ಮುಂಬೈ (ಪಿಟಿಐ): ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯ ಸೋಮವಾರ ಮುಂಬೈ ಷೇರುಪೇಟೆಯಲ್ಲಿ ರೂ4 ಲಕ್ಷ ಕೋಟಿ ಗಡಿ ದಾಟಿದೆ. ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ನಂತರ ಮಾರುಕಟ್ಟೆ ಮೌಲ್ಯದಲ್ಲಿ ಈ ಮೈಲಿಗಲ್ಲು ದಾಟಿದ ಎರಡನೆಯ ಕಂಪೆನಿ ಎಂಬ ಹೆಗ್ಗಳಿಕೆಗೂ `ಟಿಸಿಎಸ್' ಪಾತ್ರವಾಗಿದೆ.
ಕಂಪೆನಿಯ ಮಾರುಕಟ್ಟೆ ಮೌಲ್ಯ ಸೋಮವಾರ ವಹಿವಾಟಿನ ಅಂತ್ಯಕ್ಕೆ ರೂ4,00,868 ಕೋಟಿಗೆ ಏರಿಕೆ ಕಂಡಿದೆ. 2004ರಲ್ಲಿ ಕಂಪೆನಿ ಮುಂಬೈ ಷೇರು ಪೇಟೆಯಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿತ್ತು. ನಂತರ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದೆ.
ಮುಕೇಶ್ ಅಂಬಾನಿ ಒಡೆತನದ `ಆರ್ಐಎಲ್' 2007ರ ಅಕ್ಟೋಬರ್ನಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ರೂ4 ಲಕ್ಷ ಕೋಟಿ ಗಡಿ ದಾಟಿತ್ತು. ಆದರೆ, ಇತ್ತೀಚೆಗೆ `ಆರ್ಐಎಲ್'ನ ಷೇರು ಮೌಲ್ಯ ತೀವ್ರವಾಗಿ ಕುಸಿದಿದ್ದು ಮಾರುಕಟ್ಟೆ ಮೌಲ್ಯ ರೂ2.85 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ಸದ್ಯ `ಟಿಸಿಎಸ್' ಮಾರುಕಟ್ಟೆ ಮೌಲ್ಯ `ಆರ್ಐಎಲ್'ಗಿಂತಲೂ ರೂ1 ಲಕ್ಷ ಕೋಟಿಗಿಂತಲೂ ಹೆಚ್ಚಿದೆ.