ಆಸ್ತಿ ಮಾರಿದರೂ ಮೌಲ್ಯದಲ್ಲಿ ಐದು ಪಟ್ಟು ಹೆಚ್ಚಳ..!

ಸೋಮವಾರ, ಏಪ್ರಿಲ್ 22, 2019
32 °C
ಅವಲಂಬಿತರ ಪಟ್ಟಿಯಿಂದ ಹೊರ ಉಳಿದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಕ್ಕಳು

ಆಸ್ತಿ ಮಾರಿದರೂ ಮೌಲ್ಯದಲ್ಲಿ ಐದು ಪಟ್ಟು ಹೆಚ್ಚಳ..!

Published:
Updated:

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಹುರಿಯಾಳಾಗಿ ಅಖಾಡಕ್ಕಿಳಿದಿರುವ, ಸಂಸದ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಒಟ್ಟಾರೆ ಆಸ್ತಿ ಮೌಲ್ಯ ಐದು ವರ್ಷದಲ್ಲಿ ಐದು ಪಟ್ಟು ಹೆಚ್ಚಿದೆ.

ಐದು ವರ್ಷದ ಹಿಂದೆ ಜಿಗಜಿಣಗಿ ಆಸ್ತಿ ಮೌಲ್ಯ ₹ 10,02,58,670 ರಷ್ಟಿತ್ತು. ಇದೀಗ ₹ 50.41 ಕೋಟಿಯಷ್ಟಿದೆ.

2014ರ ಲೋಕಸಭಾ ಚುನಾವಣೆ ಸಂದರ್ಭ ಒಟ್ಟಾರೆ ಚರಾಸ್ತಿ ₹ 3,00,32,670ರಷ್ಟಿದ್ದರೆ, ಮಕ್ಕಳಿಬ್ಬರ ಚರಾಸ್ತಿ ಮೌಲ್ಯ ₹ 19 ಲಕ್ಷವಿತ್ತು. ಇದೀಗ ಜಿಗಜಿಣಗಿಯ ಚರಾಸ್ತಿಯ ಮೌಲ್ಯವೇ ₹ 3,75,78,566ಕ್ಕೆ ಏರಿದೆ. ಇದರೊಳಗೆ ಹಂಪಿ ಹೆರಿಟೇಜ್ ವೈನ್‌ ಯಾರ್ಡ್‌ನ ಹೂಡಿಕೆ ಮೌಲ್ಯ ₹ 60 ಲಕ್ಷದಷ್ಟು ಹೆಚ್ಚಳಗೊಂಡಿದೆ.

ಐದು ವರ್ಷದ ಅವಧಿಯಲ್ಲಿ ಜಿಗಜಿಣಗಿ ಕಾರು ಬದಲಿಸಿದ್ದಾರೆ. ಬೆಳ್ಳಿ–ಬಂಗಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹಿಂದಿನ ಬಾರಿ ನಾಮಪತ್ರ ಸಲ್ಲಿಸುವಾಗ ತಮ್ಮ ಮಕ್ಕಳಿಬ್ಬರನ್ನು ಅವಲಂಬಿತರು ಎಂದು ತೋರಿಸಿದ್ದರು. ಈ ಬಾರಿ ಮಕ್ಕಳಿಬ್ಬರ ಆಸ್ತಿಯನ್ನು ತೋರಿಸಿಲ್ಲ.

ಸ್ಥಿರಾಸ್ತಿಯಲ್ಲಿ ಭಾರಿ ಬದಲಾವಣೆ:

1990ರ ಅವಧಿಯಲ್ಲಿ ರಮೇಶ ಜಿಗಜಿಣಗಿ ಬೆಂಗಳೂರು ಸೇರಿದಂತೆ ವಿಜಯಪುರ ಹೊರ ವಲಯದ ಶತಮಾನದ ಐತಿಹ್ಯ ಹೊಂದಿರುವ ಭೂತನಾಳ ಕೆರೆ, ಅರಕೇರಿ ಬಳಿ ಜಮೀನು ಖರೀದಿಸಿದ್ದಾರೆ. ಅಥರ್ಗಾದಲ್ಲಿ 26.24 ಎಕರೆ ಪಿತ್ರಾರ್ಜಿತ ಜಮೀನಿದೆ.

ಭೂತನಾಳದಲ್ಲಿ 25 ಎಕರೆ, ಅರಕೇರಿ ಬಳಿ 30 ಎಕರೆ ಜಮೀನು ಖರೀದಿಸಿದ್ದು, 1990ರಲ್ಲಿ ಬೆಂಗಳೂರಿನ ಶಾಮರಾಜಪುರ ಬಳಿ ನಾಲ್ಕು ಎಕರೆ ಜಮೀನು ಖರೀದಿಸಿದ್ದಾಗಿ ಜಿಗಜಿಣಗಿ 2014ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭ ಘೋಷಿಸಿಕೊಂಡಿದ್ದರು.

ಇದರ ಜತೆಯಲ್ಲೇ 1993ರಲ್ಲಿ ಬೆಂಗಳೂರು ವ್ಯಾಪ್ತಿಯ ಗಂಗೇನಹಳ್ಳಿ ಬಳಿ, 2007ರಲ್ಲಿ ಆರ್‌.ಟಿ.ನಗರ, ಸಂಜಯ ನಗರದಲ್ಲಿ, 2011ರಲ್ಲಿ ಗೆದ್ದಲಹಳ್ಳಿ ಬಳಿ ನಿವೇಶನ ಖರೀದಿಸಿದ್ದು, ಒಟ್ಟು 10101 ಚದರಡಿ ಭೂಮಿಯನ್ನು ಖರೀದಿಸಿದ್ದನ್ನು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಇದೀಗ ಸಲ್ಲಿಸಿರುವ ನಾಮಪತ್ರದಲ್ಲಿ ಜಿಗಜಿಣಗಿ ಕೆಲವು ಆಸ್ತಿಗಳನ್ನು ಘೋಷಿಸಿಕೊಂಡಿಲ್ಲ. ಕೇಂದ್ರ ಸಚಿವರ ಆಪ್ತ ವಲಯದ ಪ್ರಕಾರ, ‘ಬೆಂಗಳೂರಿನ ಶಾಮರಾಜಪುರದಲ್ಲಿದ್ದ ನಾಲ್ಕು ಎಕರೆ ಭೂಮಿಯಲ್ಲಿ ಒಂದು ಎಕರೆ ಭೂಮಿಯನ್ನು ಮಾರಾಟ ಮಾಡಿದ್ದಾರೆ.

ಇದರಿಂದ ದೊರೆತ ಹಣದಲ್ಲಿ ಭೂತನಾಳ ಬಳಿ ಫಾರ್ಮ್‌ ಹೌಸ್‌ ಕಟ್ಟಿಸಿಕೊಂಡಿದ್ದಾರೆ. ಕಾಮಗಾರಿಯಿನ್ನು ಪೂರ್ಣಗೊಂಡಿಲ್ಲ. ಇದೇ ರೀತಿ ಅರಕೇರಿಯಲ್ಲಿ ಖರೀದಿಸಿದ ಭೂಮಿ, ಹಾಗೂ ಬೆಂಗಳೂರಿನ ಆರ್‌.ಟಿ.ನಗರದ ಆಸ್ತಿ ಹೊರತು ಪಡಿಸಿ, ಉಳಿದ ಆಸ್ತಿಗಳನ್ನು ತಮ್ಮ ಮಕ್ಕಳಿಗೆ ಹಂಚಿದ್ದಾರೆ’ ಎಂದು ತಿಳಿದು ಬಂದಿದೆ.

‘ಮಾರುಕಟ್ಟೆ ಮೌಲ್ಯ ಹೆಚ್ಚಿದ್ದರಿಂದ ಸ್ಥಿರಾಸ್ತಿಯ ಮೌಲ್ಯದಲ್ಲಿಯೂ ಏಕಾಏಕಿ ಹೆಚ್ಚಳಗೊಂಡಿದೆ. ಬೆಂಗಳೂರಿನ ಎಲ್ಲ ಆಸ್ತಿಗಳು ಜಿಗಜಿಣಗಿ ಹೆಸರಿನಲ್ಲೇ ಇದ್ದಿದ್ದರೇ ಇದು ಮತ್ತಷ್ಟು ಹೆಚ್ಚುತ್ತಿತ್ತು. ಮಕ್ಕಳ ಆಸ್ತಿಯೂ ಸೇರಿದ್ದರೆ ಇನ್ನೂ ಕೇಂದ್ರ ಸಚಿವರ ಕುಟುಂಬದ ಆಸ್ತಿಯ ಮೌಲ್ಯ ಹೆಚ್ಚಳಗೊಳ್ಳುತ್ತಿತ್ತು’ ಎಂದು ಜಿಗಜಿಣಗಿ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !