್ಚ
ಷೇರು ಮಾರುಕಟ್ಟೆಯಲ್ಲಿ ಇರುವಂತೆ ಇಲ್ಲಿಯೂ `ಇ-ಗೋಲ್ಡ್~ ಯೂನಿಟ್‌ಗಳನ್ನು ಕೊಂಡಾಗ ಬ್ರೋಕರೇಜ್ ವೆಚ್ಚ ತೆರಬೇಕಾಗುತ್ತದೆ. ಈ ವೆಚ್ಚ ಶೇಕಡಾ 0.25 ನಿಂದ ಶೇಕಡಾ 0.5 ವರೆಗೆ ಇರುತ್ತದೆ.

ಅಂದರೆ ರೂ 10 ಸಾವಿರ  ಮೊತ್ತದ ಖರೀದಿಗೆ ರೂ 25ಗಳಿಂದ ರೂ 50ವರೆಗೆ. ಇದಲ್ಲದೇ ಪ್ರತಿ ರೂ 1 ಲಕ್ಷವರೆಗಿನ ಖರೀದಿಗೆ ರೂ 20 ಖರೀದಿ ವೆಚ್ಚ ಎಂದು `ಎನ್‌ಎಸ್‌ಇಎಲ್~ ವಿಧಿಸುತ್ತದೆ.

ಪ್ರತಿ ಬಾರಿ ನೀವು ಚಿನ್ನದ ಯೂನಿಟ್‌ಗಳನ್ನು ಅನ್‌ಲೈನ್ ಮೂಲಕ ಮಾರಾಟ ಮಾಡುವಾಗ ಅತ್ಯಲ್ಪ ವೆಚ್ಚವನ್ನು ಶುಲ್ಕವಾಗಿ ತೆರಬೇಕಾಗುತ್ತದೆ. ಈ ವಹಿವಾಟು ವೆಚ್ಚಗಳಲ್ಲದೇ, ನೀವು ಡಿಮ್ಯೋಟ್ ಖಾತೆ ತೆರೆದಿರುವ ಡಿಪಿಗಳಿಗೆ ವಾರ್ಷಿಕ ನಿರ್ವಹಣಾ ಶುಲ್ಕವಾಗಿ (ಮೇಂಟೆನೆನ್ಸ್ ಫೀಸ್) ರೂ 300ಗಳನ್ನು ನೀಡಬೇಕಾಗುತ್ತದೆ.

 ನೈಜ ಚಿನ್ನಕ್ಕೆ ಪರಿವರ್ತನೆ
ಬ್ಯಾಂಕ್ ಒಂದರಲ್ಲಿ ನಿಮ್ಮ ಉಳಿತಾಯ ಖಾತೆಯಲ್ಲಿ ಇರುವ ಮೊತ್ತಕ್ಕೆ ಸಮವಾಗಿ ನಗದನ್ನು ಹೇಗೆ ಪಡೆಯಬಹುದೋ, ಅದೇ ರೀತಿ `ಎನ್‌ಎಸ್‌ಇಎಲ್~ ಮೂಲಕ ನೀವು ಈಗಾಗಲೇ ಖರೀದಿಸಿರುವ `ಇ-ಚಿನ್ನ~ದ ಯೂನಿಟ್‌ಗಳಿಗೆ ಸರಿಸಮವಾದ ಮೊತ್ತಕ್ಕೆ ಅಂದಿನ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆಯ ಪ್ರಕಾರ `ಇ-ಚಿನ್ನ~ದ ಯೂನಿಟ್‌ಗಳನ್ನು ನೈಜ ಚಿನ್ನಕ್ಕೆ ಪರಿವರ್ತಿಸಿಕೊಳ್ಳಬಹುದು.

`ಎನ್‌ಎಸ್‌ಇಎಲ್~ ವಿತರಣಾ ಕೇಂದ್ರದಲ್ಲಿ ನಿಗದಿತ ಅರ್ಜಿ ಸಲ್ಲಿಸುವ ಮೂಲಕ  `ಇ-ಚಿನ್ನ~ದ ಯೂನಿಟ್‌ಗಳನ್ನು ನೈಜ ಚಿನ್ನಕ್ಕೆ ಪರಿವರ್ತಿಸಿಕೊಳ್ಳಬಹುದು. ಈ ವಿತರಣಾ ಕೇಂದ್ರಗಳು ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ಗಳಲ್ಲಿವೆ. ಸದ್ಯಕ್ಕೆ `ಇ-ಚಿನ್ನ~ದ ಯೂನಿಟ್‌ಗಳನ್ನು ಪ್ರತಿ 8, 10 ಗ್ರಾಂ, 100 ಗ್ರಾಂ ಚಿನ್ನದ ನಾಣ್ಯ ಹಾಗೂ 1 ಕೆಜಿ ಚಿನ್ನದ ಬಾರುಗಳಿಗೆ ಪರಿವರ್ತಿಸಬಹುದು.

ಪ್ರತಿ 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ನಾಣ್ಯಗಳ ಪರಿವರ್ತನೆಗೆ `ಎನ್‌ಎಸ್‌ಇಎಲ್~ ರೂ  200   ಶುಲ್ಕ ವಿಧಿಸುತ್ತದೆ. 100 ಗ್ರಾಂ ಚಿನ್ನದ ನಾಣ್ಯಕ್ಕೆ ರೂ 100  ಪರಿವರ್ತನಾ ಶುಲ್ಕವಿರುತ್ತದೆ. ಇದಲ್ಲದೇ ಶೇಕಡಾ 1 ರಷ್ಟು ಮೌಲ್ಯವರ್ಧಿತ ತೆರಿಗೆ ಹಾಗೂ ಆಯಾ ಪ್ರದೇಶಕ್ಕೆ ಅನ್ವಯವಾಗುವ ಆಕ್ಟ್ರಾಯ್ ತೆರಿಗೆ ವಿಧಿಸಲಾಗುತ್ತದೆ.

`ಇ-ಚಿನ್ನ~ದ ಯೂನಿಟ್‌ಗಳನ್ನು ನೈಜ ಚಿನ್ನಕ್ಕೆ ಪರಿವರ್ತಿಸಿದಾಗ ಮಾತ್ರ ಈ ಎಲ್ಲಾ ಶುಲ್ಕಗಳು ಅನ್ವಯವಾಗುತ್ತವೆ ಎಂಬುದನ್ನು ಗಮನಿಸಬೇಕು. ಒಂದುವೇಳೆ `ಇ-ಚಿನ್ನ~ದ ಯೂನಿಟ್‌ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ (ಇಂಟರ್ನೆಟ್ ಮೂಲಕ) ಮಾರಾಟ ಮಾಡಿದರೆ ನೀವು ಯಾವುದೇ ಶುಲ್ಕ ತೆರಬೇಕಿಲ್ಲ.

ಆದಾಯ ತೆರಿಗೆ
ಎಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನ ಖರೀದಿಸಿದರೆ ತೆರಿಗೆಯನ್ನೂ ಉಳಿಸಬಹುದು. 1956ನೇ ಆದಾಯ ತೆರಿಗೆ ಕಾಯ್ದೆ, ಸೆಕ್ಷನ್ 54 ಎಫ್ ಅಥವಾ 54 ಇಸಿ ಅನ್ವಯ ದೀರ್ಘಕಾಲೀನ ಸಂಪತ್ತಿನ ಗಳಿಕೆಯ ತೆರಿಗೆ ವಿನಾಯ್ತಿ ಪಡೆಯಬಹುದು. ಆದರೆ, ಈ ತೆರಿಗೆ ವಿನಾಯ್ತಿ ಪಡೆಯಲು ನೀವು ಕನಿಷ್ಠ 36 ತಿಂಗಳ ಕಾಲ `ಇ-ಚಿನ್ನ~ದ ಯೂನಿಟ್‌ಗಳನ್ನು ಮಾರಾಟ ಮಾಡದೇ ಹಿಡಿದಿಟ್ಟುಕೊಂಡಿರಬೇಕು.

ಒಂದುವೇಳೆ ಪ್ರತಿವರ್ಷ ಮಾರ್ಚ್ 31ರ ಹೊತ್ತಿಗೆ ನಿಮ್ಮ ಖಾತೆಯಲ್ಲಿರುವ `ಇ-ಚಿನ್ನ~ದ ಯೂನಿಟ್‌ಗಳೂ ಸೇರಿದಂತೆ ಒಟ್ಟು ಆದಾಯ ರೂ 30 ಲಕ್ಷ  ದಾಟಿದರೆ ಮಾರುಕಟ್ಟೆ ದರದ ಪ್ರಕಾರ ಚಿನ್ನಕ್ಕೆ ಸಂಪತ್ತಿನ ತೆರಿಗೆ ಪಾವತಿಸಬೇಕಾಗುತ್ತದೆ ಎಂಬುದು ಆದಾಯ ತೆರಿಗೆ ಇಲಾಖೆಯ ಷರತ್ತು.  

ಪ್ರಯೋಜನಗಳು

`ಎನ್‌ಎಸ್‌ಇಎಲ್~ ದೇಶದಾದ್ಯಂತ ಕಾರ‌್ಯ ನಿರ್ವಹಿಸುತ್ತಿದ್ದು `ಇ-ಚಿನ್ನ~ಕ್ಕೆ ವಿಧಿಸುವ ಬೆಲೆ ಏಕರೂಪವಾಗಿರುತ್ತದೆ. ಕೆಲವೊಮ್ಮೆ ಆಭರಣ ಮಳಿಗೆಯಲ್ಲಿ ನೀವು ಚಿನ್ನ ಖರೀದಿಸಿದರೆ, ಹುಬ್ಬಳ್ಳಿಯಲ್ಲಿ ಇರುವ ಬೆಲೆ ಬೆಂಗಳೂರಿನಲ್ಲಿ ಇರುವುದಿಲ್ಲ ಅಥವಾ ಬೆಂಗಳೂರಿನ ಬೆಲೆ ಮುಂಬೈನಲ್ಲಿ ಇರುವುದಿಲ್ಲ. ಭೌಗೋಳಿಕವಾಗಿ ಬೆಲೆಯಲ್ಲಿನ ಇಂಥ ಅಸಮಾನತೆ `ಇ-ಚಿನ್ನ~ ಕೊಂಡಾಗ ಅಥವಾ ಮಾರಿದಾಗ ಇರುವುದಿಲ್ಲ.

* ನೈಜ ಚಿನ್ನ  ಖರೀದಿಸಿ ಕಳ್ಳಕಾಕರಿಂದ ರಕ್ಷಿಸಿಡುವ ತಾಪತ್ರಯದಿಂದ ನಿಮಗೆ ಮುಕ್ತಿ. *  ಚಿನ್ನದ ಯೂನಿಟ್‌ಗಳನ್ನು ನೀವು ಯಾವುದೇ ಕ್ಷಣದಲ್ಲೂ ನೈಜ ಚಿನ್ನಕ್ಕೆ ಪರಿವರ್ತಿಸಬಹುದು. ಇದೊಂದು ರೀತಿ ನಿಮ್ಮ ಉಳಿತಾಯ ಖಾತೆಯಲ್ಲಿನ ಹಣವಿದ್ದಂತೆ.

* `ಇ-ಚಿನ್ನ~ದ ಯೂನಿಟ್‌ಗಳನ್ನು ನೈಜ ಚಿನ್ನಕ್ಕೆ ಖರೀದಿಸಿದಾಗ ಅದನ್ನು ಪ್ರಮಾಣೀಕರಿಸಲಾಗಿರುತ್ತದೆ. ಆದ್ದರಿಂದ ನೀವು ಚಿನ್ನದ ಪರಿಶುದ್ಧತೆ ಬಗ್ಗೆ ಚಿಂತಿಸಬೇಕಿಲ್ಲ.

* ಚಿನ್ನಕ್ಕೆ ಘೋಷಿಸಿರುವ ಬೆಲೆ ಪಾರದರ್ಶಕವಾಗಿರುತ್ತದೆ. ಚಿನ್ನ ಕೊಳ್ಳುವಾಗ ಅಥವಾ ಮಾರಾಟ ಮಾಡುವಾಗ ಅನುಮಾನ ಪಡಬೇಕಿಲ್ಲ. ನೀವು `ಇ-ಚಿನ್ನ~ದ ಯೂನಿಟ್‌ಗಳನ್ನು ಮಾರಾಟ ಮಾಡಲು ಆಭರಣ ಮಳಿಗೆಗೆ ತೆರಳಬೇಕಿಲ್ಲ. ಕೇವಲ ನಿಮ್ಮ ಕಂಪ್ಯೂಟರ್ ಮೌಸ್ ಒತ್ತುವ ಮೂಲಕ ಚಿನ್ನ ಬಿಕರಿ ಅಥವಾ ಖರೀದಿ ಮಾಡಬಹುದು.

* ನಿಮಗೆ ಅನುಕೂಲವಾದಾಗ, ಅನುಕೂಲವಾದಷ್ಟು ಹಣದಲ್ಲಿ ಹಾಗೂ ಚಿಕ್ಕ ಚಿಕ್ಕ ಪ್ರಮಾಣದಲ್ಲಿ `ಇ-ಚಿನ್ನ~ದ ಯೂನಿಟ್‌ಗಳನ್ನು ಖರೀದಿಸುವ ಮೂಲಕ ದೀರ್ಘಾವಧಿಗೆ ನೀವು ಸಂಪತ್ತು ಕ್ರೋಡೀಕರಿಸಬಹುದು.

ಇಂಥ ಎಲ್ಲಾ ಅನುಕೂಲಗಳಿರುವ `ಇ~ ಚಿನ್ನದ ಜಿಂಕೆಯ ಹಿಂದೆ, ಮುಂದಿನ ದಿನಗಳಲ್ಲಿ ಭಾರತೀಯರ ಓಟಕ್ಕೆ ಹೊಸ ರೂಪ ಬಂದರೆ ಅಚ್ಚರಿಯಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT