ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ತೆರಿಗೆ: ಸಿಹಿ-ಕಹಿ

Last Updated 27 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವ ಪ್ರಣವ ಮುಖರ್ಜಿ ಅವರು ಮಂಡಿಸಿದ 2012-13 ನೇ ಸಾಲಿನ ಬಜೆಟ್‌ನಲ್ಲಿ ಆದಾಯದಲ್ಲಿ ತೆರಿಗೆದಾರರಿಗೆ ಅನುಕೂಲವಾಗುವ ಸೌಲಭ್ಯಗಳೇನೂ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಇಂಥ ಅಭಿಪ್ರಾಯದ ಮಧ್ಯೆಯೂ ಈ ಬಾರಿಯ ಬಜೆಟ್‌ನಲ್ಲಿ ಸೇವಾ ತೆರಿಗೆ (ಸರ್ವಿಸ್ ಟ್ಯಾಕ್ಸ್) ವಿಧಿಸುವುದರಲ್ಲಿ ಬದಲಾವಣೆ ಮಾಡಿರುವುದು ಜನಸಾಮಾನ್ಯರ ಪಾಲಿಗೆ ಬೆಳ್ಳಿಗೆರೆ ಎಂದೇ ಹೇಳಬಹುದು.17 ಸೇವೆಗಳನ್ನು ಸೇವಾ ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಜನರಿಗೆ ಅಲ್ಪಮಟ್ಟಿಗೆ ಅನುಕೂಲವಾಗಿದೆ.

ಸೇವಾ ತೆರಿಗೆ, ಹೆಸರೇ ಹೇಳುವಂತೆ ನಾವು ಪಡೆಯುವ `ಸೇವೆ~ಗೆ ಪ್ರತಿಯಾಗಿ ಸಲ್ಲಿಸುವ ತೆರಿಗೆ. ನಾವು ಬಳಸುವ ಸೋಪ್, ಬ್ರಷ್, ವಾಹನದಿಂದ ಹಿಡಿದು ಪಡೆಯುವ ಸಂಬಳದವರೆಗಿನ ಸೇವೆಗಳು ಸೇವಾ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ.

ಇದೇ ವರ್ಷದ ಜೂನ್ ತಿಂಗಳಿಗೆ ಸೇವಾ ತೆರಿಗೆ ಆರಂಭವಾಗಿ 18 ವರ್ಷಗಳಾಗುತ್ತವೆ. ಪ್ರಸಕ್ತ ಬಜೆಟ್‌ನಲ್ಲಿ ಅದನ್ನು ಶೇ 2 ರಷ್ಟಕ್ಕೆ ಏರಿಸಲಾಗಿದೆ. ಅಂದರೆ, ಈ ವರೆಗೆ ಶೇ 10 ರಷ್ಟಿದ್ದ ಸೇವಾ ತೆರಿಗೆ ಈಗ ಶೇ 12ಕ್ಕೆ ಏರಿದೆ. ಈ ಹೆಚ್ಚಳದಿಂದ ಸರಕಾರಕ್ಕೆ ವಾರ್ಷಿಕ ರೂ 1.24 ಲಕ್ಷ ಕೋಟಿಗಳಷ್ಟು ವರಮಾನವು ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ.

ವಿನಾಯ್ತಿ ಪಡೆದ 17 ಸೇವೆಗಳು
1.ಸರಕಾರ ಮತ್ತು ಸ್ಥಳೀಯ ಪ್ರಾಧಿಕಾರದ ಸೇವೆಗಳು:
ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮುನ್ಸಿಪಲ್ ತೆರಿಗೆ, ಕಾರು ನೋಂದಣಿ ಶುಲ್ಕ, ಪೊಲೀಸರು ವಿಧಿಸುವ ದಂಡಗಳಿಗೆ ನೀವು ಸೇವಾ ತೆರಿಗೆ ನೀಡಬೇಕಾಗಿಲ್ಲ.

ಆದರೆ, ಇಂಥವೇ ಸೇವೆಗಳ ಅಡಿಯಲ್ಲಿ ಬರುವ ಸ್ಪೀಡ್ ಪೋಸ್ಟ್, ಎಕ್ಸ್‌ಪ್ರೆಸ್ ಪೋಸ್ಟ್, ಅಂಚೆ ಕಚೇರಿಯಿಂದ ಪಡೆದ ಜೀವ ವಿಮೆ, ವಿಮಾನ ನಿಲ್ದಾಣದ ಸೇವೆಗಳು, ಉದ್ಯಮಕ್ಕೆ ಸರಕಾರ ನೀಡುವ ಸೇವೆಗಳು (ಉದಾಹರಣೆಗೆ, ಕಂಪೆನಿಗಳು ವಾರ್ಷಿಕ ತೆರಿಗೆ ಪಾವತಿ ಸಂದರ್ಭದಲ್ಲಿ ಕಂಪನಿ ರಿಜಿಸ್ಟ್ರಾರ್‌ಗೆ ಸಲ್ಲಿಸುವ ತೆರಿಗೆ) ಸೇವಾ ತೆರಿಗೆಯಿಂದ ವಿನಾಯ್ತಿ ಪಡೆದಿಲ್ಲ. ಇವುಗಳಿಗೆ ನೀವು ಸೇವಾ ತೆರಿಗೆ ಸಲ್ಲಿಸಬೇಕು.

2. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೇವೆಗಳು: ಕರೆನ್ಸಿ ಮುದ್ರಣಕ್ಕೆ ಆರ್‌ಬಿಐ ಸೇವಾ ತೆರಿಗೆ ವಿಧಿಸುವುದಿಲ್ಲ.

3. ಭಾರತದಲ್ಲಿ ಇರುವ ವಿದೇಶಿ ರಾಯಭಾರ ಮತ್ತು ಉಪ ರಾಯಭಾರ ಕಚೇರಿಗಳು. ಈ ಕಚೇರಿಗಳು ವಿಧಿಸುವ ವೀಸಾ ಶುಲ್ಕಕ್ಕೆ ಸೇವಾ ತೆರಿಗೆ ಪಾವತಿಸಬೇಕಿಲ್ಲ.

4. ಕೃಷಿ ಸೇವೆಗಳು: ಬಿತ್ತನೆ ಬೀಜಕ್ಕೆ ಬಳಸುವ ಉಪಕರಣ, ಕಟಾವು ಸಾಧನ, ನೀರಾವರಿ ಸಾಧನಗಳು ಹಾಗೂ ಖಾಲಿ ಇರುವ ಕೃಷಿ ಭೂಮಿ ಅಥವಾ ಸಲಕರಣೆಗಳನ್ನು ಬಾಡಿಗೆ ನೀಡಲು ಸೇವಾ ತೆರಿಗೆ ನೀಡಬೇಕಾದ ಅಗತ್ಯವಿಲ್ಲ.

5. ವ್ಯಾಪಾರ: ಈ ಕೆಳಕಂಡಂತೆ

6. ಸರಕು ಉತ್ಪಾದನೆ: ಸರಕು ಉತ್ಪಾದನೆ ಹಾಗೂ ವ್ಯಾಪಾರ, ಸೇವಾ ತೆರಿಗೆಯಿಂದ ವಿನಾಯ್ತಿ ಪಡೆದಿವೆ. ಆದರೆ, ಇವೆರಡಕ್ಕೂ (ವ್ಯಾಪಾರ ಹಾಗೂ ಸರಕು ಉತ್ಪಾದನೆ) ಅಬಕಾರಿ ಸುಂಕ, ಸೀಮಾ ಸುಂಕ ಹಾಗೂ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹೇರಲಾಗಿದ್ದು ಇವು ತೆರಿಗೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.

7. ನಿರ್ವಹಣಾ ಶುಲ್ಕ: ಹೌಸಿಂಗ್ ಸೊಸೈಟಿಗೆ ನೀವು ಪ್ರತಿ ತಿಂಗಳು ಪಾವತಿಸುವ ರೂ 5 ಸಾವಿರ ವರೆಗಿನ ನಿರ್ವಹಣಾ ಶುಲ್ಕ ಸೇವಾ ತೆರಿಗೆಯಿಂದ ಮುಕ್ತವಾಗಿದೆ.

8. ಟೋಲ್ ಶುಲ್ಕ:
ಟೋಲ್ ಸಂಗ್ರಹಕ್ಕೆ ಸೇವಾ ತೆರಿಗೆ ಪಾವತಿಸಬೇಕಿಲ್ಲ.

9. ಜೂಜು: ಜೂಜು ಅಡ್ಡೆಗೆ ಭೇಟಿ ನೀಡಿದರೆ, ಅಥವಾ ಕುದುರೆ ರೇಸ್‌ನಲ್ಲಿ ಬಾಜಿ ಕಟ್ಟಿದರೆ ತೆರಿಗೆ ನೀಡಬೇಕಿಲ್ಲ. ಆದರೆ, ಇವುಗಳಲ್ಲಿ ಒಂದರಲ್ಲಿ ನೀವು ಗೆದ್ದರೆ ಭಾರಿ ಮೊತ್ತದ ತೆರಿಗೆ ಕಟ್ಟಬೇಕು. ಅಂದರೆ, ಸೋತಾಗಲಷ್ಟೇ ಈ ಸೇವಾ ತೆರಿಗೆ ವಿನಾಯ್ತಿ ನಿಮಗೆ ಅನ್ವಯವಾಗುತ್ತದೆ.

10. ಮನರಂಜನಾ ಕಾರ್ಯಕ್ರಮಗಳಿಗೆ ಪ್ರವೇಶ: ಸಂಗೀತ ಕಚೇರಿ, ಮನರಂಜನಾ ಕಾರ್ಯಕ್ರಮ ಹಾಗೂ ವಿಹಾರ-ವಿನೋದ ಪಾರ್ಕ್‌ಗಳ ಪ್ರವೇಶಕ್ಕೆ ನೀವು ಸೇವಾ ತೆರಿಗೆ ತೆರಬೇಕಿಲ್ಲ.

11. ವಿದ್ಯುತ್: ಸ್ಥಳೀಯ ವಿದ್ಯುಚ್ಛಕ್ತಿ ನಿಗಮಕ್ಕೆ ನೀವು ಕಟ್ಟುವ ಬಿಲ್‌ಗೆ ಸೇವಾ ತೆರಿಗೆ ಇಲ್ಲ. ಆದರೆ, ಜನರೇಟರ್ ಬಳಸಿ ಉತ್ಪಾದಿಸಿದ ವಿದ್ಯುತ್ತಿಗೆ ನೀವು ಶೇ 12 ರಷ್ಟು ತೆರಿಗೆ ತೆರಲೇಬೇಕು.

12. ಶಿಕ್ಷಣ: ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಾಲಾ ಶಿಕ್ಷಣದವರೆಗೆ ಸೇವಾ ತೆರಿಗೆಯಿಲ್ಲ. ಪದವಿ ಪಡೆಯಲು ಕಲಿಯುವ ಯಾವುದೇ ಶಿಕ್ಷಣಕ್ಕೂ ಈ ತೆರಿಗೆ ಅನ್ವಯಿಸುವುದಿಲ್ಲ. ವಾಣಿಜ್ಯ ಅಥವಾ ವೃತ್ತಿಪರ ಶಿಕ್ಷಣಕ್ಕೆ ಮಾಡುವ ಕೋರ್ಸುಗಳಿಗೆ ಸೇವಾ ತೆರಿಗೆ ಅನ್ವಯವಾಗುತ್ತದೆ.

13. ಮನೆ ಬಾಡಿಗೆ: ಬಾಡಿಗೆ ಮನೆಯಲ್ಲಿ ಇರುವವರು ಸೇವಾ ತೆರಿಗೆ ನೀಡಬೇಕಾಗಿಲ್ಲ. ಆದರೆ, ವಾಣಿಜ್ಯ ಉದ್ದೆೀಶಕ್ಕಾಗಿ ಬಳಸುವ ಫ್ಯಾಕ್ಟರಿ, ಕಚೇರಿಗಳಿಗೆ ನೀಡುವ ಬಾಡಿಗೆಗೆ ಸೇವಾ ತೆರಿಗೆ ಅನ್ವಯವಾಗುತ್ತದೆ.

14. ವಾಣಿಜ್ಯ ವ್ಯವಹಾರಗಳು: ಬಡ್ಡಿಯ ವಹಿವಾಟಿನ, ಉದಾಹರಣೆಗೆ ಹಣವನ್ನು ಸಾಲವಾಗಿ ನೀಡಲು, ಠೇವಣಿ ಖರೀದಿಸಲು ಸೇವಾ ತೆರಿಗೆ ಅನ್ವಯವಾಗುವುದಿಲ್ಲ. ಆದರೆ, ಪಡೆದ ಬಡ್ಡಿ ಅಥವಾ ನೀಡಿದ ಬಡ್ಡಿ ಹಣಕ್ಕೆ ಸೇವಾ ತೆರಿಗೆ ಅನ್ವಯವಾಗುತ್ತದೆ.

15. ಸಾರ್ವಜನಿಕ ಸಾರಿಗೆ: ಮೀಟರ್ ಟ್ಯಾಕ್ಸಿ, ಆಟೊ ರಿಕ್ಷಾ ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುವ ಭೂ ಮತ್ತು ಜಲ ಸಾರಿಗೆ ಸೇವಾ ತೆರಿಗೆಯಿಂದ ಹೊರತಾಗಿದೆ. ಆದರೆ, ಹವಾ ನಿಯಂತ್ರಿತ ಟ್ಯಾಕ್ಸಿ, ಹವಾ ನಿಯಂತ್ರಿತ ರೈಲು ದರ್ಜೆ, ವ್ಯವಸ್ಥಿತ ಪ್ರವಾಸ (ಪ್ಯಾಕೇಜ್ಡ್ ಟೂರ್) ಹಾಗೂ ವಿಮಾನಯಾನಕ್ಕೆ ಸೇವಾ ತೆರಿಗೆ ಅನ್ವಯವಾಗುತ್ತದೆ.

16. ಸರಕು ಸಾಗಣೆ: ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕೊರಿಯರ್ ಹೊರತುಪಡಿಸಿ ಮಾಡುವ ಸರಕು ಸಾಗಣೆ ಸೇವಾ ತೆರಿಗೆ ವ್ಯಾಪ್ತಿಗೆ ಬರುತ್ತದೆ.

17. ಅಂತಿಮ ವಿದಾಯ: ಅಂತ್ಯ ಸಂಸ್ಕಾರ, ದಫನ, ವಿದ್ಯುತ್ ಚಿತಾಗಾರ, ಶವಾಗಾರ, ಶವ ಸಾಗಿಸುವ ವಾಹನ ಬಳಸಿದ ಸೇವೆಗೆ ತೆರಿಗೆ ಇಲ್ಲ.

ಈ 17 ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೇವೆಗಳಿಗೂ ತೆರಿಗೆ ಅನ್ವಯವಾಗುತ್ತದೆ ಎಂದ ಮಾತ್ರಕ್ಕೆ ಗಾಬರಿಯಾಗಬೇಕಾಗಿಲ್ಲ. ರೂ 10 ಲಕ್ಷದವರೆಗೆ ಸೇವೆ ಒದಗಿಸುವ ಚಿಕ್ಕ ಪ್ರಮಾಣದ ವಹಿವಾಟುದಾರರು ನೀವಾಗಿದ್ದರೆ ಸೇವಾ ತೆರಿಗೆ ಸಲ್ಲಿಸುವ ಅಗತ್ಯವಿಲ್ಲ.

ಇಲ್ಲಿ ಇನ್ನೂ ಒಂದು ವಿಷಯ ಗಮನಿಸಬೇಕು. ವಹಿವಾಟೊಂದಕ್ಕೆ ಈಗಾಗಲೇ ಬೇರೆ ರೀತಿಯ ತೆರಿಗೆ ಇದ್ದರೆ, ಉದಾಹರಣೆಗೆ, ಅಬಕಾರಿ ಸುಂಕ, ಸೀಮಾ ಸುಂಕ ಅಥವಾ ವ್ಯಾಟ್ ಇದ್ದರೆ ಸೇವಾ ತೆರಿಗೆ ವಿಧಿಸಲಾಗುವುದಿಲ್ಲ.

ರೆಸ್ಟೊರೆಂಟ್ ಬಿಲ್‌ಗೆ ಮಾತ್ರ ಇದು ಅನ್ವಯವಾಗುವುದಿಲ್ಲ. ಈ ಸಂದರ್ಭದಲ್ಲಿ ಸೇವಾ ತೆರಿಗೆ ಸಲ್ಲಿಸುವ ಜೊತೆಗೆ ಮೇಲೆ ತಿಳಿಸಿದ ತೆರಿಗೆಗಳನ್ನೂ ನೀವು ನೀಡಬೇಕು. ಸೇವಾ ವಲಯ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಶೇ 59 ರಷ್ಟಿದೆ ಎಂದರೆ ಇದರ ವಿಶಾಲ ವ್ಯಾಪ್ತಿ ಅರ್ಥವಾಗುತ್ತದೆ.

ಆದ್ದರಿಂದ 18ನೇ ವರ್ಷಕ್ಕೆ  ಕಾಲಿಡುತ್ತಿರುವ ಸೇವಾ ತೆರಿಗೆಯನ್ನು ಶೇ 2 ರಷ್ಟು ಹೆಚ್ಚಿಸುವ ಮೂಲಕ ಹಣಕಾಸು ಸಚಿವರು ಸರ್ಕಾರದ ಬೊಕ್ಕಸಕ್ಕೆ ಸಂಪನ್ಮೂಲ ಸಂಗ್ರಹಿಸಲು ದಾಪುಗಾಲನ್ನೇ ಇಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT