ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ: ಬಡವರಿಗೆ ಬರೆ

Last Updated 19 ಜುಲೈ 2011, 19:30 IST
ಅಕ್ಷರ ಗಾತ್ರ

ತೈಲ ಮಾರುಕಟ್ಟೆ  ಕಂಪೆನಿಗಳಿಗೆ ಮತ್ತು   ಬೊಕ್ಕಸಕ್ಕೆ ಆಗುತ್ತಿರುವ ನಷ್ಟ  ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ನೆಪ ಒಡ್ಡಿ ಸರ್ಕಾರ ತೈಲ ಬೆಲೆ ಏರಿಕೆ ಮಾಡುತ್ತಿದೆ.
 
ಬೆಲೆ  ಏರಿಕೆಯಿಂದ ಜನರಿಗೆ ಆಗುವ ತೊಂದರೆ ಮತ್ತು   ಹಣದುಬ್ಬರ ಮೇಲಿನ  ದುಷ್ಪರಿಣಾಮ ಕಡಿಮೆ ಎಂದು ತೋರಿಸುವ  ಪ್ರಯತ್ನವನ್ನೂ ಸರ್ಕಾರ  ನಡೆಸುತ್ತಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವುದಕ್ಕೆ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೊಸದೊಂದು ತರ್ಕ ಮುಂದಿಟ್ಟಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯು ಹಣದುಬ್ಬರ ಪ್ರಮಾಣ ತಗ್ಗಿಸಲು ಸಹಕಾರಿ ಎಂದು ಅವರು ಹೇಳಿಕೊಂಡಿದ್ದಾರೆ. ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚುತ್ತದೆ, ಇದರಿಂದ ಪ್ರತಿಯೊಬ್ಬರಿಗೂ ಹೊರೆ ಬೀಳುತ್ತದೆ ಎಂದು ಇತರೆಲ್ಲರೂ ಹೇಳುತ್ತಿದ್ದರೆ ಸರ್ಕಾರದ ಚಿಂತನೆಯೇ ಇನ್ನೊಂದು ಬಗೆಯದು ಎಂಬುದನ್ನು ಇದು ತೋರಿಸುತ್ತದೆ.

ಮೊಂಟೆಕ್ ಅವರು ಹೋಮಿಯೋಪಥಿ ಚಿಕಿತ್ಸೆಯ ಮಾದರಿಯನ್ನು ಹಣದುಬ್ಬರಕ್ಕೂ ಪ್ರಯೋಗಿಸಲು ಹೊರಟಂತಿದೆ. ಒಂದು ಕಾಯಿಲೆಗೆ ಅದರ ಗುಣಲಕ್ಷಣದ ಔಷಧದಿಂದಲೇ ಪರಿಹಾರ ಸಾಧ್ಯ ಎಂದು ಹೋಮಿಯೋಪಥಿ ಚಿಕಿತ್ಸಾ ಪದ್ಧತಿ (ಸಿಮಿಲಿಯಾ ಸಿಮಿಲಿಬಸ್ ಕ್ಯುರಾಂಟರ್) ಹೇಳುತ್ತದೆ. ಮೊಂಟೆಕ್ ಸಹ ಇದೇ ರೀತಿಯ ಪ್ರತಿಪಾದನೆ ಮುಂದಿಡುತ್ತಾರೆ.

`ನಾವು ದರ ಹೆಚ್ಚಿಸಿದಾಗ ವ್ಯವಸ್ಥೆಯಲ್ಲಿ ಹಣವನ್ನು ಹೊರ ತರಬೇಕಾಗುತ್ತದೆ. ಇದರಿಂದ ಹಣದುಬ್ಬರ ಪ್ರಮಾಣ ಕುಸಿಯುವಂತಾಗುತ್ತದೆ~ ಎಂದು ಅವರು ಹೇಳುತ್ತಾರೆ.

ಅಂದರೆ, ಪೆಟ್ರೋಲಿಯಂ ಉತ್ಪನ್ನಗಳಿಗೆ ಅಧಿಕ ದರ ಪಾವತಿಸಿದ ಬಳಿಕ ಜನರ ಕೈಯಲ್ಲಿ ಉಳಿಯುವುದು ಸ್ವಲ್ಪ ದುಡ್ಡು ಮಾತ್ರ. ಹೀಗೆ ಕಡಿಮೆ ದುಡ್ಡು ಕೈಯಲ್ಲಿ ಇರುವುದರಿಂದ ಜನರ ಬೇಡಿಕೆ ಪ್ರಮಾಣ ತಗ್ಗುತ್ತದೆ, ಇದರಿಂದ ದರಗಳೂ ಕಡಿಮೆಯಾಗುತ್ತವೆ ಎಂಬುದು ಅವರ ತರ್ಕ ಎಂದೆನಿಸುತ್ತದೆ.

ಮೊಂಟೆಕ್ ಅವರ ತರ್ಕವನ್ನೇ ಆಧರಿಸಿ ಹೇಳುವುದಾದರೆ, ಹಣದುಬ್ಬರಕ್ಕೆ ಕಾರಣವಾಗುವ ಉತ್ಪನ್ನಗಳ ಬೆಲೆ ಹೆಚ್ಚಳದ ಜತೆಗೆ ಅಂತಹದೇ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚುತ್ತದೆ.
 
ಮೊಂಟೆಕ್ ಅವರ ಸಿದ್ಧಾಂತ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಎಂಬ ಬಗ್ಗೆ ಚರ್ಚಿಸುವ ವಿಚಾರವನ್ನು ಆರ್ಥಿಕ ತಜ್ಞರಿಗೆ ಬಿಟ್ಟುಬಿಡೋಣ. ನಾವಿಲ್ಲಿ ನಮ್ಮನ್ನು ಕಾಡುವ ವಾಸ್ತವದತ್ತ ಮಾತ್ರ ಗಮನ ಹರಿಸೋಣ.

ತೈಲ ಮಾರುಕಟ್ಟೆ ಕಂಪೆನಿಗಳಿಗೆ ಮತ್ತು  ಬೊಕ್ಕಸಕ್ಕೆ ಆಗುತ್ತಿರುವ ನಷ್ಟ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ನೆಪ ಒಡ್ಡಿ ಸರ್ಕಾರ ತೈಲ ಬೆಲೆ ಏರಿಕೆ ಮಾಡುತ್ತಿದೆ.

ಬೆಲೆ ಏರಿಕೆಯಿಂದ ಜನರಿಗೆ ಆಗುವ ತೊಂದರೆ ಮತ್ತು ಹಣದುಬ್ಬರ ಮೇಲಿನ ದುಷ್ಪರಿಣಾಮ ಕಡಿಮೆ ಎಂದು ತೋರಿಸುವ ಪ್ರಯತ್ನವನ್ನೂ ಸರ್ಕಾರ ನಡೆಸುತ್ತಿದೆ.

ಬೆಲೆ ಏರಿಸಲು ಸರ್ಕಾರ ನೀಡುವ ಯಾವ ಕಾರಣಗಳನ್ನೂ ಒಪ್ಪುವುದು ಸಾಧ್ಯವೇ ಇಲ್ಲ. ತೈಲ ಕಂಪೆನಿಗಳಿಗೆ ಬರಬೇಕಾದ ಹಳೆ ಬಾಕಿಗಳು ದೊಡ್ಡ ಪ್ರಮಾಣದಲ್ಲಿ ಇವೆ. ಮೇಲಾಗಿ ಕಂಪೆನಿಗಳು ನಷ್ಟದಲ್ಲಿ ಇಲ್ಲವೇ ಇಲ್ಲ.

ಸರ್ಕಾರದ ತೈಲ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೋಡಿದರೆ ಎಲ್ಲಾ ಮಾಹಿತಿ ಸಿಕ್ಕಿಬಿಡುತ್ತದೆ. ಮೂರು ತೈಲ ಕಂಪೆನಿಗಳು ಕಳೆದ ನಾಲ್ಕು ವರ್ಷದಲ್ಲಿ ತೆರಿಗೆಯ ನಂತರ ರೂ 36,653 ಕೋಟಿಗಳಷ್ಟು ವರಮಾನ ಗಳಿಸಿವೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಒಟ್ಟು ವರಮಾನ ಕಳೆದ ನಾಲ್ಕು ವರ್ಷಗಳಲ್ಲಿ ರೂ1,26,294 ಕೋಟಿಗಳಷ್ಟಿದೆ. ಲಾಭ ಎಂಬುದು ಗಾಳಿಯಲ್ಲಿ ಸೃಷ್ಟಿಯಾಗುವುದಿಲ್ಲ. ಜನರು ಉತ್ಪನ್ನಗಳನ್ನು ಬಳಸುವುದರಿಂದಲೇ ಕಂಪೆನಿಗಳಿಗೆ ಲಾಭವಾಗುತ್ತಿರುವುದು.

ಇದರರ್ಥ ಏನೆಂದರೆ, ತೈಲ ಕಂಪೆನಿಗಳಿಗೆ ಲಾಭವಾದರೆ ಜನರಿಗೆ ನಷ್ಟವಾಯಿತು ಎಂದಾಗುತ್ತದೆ. ಭಾರಿ ಲಾಭ ಗಳಿಸುವ ಮನೋಭಾವವೂ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಧ್ಯೇಯಕ್ಕೆ ವಿರುದ್ಧವಾದುದು. ಜನರ ಸೇವೆಯೇ ಇವುಗಳ ಧ್ಯೇಯವಾಗಬೇಕು.

ನಷ್ಟದಲ್ಲಿ ನಡೆಯುವುದು ಬೇಡ, ನಷ್ಟವೂ ಇಲ್ಲದೆ, ಲಾಭವನ್ನೂ ಮಾಡಿಕೊಳ್ಳದೆ ಕಂಪೆನಿ ನಡೆಯುವಂತಿರಬೇಕು ಅಷ್ಟೇ. ಒಂದು ವೇಳೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ನಷ್ಟವಾದರೂ ಅದನ್ನು ನಷ್ಟ ಎಂದು ಪರಿಗಣಿಸಬೇಕಿಲ್ಲ.

ಎಲ್ಲಿಯ ತನಕ ಅವುಗಳು ರಾಷ್ಟ್ರೀಯ ಉತ್ಪಾದನೆ, ಉದ್ಯೋಗ ನೀಡಿಕೆ, ಬೆಲೆ ನಿಯಂತ್ರಣ, ಬಡವರಿಗೆ ತಲುಪುವಂತಹ ಕಾರ್ಯ ನಡೆಸುತ್ತವೆಯೋ ಅವುಗಳ ನಷ್ಟ ನಿಜವಾಗಿಯೂ ನಷ್ಟ ಎಂದಾಗುವುದಿಲ್ಲ.

ಪೆಟ್ರೋಲಿಯಂ ಉತ್ಪನ್ನಗಳಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಐದು ವರ್ಷಗಳಲ್ಲಿ ಅಬಕಾರಿ ಸುಂಕ ರೂಪದಲ್ಲಿ ರೂ2,93,259 ಕೋಟಿ , ಕಸ್ಟಮ್ಸ ಸುಂಕ ರೂಪದಲ್ಲಿ ರೂ 62,474 ಕೋಟಿ  ಹಾಗೂ ತೆರಿಗೆಯೇತರ ವರಮಾನದ ರೂಪದಲ್ಲಿ ರೂ 35,753 ಕೋಟಿ  ದೊರೆತಿದೆ. ಅಂದರೆ ಒಟ್ಟು ರೂ 3,91,486 ಕೋಟಿಗಳಷ್ಟು ವರಮಾನ ಬಂದಿದೆ.

ಪೆಟ್ರೋಲಿಯಂ ಉತ್ಪನ್ನಗಳಿಂದ ಒಟ್ಟು ವರಮಾನ ಇದಕ್ಕಿಂತಲೂ ಅಧಿಕ ಇದೆ. ರಾಜಧನ, ಉದ್ಯಮ ತೆರಿಗೆ, ಲಾಭಾಂಶ, ಲಾಭಾಂಶದ ಮೇಲೆ ತೆರಿಗೆ... ಹೀಗೆ ಪಟ್ಟಿ ಬೆಳೆಯುತ್ತದೆ. ಜತೆಗೆ ರಾಜ್ಯ ಸರ್ಕಾರಗಳೂ ಮಾರಾಟ ತೆರಿಗೆ/ವ್ಯಾಟ್, ರಾಜಧನ, ಲಾಭಾಂಶ, ಆಕ್ಟ್ರಾಯ್ ಮೊದಲಾದ ರೂಪದಲ್ಲಿ ವರಮಾನ ಗಳಿಸುತ್ತವೆ.
 
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳಿಂದ ರೂ 72 ಸಾವಿರ ಕೋಟಿಗಳಿಗೂ ಅಧಿಕ ವರಮಾನ ಗಳಿಸಿವೆ.
ತಾನು ಭಾರಿ ಪ್ರಮಾಣದಲ್ಲಿ ಸಬ್ಸಿಡಿ ನೀಡಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತದೆ.

ಆದರೆ, ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ತಾನು ಗಳಿಸಿದ ರೂ4 ಲಕ್ಷ ಕೋಟಿಗಳ ವರಮಾನಕ್ಕೆ ಪ್ರತಿಯಾಗಿ ಸಬ್ಸಿಡಿ ರೂಪದಲ್ಲಿ ನೀಡಿರುವುದು ಕೇವಲ ರೂ 26 ಸಾವಿರ ಕೋಟಿಗಳು ಮಾತ್ರ.

ಅಂದರೆ, ಪೆಟ್ರೋಲಿಯಂ ಉತ್ಪನ್ನಗಳಿಂದ ಬಂದ ವರಮಾನದಲ್ಲಿ ನೀಡಿದ ಲಾಭಾಂಶದ ಪ್ರಮಾಣ ಕೇವಲ ಶೇ 6.64ರಷ್ಟು ಮಾತ್ರ. ರಾಜ್ಯ ಸರ್ಕಾರಗಳ ವರಮಾನ ಪರಿಗಣಿಸಿದರೆ ಲಾಭಾಂಶ ನೀಡಿಕೆಯ ಪ್ರಮಾಣ ಮತ್ತೂ ಕಡಿಮೆಯಾಗುತ್ತದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಎಷ್ಟೇ ಹೆಚ್ಚಿದರೂ ಲಾಭಾಂಶ ಮಾತ್ರ ಸರ್ಕಾರದ ಉದ್ದೇಶ ಆಗಿಲ್ಲವಾಗಿದ್ದರೆ ಕಳೆದ ಐದು ವರ್ಷಗಳಲ್ಲಿ ಲೀಟರ್‌ಗೆ ರೂ 20ರಿಂದ 26 ಒಳಗೆಯೇ ಪೆಟ್ರೋಲ್ ನೀಡಬೇಕಿತ್ತು.

ಏಕೆಂದರೆ ಪೆಟ್ರೋಲಿಯಂ ಸಂಸ್ಕರಣೆ ವೆಚ್ಚ ಬೀಳುವುದು ಇಷ್ಟೇ. ಆದರೆ, ಸರ್ಕಾರಕ್ಕೆ ಇದು ಬೇಕಾಗಿಲ್ಲ. ತೈಲ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಒಂದೇ ಉದ್ದೇಶದಿಂದಾಗಿ ಜನಸಾಮಾನ್ಯರು ಭಾರಿ ಸಂಕಷ್ಟ ಅನುಭವಿಸುವಂತಾಗಿದೆ.

ಸರ್ಕಾರದ ದುರುದ್ದೇಶ ಇಷ್ಟಕ್ಕೇ ನಿಂತಿಲ್ಲ. ಸರ್ಕಾರ ನೀಡುವ ಸಬ್ಸಿಡಿ ಸಮರ್ಪಕವಾಗಿ ಬಳಕೆಯಾಗಬೇಕು ಎಂಬ ನೆಪವೊಡ್ಡಿ ರಿಯಾಯಿತಿ ದರದ ಪಡಿತರ ಸಾಮಗ್ರಿಗಳ ಬದಲಿಗೆ ನಗದು ನೀಡುವ ಚಿಂತನೆ ನಡೆಸಿದೆ.

ದೊಡ್ಡ ಸಂಖ್ಯೆಯಲ್ಲಿರುವ ಬಡವರಿಗೆ ಅಗತ್ಯವಾಗಿ ನೀಡಬೇಕಾದ ಸೌಲಭ್ಯಗಳನ್ನು ಇನ್ನಷ್ಟು ಕಡಿತಗೊಳಿಸುವುದೇ ಸರ್ಕಾರದ ಅಭಿವೃದ್ಧಿ ನೀತಿಯೇ? ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುತ್ತಿರುವುದನ್ನು ನೋಡಿದರೆ ಸರ್ಕಾರಕ್ಕೆ ಬಡವರ ಬಗೆಗೆ ಇರುವ ನಿಜವಾದ ಕಾಳಜಿ ತಿಳಿಯದೆ ಇರದು.

ತೈಲ ಕಂಪೆನಿಗಳಿಗೆ ತೆರಿಗೆ ಪಾವತಿ ನಂತರ ಬಂದ ಲಾಭ

(ಕಳೆದ ನಾಲ್ಕು ವರ್ಷಗಳಲ್ಲಿ ರೂ ಕೋಟಿ ಲೆಕ್ಕದಲ್ಲಿ)

ಕಂಪೆನಿ 2006-07 2007-08 2008-09 2009-

10 ಒಟ್ಟುಐಸಿಸಿಎಲ್ 7,500 6,656 2,950 10,221 27,327

ಬಿಪಿಸಿಎಲ್ 1,805 1,327 736 1,538 5,406ಎಚ್‌ಪಿಸಿಎಲ್ 1,571 473 575 1,301 3,920

ಒಟ್ಟು 10,876 8,456 4,261 13,060 36,653

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT