ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯ: ಹೂಡಿಕೆ ಆಯ್ಕೆಗಳು

Last Updated 20 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ
ADVERTISEMENT

ಆದಾಯ ತೆರಿಗೆ ಸೆಕ್ಷನ್ `80- ಸಿ~ ಅನ್ವಯ, ಆದಾಯ ತೆರಿಗೆ ವಿನಾಯತಿ ಪಡೆಯಲು ಪೇಟೆಯಲ್ಲಿ ಇರುವ ಪ್ರಮುಖ ಯೋಜನೆಗಳೆಂದರೆ, ಇಎಲ್‌ಎಸ್‌ಎಸ್, ಎನ್‌ಎಸ್‌ಸಿ, ಯೂಲಿಪ್ ಹಾಗೂ ಪಿಪಿಎಫ್.

ಇವುಗಳ ಪೈಕಿ ಸದ್ಯ ಬೇಡಿಕೆಯಲ್ಲಿ ಇರುವ ಎರಡು ಪ್ರಮುಖ ಹೂಡಿಕೆಗಳೆಂದರೆ,  ಇಎಲ್‌ಎಸ್‌ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್) ಮತ್ತು ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್). ಎರಡೂ ಹೂಡಿಕೆಗಳಲ್ಲಿ ದೀರ್ಘಾವಧಿ ಹೂಡಿಕೆಯಿಂದ ಮಾತ್ರ ಲಾಭ ಗಳಿಸುವ   ಅವಕಾಶಗಳಿವೆ. 
 
ಆದಾಯ ತೆರಿಗೆ ವಿನಾಯತಿ ಪಡೆಯಲು ಉಳಿತಾಯ ದಾಖಲೆಗಳನ್ನು ಸಲ್ಲಿಸುವಂತೆ ಈಗಾಗಲೇ ಅನೇಕ ಕಂಪೆನಿಗಳು ತಮ್ಮ ನೌಕರರಿಗೆ ಇ-ಮೇಲ್ ಕಳುಹಿಸಲು ಆರಂಭಿಸಿವೆ.

ಉಳಿತಾಯ ಹಾಗೂ ಹೂಡಿಕೆ ಬಗ್ಗೆ ಈವರೆಗೆ ನಿಶ್ಚಿಂತೆಯಿಂದ ಇದ್ದವರೆಲ್ಲ ಇಂಥ `ಇ-ಮೇಲ್~ಗಳು ಬರುತ್ತಲೇ ಧಿಗ್ಗನೆದ್ದು ಕೂರುತ್ತಾರೆ. ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಸಿಕ್ಕ ಸಿಕ್ಕ ಯೋಜನೆಗಳಲ್ಲಿ ಕಡೇ ಕ್ಷಣದಲ್ಲಿ ಹಣ ತೊಡಗಿಸಿ ಆ ವರ್ಷದ ಆದಾಯ ತೆರಿಗೆ ಉಳಿತಾಯದ ಕೋಟಾ ತುಂಬುತ್ತಾರೆ.

ಹೂಡಿಕೆಗಳ ಬಗ್ಗೆ ಸೂಕ್ತ ಅಧ್ಯಯನ ಮಾಡದೇ ಅವಸರದಲ್ಲಿ ಏಜೆಂಟರು ಅಥವಾ ಸ್ನೇಹಿತರ ಮಾತು ನಂಬಿ ಮಾಡಿದ ಹೂಡಿಕೆಗಳಗೆ ಸೂಕ್ತ ಲಾಭಾಂಶ ಬರಲು ಸಾಧ್ಯವೇ. `ಇಲ್ಲ ಎನ್ನುತ್ತಾರೆ ವೈಯಕ್ತಿಕ ಹಣಕಾಸು ಪರಿಣಿತರು.


ಸೂಕ್ತ ವಿವೇಚನೆಯಿಂದ ಹಣ ಹೂಡಿದರೆ ಲಾಭ ಗಳಿಸುವ ಅವಕಾಶಗಳು ಹೆಚ್ಚು ಎನ್ನುವುದು ಅವರ ಅಭಿಪ್ರಾಯ.ಆದಾಯ ತೆರಿಗೆ ಸೆಕ್ಷನ್ `80 ಸಿ~  ಅನ್ವಯ, ಆದಾಯ ತೆರಿಗೆ ವಿನಾಯತಿ ಪಡೆಯಲು ಮಾರುಕಟ್ಟೆಯಲ್ಲಿ ಇರುವ ಪ್ರಮುಖ ಯೋಜನೆಗಳೆಂದರೆ, ಇಎಲ್‌ಎಸ್‌ಎಸ್, ಎನ್‌ಎಸ್‌ಸಿ, ಯೂಲಿಪ್ ಹಾಗೂ ಪಿಪಿಎಫ್.

ಇವುಗಳ ಪೈಕಿ ಸದ್ಯ ಬಹುಬೇಡಿಕೆಯಲ್ಲಿ ಇರುವ ಎರಡು ಪ್ರಮುಖ ಹೂಡಿಕೆಗಳೆಂದರೆ: ಇಎಲ್‌ಎಸ್‌ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್) ಮತ್ತು ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂ).

ಮೊದಲನೆಯದು ಆಧುನಿಕ ಹೂಡಿಕೆಯಾದರೆ ಎರಡನೆಯದು ಸಾಂಪ್ರದಾಯಿಕ ಹೂಡಿಕೆ. ಎರಡೂ ಹೂಡಿಕೆಗಳಲ್ಲಿ ದೀರ್ಘಾವಧಿ ಹೂಡಿಕೆಯಿಂದ (ದೀರ್ಘಾವಧಿ ಎಂದರೆ, 3 ರಿಂದ 15 ವರ್ಷ) ಮಾತ್ರ ಲಾಭ ಗಳಿಸುವ ಅವಕಾಶಗಳಿವೆ.

ವಾರ್ಷಿಕ ಶೇಕಡಾ 8.6 ರಷ್ಟು ಲಾಭ ನೀಡುವ ಪಿಪಿಎಫ್‌ನಲ್ಲಿ ಹಣ ಹೂಡಬೇಕೇ ಅಥವಾ ಉತ್ತಮ ಲಾಭ ನೀಡುವ ಇಎಲ್‌ಎಸ್‌ಎಸ್ ಯೋಜನೆಗಳಲ್ಲಿ ಹಣ ತೊಡಗಿಸಬೇಕೆ ಎಂಬುದು ಅನೇಕ ಹೂಡಿಕೆದಾರರ ಜಿಜ್ಞಾಸೆ. ಇದಕ್ಕೆ ಉತ್ತರ ತುಂಬಾ ಸರಳ.

ಷೇರು ಮಾರುಕಟ್ಟೆಯ ಏರಿಳಿತಗಳಿಂದ ವಿಚಲಿತರಾಗದೇ ನೀವು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದರೆ ಇಎಲ್‌ಎಸ್‌ಎಸ್ ಆಯ್ದುಕೊಳ್ಳಿ. ಕಷ್ಟಪಟ್ಟು ದುಡಿದ ಹಣ ಷೇರು ಮಾರುಕಟ್ಟೆಯಲ್ಲಿ ಕೊಚ್ಚಿ ಹೋಗುವುದು ಬೇಡ ಹಾಗೂ ಶೇಕಡಾ 8.6ರ ಬಡ್ಡಿ ತೃಪ್ತಿಯಿದೆ ಎನ್ನುವುದಾದರೆ ಪಿಪಿಎಫ್‌ನಲ್ಲಿ ಹಣ ಹೂಡಲು ಅಡ್ಡಿಯಿಲ್ಲ.

ಇಎಲ್‌ಎಸ್‌ಎಸ್
`ಇಎಲ್‌ಎಸ್‌ಎಸ್~ ಅನ್ನು `ಪಿಪಿಎಫ್~ಗೆ ಹೋಲಿಸುವುದು ಬಾಳೆಹಣ್ಣನ್ನು ಕಿತ್ತಳೆ ಹಣ್ಣಿಗೆ ಹೋಲಿಸಿದಂತೆ! ಎರಡೂ ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಅವುಗಳ ರುಚಿ, ಪೌಷ್ಟಿಕಾಂಶಗಳಲಿ  ವ್ಯತ್ಯಾಸ ಇದೆ.

`ಇಎಲ್‌ಎಸ್‌ಎಸ್~ನಲ್ಲಿ ಹೂಡಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದರಿಂದ ಇಲ್ಲಿ  ರಿಸ್ಕ್ ಜಾಸ್ತಿ. ನಿಮ್ಮ ಹೂಡಿಕೆಗೆ ಇಲ್ಲಿ ಉತ್ತಮ ಲಾಭ ಅಥವಾ ನಷ್ಟದ ಸಂಭವನೀಯತೆ ಇರುತ್ತದೆ.

`ಓಪನ್ ಎಂಡೆಡ್~ ಹಾಗೂ `ಕ್ಲೋಸ್ಡ್ ಎಂಡೆಡ್~ ಎಂಬ ಎರಡು ರೀತಿಯ ಯೋಜನೆಗಳಲ್ಲಿ ನೀವು ಹಣ ತೊಡಗಿಸಬಹುದು.

`ಓಪನ್ ಎಂಡೆಡ್~ ಯೋಜನೆಯಲ್ಲಿ ವರ್ಷದ ಯಾವುದೇ ಸಮಯದಲ್ಲೂ  ಪ್ರತಿ ತಿಂಗಳಿಗೆ ಅಥವಾ ಒಮ್ಮಲೇ ಹಣ ಹೂಡಬಹುದು. `ಕ್ಲೋಸ್ಡ್ ಎಂಡೆಡ್~ ಯೋಜನೆಯಲ್ಲಿ ಫಂಡ್ ಮ್ಯಾನೇಜರ್ ನಿಗದಿ ಪಡಿಸಿದ ಅವಧಿಯಲ್ಲಿ ನಿರ್ದಿಷ್ಟ ಮೊತ್ತ ಹೂಡಬೇಕು.

ಕನಿಷ್ಠ  ರೂ 500 ಯಿಂದ ನೀವು ಹಣ ತೊಡಗಿಸಬಹುದು (ಈ ಮೊತ್ತ ಒಂದು ಫಂಡ್ ಹೌಸ್‌ನಿಂದ ಇನ್ನೊಂದಕ್ಕೆ ವ್ಯತ್ಯಾಸವಾಗುತ್ತದೆ). 

ಎರಡರ ಪೈಕಿ ಯಾವುದೇ ಯೋಜನೆಯಲ್ಲಿ ಹಣ ಹೂಡಿದರೂ ಕನಿಷ್ಠ ಮೂರು ವರ್ಷಗಳವರೆಗೆ (ಲಾಕ್ ಇನ್ ಪೀರಿಯಡ್) ಆ ಹಣವನ್ನು ಹಿಂದೆ ಪಡೆಯುವಂತಿಲ್ಲ.

ಆದರೆ, ಉತ್ತಮ ಲಾಭದ ನಿರೀಕ್ಷೆಯಲ್ಲಿ ಇರುವವರು ಮೂರು ವರ್ಷಗಳ ನಂತರವೂ ದೀರ್ಘಾವಧಿ (ಸುಮಾರು 10 ವರ್ಷ)ವರೆಗೆ `ಇಎಲ್‌ಎಸ್‌ಎಸ್~ ಖಾತೆಯಲ್ಲೇ ಬಿಟ್ಟರೆ ಅದಕ್ಕೆ ಚಕ್ರಬಡ್ಡಿ ಸಿಗುತ್ತದೆ. ಬಹುತೇಕ `ಇಎಲ್‌ಎಸ್‌ಎಸ್~ ಫಂಡ್‌ಗಳು ಹತ್ತು ವರ್ಷಗಳ ಅವಧಿಯಲ್ಲಿ ಸರಾಸರಿ ಶೇಕಡಾ 15 ರಷ್ಟು ಲಾಭ ಮಾಡಿವೆ.

ಎಂಥ ಫಂಡ್?
ಉತ್ತಮ ವೈವಿಧ್ಯಮಯ (ಡೈವರ್ಸಿಫೈಡ್) ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ಇಂಥ ಫಂಡ್‌ಗಳನ್ನು ವಿವಿಧ ವಲಯಗಳಲ್ಲಿ (ಬ್ಯಾಕಿಂಗ್, ಬ್ಲೂಚಿಪ್, ತೈಲ, ನೈಸರ್ಗಿಕ ಸಂಪನ್ಮೂಲ, ಇತ್ಯಾದಿ) ಹೂಡಿರುವುದರಿಂದ, ಒಂದು ವಲಯದಲ್ಲಿ ನಷ್ಟವಾದರೆ ಅದನ್ನು ಇನ್ನೊಂದು ವಲಯದಲ್ಲಿ ಸರಿದೂಗಿಸಬಹುದು.

`ಸದ್ಯಕ್ಕೆ ಷೇರು ಮಾರುಕಟ್ಟೆ  ಕುಸಿದಿರುವುದರಿಂದ ಹೂಡಿಕೆದಾರರು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಯಾವುದೇ ಯೋಜನೆಗಳಲ್ಲಿ ಹಣ ತೊಡಗಿಸಲು ಹಿಂದೇಟು ಹಾಕುತ್ತಾರೆ.

ಆದರೆ, `ಇಎಲ್‌ಎಸ್‌ಎಸ್~ ನಂತಹ ನಿಧಿಗಳಲ್ಲಿ ಹಣ ಹೂಡಲು ಮಾರುಕಟ್ಟೆ ಸೂಚ್ಯಂಕ ಕುಸಿದಿರುವ ಈ ಸಮಯವೇ ಅತ್ಯಂತ ಪ್ರಶಸ್ತ. ಏಕೆಂದರೆ ಕಡಿಮೆ ಬೆಲೆಗೆ ಹೆಚ್ಚು ಯೂನಿಟ್‌ಗಳು (ಎನ್‌ಎವಿ) ಸಿಗುತ್ತವೆ” ಎನ್ನುತ್ತಾರೆ ವೈಯಕ್ತಿಕ ಹಣಕಾಸು ಸಲಹೆಗಾರರು.

`ಇಎಲ್‌ಎಸ್‌ಎಸ್ ಫಂಡ್~ಗಳ ಉತ್ತಮ ಸಾಧನೆಗೆ ಎಚ್‌ಡಿಎಫ್‌ಸಿ ಟ್ಯಾಕ್ಸ್ ಸೇವರ್ ಫಂಡ್ (ಗ್ರೋತ್ ಆಯ್ಕೆ) ಉದಾಹರಣೆಯನ್ನೇ ತೆಗೆದುಕೊಳ್ಳಿ. 1996ರಲ್ಲಿ ಆರಂಭವಾದ ಈ ಫಂಡ್ ಈ ವರೆಗೆ ವಾರ್ಷಿಕ ಶೇಕಡಾ 31ರಷ್ಟು ಲಾಭಾಂಶ ನೀಡಿದೆ.

ಈ ಫಂಡಿನ ಪ್ರಸಕ್ತ ಎನ್‌ಎವಿ ರೂ 216. ಕಳೆದ 15 ವರ್ಷಗಳ ಅವಧಿಯಲ್ಲಿ ಇದರ ಬೆಲೆ ಶೇಕಡಾ 20ರಷ್ಟು ಹೆಚ್ಚಾಗಿದೆ.

ಎಲ್ಲಾ `ಇಎಲ್‌ಎಸ್‌ಎಸ್ ಫಂಡ್~ಗಳೂ ಇದೇ ರೀತಿಯ ಲಾಭ ತಂದು ಕೊಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ನಿರ್ದಿಷ್ಟ ಫಂಡ್‌ನ ಸಾಧನೆಯ ಮೇಲೆ ಅದರ ಲಾಭಾಂಶ ನಿರ್ಧರಿತವಾಗುತ್ತದೆ.

ಆದ್ದರಿಂದ ಆಯ್ಕೆ ಮಾಡುವಾಗ ವಿಶ್ಲೇಷಣೆ ಹಾಗೂ ಇತರ ಫಂಡ್‌ಗಳ ಜೊತೆ ಹೋಲಿಸಿ ಉತ್ತಮವಾದುದನ್ನು ಆಯ್ದುಕೊಳ್ಳಿ.

ಎಲ್ಲಿ ಲಭ್ಯ?

ಸರಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಕೆನರಾ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ ಸೇರಿದಂತೆ ಹಲವಾರು ಬ್ಯಾಂಕುಗಳು `ಇಎಲ್‌ಎಸ್‌ಎಸ್~ ಸೇವೆ ಒದಗಿಸುತ್ತವೆ. ನೇರವಾಗಿ ಬ್ಯಾಂಕ್ ಸಂಪರ್ಕಿಸಿ ಅಥವಾ ಏಜೆಂಟರ ಮೂಲಕ ಫಂಡ್‌ಗಳನ್ನು ಖರೀದಿಸಬಹುದು.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
ತೆರಿಗೆ ಉಳಿಸುವ ಇನ್ನೊಂದು ಜನಪ್ರಿಯ ಹೂಡಿಕೆ ಎಂದರೆ `ಪಿಪಿಎಫ್~. ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಈ ಯೋಜನೆಯಲ್ಲಿ ಹಣ ಹೂಡಿದರೆ ನಿಗದಿತ ಲಾಭ ನಿಶ್ಚಿತ. ಈಚೆಗಷ್ಟೇ ಸರಕಾರ ಬಡ್ಡಿದರವನ್ನು ಪರಿಷ್ಕರಿಸಿದ್ದು ನೂತನ ಪ್ರಕಟಣೆ ಪ್ರಕಾರ ಪಿಪಿಎಫ್ ಹೂಡಿಕೆದಾರರಿಗೆ ಶೇಕಡಾ 8.6 ರಷ್ಟು ಬಡ್ಡಿ ದೊರೆಯಲಿದೆ.

ಕೆಲ ವರ್ಷಗಳ ಹಿಂದೆ ಈ ಹೂಡಿಕೆಗೆ ಸರಕಾರ ಶೇಕಡಾ 12 ರಷ್ಟು ಬಡ್ಡಿ ನಿಗದಿ ಪಡಿಸಿತ್ತು. `ಪಿಪಿಎಫ್~ 15 ವರ್ಷಗಳ ಯೋಜನೆಯಾಗಿದ್ದು ಹೂಡಿಕೆದಾರರು ವಾರ್ಷಿಕ ಗರಿಷ್ಠ ರೂ1 ಲಕ್ಷವರೆಗೆ ಹೂಡಿಕೆ ಮಾಡಬಹುದು. 

ಕನಿಷ್ಠ ರೂ 500  ಹೂಡಿರಲೇಬೇಕು ಎಂಬ ನಿಯಮವಿದೆ (ಇಲ್ಲಿಯವರೆಗೆ ವಾರ್ಷಿಕ ಹೂಡಿಕೆ ಮಿತಿ ರೂ 70 ಸಾವಿರ ರೂಪಾಯಿ ಇತ್ತು). ಈ ಹೂಡಿಕೆಗೂ ಆದಾಯ ತೆರಿಗೆ ವಿನಾಯತಿಯುಂಟು.

15 ನೇ ಆರ್ಥಿಕ ವರ್ಷದ ಕೊನೆಗೆ ಹಣವನ್ನು ನೀವು ವಾಪಸು ಪಡೆಯಬಹುದು. ನೀವು ಬಯಸಿದಲ್ಲಿ ಅವಧಿ ಮುಗಿದ ಮೇಲೂ ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಬಹುದು.

ಹೂಡಿಕೆ ಆರಂಭಿಸಿದ ಏಳನೇ ಆರ್ಥಿಕ ವರ್ಷದ ನಂತರ ಅಗತ್ಯ ಬಿದ್ದರೆ ನೀವು ಪ್ರತಿ ವರ್ಷ ಹಣ ವಾಪಸ್ ಪಡೆಯಬಹುದು. ಆದರೆ ಈ ಮಿತಿ ಒಟ್ಟು ಹೂಡಿಕೆಯ ಶೇ 50 ರಷ್ಟನ್ನು ಮೀರಬಾರದು ಎಂಬ ನಿಯಮವಿದೆ.`ಪಿಪಿಎಫ್~ ಖಾತೆಯ ಮೇಲೆ ನೀವು ಸಾಲ ಪಡೆಯುವ ಸೌಲಭ್ಯವಿದೆ.

ಕಾರಣಾಂತರಗಳಿಂದ ಹೂಡಿಕೆಯನ್ನು ನೀವು ಅರ್ಧಕ್ಕೇ ನಿಲ್ಲಿಸಿದರೂ 15 ವರ್ಷಗಳ ಬಳಿಕ ಹೂಡಿಕೆಯ ಲಾಭ ನಿಮ್ಮ ಕೈಸೇರಲಿದೆ.

ಹೆಚ್ಚಿನ ಲಾಭಕ್ಕೆ ಆಸೆ ಪಡದೇ ಹೂಡಿಕೆಗೆ ಬರುವ ನಿಶ್ಚಿತ ಲಾಭದಲ್ಲಿಯೇತೃಪ್ತಿ ಪಟ್ಟುಕೊಳ್ಳುವವರಿಗೆ `ಪಿಪಿಎಫ್~ ವರದಾನವೆಂದೇ ಹೇಳಬೇಕು.

ನೀವು ಪ್ರತಿ ತಿಂಗಳು ರೂ1 ಸಾವಿರ ಗಳಂತೆ ವರ್ಷಕ್ಕೆ ರೂ12 ಸಾವಿರಗಳನ್ನು ನಿರಂತರವಾಗಿ 15 ವರ್ಷ ಹೂಡಿದರೆ ನಿಮ್ಮ ಹೂಡಿಕೆಗೆ ಶೇ 8.6 ರ ಬಡ್ಡಿ ದರದಲ್ಲಿ ಸಿಗುವ ಲಾಭದ ವಿವರ ಇಲ್ಲಿದೆ.

ಎಲ್ಲಿ  ಲಭ್ಯ?
ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಆಯ್ದ ಅಂಚೆ ಕಚೇರಿಗಳಲ್ಲಿ `ಪಿಪಿಎಫ್~ನಲ್ಲಿ ಹೂಡಿಕೆ ಮಾಡಬಹುದು.ಷೇರು ಮಾರುಕಟ್ಟೆಯ ಏರಿಳಿತ ಎದುರಿಸಲು ಸಿದ್ಧರಿದ್ದರೆ `ಇಎಲ್‌ಎಸ್‌ಎಸ್~ ನಲ್ಲಿ ಹೂಡಿಕೆ ಮಾಡಿ. ನಿಶ್ಚಿತವಾಗಿ ದೊರೆಯಲಿರುವ ಶೇಕಡಾ 8.6 ರ ಬಡ್ಡಿ ಬೇಕಿದ್ದರೆ `ಪಿಪಿಎಫ್~ ಆಯ್ದುಕೊಳ್ಳಿ. ಆಯ್ಕೆ ನಿಮ್ಮದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT