ಶನಿವಾರ, ಏಪ್ರಿಲ್ 17, 2021
22 °C

ಅರ್ಥ ವ್ಯವಸ್ಥೆಯಲ್ಲಿನ ಉತ್ಸಾಹ ಬಡಿದೆಬ್ಬಿಸಲಿ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಪರೂಪಕ್ಕೊಮ್ಮೆ ಮಾತನಾಡಿದರೂ ತುಂಬ ಅರ್ಥಪೂರ್ಣವಾಗಿ ಮಾತನಾಡುತ್ತಾರೆ. ದೇಶದ ಆರ್ಥಿಕ ವೃದ್ಧಿ ದರದ ಬಗ್ಗೆ ಇತ್ತೀಚಿಗೆ ಅವರು ಆಡಿರುವ ಮಾತುಗಳು ಚಿಂತನಾರ್ಹ. ಕಾರ್ಯಸಾಧ್ಯವಾದ ಆರ್ಥಿಕ ವೃದ್ಧಿ ದರದ ಬಗ್ಗೆ ಅವರು ತಮ್ಮ ಅನಿಸಿಕೆಗಳನ್ನು ದೇಶ ಬಾಂಧವರ ಜತೆ ಹಂಚಿಕೊಂಡಿದ್ದಾರೆ. `ಶೇ 8ರಷ್ಟು ಆರ್ಥಿಕ ವೃದ್ಧಿ ದರ ಸಾಧಿಸುವುದು ಅಸಾಧ್ಯವೇನ್ಲ್ಲಲ. ಆದರೆ, ಅದೊಂದು ಕಠಿಣವಾದ ಸವಾಲು~ ಎಂದು ಹೇಳಿದ್ದಾರೆ.ಪ್ರಧಾನಿ ಅವರ ಈ ಹೇಳಿಕೆ ನನ್ನಲ್ಲಿ ತೀವ್ರ ನಿರಾಶೆ ಮೂಡಿಸಿದೆ. ದೇಶದ ಮುಖ್ಯಸ್ಥರಾಗಿರುವ ಮತ್ತು ಆರ್ಥಿಕ ತಜ್ಞರೂ ಆಗಿರುವ ಸಿಂಗ್ ಅವರಿಂದ ಇಂತಹ ನಿರಾಶಾದಾಯಕ ಮಾತನ್ನು ನಾನು ನಿರೀಕ್ಷಿಸಿರಲಿಕ್ಕಿಲ್ಲ. ಆರ್ಥಿಕ ವೃದ್ಧಿಗೆ ಅಗತ್ಯವಾದ ಭಾವನೆಗಳನ್ನು ಉದ್ದೀಪನೆಗೊಳಿಸುವ ಮಾತುಗಳು ಅವರಿಂದ ಬರಬೇಕಾಗಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳಿಂದ ದೇಶವು ಹಲವಾರು ಹಿತಾನುಭವಗಳಿಗೆ ಸಾಕ್ಷಿಯಾಗಿರುವುದು ನಿಜ. `ಹಣವು ಮರಗಿಡಗಳ ಮೇಲೆ ಬೆಳೆಯಲಾರದು~ ಎನ್ನುವ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಯೂ ದಿಟ್ಟತನದ್ದು ಆಗಿದೆ.

ಈ ಹೇಳಿಕೆಯನ್ನು ವಿರೋಧ ಪಕ್ಷದ ಅನೇಕ ಮುಖಂಡರು ಅಪಹಾಸ್ಯ ಮಾಡಿದ್ದರೂ, ಸರ್ಕಾರದ ಮುಖ್ಯಸ್ಥರ ಮನಸ್ಥಿತಿಗೆ ಈ ಹೇಳಿಕೆ ಕನ್ನಡಿ ಹಿಡಿಯುತ್ತದೆ.

ಆರ್ಥಿಕ ವೃದ್ಧಿ ದರ ಶೇ 8ರಷ್ಟು ಇರಲಿದೆ ಎಂದು ಪ್ರಧಾನಿ ಅಂದಾಜು ಮಾಡಿರುವುದು ಮಾತ್ರ ಉತ್ಸಾಹಭಂಜಕ. ನಮ್ಮ ನಾಯಕಗಣವು ಎರಡಂಕಿಗಿಂತ (ಶೇ 10) ಕಡಿಮೆ ಪ್ರಮಾಣದ ಅಭಿವೃದ್ಧಿ ದರದ ಬಗ್ಗೆ ಮಾತೇ ಆಡಬಾರದು ಎನ್ನುವುದು ನನ್ನ ಬಲವಾದ ಅನಿಸಿಕೆ. ದೇಶಿ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ವಾಸ್ತವಿಕ ಪರಿಸ್ಥಿತಿಯ ಮಾಹಿತಿ ಹೊಂದಿದ ಯಾರೇ ಆದರೂ ನನ್ನ ವಾದಕ್ಕೆ ಸಹಮತ ವ್ಯಕ್ತಪಡಿಸಲಾರರು. ಆದರೂ, ನಾನು ನನ್ನ ನಿಲುವಿಗೇ ಬಲವಾಗಿ ಅಂಟಿಕೊಳ್ಳಲು ಬಯಸುತ್ತೇನೆ.ಇತ್ತೀಚಿನ ಹೊಸ ಸುಧಾರಣಾ ಕ್ರಮಗಳ ಜಾರಿ ನಂತರ ಮಾತನಾಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಅರ್ಥ ವ್ಯವಸ್ಥೆ ಮುನ್ನಡೆಸಲು  ಇನ್ನಷ್ಟು ಉತ್ಸಾಹ ಅಗತ್ಯವಾಗಿ ಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.ಅರ್ಥ ವ್ಯವಸ್ಥೆಯು ಪ್ರಗತಿಯ ದಾಪುಗಾಲು ಹಾಕಲು ಉತ್ಸಾಹ ತುಂಬಬೇಕಾಗಿದೆ  ಎಂದು ದೇಶ ಮುನ್ನಡೆಸುವವರು  ಭಾವಿಸಿದ್ದರೆ, ಅದಕ್ಕೆ ತಕ್ಕಂತೆ ಅವರು ಆಡುವ ಮಾತುಗಳೂ ಪ್ರೇರಣೆ ನೀಡುವಂತಿರಬೇಕು. ಅದರ ಬದಲಿಗೆ ಆರ್ಥಿಕ ವೃದ್ಧಿ ದರವು ನಿರೀಕ್ಷಿತ  ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ನಿರಾಶೆಯ ಮಾತುಗಳನ್ನಾಡಬಾರದು.

ಇಲ್ಲಿ ಉತ್ಸಾಹ ತುಂಬುವುದು ಎಂದರೆ, ಗ್ರಾಹಕರ ಆತ್ಮವಿಶ್ವಾಸ ವೃದ್ಧಿಸುವ, ಒಟ್ಟಾರೆ ಅರ್ಥ ವ್ಯವಸ್ಥೆ ಬಗ್ಗೆಯೇ ಸಕಾರಾತ್ಮಕ ಭಾವನೆ ಮೂಡಿಸುವ ಮತ್ತು ಅನುಮಾನ ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮಗಳು ಎಂದೇ ಅರ್ಥೈಸಬೇಕಾಗುತ್ತದೆ.ಆರ್ಥಿಕ ವೃದ್ಧಿ ದರವನ್ನು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳ ಆಧರಿಸಿ ಅಳೆಯಲಾಗುತ್ತದೆ. ಇದನ್ನು ವರ್ಷದ ಆಧಾರದಲ್ಲಿ ಅಳೆಯಲಾಗುತ್ತಿದ್ದರೂ, ತ್ರೈಮಾಸಿಕ ಲೆಕ್ಕಾಚಾರದಲ್ಲಿ ಪ್ರಕಟಿಸಲಾಗುತ್ತಿದೆ. ವೃದ್ಧಿ ದರವನ್ನು ವಾಸ್ತವ `ಜಿಡಿಪಿ~ಯ ಹಿಂದಿನ ನಿರ್ದಿಷ್ಟ ಸಮಯದಲ್ಲಿನ ವೃದ್ಧಿ ದರಕ್ಕೆ ಹೋಲಿಕೆ ಮಾಡಲಾಗುವುದು. ಈ ವೃದ್ಧಿ ದರವು ಅರ್ಥವ್ಯವಸ್ಥೆಯಲ್ಲಿ ಸಂಪತ್ತು ಹೆಚ್ಚಳದ ಪ್ರಮಾಣ ಸೂಚಿಸುತ್ತದೆ.ನಿರ್ದಿಷ್ಟ ಸಮಯದ ತಲಾ ವರಮಾನ ನಿರ್ಧರಿಸಲೂ ಆರ್ಥಿಕ ವೃದ್ಧಿ ದರವನ್ನು ಆಧಾರವಾಗಿ ಇರಿಸಿಕೊಳ್ಳಲಾಗುತ್ತದೆ. ಇದನ್ನು ಹಣದುಬ್ಬರ ಬದಲಿಗೆ ಸ್ಥಿರ ಬೆಲೆ ಮಟ್ಟ ಆಧರಿಸಿ ನಿರ್ಧರಿಸಲಾಗುವುದು. ಆರ್ಥಿಕ ವೃದ್ಧಿ ದರದ ಪರಿಣಾಮಗಳು ಅಲ್ಪಾವಧಿಯಲ್ಲಿ ಜನರ ಅನುಭವಕ್ಕೆ ಬರಲಾರದು. ಹಿತಾನುಭವವು ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿಯೇ ಎಲ್ಲರ ಅನುಭವಕ್ಕೆ ಬರುತ್ತದೆ.ದೇಶದ ಆರ್ಥಿಕ ವೃದ್ಧಿ ದರವು ನಿಯಮಿತವಾಗಿ ಮತ್ತು ನಿಧಾನವಾಗಿ ಕಡಿಮೆಯಾಗುತ್ತಲೇ ಸಾಗಿದ್ದು, ಶೇ 6ರಿಂದ ಶೇ 5ರ ಮಟ್ಟಕ್ಕೆ ತಲುಪುತ್ತಿದೆ. ಅನೇಕ ಆರ್ಥಿಕ ತಜ್ಞರು ಮತ್ತು ಸಂಖ್ಯಾತಜ್ಞರ ಅಂದಾಜು ಮತ್ತು ಊಹೆ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಇನ್ನಷ್ಟು ಕಡಿಮೆಯಾಗುವ ಅನುಮಾನಗಳೂ ಇವೆ. ಮುಂದಿನ ವರ್ಷದ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಸಾಧ್ಯತೆಗಳೂ ಇವೆ.ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಶೇ 8ರಷ್ಟು ಆರ್ಥಿಕ ವೃದ್ಧಿ ದರ ಸಾಧ್ಯತೆ ಬಗ್ಗೆ ಪ್ರಧಾನಿ ಸಿಂಗ್ ಅವರು ಆಡಿರುವ ಮಾತುಗಳು ತುಂಬ ಮಹತ್ವಾಕಾಂಕ್ಷೆಯ ಮತ್ತು ಉತ್ಪ್ರೇಕ್ಷೆಯಿಂದ ಕೂಡಿದೆ ಎಂದೂ ವಾದಿಸಲಾಗುತ್ತಿದೆ. ವಿಶ್ವದ ಹಲವಾರು ಶ್ರೀಮಂತ ದೇಶಗಳು 2008ರ ಆರ್ಥಿಕ ಹಿಂಜರಿಕೆಯಿಂದ ಇನ್ನೂ ಚೇತರಿಸಿಕೊಳ್ಳಲು ಏದುಸಿರು ಬಿಡುತ್ತಿರುವಾಗ, ದೇಶಿ ಅರ್ಥವ್ಯವಸ್ಥೆಯ ಬೆಳವಣಿಗೆ ಬಗ್ಗೆ ಆಶಾವಾದ ತಳೆಯುವುದು ಕುರುಡು ನಂಬಿಕೆಯಾಗಿದೆ ಎಂದೂ ಹೇಳಬಹುದು. ದೇಶದಲ್ಲಿನ ಹಲವಾರು ವಿದ್ಯಮಾನಗಳು ಆರ್ಥಿಕ ಬೆಳವಣಿಗೆಯ ವೇಗಕ್ಕೆ ಇನ್ನಷ್ಟು ಕಡಿವಾಣ ಹಾಕುವ ಸಾಧ್ಯತೆಗಳೂ ಇವೆ.ಆರ್ಥಿಕ ಬೆಳವಣಿಗೆಯ ಕುಸಿತದ ಬಗ್ಗೆ ಮಾತನಾಡುವಾಗ ಹಣದುಬ್ಬರ ಪ್ರಮುಖವಾಗಿ ಪ್ರಸ್ತಾವಕ್ಕೆ ಬಂದೇ ಬರುತ್ತದೆ. ಮಾರುಕಟ್ಟೆಯಲ್ಲಿನ ಎಲ್ಲ ಬಗೆಯ ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಳದ ದರವೇ ಹಣದುಬ್ಬರ. ಇದನ್ನು ವರ್ಷದ ಆಧಾರದ ಮೇಲೆ ಲೆಕ್ಕ ಹಾಕಿ, ತಿಂಗಳು ಅಥವಾ ವಾರದ ಆಧಾರದ ಮೇಲೆ ಪ್ರಕಟಿಸಲಾಗುತ್ತಿದೆ.ಅರ್ಥ ವ್ಯವಸ್ಥೆಯ ಎಲ್ಲ ಪರಿಕಲ್ಪನೆಗಳ ಬಗ್ಗೆ ಭಿನ್ನಾಭಿಪ್ರಾಯಗಳು ಇರುವಂತೆ, ಸರ್ಕಾರ ಪ್ರಕಟಿಸುವ ಹಣದುಬ್ಬರ ದರಗಳ ಬಗ್ಗೆಯೂ ವಿಭಿನ್ನ ಆಲೋಚನೆಗಳು ಇವೆ.

ಜನಸಾಮಾನ್ಯರೆಲ್ಲ ಆಹಾರ, ಇಂಧನ ಮತ್ತಿತರ ಮೂಲ ಸೌಕರ್ಯಗಳು ದಿನೇ ದಿನೇ ದುಬಾರಿಯಾಗುತ್ತಿರುವ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಹಣದುಬ್ಬರವು ಸಮಾಜದ ಎಲ್ಲ ವರ್ಗದ ಜನರ ಅನುಭವಕ್ಕೂ ಬರುತ್ತದೆ. ಬೆಲೆಗಳು ದುಬಾರಿಯಾಗುವುದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಜಾಣತನವೇನೂ ಬೇಕಾಗಲಾರದು. ತಮ್ಮ ವರಮಾನದ ಬಹುಭಾಗವನ್ನು ಮೂಲ ಸೌಕರ್ಯಗಳನ್ನು ಪಡೆಯಲು ವೆಚ್ಚ ಮಾಡುವ ಬಡವರು ಮತ್ತು ಮಧ್ಯಮ ವರ್ಗದ ಜನರು ಹಣದುಬ್ಬರದ ಪರಿಣಾಮಗಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ಹಣದುಬ್ಬರದ ಪರಿಣಾಮಗಳಿಗೆ ಯಾವುದೇ ಕಾಲ ಮಿತಿಯೂ ಇರಲಾರದು. ಹಣದುಬ್ಬರ ದರ ಪ್ರಕಟಿಸುವ ಮುನ್ನವೇ ಗ್ರಾಹಕರು ಅದರ ಅನುಭವಕ್ಕೆ ಗುರಿಯಾಗಿರುತ್ತಾರೆ.ಅಭಿವೃದ್ಧಿ ದರ ಕಾಯ್ದುಕೊಳ್ಳುವುದು, ಸಾಧಾರಣ ಮಟ್ಟದ ಹಣದುಬ್ಬರಕ್ಕೆ ಅವಕಾಶ ಮಾಡಿಕೊಡುವುದು ಮತ್ತು ವೃದ್ಧಿ ದರ ಬಲಿಗೊಟ್ಟು ಹಣದುಬ್ಬರ ಮಟ್ಟವನ್ನು ಕಡಿಮೆ ಮಟ್ಟದಲ್ಲಿಯೇ ನಿಯಂತ್ರಿಸುವುದು- ಇವುಗಳ ಪೈಕಿ ಯಾವುದಕ್ಕೆ ಮಹತ್ವ ಕೊಡಬೇಕು ಎನ್ನುವ ವಾದ - ವಿವಾದ ಎಂದಿಗೂ ಕೊನೆಯಾಗದು. ಇದೊಂದು ವಿವಾದಾತ್ಮಕ ಸಂಗತಿ. ಆರ್ಥಿಕ ತಜ್ಞರಲ್ಲಿಯೂ ಈ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ.ಭಾರತವು ಹಣದುಬ್ಬರಕ್ಕಿಂತ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ. ಜೋಸೆಫ್ ಸ್ಟಿಗ್ಲಟ್ಜ ಅವರು ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದಾರೆ. ನಾನು ಕೂಡ ಜೋಸೆಫ್ ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಅನುಮೋದಿಸುತ್ತೇನೆ.ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಲವಾರು ತಿಂಗಳುಗಳಿಂದ ಹಣದುಬ್ಬರ ನಿಯಂತ್ರಣದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿರುವುದು ಅನುಭವಕ್ಕೆ ಬರುತ್ತದೆ. ಹಣದುಬ್ಬರ ನಿಗ್ರಹಿಸುವ ಏಕೈಕ ಉದ್ದೇಶದಿಂದ ಕಠಿಣ ಸ್ವರೂಪದ ಬಡ್ಡಿ ದರ ನೀತಿ ಅನುಸರಿಸುತ್ತ ಬರಲಾಗುತ್ತಿದೆ. ಇದರಿಂದ ದೇಶದ ಆರ್ಥಿಕ ಚಟುವಟಿಕೆ ಮತ್ತು ಆರ್ಥಿಕ ಬೆಳವಣಿಗೆ ದರದ ಮೇಲೆ ಅನಗತ್ಯವಾದ ನಿರ್ಬಂಧಗಳನ್ನು ಒತ್ತಾಯಪೂರ್ವಕವಾಗಿ ಹೇರಿದಂತೆ ಆಗುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಂತೂ 13 ಬಾರಿ ಬಡ್ಡಿ ದರಗಳನ್ನು ಹೆಚ್ಚಿಸಲಾಗಿತ್ತು. ಈ ಮೂಲಕ `ಆರ್‌ಬಿಐ~ ಆರ್ಥಿಕತೆಗೆ ನಕಾರಾತ್ಮಕ ಸಂದೇಶ ನೀಡುತ್ತಲೇ ಬಂದಿದೆ.ನಾನು ಇಲ್ಲಿ ಉದ್ದೇಶಪೂರ್ವಕವಾಗಿಯೇ ವಿತ್ತೀಯ ಕೊರತೆ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಂಡಿಲ್ಲ. ಇದು ಕೂಡ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ.ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡಲು ಮತ್ತು ಅಗತ್ಯವಾದ ಶಕ್ತಿ ತುಂಬಲು ಪ್ರಧಾನಿ ಸಿಂಗ್ ಅವರು ತುರ್ತಾಗಿ ಗಮನ ನೀಡಬೇಕಾಗಿದೆ. ಸುಸ್ಥಿರ ಮತ್ತು ಗರಿಷ್ಠ ಮಟ್ಟದ ಬೆಳವಣಿಗೆ ದರ ಕಾಯ್ದುಕೊಳ್ಳಲು ಅಗತ್ಯವಾದ ಕ್ರಮಗಳನ್ನೆಲ್ಲ ಕೈಗೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಮತ್ತು `ಆರ್‌ಬಿಐ~ ಪರಸ್ಪರ ಹೊಂದಾಣಿಕೆ ಮೂಲಕ ಕಾರ್ಯನಿರ್ವಹಿಸಿ ಅರ್ಥ ವ್ಯವಸ್ಥೆಯಲ್ಲಿನ ಉತ್ಸಾಹ ಬಡಿದೆಬ್ಬಿಸಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.