ನಮ್ಮನೆ ಬಜೆಟ್‌

7

ನಮ್ಮನೆ ಬಜೆಟ್‌

Published:
Updated:
Prajavani

ಟಿ.ವಿ.ಯಲ್ಲಿ ಕುಮಾರಣ್ಣನ ಬಜೆಟ್ ಭಾಷಣ ಪ್ರಸಾರ ಆಗ್ತಿತ್ತು, ನೋಡ್ಕೋತ ಕೂತಿದ್ದೆ. ಅಡುಗೆಮನಿಯಿಂದ ನಮ್ಮಾಕಿ ಹೇಳಿದ್ಳು– ‘ಅದೇನ್ ನೋಡ್ತಿರೊ ಏನೋ, ಮೊನ್ನೆ ಮೋದಿದಾಯ್ತು, ಇವತ್ತು ಕುಮಾರಣ್ಣಂದು’.

‘ಸ್ವಲ್ಪ ಸುಮ್ನಿರು ಮಾರಾಯ್ತಿ, ಆಮ್ಯಾಲ ಮಾತಾಡಣ ಇದರ ಬಗ್ಗೆ. ಈಗ ನನಗ ಬಜೆಟ್ ಹೈಲೈಟ್ಸ್ ನೋಡ್ಲಿಕ್ಕಿ ಬಿಡು’ ಅಂದೆ.
ಇದನ್ನ ಕೇಳಿದ ಹೆಂಡ್ತಿ ಸಿಟ್ಟಾಗಿ ಅಡುಗೆಮನಿಯಿಂದ ಹೊರಗ ಬಂದು ಟಿ.ವಿ ಬಂದ್ ಮಾಡಿದ್ಳು, ಕೈಯಾಗ ಇದ್ದ ಸೌಟನ್ನ ಮೈಕ್ ಥರ ಹಿಡ್ಕೊಂಡು ಮಾತಾಡ್ಲಿಕ್ಕಿ ಶುರು ಮಾಡಿದ್ಳು– ‘ಆ ಬಜೆಟ್ ಏನ್ ನೋಡ್ತಿರಿ, ನಮ್ ಮನಿ ಬಜೆಟ್ ಕೇಳ್ರಿ ಮೊದ್ಲು’ ಅಂಥ್ಹೇಳಿ ಟಿ.ವಿ ಮುಂದಿದ್ದ ಚಸ್ಮಾ ಹಾಕ್ಕೊಂಡು ಥೇಟ್ ಕುಮಾರಣ್ಣನಂಗೆ ಭಾಷಣ ಬಿಗಿಲಿಕ್ಕಿ ಶುರುಮಾಡಿದ್ಳು.

‘ಮುಂಬರುವ ಯುಗಾದಿ ಹಬ್ಬಕ್ಕೆ ನಿಮ್ಮ ಹೆಂಡತಿ ಹಾಗೂ ಈ ಮನೆಯ ಗೃಹಲಕ್ಷ್ಮಿಯೂ ಆದ ನನಗೆ ಲಕ್ಷ್ಮಿ ಕಾಸಿನ ಸರ ಮಾಡಿಸಲಾಗುವುದು. ನಮ್ಮ ಮಗಳ ಉನ್ನತ ವ್ಯಾಸಂಗವನ್ನು ವಿದೇಶದಲ್ಲಿ ಮಾಡಿಸುವ ಉದ್ದೇಶದಿಂದ ಹಣವನ್ನು ಕಾಯ್ದಿರಿಸಲಾಗುವುದು. ನೋಡಲು ಥೇಟ್ ಗಣೇಶನ ಹಾಗೆಯೇ ಇರುವ ನಮ್ಮ ಮಗನಿಗೆ ಈ ಗಣೇಶ ಚತುರ್ಥಿಯ ವಿಶೇಷ ದಿನದಂದು ಬೈಕೊಂದನ್ನು ಉಡುಗೊರೆಯಾಗಿ ನೀಡಲಾಗುವುದು.

ಇನ್ನು ದಸರಾ ಹಬ್ಬದ ಪ್ರಯುಕ್ತ ಮನೆಯ ಹೆಣ್ಣು ಮಕ್ಕಳಿಗೆ ರೇಷ್ಮೆ ಸೀರೆಗಳನ್ನು ಉತ್ಕೃಷ್ಟವಾದ ಮಳಿಗೆಗಳಿಂದ ಖರೀದಿಸಲಾಗುವುದು. ದೀಪಾವಳಿಯಂಥ ಶ್ರೇಷ್ಠವಾದ ದಿನದಂದು ಹೊಸ ಮನೆ ಖರೀದಿಯ ಕುರಿತಾಗಿ ಚರ್ಚಿಸಲು ಕಮಿಟಿಯೊಂದನ್ನು ರಚಿಸಲಾಗುವುದು.

ಅಲ್ಲದೇ ಕ್ರಿಸ್‍ಮಸ್ ಹಬ್ಬವನ್ನು ‘ಕುಟುಂಬ ಯಾತ್ರಾ’ ಯೋಜನೆಯ ಅಡಿಯಲ್ಲಿ ಪಾಶ್ಚ್ಯಾತ್ಯರ ಶೈಲಿಯಲ್ಲಿ ಆಚರಿಸಲು ವಿಶೇಷ ಹಾಲಿಡೇ ಪ್ಯಾಕೇಜನ್ನು ಬುಕ್ ಮಾಡಲಾಗುವುದು’ ಅಂತ ನಮ್ಮಾಕಿ ಹೇಳಿದಕೂಡ್ಲೆ ನಾ ಹೌಹಾರಿ ಬಾಯಿ ತಕ್ಕೊಂಡು ಕೂತುಬಿಟ್ಟೆ. ಬಾಯಾಗ ನೊಣ ಹೋಗಿದ್ದೂ ಗೊತ್ತಾಗ್ಲಿಲ್ಲ, ವಾಪಸ್ ಹೊರಗ ಬಂದಿದ್ದೂ ಗೊತ್ತಾಗ್ಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !