ಶುಕ್ರವಾರ, ಮಾರ್ಚ್ 5, 2021
27 °C

ಆಧುನಿಕ ಇತಿಹಾಸದ ‘ಕಿಟಕಿ’ ಎಲ್ವಿನ್

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಆಧುನಿಕ ಇತಿಹಾಸದ ‘ಕಿಟಕಿ’ ಎಲ್ವಿನ್

೧೯೬೪‌ಫೆಬ್ರುವರಿ ೨೨ರಂದು;  ‌ಸರಿ­ಯಾಗಿ ಐವತ್ತು ವರ್ಷ­ಗಳ ಹಿಂದೆ ನನ್ನ ಬದುಕನ್ನು ಬದ­ಲಿ­ಸಿದ ಇಂಗ್ಲಿಷ್ ಮೂಲದ ವ್ಯಕ್ತಿಯೊಬ್ಬರು ಮೃತ­­ಪಟ್ಟರು. ಅವರ ಹೆಸರು ವೆರಿಯರ್ ಎಲ್ವಿನ್. ೧೯೦೨ರಲ್ಲಿ ಡೊವರ್‌ನಲ್ಲಿ ಹುಟ್ಟಿದ ಅವರು ಸಿಯೆರಾ ಲಿಯೋನ್‌ನ ಮಾಜಿ ಬಿಷಪ್ ಒಬ್ಬರ ಮಗ. ತಮ್ಮನ್ನು ತಾವು ಪಾದ್ರಿ ಎಂದು ಘೋಷಿಸಿ­ಕೊಳ್ಳುವ ಮುನ್ನ ಅವರು ಆಕ್ಸ್‌ಫರ್ಡ್ ವಿಶ್ವ­ವಿದ್ಯಾ­ಲಯದಲ್ಲಿ ಎರಡು ಪದವಿಗಳನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದ್ದರು. ೧೯೨೭ರಲ್ಲಿ ಅವರು ಭಾರತಕ್ಕೆ ಬಂದದ್ದು ಕ್ರಿಸ್ತ ಸೇವಾ ಸಂಘ ಸೇರಲು. ಪುಣೆ ಮೂಲದ ಅದು ದೇಸಿ ಮಟ್ಟದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಒಗ್ಗಿಸುವ ಬದ್ಧತೆಯಿಂದ ಹುಟ್ಟಿದ ಸಣ್ಣ ಸಂಘ.ಭಾರ­ತಕ್ಕೆ ಬಂದ ಒಂದು ವರ್ಷದ ನಂತರ ಎಲ್ವಿನ್ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ­ದರು. ಆ ಆಶ್ರಮದಿಂದ ಅವರು ಎಷ್ಟು ಪ್ರಭಾವಿತ­ರಾದರೆಂದರೆ, ರಾಷ್ಟ್ರೀಯ ಚಳವಳಿ ಕುರಿತು ಅವರಲ್ಲಿ ಅತೀವ ಸಹಾನುಭೂತಿ ಮೂಡಿತು. ತಮ್ಮ ಬದುಕಿನ ಉಳಿದ ಅವಧಿ­ಯನ್ನು ಭಾರತದಲ್ಲಿ ಕಳೆಯಲು ನಿರ್ಧರಿಸಿದರು. ಮೊದ­ಲಿಗೆ ಮುಂಬೈನ ಕೊಳೆಗೇರಿಯೊಂದರಲ್ಲಿ ವಾಸ ಮಾಡಲು ತೀರ್ಮಾನಿಸಿದ ಅವರು, ಆಮೇಲೆ ಗಾಂಧಿ ಅನುಯಾಯಿಯೂ ಆಗಿದ್ದ ಉದ್ಯಮಿ ಜಮ್ನಾಲಾಲ್ ಬಜಾಜ್ ಕೊಟ್ಟ ಸಲ­ಹೆ­­ಯಂತೆ  ಭಾರತದ ಮಧ್ಯ ಭಾಗದ ಬುಡ­ಕಟ್ಟು ಜನರ ನಡುವೆ ಬದುಕುವ ಆಯ್ಕೆಯನ್ನು ಒಪ್ಪಿ­ಕೊಂಡರು.ವೆರಿ­ಯರ್ ಎಲ್ವಿನ್ ಹೆಸರನ್ನು ಮೊದಲು ನನ್ನ ಕಿವಿಮೇಲೆ ಹಾಕಿದವರು ಒರಿಯಾದ ಒಬ್ಬ ಹಿರೀಕರು; ೧೯೭೮ರ ಬೇಸಿಗೆಯಲ್ಲಿ. ಆಗ ನಾನು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಎಂ.ಎ. ಓದುತ್ತಿದ್ದೆ. ಶೈಕ್ಷಣಿಕ ಭಾಷೆಯಲ್ಲಿ ಹೇಳುವು­ದಾದರೆ, ಕೋರ್ಸ್‌ನ ನಡುಘಟ್ಟದಲ್ಲಿ ಆಗ ನಾನಿದ್ದೆ. ಸಂಶೋಧನೆಯಲ್ಲೇ ವೃತ್ತಿಬದುಕನ್ನು ಕಟ್ಟಿಕೊಳ್ಳ­ಬೇಕೆಂದು ಅದಾಗಲೇ ನಾನು ನಿರ್ಧ­ರಿಸಿ ಆಗಿತ್ತು. ಒಡಿಶಾದಿಂದ ದೆಹಲಿಗೆ ಮರಳಿ­ದಾಗ ಕಾಲೇಜು ಗ್ರಂಥಾಲಯದಲ್ಲಿ ಎಲ್ವಿನ್ ಬರೆದ ಎರಡು ಪುಸ್ತಕಗಳನ್ನು ಕಂಡೆ. ಒಂದು– ಅವರ -ವುಡ್‌ಹೌಸಿಯನ್ ಡೈರಿ ‘ಲೀವ್ಸ್ ಫ್ರಮ್ ದಿ ಜಂಗಲ್’. ಇನ್ನೊಂದು–ಓದಲು ಪೊಗದ­ಸ್ತಾ­ದ ಅವರ ಆತ್ಮಕಥೆ ‘ದಿ ಟ್ರೈಬಲ್ ವರ್ಲ್ಡ್ ಆಫ್ ವೆರಿಯರ್ ಎಲ್ವಿನ್’. ಆ ಕೃತಿಗಳ ಓದು ಸಮಾಜ­ಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಲು ಕೋಲ್ಕ­ತ್ತಗೆ ಹೋಗಲು ಪ್ರೇರಣೆಯಾಯಿತು. ನನ್ನ ಪ್ರೊಫೆಸರ್ ಒಬ್ಬರು ಹಿಂದೆ ಹೇಳಿದ್ದಂತೆ ಆ ನಿರ್ಧಾರ­ದಿಂದ ನನಗೂ ಒಳ್ಳೆಯದಾಯಿತು, ಅರ್ಥ­ಶಾಸ್ತ್ರಕ್ಕೂ ಒಳಿತಾಯಿತು!ಕೋಲ್ಕತ್ತದಲ್ಲಿ ನಾನು ಅರಣ್ಯಗಳ ಇತಿಹಾಸದ­ ಕುರಿತು ಪ್ರೌಢಪ್ರಬಂಧ ಬರೆದೆ. ಆ ಪ್ರಕ್ರಿಯೆ­ಯಲ್ಲಿ ಎಲ್ವಿನ್ ಮತ್ತೆ ನನಗೆ ಬೇಕಾ­ದರು. ವಿವಿಧ ಜನಾಂಗಗಳ ವೈಜ್ಞಾನಿಕ ವಿವರಣೆ­ಯನ್ನೇ ವಸ್ತುವಾಗಿಸಿ ಅವರು ಕೃತಿಗಳನ್ನು ಬರೆದಿ­ದ್ದಾರೆ. ಅವುಗಳಲ್ಲಿ ವಸಾಹತು ಅರಣ್ಯ ಕಾನೂನು­ಗಳಿಂದ ಬುಡಕಟ್ಟು ಜನರ ಬದುಕಿನ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳೇನು ಎಂಬು­ದನ್ನು ಅವರು ಸೂಕ್ಷ್ಮವಾಗಿ ತಿಳಿಸಿದ್ದಾರೆ. ‘ದಿ ಬೈಗಾ’, ‘ದಿ ಅಗೇರಿಯಾ’ ಪುಸ್ತಕಗಳನ್ನು ಓದಿದ ಮೇಲಂತೂ ಎಲ್ವಿನ್ ನನಗೆ ಬಹಳವಾಗಿ ಹಿಡಿಸಿ­ದರು. ಅವರ ವೃತ್ತಿಬದುಕಿನ ಕುರಿತು ಕುತೂ­ಹಲ ಗಟ್ಟಿಯಾದದ್ದೂ ಆಗಲೇ. ನೆಲ­­ದೊಟ್ಟಿಗೆ ಸಂಬಂಧ ಇಟ್ಟುಕೊಂಡಿದ್ದ ವಿದ್ವಾಂಸ ಅವ­ರಾಗಿದ್ದರೆಂಬುದೇ ನನಗೆ ಅವರ ಬಗ್ಗೆ ಆಕರ್ಷಣೆ ಹೆಚ್ಚಾಗಲು ಕಾರಣ. ಅಸಾಮಾನ್ಯ ವಿಚಾರ­ಗಳನ್ನು ಚೆನ್ನಾಗಿ ಬರೆಯುತ್ತಿದ್ದರೆಂಬುದು ಅವರ ಇನ್ನೊಂದು ಅಗ್ಗಳಿಕೆ.೧೯೩೦ ಹಾಗೂ ೧೯೪೦ರ ದಶಕಗಳಲ್ಲಿ ಎಲ್ವಿನ್ ಕೇಂದ್ರ ಭಾರತದಲ್ಲಿ ವಾಸ ಮಾಡಿ­ದರು; ಮೊದಲು ಈಗಿನ ಮಧ್ಯಪ್ರದೇಶ ಹಾಗೂ ಛತ್ತೀಸ­ಗಡದ ಅರಣ್ಯ ಪ್ರದೇಶದಲ್ಲಿ, ಆಮೇಲೆ ಒಡಿಶಾದ ಬುಡಕಟ್ಟು ಜನಾಂಗದವರು ವಾಸ­ವಿದ್ದ ಸ್ಥಳಗಳಲ್ಲಿ. ಆದಿವಾಸಿ ಸಂಸ್ಕೃತಿಯ ಕುರಿತು ಅವರು ವಿದ್ವತ್ಪೂರ್ಣವಾದ, ಮಹತ್ವದ ಮಾಹಿತಿ­ಯನ್ನು ಅಡಗಿಸಿಟ್ಟ ಸರಣಿ ಕೃತಿಗಳನ್ನು ಬರೆದರು. ಅಷ್ಟೇ ಅಲ್ಲ, ಆ ಜನಾಂಗದವರ ಮೇಲೆ ನಡೆದ ಆರ್ಥಿಕ ಶೋಷಣೆ, ಇರುವ ರಾಜ­ಕೀಯ ನಿರ್ಲಕ್ಷ್ಯದ ಬಗೆಗೆ ಅನೇಕ ಜನಪ್ರಿಯ ಪ್ರಬಂಧ­ಗಳನ್ನೂ ಬರೆದರು. ತಮ್ಮ ಇಂಥ ಬರಹ­ಗಳ ಮೂಲಕವೇ ಅವರು ಆದಿವಾಸಿ ಹಕ್ಕುಗಳ ತೀವ್ರ ಪರಿಣಾಮಕಾರಿ ವಕ್ತಾರ ಎನಿಸಿಕೊಂಡರು.ಇನ್ನೊಂದು ಕಡೆ ಬುಡಕಟ್ಟು ಜನಾಂಗದವರು ಹಿಂದು­ಳಿದ ಹಿಂದೂಗಳು ಎಂದೇ ಭಾವಿಸಿದ್ದ, ಅವ­ರನ್ನು ಪ್ರಮುಖ ವಲಯದ ಜೊತೆಗೇ ಮಿಳಿತ­ಗೊಳಿಸಿ ಮಾತನಾಡುತ್ತಿದ್ದ ರಾಷ್ಟ್ರೀಯತಾವಾದಿ­ಗಳ ಕೋಪಕ್ಕೂ ಎಲ್ವಿನ್ ಬರಹಗಳು ಕಾರಣ­ವಾದವು. ಎಲ್ವಿನ್ ಮಾತ್ರ ಇವ್ಯಾವುದರಿಂದಲೂ ವಿಚಲಿತ­ರಾಗದೆ ಆದಿವಾಸಿಗಳ ಅನನ್ಯ ಸಂಸ್ಕೃತಿ, ಅವರ ಕಾವ್ಯ ಪರಂಪರೆ, ಕಲೆ, ಸಂಗೀತ, ನೃತ್ಯ, ಪ್ರಕೃತಿ ಪ್ರೇಮ, ಪ್ರಾದೇಶಿಕ ಪ್ರೀತಿ ಎಲ್ಲವುಗಳ ಕುರಿತು ಬರೆಯುವುದನ್ನು ಮುಂದುವರಿಸಿದರು.೧೯೪೭ರ ನಂತರವೂ ವೆರಿಯರ್ ಎಲ್ವಿನ್ ಭಾರತ­ದಲ್ಲಿಯೇ ನೆಲೆಸಿದರು. ೧೯೫೪ರ ಹೊತ್ತಿಗೆ ಅವರು ನಮ್ಮ ದೇಶದ ಪ್ರಜೆಯೇ ಆದರು. ಆಗ ಅವರನ್ನು ಈಶಾನ್ಯ ಗಡಿಭಾಗದ (ಈಗಿನ ಅರುಣಾಚಲ ಪ್ರದೇಶ) ಸಂಸ್ಥೆಯೊಂದಕ್ಕೆ ಬುಡ­ಕಟ್ಟು ಜನಾಂಗದವರ ವಿಷಯದಲ್ಲಿ ಮಾರ್ಗ­­ದರ್ಶನ ತೋರಲು ಸಲಹೆಗಾರರಾಗಿ ನೇಮಿಸಿ­ಕೊಳ್ಳಲಾಯಿತು. ವಯಸ್ಸಾದರೂ, ಸ್ಥೂಲ­ಕಾಯ ಇದ್ದರೂ ಅವರು ಸಂಶೋಧನೆ­ಯನ್ನು ಮಾತ್ರ ಬಿಡಲೇ ಇಲ್ಲ. ಪ್ರವಾಸ ಮಾಡು­ತ್ತಲೇ ಇದ್ದರು. ನಡೆದೋ, ಕುದುರೆ ಏರಿಯೋ ಪ್ರಾಂತ್ಯದ ತೀರಾ ಹಿಂದುಳಿದ ಪ್ರದೇಶಗಳನ್ನು ತಲುಪುತ್ತಿದ್ದರು. ಅಲ್ಲಿನ ಬುಡಕಟ್ಟು ಜನರ ಜೀವನ­ಶೈಲಿ, ಸಂಸ್ಕೃತಿಯನ್ನು ಅರಿಯುವುದು ಅವರ ಉದ್ದೇಶವಾಗಿತ್ತು.ಕೇಂದ್ರ ಸರ್ಕಾರವು ಇಂಥ ಗಡಿ ಪ್ರದೇಶಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿ­ಸಲು ಯತ್ನಿಸುತ್ತಿದ್ದ ಕಾಲಘಟ್ಟ ಅದು. ತಮ್ಮ ರಾಜ­ಕೀಯ ಮೇಲಧಿಕಾರಿಗಳಿಗೆ ಎಲ್ವಿನ್, ನಿಧಾ­ನವೇ ಪ್ರಧಾನ ಎಂಬ ತತ್ವವನ್ನು ಮನದಟ್ಟು ಮಾಡಿ­ಸಿದರು. ಆ ಅರಣ್ಯ ಪ್ರದೇಶದಲ್ಲಿದ್ದ ಬುಡ­ಕಟ್ಟು ಜನರ ಹಕ್ಕುಗಳನ್ನು ರಕ್ಷಿಸಬೇಕೆಂದು ಪ್ರತಿ­ಪಾದಿ­ಸಿದರು. ಅಲ್ಲಿ ಕೆಲಸ ಮಾಡಲು ಸೂಕ್ಷ್ಮ­ಮತಿ­ಗಳಾದ, ಸಾಮಾಜಿಕ ಬದ್ಧತೆ ಇರುವ ಅಧಿ­ಕಾರಿ­ಗಳನ್ನು ನಿಯೋಜಿಸಬೇಕು ಎಂದು ಸಲಹೆ ಕೊಟ್ಟರು. ‘ಎ ಫಿಲಾಸಫಿ ಆಫ್ ನೇಫಾ’ ಎಂಬ ಪುಸ್ತಕ­ದಲ್ಲಿ ಅವರು ತಮ್ಮ ಚಿಂತನೆಗಳನ್ನೆಲ್ಲಾ ಬರೆದಿ­ದ್ದಾರೆ. ಅದು ಮೊದಲ ಪ್ರಕಟಣೆ ಕಂಡು ಐವತ್ತಾರು ವರ್ಷಗಳಾದವು. ಕೇಂದ್ರ ಹಾಗೂ ಈಶಾನ್ಯ ಭಾರತದಲ್ಲಿ ಬುಡಕಟ್ಟು ಜನರನ್ನು ಪ್ರತ್ಯೇ­ಕ­ತಾ­­­ಭಾವದಿಂದ ಯಾಕೆ ನೋಡ­ಲಾಗು­ತ್ತಿದೆ ಎಂಬುದನ್ನು ಸಮರ್ಪಕವಾಗಿ, ಗಮನ ಸೆಳೆ­ಯುವಂತೆ ತಿಳಿಸಿಕೊಡುವ ಆ ಕೃತಿ ಈಗಲೂ ಪ್ರಸ್ತು­ತವಾಗಿದೆ.ಎಲ್ವಿನ್ ಆತ್ಮಕಥೆ ಈಗಲೂ ಅಚ್ಚಾಗಿದೆ. ಅಂತೆಯೇ ಅವರ ಅನೇಕ ವಿಶೇಷ ಬರಹಗಳು ಮರು­­ಮುದ್ರಿತವಾಗುತ್ತಿವೆ. ಅಂಥ ದೊಡ್ಡ ಮನು­­ಷ್ಯನ ಕುರಿತು ನನಗೇನೋ ಭಾವನಾತ್ಮಕ ಆಸಕ್ತಿ ಇದೆ. ಅದರ ಹೊರತಾಗಿಯೂ ಇಂದಿನ ನನ್ನ ದೇಶದ ಯುವಕರು ಬ್ರಿಟನ್‌ನಲ್ಲಿ ಹುಟ್ಟಿದ ಈ ಭಾರತೀಯನ, ಆದಿವಾಸಿಗಳ ನಡುವೆ ಬದು­ಕಿದ ಈ ಆಕ್ಸ್‌ಫರ್ಡ್ ಸಂಶೋಧಕನ, ವ್ಯವಸ್ಥೆಯ ವಿರುದ್ಧ ಬಂಡೆದ್ದ ದಿಟ್ಟ ವ್ಯಕ್ತಿತ್ವದವನ ಕುರಿತು ತಿಳಿದು­ಕೊಳ್ಳಲೇಬೇಕು ಎಂಬುದಕ್ಕೆ ಕನಿಷ್ಠ ಐದು ಕಾರಣಗಳು ಸಿಕ್ಕಾವು.ಮೊದಲನೆಯದು–ಅಂತರ್‌­ನಂಬಿಕೆಗಳ ತಳಹದಿಯ ಮೇಲೆ ಸಂಬಂಧಗಳು ನಿಂತಿವೆ ಎಂಬುದು ಎಲ್ವಿನ್ ಆಳವಾದ ಚಿಂತನೆ­ಯಾಗಿತ್ತು. ಆದರೆ ಭಾರತದ ಆಧುನಿಕ ಚರಿತ್ರೆ­ಯಲ್ಲಿ ಎದ್ದುಕಾಣುವುದು ಹಿಂದೂ, ಮುಸ್ಲಿ­ಮರ ವೈರ, ವೈಷಮ್ಯ. ಭಾರತದ ಆಚೆಗಿನ ಚರಿತ್ರೆ ಗಮನಿ­ಸಿದರೆ, ಇತ್ತೀಚಿನ ವರ್ಷಗಳಲ್ಲಿ ಕ್ರಿಶ್ಚಿ­ಯನ್, ಮುಸ್ಲಿಮರ ನಡುವಿನ ಹಗೆತನ ಕಣ್ಣಿಗೆ ಕಾಣು­ವಷ್ಟು ದಟ್ಟವಾಗಿದೆ. ಮಹಾತ್ಮ ಗಾಂಧಿ­ಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಎಲ್ವಿನ್, ಬೇರೆಯವರ ನಂಬಿಕೆಗಳನ್ನು ಕೀಳಾಗಿ ಕಾಣ­ದೆಯೇ ಒಬ್ಬ ತನ್ನದೇ ಆದ ನಂಬಿಕೆಗಳನ್ನು ಅಳ­ವಡಿಸಿ­ಕೊಳ್ಳಬಹುದು ಎಂಬುದನ್ನು ತೋರಿಸಿ­ಕೊಟ್ಟವರು. ವಿಧಿವತ್ತಾಗಿ ಕ್ರಿಶ್ಚಿಯನ್ ಚರ್ಚ್‌ನ ಪಾದ್ರಿ­ಯಾಗಿದ್ದ ಅವರು ತಾವಿದ್ದ ಪ್ರದೇಶದ ಬುಡ­ಕಟ್ಟು ಜನರ ಮತಾಂತರ ಮಾಡುವುದನ್ನು ವಿರೋಧಿ­ಸಿದವರು. ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯಗಳಿಗೆ ಪರ್ಯಾಯವಾದ ಅಧ್ಯಾತ್ಮ ಜ್ಞಾನದ ಬಗ್ಗೆ ಕೂಡ ಅವರು ಸೊಗ­ಸಾಗಿ ಬರೆದಿದ್ದಾರೆ. ಕಾಲಕ್ರಮೇಣ ಅವರು ಬೌದ್ಧ­ಧರ್ಮದಲ್ಲಿ ಆಸಕ್ತಿ ಬೆಳೆಸಿಕೊಂಡರು.ಎರಡನೆಯದು–ಎಲ್ವಿನ್ ಒಬ್ಬ ಸಂಶೋಧಕ­ರಷ್ಟೇ ಅಲ್ಲ; ಉತ್ತಮ ಶೈಲಿಯ ಗದ್ಯ ಬರಹ­ಗಾರ. ಭೌತ ವಿಜ್ಞಾನಿಗಳು, ಗಣಿತಜ್ಞರು (ಅಷ್ಟೇ ಏಕೆ, ತತ್ವಜ್ಞಾನಿಗಳು ಹಾಗೂ ಅರ್ಥಶಾಸ್ತ್ರಜ್ಞರು ಕೂಡ) ತಮ್ಮ ಸಂಶೋಧನೆಯ ವಿಚಾರಗಳನ್ನು ಮಂಡಿ­ಸಲು ತಾಂತ್ರಿಕ ಭಾಷೆ ಬಳಸುತ್ತಾರೆ. ಆದರೆ ಇತಿಹಾಸಕಾರರು, ಮಾನವಶಾಸ್ತ್ರ ಅಧ್ಯ­ಯನ ಮಾಡುವವರಿಗೆ ಅಂಥ ಭಾಷೆಯ ಹಂಗು ಇರ­ಬೇಕಾಗಿಲ್ಲ. ಆದರೂ ಕೆಲವು ಸಂಶೋಧಕರು ತಮ್ಮ ವಾದ ಮಂಡಿಸಲು ಕಬ್ಬಿಣದ ಕಡಲೆ­ಯಂಥ ಪದಪುಂಜಗಳನ್ನು ಪ್ರಜ್ಞಾಪೂರ್ವಕ­ವಾಗಿ ಬಳಸುತ್ತಾರೆ. ಸಾಂದ್ರ ಎನ್ನಿಸುವ ಆ ಭಾಷೆ­ಯಲ್ಲಿ ವಿಚಾರಸ್ಪಷ್ಟತೆ ಸಾಧ್ಯವಾಗುವುದಿಲ್ಲ. ನಮ್ಮ ನಡುವೆ ಬದುಕುತ್ತಿರುವ ಸಾಮಾನ್ಯ ಜನರಿ­ಗಾಗಿ ಬರೆಯಬೇಕು ಎಂಬುದನ್ನೇ ಮರೆತು ಇಂಥ ಸಂಶೋ­ಧ­ಕರು ಬರೆಯುತ್ತಾರೆ.ಕೆಟ್ಟ ಬರವಣಿಗೆ ಅಕಡೆಮಿಕ್ ವಲಯದಲ್ಲಿ ಸರ್ವತ್ರ ಎಂಬಂತಾಗಿದೆ. ಇದಕ್ಕೆ ತಪ್ಪು ಮನೋ­ಧರ್ಮ ಕಾರಣವಿರಬಹುದು. ಕೆಲವೊಮ್ಮೆ ಅದ­ಕ್ಷತೆ­ಯನ್ನು ಮರೆಮಾಚಿಕೊಳ್ಳಲು ಹೀಗೆ ಬರೆ­ಯು­­ವುದುಂಟು. ಇಂಥ ಕ್ಲಿಷ್ಟ ಪದಪುಂಜಗಳ ಲೋಕ­ದಲ್ಲಿ ವಿಹರಿಸುವ ಯುವ ಮಾನವಶಾಸ್ತ್ರ ಅಧ್ಯ­ಯನ­ಕಾರರು, ಇತಿಹಾಸಕಾರರು ಹಾಗೂ ಸಾಹಿ­ತ್ಯ ಪ್ರಭೃತಿಗಳು ಎಲ್ವಿನ್ ಬರವಣಿಗೆಯನ್ನು ಓದಲೇ­ಬೇಕು. ತಮ್ಮ ಸಂಶೋಧನೆಯಿಂದ ಹೊಳೆದ ವಿಚಾರಗಳನ್ನು ಅವರು ಸರಳವಾಗಿ, ಅರ್ಥ­ವಾಗುವಂತೆ ಬರೆದಿದ್ದಾರೆ.ಮೂರನೆಯದು–ಎಲ್ವಿನ್ ಪ್ರಜ್ಞಾಪೂರ್ವಕವಾಗಿ ಪರಿಸರ­ವಾದಿ­­­­ಯಾಗಿ­ದ್ದ­ರು.­­ ಆಕ್ಸ್‌ಫರ್ಡ್ ವಿದ್ಯಾರ್ಥಿ­­­­­­ಯಾಗಿದ್ದಾಗ ವಿಲಿಯಂ ವರ್ಡ್ಸ್‌­ವರ್ತ್ ಪ್ರಭಾವಕ್ಕೆ ಒಳಗಾದವರು ಅವರು. ತಮ್ಮ ಆ ಹೀರೊ ತರಹವೇ ಅವರೂ ಪ್ರಕೃತಿ ಸೌಂದ­ರ್ಯದ ಕುರಿತು ಬರೆದರು. ಆಮೇಲೆ ಆದಿ­­­ವಾಸಿ­ಗಳ ನಡುವೆ ಬದುಕತೊಡಗಿದಾಗ ಪರಿ­ಸರದ ಜೊತೆಗೆ ಆ ಜನರಿಗೆ ಇರುವ ಸಂಬಂ­ಧದ ಆಳ­ವನ್ನು ಅರಿತರು. ಆ ಸಂಬಂಧವನ್ನು ಮುರಿದು­ಹಾಕುವ ಆತಂಕವನ್ನು ವಾಣಿಜ್ಯವನ್ನೇ ಮುಖ್ಯ­ವಾಗಿಸಿಕೊಂಡ ಕೆಲವು ಅರಣ್ಯ ಯೋಜನೆ­ಗಳು ಒಡ್ಡಿದ್ದವು ಎಂಬುದೂ ಅವರಿಗೆ ಅರ್ಥ­ವಾಗಿತ್ತು. ಈಶಾನ್ಯ ಪ್ರದೇಶದ ಕಾಡುಗಳಲ್ಲಿ ತಾವು ವಾಸವಿದ್ದ ಅವಧಿಯಲ್ಲಿ ಅಲ್ಲಿನ ಆದಿ­ವಾಸಿಗಳ ಸ್ವಾವಲಂಬಿ ಬದುಕಿನ ದಾರಿಗಳನ್ನು ಹತ್ತಿರ­ದಿಂದ ಕಂಡವರು ಅವರು. ದೇಶದ ವಿವಿಧೆಡೆ ಮೂಲ ಕೇಂದ್ರಿತ, ಶಕ್ತಿ ಕೇಂದ್ರಿತ ಅಭಿವೃದ್ಧಿಯ ಮಾದರಿಗಳು ಮಹತ್ವ ಪಡೆದುಕೊಂಡಿರುವ ಈ ದಿನಮಾನದಲ್ಲಿ ಎಲ್ವಿನ್ ಅಧ್ಯಯನದ ಮಾಹಿತಿ ನಿಜಕ್ಕೂ ಔಚಿತ್ಯಪೂರ್ಣ.ನಾಲ್ಕನೆಯದು– ಆದಿವಾಸಿಗಳ ಮೂಲ ಸಮಸ್ಯೆ­ಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಭಾರತೀಯ ರಾಷ್ಟ್ರೀ­ಯತೆಯ ಸೋಲನ್ನೂ ಎಲ್ವಿನ್ ಸಂಶೋ­ಧನೆ ಅನಾವರಣಗೊಳಿಸಿದೆ. ಗಾಂಧಿ ಹಾಗೂ ಇತರ ರಾಷ್ಟ್ರೀಯತಾವಾದಿಗಳು ಅಸ್ಪೃಶ್ಯತೆ ಹೋಗ­ಲಾಡಿಸಬೇಕು, ಮಹಿಳೆಯರ ಸ್ಥಾನ­ಮಾನ ಸುಧಾರಿಸಬೇಕು, ಹಿಂದೂ, ಮುಸ್ಲಿಮರ ನಡುವೆ ಸೌಹಾರ್ದ ಸಂಬಂಧ ಬೆಸೆಯಬೇಕು ಎಂದು ಪ್ರತಿಪಾದಿಸಿದರು. ದಲಿತರು ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಲ್ಲಿ ನಾಯಕ­ರಿದ್ದರೂ, ಅವರು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಚಳವಳಿಯಲ್ಲಿ ಭಾಗಿಯಾಗಲಿಲ್ಲ (ಉದಾಹರಣೆಗೆ ಬಿ.ಆರ್. ಅಂಬೇಡ್ಕರ್). ಆದಿ­ವಾಸಿಗಳ ಬದುಕಿನ ವಿಶೇಷ ಸ್ವರೂಪ, ಬುಡ­ಕಟ್ಟು ಜನರ ವಿಶೇಷ ಅಗತ್ಯಗಳನ್ನು ವಸಾಹತು­ಶಾಹಿ ನಂತರದ ಕಾಲದಲ್ಲಿ ರಾಜಕೀಯ ರೂಪಿಸಿ­ದವರು ನಿರ್ಲಕ್ಷಿಸುತ್ತಾ ಬಂದರು. ಸ್ವತಂತ್ರ ಭಾರತದ ಜನಜೀವನದ ಮೇಲೆ ಈ ವೈಫಲ್ಯ ದೊಡ್ಡ ಪರಿಣಾಮವನ್ನೇ ಬೀರಿತು. ದಲಿತರು ಹಾಗೂ ಮುಸ್ಲಿಮರನ್ನು ರಾಜಕಾರಣಿಗಳು ‘ವೋಟಿಂಗ್‌ ಬ್ಲಾಕ್ಸ್‌’ ಮಾಡಿಕೊಂಡರು. ಪ್ರಮುಖ ರಾಜಕೀಯ ಪಕ್ಷಗಳು ಅವರ ಸಮಸ್ಯೆ­ಗಳನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡ­ತೊಡಗಿದವು. ಆದಿವಾಸಿಗಳು ಹೆಚ್ಚೂಕಡಿಮೆ ಧ್ವನಿ ಇಲ್ಲದವರಾದರು. ಪ್ರಜಾ­ಪ್ರಭುತ್ವದಲ್ಲಿ ಅವರ ಕ್ರಿಯಾಶೀಲ ಪಾಲ್ಗೊ­ಳ್ಳು­ವಿಕೆಯೇ ಇಲ್ಲವಾಯಿತು.ಗಣಿಗಾರಿಕೆ, ನೀರಾವರಿ ಯೋಜನೆ­ಗಳಿಂದ ಅವರು ನಿರಾಶ್ರಿತರಾಗಿ, ತಮ್ಮದೇ ಎಂದುಕೊಂಡಿದ್ದ ಭೂಮಿ ಕಳೆದು­ಕೊಂಡು ಕಂಗಾಲಾದ ಉದಾಹರಣೆಗಳಂತೂ ಸಾಕಷ್ಟಿವೆ. ರಾಜಕೀಯವಾಗಿ ಅವರನ್ನು ಒಂದು ಕಡೆ ಹೊರಗಿಡಲಾಗಿದೆ. ಇನ್ನೊಂದು ಕಡೆ ಮಾವೊ ಕ್ರಾಂತಿಕಾರಿಗಳು ಅವರ ಆರ್ಥಿಕ ಸಂಕ­ಷ್ಟದ ಲಾಭ ಪಡೆಯುತ್ತಿದ್ದಾರೆ. ಎಲ್ವಿನ್‌ ಬರಹ­ಗಳು ಇಂಥ ಸಂದರ್ಭದಲ್ಲಿ ಹೆಚ್ಚು ಔಚಿತ್ಯ­ಪೂರ್ಣ­ವೆನಿಸುತ್ತವೆ. ಭಾರತೀಯ ಸಂವಿಧಾನ­ದಲ್ಲಿ ಆದಿವಾಸಿಗಳ ಹಿತಾಸಕ್ತಿಯನ್ನು ಹೇಗೆ ಅರ್ಥ­ಪೂರ್ಣ­ವಾಗಿ ಸೇರಿಸಬಹುದು ಎಂಬುದು ಎಲ್ವಿನ್‌ ಬರಹಗಳಿಂದ ಅರಿವಿಗೆ ಬಂದೀತು.ಕೊನೆಯದಾಗಿ– ಎಲ್ವಿನ್‌ ಬದುಕು ಘನತೆ­ವೆತ್ತಂಥದ್ದು. ಅವರು ಸುತ್ತಾಡಿದ, ನೆಲೆನಿಂತ ಸ್ಥಳಗಳ ವೈವಿಧ್ಯ ಅವರಲ್ಲಿ ಮೂಡಿಸಿದ ಅನು­ಭವ ದಟ್ಟವಾದದ್ದು. ಕ್ರಿಶ್ಚಿಯಾನಿಟಿ ಹಾಗೂ ಹಿಂದು­ತ್ವದ ನಡುವೆ, ನಗರ ಹಾಗೂ ಕಾಡುಗಳ ನಡುವೆ, ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ, ಬಡ­ವರು ಹಾಗೂ ಬಲ್ಲಿದರ ನಡುವೆ, ದೇಸೀ­ಯತೆ ಹಾಗೂ ಜಾಗತೀಕರಣದ ನಡುವೆ ಸರಣಿ ಸೇತು­ವೆ­ಗಳನ್ನು ಕಟ್ಟಿದ ವ್ಯಕ್ತಿ ಅವರು. ಅವರ ಅದ್ಭುತ­­ವಾದ, ಘಟನಾವಳಿಗಳಿಂದ ತುಂಬಿದ ಬದುಕು ಆಧುನಿಕ ಭಾರತದ; ಅಷ್ಟೇ ಏಕೆ, ಜಗತ್ತಿನ ಇತಿಹಾಸದ ಕಿಟಕಿಯಂತೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.