ಗುರುವಾರ , ಏಪ್ರಿಲ್ 15, 2021
20 °C

ಫಲಾನುಭವಿ ಮನೆ ಬಾಗಿಲಿಗೆ ಪಿಂಚಣಿ | ಕೈವಾರ ನಾಡಕಚೇರಿಯ ವಿನೂತನ ಕ್ರಮ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಕೈವಾರ ನಾಡ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ನೌಕರರು ಫಲಾನುಭವಿಗಳ ಮನೆಮನೆಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಲು ಪಣತೊಟ್ಟಿದ್ದಾರೆ. ಮೊದಲ ಹಂತದಲ್ಲಿ ವೃದ್ಧಾಪ್ಯ ವೇತನಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ. ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿ ತಿಂಗಳ 4ನೇ ಶನಿವಾರ ಅಧಿಕಾರಿಗಳು ಒಂದು ಹಳ್ಳಿಗೆ ಹೋಗುತ್ತಾರೆ. ಈ ಬಗ್ಗೆ ಮೊದಲೇ ಆ ಗ್ರಾಮದಲ್ಲಿ ಸಾಕಷ್ಟು ಪ್ರಚಾರವನ್ನೂ ನಡೆಸಿರುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಕುಳಿತು ಗ್ರಾಮದಲ್ಲಿ ಸರ್ಕಾರಿ ಯೋಜನೆಗಳಿಗೆ ಅರ್ಹರಿರುವ ಎಲ್ಲ ಫಲಾನುಭವಿಗಳಿಂದ ಅರ್ಜಿಗಳನ್ನು ಪಡೆಯುತ್ತಾರೆ. ಅಗತ್ಯ ದಾಖಲೆ ಹಾಗೂ ಮಾಹಿತಿಗಳನ್ನು ಕೇಳಿ ಪಡೆದುಕೊಳ್ಳುತ್ತಾರೆ.

ನಂತರ 10 ದಿನಗಳಲ್ಲಿ ಇಲಾಖೆಯ ಕಡತಗಳನ್ನು ತಯಾರಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಂಜೂರಾತಿ ಆದೇಶಗಳನ್ನು ಪಡೆದುಕೊಳ್ಳುತ್ತಾರೆ. ‌10ನೇ ದಿನ ಪುನಃ ಗ್ರಾಮಕ್ಕೆ ತೆರಳಿ ಅರ್ಹ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ನೀಡುತ್ತಾರೆ.

ನಾಡಕಚೇರಿಯ ಉಪ ತಹಶೀಲ್ದಾರ್ ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜೂನ್ 29ರಂದು ಚಿಂತಾಮಣಿ ತಾಲ್ಲೂಕಿನ ಹಿರೇಪಾಳ್ಯ ಗ್ರಾಮಕ್ಕೆ ತೆರಳಿದ್ದರು. ಗ್ರಾಮದಲ್ಲಿ ಸಾರ್ವಜನಿಕರಿಂದ 60 ಅರ್ಜಿಗಳನ್ನು ಸಂಗ್ರಹಿಸಿದ್ದರು. ವೃದ್ಧಾಪ್ಯವೇತನದ ಕುರಿತು  ಜಾಗೃತಿ ಮೂಡಿಸಿದ್ದರು.

ಕಚೇರಿಯಲ್ಲಿ ಕುಳಿತು ಇಲಾಖೆಯ ನೀತಿ ನಿಯಮದಂತೆ ಕಡತಗಳನ್ನು ತಯಾರಿಸಿ ಮೇಲಧಿಕಾರಿಗಳ ಸಹಿ ಪಡೆದು ಆದೇಶಗಳನ್ನು ಸಿದ್ದಪಡಿಸಿದ್ದರು. ಬುಧವಾರ (ಜು. 10) ಗ್ರಾಮಕ್ಕೆ ತೆರಳಿ 60 ಫಲಾನುಭವಿಗಳಿಗೂ ಆದೇಶದ ಪ್ರತಿಗಳನ್ನು ವಿತರಿಸಿದರು.

ಗ್ರಾಮೀಣ ಭಾಗಗಳಲ್ಲಿ ವಯಸ್ಸಾದ ಹಲವಾರು ಜನರಿಗೆ ಪಿಂಚಣಿಯ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಕೆಲವರಿಗೆ ಮಾಹಿತಿ ಇದ್ದರೂ ಪದೇ ಪದೇ ಕಚೇರಿಗಳಿಗೆ ಅಲೆದಾಡಲು ಸಾಧ್ಯವಾಗುವುದಿಲ್ಲ. ಈ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಕೆಲವು ಮದ್ಯವರ್ತಿಗಳು ಫಲಾನುಭವಿಗಳಿಂದ ಅಧಿಕಾರಿಗಳ ಹೆಸರಿನಲ್ಲಿ ಸಾವಿರಾರು ರೂಗಳನ್ನು ವಸೂಲಿ ಮಾಡುವ ಬಗ್ಗೆ ದೂರುಗಳು ವ್ಯಾಪಕವಾಗಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮತ್ತು ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಮೋಹನ್ ತಿಳಿಸಿದರು.

ಹೇಳಿಕೊಳ್ಳಲಾಗದ ಅನುಭವ


ಉಪತಹಶೀಲ್ದಾರ್ ಮೋಹನ್ 

ನಮ್ಮ ಗ್ರಾಮಕ್ಕೆ ಬಂದು ಅರ್ಜಿಗಳನ್ನು ಪಡೆದು ಪಿಂಚಣಿ ಮಂಜೂರು ಮಾಡಿರುವುದು ನಮ್ಮ ಪಾಲಿಗೆ ಹೇಳಿಕೊಳ್ಳಲಾರದ ಅನುಭವ. ಎಲ್ಲ ಸಮಸ್ಯೆಗಳಿಗೂ ಇದೇ ರೀತಿ ಸ್ಪಂದಿಸಿದರೆ ಗ್ರಾಮೀಣ ಜನರು ಅಧಿಕಾರಿಗಳನ್ನು ದೇವರಂತೆ ಕಾಣುತ್ತಾರೆ. ಕನಿಷ್ಠ 6 ತಿಂಗಳಿಗೆ ಒಮ್ಮೆಯಾದರೂ ಎಲ್ಲ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಬರಬೇಕು ಎಂದು ಫಲಾನುಭವಿಗಳಾದ ಮುನಿಯಪ್ಪ ಮತ್ತು ಶಾಂತಮ್ಮ

ಮನವಿ ಮಾಡಿದರು.

* ಕೈವಾರ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ. ಮುಂದಿನ ಗ್ರಾಮ ವೈಜಕೂರು ಎಂದು ತೀರ್ಮಾನಿಸಲಾಗಿದೆ

-ಮೋಹನ್, ಉಪತಹಶೀಲ್ದಾರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು