ಕನಿಷ್ಠ ಮೂಲಸೌಲಭ್ಯ ವಂಚಿತ ನಲ್ಲಪರೆಡ್ಡಿಪಲ್ಲಿ

7
ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಹರಿಯದ ನೀರು; ಗ್ರಾಮದಲ್ಲಿ ಸಾಂಸ್ಕೃತಿಕ ರೋಗಗಳ ಭೀತಿ

ಕನಿಷ್ಠ ಮೂಲಸೌಲಭ್ಯ ವಂಚಿತ ನಲ್ಲಪರೆಡ್ಡಿಪಲ್ಲಿ

Published:
Updated:
Deccan Herald

ಬಾಗೇಪಲ್ಲಿ: ಸಮರ್ಪಕ ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್‌ ದೀಪ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳೂ ಇಲ್ಲದೆ ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ನರಳುತ್ತಿದೆ. ಅಭಿವೃದ್ಧಿ ಕಾಣದ ಗ್ರಾಮದಲ್ಲಿ ಜನರು ಹತ್ತೆಂಟು ಸಮಸ್ಯೆ ಎದುರಿಸುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ನಲ್ಲಪರೆಡ್ಡಿಪಲ್ಲಿ ಗ್ರಾಮ ಇದೆ. ಇಲ್ಲಿ 900ಕ್ಕೂ ಹೆಚ್ಚು ಮನೆಗಳಿವೆ. ಅವುಗಳಲ್ಲಿ ಬಹುತೇಕ ಮನೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸೇರಿವೆ. ಗ್ರಾಮದಲ್ಲಿ ಲಕ್ಷಗಟ್ಟಲೆ ಅನುದಾನ ವೆಚ್ಚ ಮಾಡಿ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ನೀರು ಹರಿಯುತ್ತಿಲ್ಲ. ಚರಂಡಿ ಕಟ್ಟಿಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು, ಹಲವು ರೋಗಿಗಳಿಗೂ ಕಾರಣವಾಗಿದೆ.

ಕೊಳಚೆ ನೀರಿನಿಂದ ದುರ್ನಾತ ಹರಡುತ್ತಿದೆ. ಚರಂಡಿ ಪಕ್ಕದ ಮನೆಗಳ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮಳೆಗಾಲದಲ್ಲಿ ಮಳೆ ನೀರಿನಿಂದ ಚರಂಡಿ ತುಂಬಿಕೊಳ್ಳುವುದು. ಕೊಳಚೆ ನೀರು ರಸ್ತೆಗೆ ಹರಿದು, ತಗ್ಗು ಪ್ರದೇಶಗಳ ಮನೆಗಳಿಗೂ ನುಗ್ಗುತ್ತದೆ. ಇದರಿಂದ ನಿವಾಸಿಗಳು ರೋಸಿದ್ದು, ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಸಮಸ್ಯೆಗೆ ಪರಿಹಾರವೂ ಸಿಕ್ಕಿಲ್ಲ.

ಚರಂಡಿ ನಿರ್ಮಾಣ ಕಾಮಗಾರಿಯಲ್ಲಿಯೇ ಲೋಪವಾಗಿದೆ. ಹೀಗಾಗಿ ಚರಂಡಿ ನೀರು ಕಾಲುವೆ ಬಿಟ್ಟು ರಸ್ತೆ ಮೇಲೆ ಹರಿಯುತ್ತಿದೆ. ಅದೇ ನೀರನ್ನು ತುಳಿದುಕೊಂಡು ಜನರು ಓಡಾಡಬೇಕಾಗಿದೆ. ವಾಹನ ಸವಾರರು ದಾಟಲು ಸರ್ಕಸ್‌ ಮಾಡುವರು. ಕೆಲವರು ಬಿದ್ದು ಗಾಯಗೊಂಡಿದ್ದೂ ಇದೆ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮದ ನೀರಿನ ಟ್ಯಾಂಕರ್‌, ಕೊಳಾಯಿ ಪಕ್ಕದಲ್ಲಿಯೂ ನೀರು ನಿಂತು ಚರಂಡಿಯಂತಾಗಿದೆ. ಅದರ ಪಕ್ಕದಲ್ಲಿಯೇ ಕಸ, ತಿಪ್ಪೆಗುಂಡಿ ರಾಶಿ ಬಿದ್ದಿರುತ್ತದೆ. ಸುತ್ತಲಿನ ವಾತಾವರಣವೆಲ್ಲ ಗಲೀಜಾಗಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಗ್ರಾಮಸ್ಥರು ವರ್ಷವಿಡೀ ಜ್ವರ, ಕೆಮ್ಮು, ನೆಗಡಿ, ಕೈಕಾಲು ನೋವುಗಳಿಂದ ನರಳುತ್ತಿದ್ದಾರೆ. ಚಿಕೂನ್‌ಗುನ್ಯಾ, ಮಲೇರಿಯ, ಡೆಂಗಿ ಮತ್ತಿತರ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಹೊಸದಾಗಿ ಮನೆ ನಿರ್ಮಿಸಲು ಅಧಿಕಾರಿಗಳು ಅನುಮತಿ ನೀಡುವ ಮುನ್ನ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನೂ ಪರಿಶೀಲಿಸಬೇಕು. ಮನೆಗೆ ಆಸ್ತಿ ಕಂದಾಯ, ನೀರಿನ ಕರ ವಸೂಲಿ ಮಾಡುವಂತೆ ಸೌಲಭ್ಯಗಳನ್ನು ಒದಗಿಸು ವುದೂ ಅವರ ಜವಾಬ್ದಾರಿ. ಆದರೆ ಇದನ್ನು ಮಾತ್ರ ಮಾಡುತ್ತಿಲ್ಲ. ಸಮಸ್ಯೆ ಪರಿಹರಿಸಲು ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವರು.

‘ಸ್ವಚ್ಛ ಭಾರತ್‌ ಯೋಜನೆಯಡಿ ಪಂಚಾಯಿತಿಯಿಂದ ಸ್ವಚ್ಛತೆ ಹೆಸರಲ್ಲಿ ಕೋಟಿಗಟ್ಟಲೆ ಅನುದಾನ ಖರ್ಚು ಮಾಡುತ್ತದೆ. ಆದರೆ ಸ್ವಚ್ಛತೆ ಮಾತ್ರ ಎಲ್ಲೂ ಕಾಣಲ್ಲ. ಹಣ ಖರ್ಚಾದಷ್ಟೇ ರೋಗಗಳೂ ಹೆಚ್ಚಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ನಿರಾಸಕ್ತಿಯೇ ಕಾರಣ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮದ ನಿವಾಸಿ ಅಶ್ವತ್ಥರೆಡ್ಡಿ ಆರೋಪಿಸಿದರು.

‘ಚರಂಡಿ ಹಾಗೂ ತಿಪ್ಪೆಗುಂಡಿಗಳ ಪಕ್ಕದಲ್ಲಿ ಸ್ವಚ್ಛತೆ ಇಲ್ಲ. ನೀರಿನ ತೊಟ್ಟಿ ಸುತ್ತ ಬ್ಲೀಚಿಂಗ್ ಪೌಡರ್ ಸಹ ಹಾಕುತ್ತಿಲ್ಲ. ಸ್ವಚ್ಛತೆಗಾಗಿಯೇ ಅಧಿಕಾರಿ ಯನ್ನು ನೇಮಿಸಲಾಗಿದೆ. ಅವರು ವಾರಕ್ಕೊಮ್ಮೆ ಗ್ರಾಮಕ್ಕೆ ಬರುವರು’ ಎಂದು ಗ್ರಾಮದ ಮುಖಂಡ ಚಂದ್ರಶೇಖರರೆಡ್ಡಿ ಆರೋಪಿಸುವರು.

‘ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಗೆ ಅನುದಾನದ ಕೊರತೆ ಇದೆ. ಹೀಗಾಗಿ ಕೆಲವೆಡೆ ಚರಂಡಿ ಸ್ವಚ್ಛತೆ ಕಾಮಗಾರಿ ನಡೆದಿಲ್ಲ. ವಿಶೇಷ ಅನುದಾನಕ್ಕಾಗಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಕಾಮಗಾರಿ ಕೈಗೊಳ್ಳಲಾಗುವುದು. ಜನರೂ ಸಹ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಸ್ವಚ್ಛತೆ ಕಾಪಾಡಲು ಸಹಕರಿಸಬೇಕು. ಇದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಹಕಾರಿ ಆಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುವರ್ಣ ಹೇಳುವರು.

*
ಸ್ವಚ್ಛತೆ ಕೊರತೆ, ಚರಂಡಿಯಲ್ಲಿ ನಿಲ್ಲುವ ನೀರು ಹಂದಿ ಆವಾಸ ಸ್ಥಾನವಾಗಿದೆ. ದುರ್ವಾಸನೆ ಒಂದೆಡೆಯಾದರೆ, ಕೊಳಚೆ ರಸ್ತೆ ಮೇಲೆ ಹರಡುತ್ತದೆ.
-ಅಶ್ವತ್ಥರೆಡ್ಡಿ, ಗ್ರಾಮದ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !