ಭಾನುವಾರ, ಮೇ 9, 2021
24 °C

ಅರಸು ಶತಮಾನೋತ್ಸವದ ಅರ್ಥಗಳು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಅರಸು ಶತಮಾನೋತ್ಸವದ ಅರ್ಥಗಳು

ದೇವರಾಜ ಅರಸು ಅವರ ನೂರನೆಯ ಹುಟ್ಟುಹಬ್ಬ (ಜನನ: 20 ಆಗಸ್ಟ್ 1915) ಹತ್ತಿರ ಬರುತ್ತಿರುವಂತೆ ಅವರನ್ನು ಕರ್ನಾಟಕ ಮತ್ತೆ ಕೃತಜ್ಞತೆಯಿಂದ ನೆನೆಯುವ ಗಳಿಗೆ ಬಂದಿದೆ. ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಯ ನೆನಪು ಒಣ ಆಡಂಬರದಲ್ಲಿ ಕರಗದೆ, ಅವರ ರಾಜಕಾರಣದ ಇವತ್ತಿನ ಸಾಧ್ಯತೆಗಳ ಬಗೆಗಿನ ಗಂಭೀರ ಚಿಂತನೆ ಹಾಗೂ ಕಾರ್ಯಕ್ರಮವಾದಾಗ ಮಾತ್ರ ಕರ್ನಾಟಕದ ರಾಜಕಾರಣಕ್ಕೆ ಹೊಸ ದಿಕ್ಕು ಹಾಗೂ ತಾತ್ವಿಕ ನೆಲೆ ಸಿಗಬಲ್ಲದು.ನಾವು ಘಟನಾವಳಿಗಳಿಗೆ ಹತ್ತಿರವಿದ್ದಾಗ ಅವು ಕಾಣುವ ರೀತಿಗೂ ಆ ಘಟನಾವಳಿಗಳು ಚರಿತ್ರೆಯ ಭಾಗವಾದಾಗ ಕಾಣುವ ಕ್ರಮಕ್ಕೂ ವ್ಯತ್ಯಾಸವಿರುತ್ತದೆ.  ಅರಸು ಅವರ ಆಡಳಿತ ಕಾಲದಲ್ಲಿ ಹದಿಹರೆಯದ ವಿದ್ಯಾರ್ಥಿಯಾಗಿದ್ದ ನನ್ನಂಥವರಿಗೆ ಅರಸು, ಇಂದಿರಾ ಗಾಂಧಿಯವರು ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವ ಅವಕಾಶವಾದಿ ರಾಜಕಾರಣಿಯಾಗಿ ಕಾಣುತ್ತಿದ್ದರು. ನಾವೆಲ್ಲ ಆ ಪೂರ್ವಗ್ರಹಗಳಿಂದ ಕಳಚಿಕೊಂಡು, ಅರಸು ಕಾರ್ಯಕ್ರಮಗಳ ಒಳ್ಳೆಯ ಪರಿಣಾಮಗಳನ್ನು ಗ್ರಹಿಸುವ ಹೊತ್ತಿಗೆ ನಾಲ್ಕೈದು ವರ್ಷಗಳಾದವು. ಅರಸು ಜಾರಿಗೆ ತಂದ ಯೋಜನೆಗಳ ಫಲಾನುಭವಿಗಳಾದ ಲಕ್ಷಾಂತರ ಸಾಮಾನ್ಯರು, ಸರ್ಕಾರಿ ನೌಕರರು, ರಾಜಕಾರಣಿಗಳು ಮತ್ತೊಮ್ಮೆ ಅರಸು ಅವರನ್ನು ಆಳವಾಗಿ ಅರಿಯುವ ಕಾಲ ಈಗ ಬಂದಿದೆ.ಕರ್ನಾಟಕದ ರಾಜಕಾರಣವನ್ನು ಅಧ್ಯಯನ ಮಾಡಿರುವ ಜೇಮ್ಸ್ ಮ್ಯಾನರ್, ಅರಸು ಅವರನ್ನು ಇಂಡಿಯಾದ ರಾಜಕಾರಣದ ‘ಪ್ರಾಗ್ಮ್ಯಾಟಿಕ್ ಪ್ರೋಗ್ರೆಸೀವ್ಸ್’ (‘ಮಾನವಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡ ವ್ಯಾವಹಾರಿಕ ಪ್ರಗತಿಪರರು’) ಪಟ್ಟಿಗೆ ಸೇರಿಸುತ್ತಾರೆ. ಬಿಹಾರದ ಆಗಿನ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಹಾಗೂ ಅರಸು ಅವರ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಹೋಲಿಸುವ ಮ್ಯಾನರ್, ಕರ್ಪೂರಿ ಠಾಕೂರ್ ಸೋತಲ್ಲಿ ಅರಸು ಗೆದ್ದದ್ದನ್ನು ಗುರುತಿಸುತ್ತಾರೆ. ಮ್ಯಾನರ್ ಗ್ರಹಿಕೆಗಳು ಇವು: ಅರಸು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಾಗ ಮೇಲುಜಾತಿಗಳಲ್ಲಿ ಅಸಮಾಧಾನ ಉಂಟಾಯಿತು; ಆದರೆ ದಲಿತ ಮತ್ತು ಹಿಂದುಳಿದ ವರ್ಗಗಳ ನಡುವೆ ಅಸಮಾಧಾನ ಹೆಚ್ಚಲಿಲ್ಲ. ಕಾರಣ, ಕಂದಾಯ ಮಂತ್ರಿ ಬಸವಲಿಂಗಪ್ಪನವರ ಭೂ ಸುಧಾರಣೆಯ ಕಾರ್ಯಕ್ರಮಗಳಿಂದಾಗಿ ದಲಿತರಿಗೆ, ಹಿಂದುಳಿದವರಿಗೆ ಭೂಮಿ ಸಿಕ್ಕಲಾರಂಭಿಸಿತು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿಯಾದ ಸಂದರ್ಭದಲ್ಲಿ ದಲಿತ ಮಂತ್ರಿಗಳ ಸಂಖ್ಯೆ ಎರಡು ಪಟ್ಟಾಯಿತು; ಹಿಂದುಳಿದ ವರ್ಗಗಳ ಮಂತ್ರಿಗಳ ಸಂಖ್ಯೆಯೂ ಹೆಚ್ಚಿತು. ದಲಿತರಿಗೆ ಮೀಸಲಿಟ್ಟ ಸರ್ಕಾರಿ ಹುದ್ದೆಗಳನ್ನು ಅರಸು ಭರ್ತಿ ಮಾಡಿದರು.ಇವನ್ನೆಲ್ಲ ಅರಸು ತಮ್ಮ ರಾಜಕೀಯ ಉಳಿವಿಗಾಗಿ ಮಾಡುತ್ತಿದ್ದಾರೆಂದು ರಾಜಕೀಯ ವಿಶ್ಲೇಷಕರು ಬರೆಯುತ್ತಿದ್ದರು. ಆದರೆ ತಮ್ಮ ‘ರಾಜಕೀಯ ಉಳಿವಿಗಾಗಿ’ ಮಂದಿರ-ಮಸೀದಿ ಗಲಾಟೆಗಳನ್ನು, ಕಾವೇರಿ ಗಲಭೆ, ಕೋಮು ಗಲಭೆಗಳನ್ನು ಹುಟ್ಟು ಹಾಕುವ ದುಷ್ಟತನಗಳನ್ನು ಮುಂದಿನ ದಿನಗಳಲ್ಲಿ ಕಂಡವರಿಗೆ ಅರಸರ ರಾಜಕೀಯ ಉಳಿವಿನ ನಡೆಯಲ್ಲಿ ಕೋಟ್ಯಂತರ ಜನರ ಭವಿಷ್ಯ ರೂಪುಗೊಳ್ಳುತ್ತಿದ್ದುದರ ಅರಿವಾಗಿರಬಹುದು. ಅದರಲ್ಲೂ, ಅರಸು ಸಣ್ಣಪುಟ್ಟ ಜಾತಿಗಳಿಂದ ನಾಯಕರನ್ನು ಆರಿಸಿದ್ದು ಆ ಜಾತಿಗಳ ಒಟ್ಟು ಚಲನೆಗೆ ಕಾರಣವಾಗತೊಡಗಿತು. ಆ ಜಾತಿಗಳಿಂದ ಬಗೆಬಗೆಯ ಪ್ರತಿಭೆಗಳು ಹೊರಹೊಮ್ಮಿದವು. ಹೀಗೆ ದೇವರಾಜ ಅರಸು ಚರಿತ್ರೆಯ ಮಹತ್ವದ ಚಲನೆಯೊಂದರ ಸಾಧನವಾದರು; ಅರಿವಿದ್ದೋ, ಅರಿವಿಲ್ಲದೆಯೋ ದಲಿತ ಹಾಗೂ ಹಿಂದುಳಿದ ಜಾತಿಗಳು ಒಂದು ‘ವರ್ಗ’ವಾಗುವಂತೆ ಮಾಡಲೆತ್ನಿಸಿದರು.ಅರಸು ಅವರನ್ನು ಹತ್ತಿರದಿಂದ ಬಲ್ಲ ವಡ್ಡರ್ಸೆ ರಘುರಾಮಶೆಟ್ಟರ ‘ಬಹುರೂಪಿ ಅರಸು’ ಪುಸ್ತಕದ ಕೆಲವು ವಿವರಗಳನ್ನು ಈ ಬರಹದಲ್ಲಿ ಬಳಸಿರುವೆ: ಮೈಸೂರು ರಾಜಮನೆತನದ ಸಂಬಂಧಿಯಾಗಿದ್ದ ಅರಸು, ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದು, ಬಿ.ಎಸ್ಸಿ. ಓದುವ ಹೊತ್ತಿಗೆ ಪೈಲ್ವಾನ್ ಕೂಡ ಆಗಿದ್ದರು! ಆಗ ‘ಪ್ರಜಾವಾಣಿ’ಯಲ್ಲಿ ವ್ಯಂಗ್ಯಚಿತ್ರಕಾರ ರಾಮಮೂರ್ತಿಯವರು ಅರಸು ಅವರನ್ನು ಗ್ಲೌಸ್ ಹಾಕಿದ ಪೈಲ್ವಾನ್ ಆಗಿ ಚಿತ್ರಿಸುತ್ತಿದ್ದುದು ನೆನಪಾಗುತ್ತಿದೆ.ತರುಣ ದೇವರಾಜನಿಗೆ ಮಿಲಿಟರಿ ಸೇರುವ ಅವಕಾಶ ಸಿಕ್ಕಾಗ, ತಾಯಿ ಒಪ್ಪಲಿಲ್ಲ. ಊರಿನಲ್ಲೇ ಕೃಷಿಕನಾಗಿ ಬದುಕಲಾರಂಭಿಸಿದ ದೇವರಾಜ ಹೊಲ ಉಳುತ್ತಿದ್ದ, ನೀರು ಸೇದುತ್ತಿದ್ದ, ದನಕರು ಮೇಯಿಸುತ್ತಿದ್ದ. ಸಮಯ ಸಿಕ್ಕಾಗ ಒಬ್ಬನೇ ಓದುತ್ತಾ ಕೂರುತ್ತಿದ್ದ. ಕಮ್ಯುನಿಸ್ಟ್ ಚಿಂತನೆಗಳ ಬಗ್ಗೆ ಒಲವು ತೋರುತ್ತಿದ್ದ ತರುಣನನ್ನು 1941ರಲ್ಲಿ ಕಾಂಗ್ರೆಸ್ ನಾಯಕ ಸಾಹುಕಾರ್ ಚೆನ್ನಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಕರೆತಂದರು. 1946ರಲ್ಲಿ ಅರಸು ಪ್ರಜಾಪ್ರತಿನಿಧಿ ಸಭೆಗೆ ಆರಿಸಿ ಬಂದರು. ನಂತರ 1952ರಲ್ಲಿ ಹುಣಸೂರಿನಿಂದ ಚುನಾವಣೆ ಗೆದ್ದು ಮೈಸೂರು ವಿಧಾನಸಭೆ ಪ್ರವೇಶಿಸಿದ ಅರಸು ಗೆಲ್ಲುತ್ತಲೇ ಹೋದರು.ಮುಂದೆ 1971ರಲ್ಲಿ ಕಾಂಗ್ರೆಸ್ ಹೋಳಾದಾಗ ಅರಸು ‘ಇಂದಿರಾ ಕಾಂಗ್ರೆಸ್’ ಸೇರಿದರು.  ಅರಸು ನೇತೃತ್ವದಲ್ಲಿ ಇಂದಿರಾ ಕಾಂಗ್ರೆಸ್ 27 ಲೋಕಸಭಾ ಸ್ಥಾನಗಳನ್ನು ಗೆದ್ದಿತು. 1972ರ ವಿಧಾನಸಭಾ ಚುನಾವಣೆಯಲ್ಲಿ ಅರಸು ದಲಿತ, ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಮಾಡಿದ ಸೋಷಿಯಲ್ ಎಂಜಿನಿಯರಿಂಗ್ ಅದ್ಭುತವಾಗಿ ಕೆಲಸ ಮಾಡಿತು. ಅರಸು ಪ್ರಕಟಿಸಿದ ಮುಖರಹಿತ ಚುನಾವಣಾ ಅಭ್ಯರ್ಥಿಗಳ ಪಟ್ಟಿ ನೋಡಿ ಪತ್ರಕರ್ತರು ನಗುತ್ತಿದ್ದರಂತೆ! ಆದರೆ ಅವತ್ತು ಇಂದಿರಾ ಕಾಂಗ್ರೆಸ್ಸಿನಿಂದ 163 ಶಾಸಕರು ಗೆದ್ದರು. ಅವರಲ್ಲಿ 92 ಜನ ದಲಿತ ಹಾಗೂ ಹಿಂದುಳಿದ ವರ್ಗಗಳ ಶಾಸಕರಿದ್ದರು. ಮೈಸೂರನ್ನು ‘ಕರ್ನಾಟಕ’ ಎಂದು ಘೋಷಿಸುವ ಅದೃಷ್ಟ ಕೂಡ ಅರಸು ಅವರಿಗೇ ಒಲಿಯಿತು. ಉಳಿದದ್ದೆಲ್ಲ ಇತಿಹಾಸ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಅರಸು ಇಪ್ಪತ್ತು ಅಂಶದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. 1977ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಹಲವೆಡೆ ಕಾಂಗ್ರೆಸ್ ನೆಲ ಕಚ್ಚಿದರೂ ಕರ್ನಾಟಕದಲ್ಲಿ 27 ಸ್ಥಾನಗಳನ್ನು ಗೆದ್ದಿತು. ಸೋತ ಇಂದಿರಾ ಗಾಂಧಿಯವರನ್ನು ಅರಸು ಚಿಕ್ಕಮಗಳೂರಿಗೆ ಕರೆತಂದು ಗೆಲ್ಲಿಸಿ, ಲೋಕಸಭೆಗೆ ಕಳಿಸಿದ್ದು ಇಂದಿರಾ ಗಾಂಧಿಯವರಿಗೆ ಮರುಹುಟ್ಟೂ ಆಯಿತು. ಅರಸು ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.ಜನಪ್ರಿಯರಾಗಿದ್ದ ಅರಸು ತನಗೆ ಪ್ರತಿಸ್ಪರ್ಧಿಯಾಗಬಹುದೆಂಬ ಇಂದಿರಾ ಗಾಂಧಿಯವರ ಭಯದಿಂದಲೋ, ಸಂಜಯ ಗಾಂಧಿಯವರ ಹುಚ್ಚು ರಾಜಕಾರಣದಿಂದಲೋ ಅರಸು ಕೆಳಗಿಳಿಯಬೇಕಾಯಿತು. ಅರಸು ‘ಕರ್ನಾಟಕ ಕ್ರಾಂತಿರಂಗ’ ಕಟ್ಟಿದಾಗ ಅವರು ನೆಚ್ಚಿದ್ದ ಅನೇಕ ಹಿಂದುಳಿದ ಜಾತಿಗಳ ನಾಯಕರು ಕೈಕೊಟ್ಟರು. ಅವರ ಪಕ್ಷ ಸೋತಾಗ ತಬ್ಬಲಿಗಳಂತೆ ಅತ್ತ ಹಿಂದುಳಿದ ಜಾತಿಗಳ ಮತದಾರರನ್ನು ನಾನೇ ಕಂಡಿದ್ದೇನೆ. ಅರವತ್ತೇಳನೆಯ ವಯಸ್ಸಿನಲ್ಲಿ ತೀರಿಕೊಳ್ಳುವ ಕಾಲಕ್ಕೆ ಅರಸು ಒಂದು ಬಗೆಯ ದುರಂತ ನಾಯಕನಂತೆ ಕಾಣುತ್ತಿದ್ದರು.ಅರಸು ನೇಮಿಸಿದ ಹಾವನೂರ್ ಆಯೋಗ ಕರ್ನಾಟಕದ ದಿಕ್ಕನ್ನೇ ಬದಲಿಸಿತು; ಮುಂದೆ ಮಂಡಲ್ ವರದಿಗೂ ಪ್ರೇರಣೆಯಾಯಿತು. ಅರಸು ರಾಜಕಾರಣದ ಕಾಲಕ್ಕೆ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಮೂಲಕ ದಲಿತ ಹಾಗೂ ಹಿಂದುಳಿದ ವರ್ಗಗಳ ಹೊಸ ಸಾಂಸ್ಕೃತಿಕ ಎನರ್ಜಿಯೂ ಚಿಮ್ಮಿತು. ಒಂದು ಕಾಲದ ರಾಜಕಾರಣದ ಆಶಯಗಳು ಸಾಂಸ್ಕೃತಿಕ, ಸಾಮಾಜಿಕ ವಲಯಗಳಲ್ಲೂ ವಿಕಾಸಗೊಂಡ ವಿಶಿಷ್ಟ ವಿದ್ಯಮಾನ ಅದು. ಇವತ್ತು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದ ವರ್ಗಗಳು ಇತರರಿಗೆ ಸರಿಸಮನಾಗಿ ನಿಲ್ಲುವ ಕಾಲ ಬಂದಿದ್ದರೆ, ಸಣ್ಣಪುಟ್ಟ ಊರುಗಳ ಬಡ ಕುಟುಂಬಗಳಿಂದ ಎಂಜಿನಿಯರುಗಳು, ಡಾಕ್ಟರುಗಳು, ರಾಜಕಾರಣಿಗಳು ಬಂದಿದ್ದರೆ ಅದರಲ್ಲಿ ಅರಸು ಕೊಡುಗೆಯೂ ಇದೆ. ಅರಸು ಕಾಲದಲ್ಲಿ ದಲಿತ, ಹಿಂದುಳಿದ ವರ್ಗ, ಮುಸ್ಲಿಮರಿಗಾಗಿ ಆರಂಭಗೊಂಡ ಅನೇಕ ಯೋಜನೆಗಳು ಇವತ್ತಿಗೂ ಮುಂದುವರಿದಿವೆ. ಅವು  ಮುಂದುವರಿಯಲೇಬೇಕಾದ ಅನಿವಾರ್ಯವನ್ನೂ ಅರಸು ರಾಜಕಾರಣ ಬೆಳೆಸಿದೆ.ಪುಸ್ತಕಗಳ ಜೊತೆಗೆ ಅರಸು ಅವರಿಗಿದ್ದ ಒಡನಾಟದಿಂದ ಕೂಡ ನಮ್ಮ ರಾಜಕಾರಣಿಗಳು ಕಲಿಯಬೇಕಾಗಿದೆ. ಅರಸು ಅವರಿಗೆ ಜಿ.ಎಚ್. ನಾಯಕರಂಥ ವಿದ್ವಾಂಸರು ಸಿಕ್ಕರೆ ಇರಾವತಿ ಕರ್ವೆಯವರ ‘ಯುಗಾಂತ’ ಕುರಿತು ಮಾತಿಗಿಳಿಯಬಲ್ಲವರಾಗಿದ್ದರು. ಅಡಿಗರ ಪದ್ಯವನ್ನು ಉಲ್ಲೇಖಿಸಬಲ್ಲವರಾಗಿದ್ದರು.  ಅ.ನ.ಯಲ್ಲಪ್ಪರೆಡ್ಡಿಯವರು ‘ಅರಸುಯುಗದ ಅರಣ್ಯಪರ್ವ’ ಪುಸ್ತಕದಲ್ಲಿ ಹೇಳುವಂತೆ ಅಂತರ್ ರಾಷ್ಟ್ರ ಮಟ್ಟದ ಅರ್ಥಶಾಸ್ತ್ರದ ಪುಸ್ತಕಗಳಿಂದ ಹಿಡಿದು ವೈಜ್ಞಾನಿಕ ಪುಸ್ತಕಗಳೂ ಅವರಿಗೆ ಪರಿಚಯವಿದ್ದವು. ಕರ್ನಾಟಕದ ಅರಣ್ಯಗಳನ್ನು, ಪ್ರಕೃತಿ ಸಂಪತ್ತನ್ನು ಅರಸು ಉಳಿಸಿದ್ದರ ಬಗ್ಗೆ ಯಲ್ಲಪ್ಪರೆಡ್ಡಿ  ಅಭಿಮಾನದಿಂದ ಬರೆದಿದ್ದಾರೆ.ಅವತ್ತು ಅರಸು ಶಾಸಕರನ್ನು ‘ಹಿಡಿದಿಟ್ಟುಕೊಳ್ಳಲು’ ತಮ್ಮ ಸುತ್ತ ಇಟ್ಟುಕೊಂಡ ಭ್ರಷ್ಟರಿಂದಾಗಿಯೂ ಹೆಸರು ಕೆಡಿಸಿಕೊಂಡ ಕತೆಯನ್ನು ಎಲ್ಲರೂ ಕೇಳಿರಬಹುದು. ಆದರೆ ವಡ್ಡರ್ಸೆಯವರು ಗುರುತಿಸುವಂತೆ ಪ್ರತಿ ಚುನಾವಣೆಯಲ್ಲೂ ಅರಸು ತಮ್ಮ ಜಮೀನಿನ ಒಂದೊಂದು ಭಾಗವನ್ನು ಮಾರಾಟ ಮಾಡಿದ ಕತೆಯನ್ನು ಅನೇಕರು ಕೇಳಿರಲಿಕ್ಕಿಲ್ಲ. ಇಪ್ಪತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಕಲ್ಲಹಳ್ಳಿಗೆ ಹೋದ ವಡ್ಡರ್ಸೆ ಬರೆಯುತ್ತಾರೆ: ‘ಅರಸು ಎಲ್ಲ ರಾಜಕಾರಣಿಗಳಂತೆ ಅಲ್ಲೊಂದು ‘ಕಿರು ಅರಮನೆ’ ಕಟ್ಟಿರಬೇಕೆಂದು ನಾನು ಊಹಿಸಿದ್ದೆ. ಅವರ ಹಿರಿಯರ ಆಸ್ತಿ ವಿಸ್ತಾರಗೊಂಡು ಅಲ್ಲಿ ತೋಟಗಳು ತಲೆಯೆತ್ತಿರಬೇಕೆಂದು ತಿಳಿದಿದ್ದೆ… ಆದರೆ ಅಲ್ಲಿ ನನಗೆ ಕಾಣಸಿಕ್ಕಿದ್ದು ಒಂದು ಶತಮಾನದಷ್ಟು ಹಳೆಯದಾದ ಅನುಕೂಲಸ್ಥ ರೈತ ಕುಟುಂಬದ ಮನೆ’.40 ವರ್ಷಗಳ ಕೆಳಗೆ ಅರಸು ಉದ್ಘಾಟಿಸಿದ ರಾಜಕಾರಣದಿಂದಾಗಿ ಸಿದ್ದರಾಮಯ್ಯನವರೂ ಸೇರಿದಂತೆ ಹಲವು ಹಿಂದುಳಿದ ವರ್ಗಗಳ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಿದ್ದಾರೆ. ಅರಸು ರಾಜಕಾರಣದ ಫಲವಾಗಿ ಎಲ್ಲ ರಾಜಕೀಯ ಪಕ್ಷಗಳೂ ಹಿಂದುಳಿದ ಹಾಗೂ ದಲಿತ ರಾಜಕಾರಣಿಗಳನ್ನು ಅವಲಂಬಿಸಿಯೇ ರಾಜಕಾರಣ ಮಾಡಬೇಕಾದ ಅನಿವಾರ್ಯ ಇವತ್ತು ಇದೆ. ಆದರೆ  ದಲಿತ, ಹಿಂದುಳಿದ ವರ್ಗಗಳ ರಾಜಕಾರಣಿಗಳು ಅರಸುಯುಗದ ರಾಜಕಾರಣವನ್ನು ಆಳವಾಗಿ ಅರಿಯದೆ ಆ ಬಗೆಯ ರಾಜಕಾರಣದ  ಸಾಧ್ಯತೆಯನ್ನೇ ಸೀಮಿತಗೊಳಿಸುತ್ತಿದ್ದಾರೆ. ಈ ಸಾಧ್ಯತೆಗಳನ್ನು ಗ್ರಹಿಸದೆ ಕಮ್ಯುನಿಸ್ಟ್ ಪಕ್ಷಗಳೂ ಸ್ಥಗಿತಗೊಂಡಿವೆ. ದಲಿತ, ಹಿಂದುಳಿದ ವರ್ಗಗಳ ಬುದ್ಧಿಜೀವಿಗಳ ಜಡತೆಯಿಂದಲೂ ಈ ಸಮುದಾಯಗಳ ಹಿತಕ್ಕೆ ಧಕ್ಕೆಯಾಗತೊಡಗಿದೆ. ಕಾಂಗ್ರೆಸ್ಸೂ ಸೇರಿದಂತೆ ಎಲ್ಲ ಪಕ್ಷಗಳೂ ಅರಸು ರಾಜಕಾರಣದ ಸಾಮಾಜಿಕ, ಸಾಂಸ್ಕೃತಿಕ ಸಾಧ್ಯತೆಗಳನ್ನು ತಾತ್ವಿಕವಾಗಿ ಗ್ರಹಿಸಿದಾಗ ಮಾತ್ರ ಅರಸು ರಾಜಕಾರಣದ ಸಾಮಾಜಿಕ ಪ್ರಭಾವ ಎಲ್ಲ ಕಾಲದಲ್ಲೂ ಚಾಲ್ತಿಯಲ್ಲಿರಬಲ್ಲದು.ಅರಸು ಶತಮಾನೋತ್ಸವದ ನೆನಪಿಗೆ ಸರ್ಕಾರ ಪ್ರಕಟಿಸಿರುವ ಕಾರ್ಯಕ್ರಮಗಳ ಜೊತೆಗೆ, ಎಲ್ಲ ಹೋಬಳಿಗಳಲ್ಲೂ ಕೊನೆಯ ಪಕ್ಷ ಮೊರಾರ್ಜಿ ಶಾಲೆಗಳ ಗುಣಮಟ್ಟದ ಸಾವಿರ ವಸತಿ ಶಾಲೆಗಳನ್ನು ತೆರೆಯಬೇಕು. ಎಲ್ಲ ಬ್ಯಾಕ್ ಲಾಗ್ ಹುದ್ದೆಗಳನ್ನೂ ತುಂಬಬೇಕು. ಕಲ್ಲಹಳ್ಳಿಯನ್ನು ಮಾತ್ರ ಮಾದರಿ ಗ್ರಾಮವಾಗಿ ರೂಪಿಸುವುದಲ್ಲ; ಕೊನೆಯ ಪಕ್ಷ ಅಂಥ ಸಾವಿರ ಗ್ರಾಮಗಳನ್ನಾದರೂ ರೂಪಿಸಬೇಕು. ಅರಸು ಕಾಲದಲ್ಲಿ ಚಲನೆ ಕಂಡು, ನಂತರ ಖಾಸಗೀಕರಣದ ಹೊಡೆತದಿಂದ ಸ್ಥಗಿತಗೊಂಡ ವರ್ಗಗಳಿಗಾಗಿ ಹೊಸ ಯೋಜನೆಗಳು ಶುರುವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಅರಸು ಕಾಲದಲ್ಲಿ ದಲಿತ, ಹಿಂದುಳಿದ ವರ್ಗಗಳು ಹತ್ತಿರವಾಗುವಂತೆ ಮಾಡಿದ ಅಸ್ಪಷ್ಟ ತಾತ್ವಿಕ ಚೌಕಟ್ಟುಗಳನ್ನು ವಿಸ್ತಾರವಾಗಿಸುವ ಕೆಲಸವನ್ನು ಅರಸು ಯುಗದ ಯೋಜನೆಗಳ ಫಲಾನುಭವಿಗಳಾದರೂ ಶುರು ಮಾಡಬೇಕು.ಕೊನೆ ಟಿಪ್ಪಣಿ: ಅರಸು ನಂಬಿದ ಅದೃಶ್ಯ ಮತದಾರ

ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಒಡೆದಾಗ ಅರಸು ಅವರಿಗೆ ಹತ್ತಿರವಾಗಿದ್ದ ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಆ ಕಾಲದಲ್ಲಿ ಬೆಂಗಳೂರಿನಲ್ಲಿ ನಡೆದ ಅರಸು ಅವರ ಸಭೆಯೊಂದನ್ನು ನೆನೆಸಿಕೊಂಡರು. ಸಂಜೆಯ ಚುನಾವಣಾ ಸಭೆಯೊಂದರಲ್ಲಿ ತಾನು ಮಾತಾಡುತ್ತಿದ್ದರೆ, ಕೆಲವರು ಮಧ್ಯೆಮಧ್ಯೆ ಕಿಚಾಯಿಸುತ್ತಿದ್ದುದನ್ನು ಕಂಡ ಅರಸು ಹೇಳಿದರು: ‘ತಮ್ಮಲ್ಲಿ ಕೆಲವರು ಇದೀಗ ಆಫೀಸ್ ಮುಗಿಸಿ ಮಸಾಲೆದೋಸೆ ತಿಂದು ಮನೆಗೆ ಹೋಗುತ್ತಿದ್ದವರು ಸುಮ್ಮನೆ ಇಲ್ಲಿ ನಿಂತಿದ್ದೀರಿ ಅಂತ ಕಾಣುತ್ತೆ. ತಾವಿನ್ನು ಹೋಗಬಹುದು. ನಿಮ್ಮ ವೋಟು ನಮಗೆ ಬೇಕಾಗಿಲ್ಲ. ನಮಗೆ ವೋಟು ಹಾಕುವವರು ಬೇರೆ ಇದ್ದಾರೆ’.ಇವತ್ತು ಈ ಮಾತು ಅಹಂಕಾರದ ಮಾತಿನಂತೆ ಕೇಳಬಹುದು. ಆದರೆ ಈ ಅದೃಶ್ಯ ಮತದಾರನನ್ನು ನಂಬಿ ಅರಸು ಎರಡು ಸಲ ಗೆದ್ದದ್ದು ನಿಜ. ಎಲ್ಲಿಯೂ ಬಾಯಿಬಿಟ್ಟು ಅಭಿಪ್ರಾಯ ಹೇಳದ ಅದೃಶ್ಯ ಮತದಾರ, ಎಲ್ಲವನ್ನೂ ಬಲ್ಲೆವೆಂಬ ಅಬ್ಬರದ ಈ ಟೆಲಿವಿಷನ್ ಕಾಲದಲ್ಲೂ ಇರಬಹುದು. ಒಳಗೇ ಯೋಚಿಸಿ, ತೀರ್ಮಾನಿಸಿ ಮತ ಹಾಕುವ ಅದೃಶ್ಯ ಮತದಾರರಿಲ್ಲದಿದ್ದರೆ ಕಳೆದ ವರ್ಷ ದೆಹಲಿಯಲ್ಲಿ ಯಾರೂ ಊಹಿಸದಂಥ ಜಯ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕುತ್ತಿರಲಿಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.