ಶನಿವಾರ, ಜುಲೈ 2, 2022
24 °C

ಅಸಂಗತ ಕಾಲದ ಸಂಗತ ಸ್ವಗತ

ನಾರಾಯಣ ಎ Updated:

ಅಕ್ಷರ ಗಾತ್ರ : | |

ಅಸಂಗತ ಕಾಲದ ಸಂಗತ ಸ್ವಗತ

ಸಮಾಜದ ಗಮನ ಸೆಳೆಯುವ ವ್ಯಕ್ತಿಗಳು ಹೇಗೆ ಆಯಾ ಕಾಲದ ಶಿಶುಗಳೋ ಹಾಗೆಯೇ ಖಾಸಗಿಯೇತರ ಕಾರಣಗಳಿಗಾಗಿ ವ್ಯಕ್ತಿಗಳ ಕೊಲೆ ನಡೆಯುವುದು ಕೂಡಾ ಆಯಾ ಕಾಲದ ಉತ್ಪನ್ನ. ಕೊಲೆಗಳು ಎಲ್ಲಾ ಕಾಲದಲ್ಲೂ ಆಗಿವೆ. ಆದರೆ ಕೊಲೆಗಳ ಸಮರ್ಥನೆ ಮತ್ತು ಸಾವಿನ ಸುತ್ತ ಕಾಣುವ ಸಂಭ್ರಮ ನಮ್ಮ ಕಾಲದಲ್ಲಿ ಕಾಣುತ್ತಿರುವಷ್ಟು ಚರಿತ್ರೆಯ ಹಿಂದಿನ ಯಾವ ಕಾಲಘಟ್ಟದಲ್ಲೂ ನಡೆದಂತೆ ಕಾಣುವುದಿಲ್ಲ. ಕೊಲ್ಲುವ ಸಂಸ್ಕೃತಿಗಿಂತ ಸಾವನ್ನು ಸಂಭ್ರಮಿಸುವ ಸಂಸ್ಕೃತಿ ಅಪಾಯಕಾರಿ. ಅಪಾಯಕಾರಿ ಮಾತ್ರವಲ್ಲ ವಿನಾಶಕಾರಿ. ಒಂದು ದಿನ ಆ ಸಂಸ್ಕೃತಿ ಅದನ್ನು ಹುಟ್ಟು ಹಾಕಿದವರನ್ನೇ ನಿರ್ದಯವಾಗಿ ಬಾಧಿಸಲಿದೆ.

ಕಾರಣ ಯಾವುದೇ ಇರಲಿ, ಮನುಷ್ಯ ಮನುಷ್ಯನನ್ನು ಕೊಲ್ಲುವ ಕ್ರಿಯೆಗೆ ಒಂದು ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಆ ಸಮಾಜ ಎಷ್ಟು ನಾಗರಿಕವಾಗಿದೆ ಎನ್ನುವುದನ್ನು ಜಗತ್ತಿಗೆ ಸಾರುತ್ತಿರುತ್ತದೆ. ಚರಿತ್ರೆಯನ್ನು ನೋಡಿದರೆ, ಪುರಾಣಗಳನ್ನು ಓದಿದರೆ ಕಾಣುವುದೇನು? ಯುದ್ಧವಿಲ್ಲದ ಕಾಲದಲ್ಲಿ ನಡೆದ ಕೊಲೆಗಳ ಮಾತು ಹಾಗಿರಲಿ, ಯುದ್ಧದಲ್ಲಿ ಅನಿವಾರ್ಯವಾಗಿ ವೀರಾವೇಶದಿಂದ ವೈರಿಗಳನ್ನು ಕೊಂದವರು ಕೂಡಾ ಯುದ್ಧಾನಂತರ ‘ಕೊಲ್ಲಬೇಕಾಯಿತಲ್ಲಾ’ ‘ಕೊಲ್ಲಬೇಕಾದ ಸ್ಥಿತಿ ಬಂದೊದಗಿತ್ತಲ್ಲಾ’ ಎಂದು ಮಮ್ಮಲ ಮರುಗಿದ್ದನ್ನು ಓದಿದ್ದೇವೆ. ಘೋರ ಅಪರಾಧ ಎಸಗಿದ ವ್ಯಕ್ತಿಗಳನ್ನು ಕಾನೂನು ಪ್ರಕಾರ ಕೊಂದ ಸಂದರ್ಭದಲ್ಲಾದರೂ ಸರಿ, ಪಕ್ವ ನಾಗರಿಕ ಸಮಾಜವೊಂದು ‘ಛೆ ಛೇ, ಈ ಪರಿಸ್ಥಿತಿಯನ್ನು ಆ ವ್ಯಕ್ತಿಗಳು ತಂದುಕೊಂಡರಲ್ಲಾ’ ಎಂದು ಮರುಗುತ್ತದೆ ಮತ್ತು ಮರುಗಬೇಕು. ಯಾಕೆಂದರೆ, ಸಮಾಜದಲ್ಲಿ ಮಾನವೀಯತೆ ಜೀವಂತವಾಗಿರುವುದರ ಲಕ್ಷಣ ಅದು.

ಕಾಲ ಬದಲಾಗಿದೆ. ಸಾವನ್ನು ಕಂಡು ಸಂಭ್ರಮಿಸುವುದು ಸದೃಢ ನವ ಭಾರತದಲ್ಲಿ ಹೊಸ ಫ್ಯಾಷನ್. ಕೊಲೆಗಳು ನಡೆದಾಗ ‘ನಾವು ಮಾಡಲಾಗದ ಕೊಲೆ

ಯನ್ನು ಯಾರೋ ಮಾಡಿ ಮುಗಿಸಿದರಲ್ಲಾ’ ಎಂದು ನೆಮ್ಮದಿಯಿಂದ ಬೀಗುವವರ ನಗುವಿನ ಕಲರವ ಮತ್ತೆ ಮತ್ತೆ ಈಗ ಕಿವಿಗಪ್ಪಳಿಸುತ್ತದೆ. ಸತ್ತದ್ದು ಲೇಸಾಯ್ತು ಎಂದು ಪತ್ರಿಕೆಯೊಂದು ಬಹಿರಂಗ ಶ್ರದ್ಧಾಂಜಲಿ ಅಂಕಣ ಪ್ರಕಟಿಸಿದ್ದು ಕರ್ನಾಟಕದ ಮಟ್ಟಿಗೆ ಸುಮಾರು ಹತ್ತು ವರ್ಷಗಳಷ್ಟು ಹಳೆಯ ಸುದ್ದಿ. ಆಗ ಅದೊಂದು ಅಪವಾದವಾಗಿತ್ತು. ಈಗ ಸಾಮಾಜಿಕ ಮಾಧ್ಯಮಗಳ ಕಾಲ. ಸಾವಿನ ಸುದ್ದಿ ಕೇಳಿ ಸಿಹಿ ಹಂಚುವುದು ಭವ್ಯ ಭಾರತದ ನವನಾಗ

ರಿಕತೆಯ ಸಹಜ ಲಕ್ಷಣ.

ಕೊಲೆಗಳನ್ನು ಗುಪ್ತವಾಗಿ, ನಾಜೂಕಿನಿಂದ ಮಾಡಿ ಮುಗಿಸಬಹುದು. ಆದುದರಿಂದ ಕೊಂದವರು ಯಾರು ಎಂದು ತಿಳಿಯದೆ ಹೋಗಬಹುದು. ಆದರೆ ಸಾವಿನಲ್ಲಿ ಸಂಭ್ರಮಿಸುವವರ ಸಂತಸವನ್ನು ಅಡಗಿಸಿಡಲಾಗುವುದಿಲ್ಲ. ಅಥವಾ ಅದನ್ನು ಅಡಗಿಸುವ ಅವಶ್ಯಕತೆ ಇದೆ ಎಂದು ಅವರಿಗೆಲ್ಲಾ ಯಾವತ್ತೂ ಅನ್ನಿಸುವುದಿಲ್ಲ. ಕೊಲೆ ಕಂಡು ಸಂಭ್ರಮಿಸಿದವರ ನಗು ಸ್ಪಷ್ಟವಾಗಿ ಕೇಳಿಸುತ್ತದೆ. ಅವರ ಅಕ್ಷರ-ಕೇಕೆ ಓದಲು ಮುಕ್ತವಾಗಿ ಸಿಗುತ್ತವೆ. ಅವರು ಯಾರು ಎಂದು ಹೆಚ್ಚು ಕಡಿಮೆ ತಿಳಿಯುತ್ತದೆ.

ಇವೆಲ್ಲಾ ನಮ್ಮ ನಡುವೆ ಆಗುತ್ತಿರುವ ಗಂಭೀರ ಸಾಮಾಜಿಕ ಪರಿವರ್ತನೆಗಳು. ಬಹುಶಃ ಇಂತಹ ಪಲ್ಲಟಗಳನ್ನು ಯಾರೂ ಊಹಿಸಿ ಕೂಡಾ ಇರಲಾರರು. ಇದನ್ನೆಲ್ಲಾ ಕಂಡು ಯಾರಿಗಾದರೂ ಭಯ ಆಗದೆ ಹೋದರೆ, ಇಂತಹವರನ್ನೆಲ್ಲಾ ಕಂಡು ಯಾರಿಗಾದರೂ ಹೃದಯ ಕಂಪಿಸದೆ ಹೋದರೆ ಅದು ಧೈರ್ಯವಲ್ಲ. ಅದೊಂದು ಅಸಂಗತ ಮನಸ್ಥಿತಿ. ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಥಿತಿಯೇ ಅಸಂಗತವಾದರೆ ಆ ಮನಸ್ಥಿತಿಯ ಬಗ್ಗೆ ನಮ್ಮ ನಡುವೆ ಹುಟ್ಟಬೇಕಾದಷ್ಟು ಭಯ ಹುಟ್ಟಿಲ್ಲ ಎನ್ನುವುದು ಅಸಂಗತ ನಾಟಕದೊಳಗಿನ್ನೊಂದು ಅಸಂಗತ ನಾಟಕದಂತೆ ಕಾಣಿಸುತ್ತಿದೆ.

ಸಾವಿನಲ್ಲಿ ಸಂಭ್ರಮಿಸುವವರು ತಮ್ಮನ್ನು ತಾವು ಧರ್ಮಸಂರಕ್ಷಕರು ಎಂದು ಕರೆದುಕೊಳ್ಳುತ್ತಿದ್ದಾರೆ. ‘ನಿಂದಕರಿರಬೇಕು ಜಗದೊಳಗೆ, ಬೀದಿಯಲಿ ಹಂದಿಗಳು ಇರುವ ಹಾಗೆ’ ಎಂದು ಹಿಂದೆ ಯಾರೋ ಬರೆದು, ಯಾರೋ ಹಾಡಿ ಧರ್ಮವನ್ನು ಉಳಿಸಿದ್ದಾರೆ. ಕಾಲ ಬದಲಾಗಿದೆ. ನಿಂದಕರನ್ನು ಮತ್ತು ನಿಂದಕರಿರಬಹುದೆಂಬ ಸಂಶಯಕ್ಕೆ ಗುರಿಯಾದವರನ್ನೆಲ್ಲಾ ಕೊಲ್ಲಬೇಕು, ಕೊಲ್ಲಲಾಗದಿದ್ದರೆಕೊಲ್ಲಿಸಬೇಕು, ಕೊಲ್ಲಿಸಲಾಗದಿದ್ದರೆ ಯಾರೋ ಕೊಂದಾಗ

ನೆಮ್ಮದಿಯಿಂದ ಹಾಲು ಕುಡಿಯಬೇಕು ಎಂಬುದೇ ಹೊಸ ಕಾಲಧರ್ಮ. ಒಂದು ಕಾಲದಲ್ಲಿ ನಿಂದಕರನ್ನು ಕೊಲ್ಲುವ ಪರಿಪಾಠವನ್ನು ಸಮರ್ಥಿಸುವ ಬೇರೆ ದೇಶದ, ಬೇರೆ ಧರ್ಮದ ಮಂದಿಯನ್ನು ಕಂಡು, ‘ನೋಡಿ ನೋಡಿ ಅವರು ಹಾಗೆ’ ಎನ್ನುತ್ತಿದ್ದವರೆಲ್ಲಾ ಈಗ ಅವರನ್ನೇ ಅನುಕರಿಸುತ್ತಿದ್ದಾರೆ. ನಿಂದಕರನ್ನು ತಮ್ಮೊಳಗೆ ಉಳಿಸಿಕೊಂಡ ಧರ್ಮಗಳು ಬೆಳೆಯುತ್ತವೆ. ನಿಂದಕರನ್ನು ಕೊಂದ ಧರ್ಮಗಳು ದೊಡ್ಡ ಸಂಕಷ್ಟಗಳನ್ನು ಎದುರಿಸಿವೆ. ನಿಂದಕರನ್ನು ಕೊಲ್ಲುವ ಪ್ರವೃತ್ತಿ ಬೆಳೆಯುತ್ತಿದೆ ಎಂದರೆ ಕೊಲ್ಲುವವರು ಗುರುತಿಸಿಕೊಂಡ ಧರ್ಮಕ್ಕೆ ಸಂಕಷ್ಟ ಪ್ರಾರಂಭ ಆಗಿದೆ ಎಂದೇ ಲೆಕ್ಕ. ಇದು ಧರ್ಮಗಳ ಚರಿತ್ರೆ ಸಾರುವ ಸತ್ಯ.

‘ಧರ್ಮವನ್ನು ರಕ್ಷಿಸಿರಿ, ಅದು ನಿಮ್ಮನ್ನು ರಕ್ಷಿಸುತ್ತದೆ’ ಅಂತ ಕೆಲವರು ಹೇಳುತ್ತಾರೆ. ಧರ್ಮ ಕೊಲ್ಲಬೇಡ ಎನ್ನುತ್ತದೆ.

ಧರ್ಮ ಇದಿರು ಹಳಿಯಲು ಬೇಡ ಎನ್ನುತ್ತದೆ. ಆದರೆ ಧರ್ಮವನ್ನು ರಕ್ಷಿಸುವುದು ಎಂದರೆ ಕೊಲ್ಲುವುದಂತೆ. ಧರ್ಮವನ್ನು ರಕ್ಷಿಸುವುದು ಎಂದರೆ ಇದಿರು ಹಳಿಯುವುದಂತೆ. ಯಾಕೆ ಹೀಗೆ ಅಂತ ಮುಗ್ಧವಾಗಿಯಾದರೂ ಪ್ರಶ್ನಿಸಬಾರದಂತೆ. ಪ್ರಶ್ನಿಸಿದರೆ ಅದು ಏಕಕಾಲದಲ್ಲಿ ಧರ್ಮ ದ್ರೋಹವೂ, ದೇಶದ್ರೋಹವೂ ಆಗುವುದಂತೆ. ಹೀಗೆಲ್ಲಾ ಮಾಡುವವರು, ಆಡುವವರು ಯಾರೋ ತಲೆಕೆಟ್ಟವರು- ಫ್ರಿಂಜ್ ಎಲಿಮೆಂಟ್ಸ್- ಅರ್ಥಾತ್ ಅವರು ದೇಹವಲ್ಲ, ಕೇವಲ ಬಾಲಗಳು ಎಂದು ಆಯಾ ಧರ್ಮಕ್ಕೆ ಸೇರಿದವರು ಅಗತ್ಯಬಿದ್ದಾಗ ಹೇಳುವುದುಂಟು. ಇರಬಹುದು. ಆದರೆ ಇಲ್ಲಿ ದೇಹ ಬಾಲವನ್ನು ಅಲುಗಾಡಿಸುತ್ತದೋ ಅಥವಾ ಬಾಲ ದೇಹವನ್ನು ಅಲುಗಾಡಿಸುತ್ತದೋ ಎಂದು ತಿಳಿಯಲಾಗದ ಸ್ಥಿತಿ ಇದೆ. ಇದು ಅಸಂಗತ ಸ್ಥಿತಿ.

ಎಲ್ಲಾ ಸಮಾಜಗಳಲ್ಲೂ, ಎಲ್ಲಾ ಕಾಲಗಳಲ್ಲೂ ಕೊಲೆಗಳು ನಡೆಯುತ್ತವೆ. ಭಾರತದಲ್ಲೀಗ ಅಂತಹ ಮಾಮೂಲಿ ಕೊಲೆಗಳ ಜತೆಗೆ ಎರಡು ಹೊಸ ಸ್ವರೂಪದ ಕೊಲೆಗಳು ಕಾಣಿಸಿಕೊಳ್ಳುತ್ತಿವೆ. ಮೊದಲನೆಯದ್ದು ಜನರ ಉನ್ಮತ್ತ ಗುಂಪುಗಳು ಯಾರದ್ದೋ ಮೇಲೆರಗಿ ಯಾವುದೋ ಆರೋಪ ಹೊರಿಸಿ ಹೊಡೆದು, ಬಡಿದು, ಚಚ್ಚಿ, ಕೊಚ್ಚಿ ಕೊಂದುಬಿಡುವುದು. ಇದನ್ನು ಇಂಗ್ಲಿಷ್‌ನಲ್ಲಿ ಲಿಂಚಿಂಗ್ ಎನ್ನುತ್ತಾರೆ. ಇದನ್ನು ಯಾರು, ಎಂಥೆಂಥವರು, ಯಾವ ಪ್ರೇರಣೆಯಿಂದ ಮಾಡಿದರು ಎಂದು ಎಲ್ಲರಿಗೂ ತಿಳಿದಿರುತ್ತದೆ. ಎರಡನೆಯದ್ದು ಬಹಳ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು, ಆಯ್ದ ವ್ಯಕ್ತಿಗಳನ್ನು ರಹಸ್ಯವಾಗಿ ಹಿಂಬಾಲಿಸಿ, ಯಾವುದೇ ಸುಳಿವು ಉಳಿಯದ ರೀತಿಯಲ್ಲಿ ಕೊಂದು ಮುಗಿಸುವುದು. ಇಂತಹ ಕೊಲೆ ಪ್ರಕರಣಗಳಲ್ಲಿ ಸತ್ತವರು ಯಾರು ಎಂದು ಮಾತ್ರ ತಿಳಿದಿರುತ್ತದೆ. ಕೊಂದವರು ಯಾರು ಮತ್ತು ಯಾಕಾಗಿ ಕೊಲೆ ನಡೆಯಿತು ಎನ್ನುವುದನ್ನು ಊಹಿಸಲು ಮಾತ್ರ ಸಾಧ್ಯ.

ಸಾಮಾಜಿಕ-ಸಂಘರ್ಷ ಪ್ರೇರಿತ ಸಂಘಟಿತ ಕೊಲೆಗಳು, ಬೀದಿಯಲ್ಲಿ ನ್ಯಾಯನಿರ್ಣಯ ಮಾಡಿ ಶಂಕಿತರನ್ನು ಬಡಿದು ಕೊಲ್ಲುವುದು ಇತ್ಯಾದಿಗಳೆಲ್ಲಾ ಸಮಾಜವೊಂದರ ವಿಕೃತ ಮನಸ್ಥಿತಿಯ ಪ್ರತೀಕಗಳು. ಅಮೆರಿಕದಲ್ಲಿ ಕೊನೆಯ ಬೀದಿ ನ್ಯಾಯನಿರ್ಣಯ ಆಧರಿಸಿ ನಡೆದ ಕೊನೆಯ ಕೊಲೆ

ಆಗಿ ಸುಮಾರು ಒಂದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಆ ದೇಶದಾದ್ಯಂತ ಇತ್ತೀಚೆಗೆ ಅದನ್ನು ನೆನೆದು ಪಾಶ್ಚಾತ್ತಾಪ ಪಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಂತೆ. ‘ನೂರು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಹೀಗಾಗುತ್ತಿತ್ತಲ್ಲಾ’ ಎಂದು ನೆನೆದು ಅಲ್ಲಿನ ಜನ ಮಮ್ಮಲ ಮರುಗಿದ

ರಂತೆ. ಅದೇ ವೇಳೆ ಭಾರತದಲ್ಲಿ ಇಂತಹ ಸಂಸ್ಕೃತಿಯೊಂದು ಹೊಸದಾಗಿ ಹುಟ್ಟಿಕೊಳ್ಳುತ್ತಿದೆ. ಅದರ ಬಗ್ಗೆ ಬಹಳ ಮಂದಿಗೆ

ಯಾವುದೇ ಆತಂಕವಾಗಲೀ, ಪಾಶ್ಚಾತ್ತಾಪವಾಗಲೀ ಇದ್ದಂತಿಲ್ಲ. ಭಾರತದಲ್ಲಿ ಈಗ ಹಿಂದೆಂದಿಗಿಂತಲೂ ಹೆಚ್ಚು ಸಾಕ್ಷರತೆಯ ಪ್ರಮಾಣವಿದೆ. ಹಿಂದೆಂದಿಗಿಂತಲೂ ಹೆಚ್ಚು ಮಂದಿ ವಿದ್ಯಾಭ್ಯಾಸ ಹೊಂದಿದ ಮಧ್ಯಮ ವರ್ಗದವರಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಆಧ್ಯಾತ್ಮಿಕ ಗುರುಗಳಿ

ದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠ ನಾಯಕತ್ವವೂ ಇದೆ ಎಂದು ನಂಬಲಾಗಿದೆ. ಇವೆಲ್ಲವೂ ಇರುತ್ತಾ, ಇವರೆಲ್ಲರೂ ಇರುತ್ತಾ ದೇಶ ಇಂತಹ ಅನಾಗರಿಕ, ಬರ್ಬರ ಪ್ರಕರಣಗಳಿಗೆ ಸಾಕ್ಷಿಯಾಗುತ್ತಾ, ಮತ್ತೆ ಮತ್ತೆ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಾ, ವಿವಿಧ ರೀತಿಯ ಸಾವುಗಳಲ್ಲಿ ವಿಕೃತಾನಂದವನ್ನು ಅನುಭವಿಸುತ್ತಾ ಇದೆ ಎನ್ನುವುದು ಯಾವ ದೇಶ ಭಕ್ತನಿಗೂ ಅವಮಾನ ಅಂತ ಅನ್ನಿಸುವುದಿಲ್ಲ ಎನ್ನುವುದು ಅಸಂಗತವಲ್ಲದೆ ಇನ್ನೇನು?

ಈ ದೇಶದಲ್ಲಿ ಕೊಲೆ ನಡೆಸಿ ಬಚಾವಾಗುವುದು ಕಷ್ಟವೇನಲ್ಲ ಎನ್ನುವ ಒಂದು ನಂಬಿಕೆ ಎಲ್ಲಾ ಕಾಲದಲ್ಲೂ ಇತ್ತು. ಆದರೆ ಆ ಸ್ಥಿತಿಯ ಲಾಭ ಪಡೆಯುತ್ತಿದ್ದವರು ಭೂಗತ ಜಗತ್ತಿನವರು ಮತ್ತು ಕೆಲ ಸಮಾಜದ್ರೋಹಿ ಶಕ್ತಿಗಳು ಮಾತ್ರ. ಈಗ ಹಾಗಲ್ಲ. ಕೊಲೆ ಎನ್ನುವುದು ಅತ್ಯಂತ ಸಲೀಸಾಗಿ ಮಾಡಿ ಮುಗಿಸಿಬಿಡಹುದಾದ ವ್ಯವಹಾರವಾಗಿದೆ. ಯಾಕೆಂದರೆ ಕೆಲವು ರೀತಿಯ ಕೊಲೆಗಳಿಗೆ ಒಂದು ರೀತಿಯ ಸಾಮಾಜಿಕ ಮನ್ನಣೆ ಅಥವಾ ಸ್ವೀಕಾರಾ

ರ್ಹತೆ ಬಂದುಬಿಟ್ಟಿದೆ. ಯಾರು ಯಾರನ್ನು ಕೊಂದರು ಎನ್ನುವುದರ ಆಧಾರದ ಮೇಲೆ ಕೊಂದವರು ಹೀರೊಗಳುಅಥವಾ ದೇಶಭಕ್ತರು ಅಥವಾ ಧರ್ಮರಕ್ಷಕರಾಗಿ ಬಿಡಬಹುದು. ಕೆಲವೊಂದು ವ್ಯಕ್ತಿಗಳ ಕೊಲೆ ಮಾಡಿದವರು ಕೆಲವರ ದೃಷ್ಟಿಯಲ್ಲಿ ಇವು ಮೂರೂ ಆಗಿಬಿಡಬಹುದು.

ಇಂತಹ ಪರಿಸ್ಥಿತಿಯಲ್ಲಿ ಕೊಲೆ ಮಾಡಿದವರನ್ನು ಹಿಡಿಯಲು ಪೊಲೀಸರಿಗೆ ಗಡುವು ನೀಡುವುದು, ಕೊಲೆ ಪ್ರಕರಣಗಳನ್ನು ಭೇದಿಸದಿದ್ದರೆ ಪೊಲೀಸ್ ವೈಫಲ್ಯ, ಸರ್ಕಾರದ ವೈಫಲ್ಯ ಇತ್ಯಾದಿ ಸರಳೀಕೃತ ನಿರ್ಧಾರಗಳಿಗೆ ಬಂದುಬಿಡುವುದು ಇತ್ಯಾದಿಗಳೆಲ್ಲಾ ಸುದೀರ್ಘ ಅಸಂಗತ ನಾಟಕ

ವೊಂದರ ನಡುವಣ ಪುಟ್ಟದೊಂದು ಹಾಸ್ಯ ದೃಶ್ಯದಂತೆ ಗೋಚರಿಸುತ್ತದೆ. ಪೊಲೀಸ್ ವ್ಯವಸ್ಥೆ ಸಮಾಜದ ಸೃಷ್ಟಿ. ಸಮಾಜ ಪೊಲೀಸ್ ವ್ಯವಸ್ಥೆಯ ಸೃಷ್ಟಿಯಲ್ಲ. ‘ದೇವರು’ ದೊಡ್ಡವ. ಸದ್ಯ ದೇಶದ ಗಮನ ಸೆಳೆದಿರುವ ಅಭೇದ್ಯ ಕೊಲೆ ಪ್ರಕರಣಗಳನ್ನು ಆತ ಒಂದು ಕಾಂಗ್ರೆಸ್ ಆಡಳಿತ ಇರುವ ರಾಜ್ಯ ಮತ್ತು ಒಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮಧ್ಯೆ ಸಮಾನವಾಗಿ ಹಂಚಿಬಿಟ್ಟಿದ್ದಾನೆ. ಇಲ್ಲದೆ ಹೋಗಿದ್ದರೆ ಈ ಕುರಿತು ಇನ್ನೆಷ್ಟು ಅಸಂಗತ ಡೈಲಾಗ್‌ಗಳನ್ನ ಕೇಳಬೇಕಿತ್ತೋ!

ನಾವೀಗ ಕೇವಲ ಕಾನೂನು-ಸುವ್ಯವಸ್ಥೆ ಕುಸಿದುಬಿದ್ದ ಸ್ಥಿತಿಯನ್ನಷ್ಟೇ ಎದುರಿಸುತ್ತಿಲ್ಲ. ನಾವೀಗ ಕೆಲ ಅಪರಾಧಿ ಪ್ರವೃತ್ತಿಯ ವ್ಯಕ್ತಿಗಳನ್ನು ಸದೆಬಡಿಯುವ ಸವಾಲನ್ನಷ್ಟೇ ಎದುರಿಸುತ್ತಿರುವುದಲ್ಲ. ಇಡೀ ಭಾರತೀಯ ಸಮಾಜವನ್ನು ವಿವಿಧ ರೀತಿಯ ದ್ವೇಷದ ವಿಷಾನಿಲ ಆವರಿಸಿಕೊಳ್ಳುತ್ತಿದೆ. ಈ ವಿಷಾನಿಲವನ್ನು ಕೆಲವರು ಪೈಪೋಟಿಗೆ ಬಿದ್ದಂತೆ ಉತ್ಪಾದಿಸಿ ಸಾಮಾಜಿಕ ಜಾಲತಾಣಗಳೆಂಬ ಕೊಳವೆಗಳ ಮೂಲಕ ಮನೆ-ಮನೆಗೆ ಹರಡುತ್ತಿದ್ದಾರೆ. ಅದನ್ನು ಸೃಷ್ಟಿಸುವವರಿಗೆ ಒಂದು ದಿನ ಅದು ನಮ್ಮನ್ನು ದಹಿಸಲಿದೆ ಎನ್ನುವ ಕನಿಷ್ಠ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ಎಂತಹ ಅಸಂಗತ ಕಾಲವಿದು.

ಪರಿಸ್ಥಿತಿ ಈಗಾಗಲೇ ಕೈಮೀರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇದರರ್ಥ ದಿನಾ ಬೀದಿ ಬೀದಿಗಳಲ್ಲಿ ಹೆಣಗಳು ಉರುಳುತ್ತಿವೆ ಎಂದಲ್ಲ. ಪರಿಸ್ಥಿತಿಯ ಭೀಕರತೆಯನ್ನು ಒಂದು ಕೊಲೆಯ ಬರ್ಬರತೆಯಲ್ಲಿ ಅಥವಾ ಕೊಲೆಯಾದ ಓರ್ವ ವ್ಯಕ್ತಿಯ ಪ್ರಸಿದ್ಧಿಯಲ್ಲಿ ಕಾಣುವುದಲ್ಲ. ಅದನ್ನು ದಿನೇ ದಿನೇ ಕಲುಷಿತಗೊಳ್ಳುತ್ತಿರುವ ಸಾಮಾಜಿಕ ಮನಸ್ಥಿತಿಯಲ್ಲಿ ಕಾಣಬೇಕು. ಒಂದೊಂದು ಹೆಣ ಬಿದ್ದಾಗಲೂ ಪ್ರಕರಣವನ್ನು ತಮ್ಮ ತಮ್ಮ ಲಾಭಕ್ಕಾಗಿ ಬಳಸಿಕೊ

ಳ್ಳಲು ರಣ ಹದ್ದುಗಳಂತೆ ಮೇಲೆರಗುವ ರಾಜಕೀಯದ ಮಂದಿ, ಮಾಧ್ಯಮಗಳ ಮಂದಿ ಮತ್ತು ವಿವಿಧ ಸಂಘಟನೆಗಳ ಮಂದಿ ಸತ್ಯವನ್ನು ಸುಳ್ಳುಗಳನ್ನಾಗಿಯೂ, ಸುಳ್ಳುಗಳನ್ನು ಸತ್ಯವನ್ನಾಗಿಯೂ ರೂಪಾಂತರಗೊಳಿಸುವ ವಿಕೃತ ಪ್ರಕ್ರಿಯೆಯಲ್ಲಿ ಅದನ್ನು ಕಾಣಬೇಕು. ಎಲ್ಲಾ ಕಾಲದಲ್ಲೂ ಅಸಂಗತ ಎನಿಸುವ ಕೆಲ ಘಟನಾವಳಿಗಳು ಸಂಭವಿಸುತ್ತವೆ. ಈಗ ಹಾಗಲ್ಲ. ಇಡೀ ಕಾಲವೇ ಒಂದು ಅಸಂಗತ ಪ್ರವಾಹದಂತೆ ಕಾಣಿಸುತ್ತಿದೆ. ಈ ಪ್ರವಾಹ ಈ ದೇಶವನ್ನು ಎಲ್ಲಿಗೆ ಕರೆದೊಯ್ದು ನಿಲ್ಲಿಸಬಹುದು? ಹೀಗೆ ಆತಂಕವ್ಯಕ್ತಪಡಿಸುವುದು ಕೂಡಾ ಎಲ್ಲಿ ದೇಶದ್ರೋಹ ಅಥವಾ ಧರ್ಮ ದ್ರೋಹದ ಪ್ರಶ್ನೆಯಾಗಿಬಿಡುತ್ತದೋ ಎನ್ನುವ ಅನುಮಾನ ಕಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.