ಮುಂಬೈ (ಪಿಟಿಐ): ಬಾಕಿ ಹಣ ವಸೂಲಿಗಾಗಿ ಉದ್ಯಮಿ ವಿಜಯ್ ಮಲ್ಯ ಅವರ ಖಾಸಗಿ ವಿಮಾನವನ್ನು ಆಗಸ್ಟ್ 18ರಂದು ಮರು ಹರಾಜು ಹಾಕಲು ಸೇವಾ ತೆರಿಗೆ ಇಲಾಖೆ ಮುಂದಾಗಿದೆ.
ಈ ಮೊದಲು ಹರಾಜು ಹಾಕಲು ಇಲಾಖೆ ಕೈಗೊಂಡಿದ್ದ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ‘ಇ–ಹರಾಜಿ’ಗೆ ಯುಎಇ ಮೂಲದ ಅಲ್ನಾ ಫೈನಾನ್ಸ್ ಹೋಲ್ಡಿಂಗ್ಸ್ ಕೇವಲ ₹ 1.09 ಕೋಟಿಗಳನ್ನಷ್ಟೇ ಬಿಡ್ ಮಾಡಿತ್ತು. ಇದು ಹರಾಜಿಗೆ ನಿಗದಿ ಮಾಡಿದ್ದ ಕನಿಷ್ಠ ಬಿಡ್ ಮೊತ್ತವಾದ ₹ 152 ಕೋಟಿಗಳಿಗಿಂತ ತುಂಬ ಕಡಿಮೆ ಇತ್ತು. ಹೀಗಾಗಿ ಹರಾಜು ಪ್ರಕ್ರಿಯೆ ವಿಫಲವಾಗಿತ್ತು. ಹೀಗಾಗಿ ಮತ್ತೊಮ್ಮೆ ಹರಾಜು ಹಾಕಲು ನಿರ್ಧರಿಸಲಾಗಿದೆ.
ಕಿಂಗ್ಫಿಷರ್ ಏರ್ಲೈನ್ಸ್ನಿಂದ ₹ 800 ಕೋಟಿಗಳಷ್ಟು ತೆರಿಗೆ ಬಾಕಿ ವಸೂಲಿಗೆ ಸೇವಾ ತೆರಿಗೆ ಇಲಾಖೆಯು 2013ರ ಡಿಸೆಂಬರ್ನಲ್ಲಿಯೇ ಈ ಖಾಸಗಿ ವಿಮಾನವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ‘ಮಿನಿ ರತ್ನ’ ಕೇಂದ್ರೋದ್ಯಮ ಎಂಎಸ್ಟಿಸಿ ಲಿಮಿಟೆಡ್ ಮೂಲಕ, ಸೇವಾ ತೆರಿಗೆ ಇಲಾಖೆಯು ಈ ವಿಮಾನದ ಹರಾಜು ನಡೆಸಲಿದೆ.