ಭಾನುವಾರ, ಮಾರ್ಚ್ 29, 2020
19 °C

ಆರ್ಥಿಕತೆ: ಮೋದಿ ದ್ವಂದ್ವ ಧೋರಣೆ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಆರ್ಥಿಕತೆ: ಮೋದಿ ದ್ವಂದ್ವ ಧೋರಣೆ

ಜೋಸೆಫ್‌ ಹೆಲ್ಲರ್‌ ಅವರ ವಿಡಂಬನಾತ್ಮಕ ಕಾದಂಬರಿ ‘ಕ್ಯಾಚ್‌ 22’ (Catch-22) ನಲ್ಲಿ ಬರುವ ಲೆಫ್ಟಿನಂಟ್‌ ಮಿಲೊ ಮಿಂಡರ್‌ಬಿಂಡರ್‌, ತನ್ನೊಂದಿಗೆ ತಾನೇ ವ್ಯಾಪಾರ ನಡೆಸುವ ಮೂಲಕ ಖ್ಯಾತಿಗೆ ಒಳಗಾಗಿರುತ್ತಾನೆ. ಪ್ರತಿಯೊಬ್ಬರೂ ಒಳಗೊಂಡಿರುವ ವರ್ತುಲ ವ್ಯವಸ್ಥೆಯ ವಹಿವಾಟಿನಲ್ಲಿ ಸರ್ಕಾರದ ಬೊಕ್ಕಸದಿಂದ ಹರಿದು ಬರುವ ಲಾಭವು ಕೊನೆಯಲ್ಲಿ ಒಬ್ಬನಲ್ಲಿಯೇ ಸಂಗ್ರಹಗೊಳ್ಳುವ ವಿಶಿಷ್ಟ ವಹಿವಾಟಿನ ಸ್ವರೂಪ ಅದಾಗಿರುತ್ತದೆ. ಸಿನಿಕತನದ ಬೂರ್ಜ್ವಾ ವ್ಯವಸ್ಥೆಯ ಪ್ರಚಾರ ರಾಯಭಾರಿಯಾಗಿ ಆತ ಬಹುಕಾಲ ನೆನಪಿನಲ್ಲಿ ಉಳಿಯುತ್ತಾನೆ. ಆತನದೇ ಆದ ಕಂಪೆನಿಗೆ ಅಥವಾ ಸಿಂಡಿಕೇಟ್‌ಗೆ ಲಾಭ

ವೊಂದೇ ಮುಖ್ಯವಾಗಿರುತ್ತದೆ. ಪ್ರತಿ ವಹಿವಾಟಿನಲ್ಲಿಯೂ ಆತ ಲಾಭ ಬಾಚಿಕೊಳ್ಳುತ್ತಲೇ ಇರುತ್ತಾನೆ. ಸರಕುಗಳಪೂರೈಕೆಯನ್ನೆಲ್ಲ ಆತನೇ ಖರೀದಿಸುತ್ತಿರುತ್ತಾನೆ. ಗ್ರಾಮಗಳಿಂದ ಬರುವ ಮೊಟ್ಟೆ, ತರಕಾರಿ ಖರೀದಿಸುವ ಏಕೈಕ ವರ್ತಕ ಈತನಾಗಿರುತ್ತಾನೆ. ಏಕಸ್ವಾಮ್ಯದ ಬೆಲೆಗೆ ಆತ ಅವುಗಳನ್ನು ತನ್ನದೇ ಆದ ಘಟಕಗಳಿಗೆ ಮಾರಾಟ ಮಾಡುತ್ತಿರುತ್ತಾನೆ.

ಒಂದು ಬಾರಿ ಮಾತ್ರ ಈ ವ್ಯವಸ್ಥೆ ಕೈಕೊಡುತ್ತದೆ. ವಿಶ್ವದಲ್ಲಿ ಬೆಳೆದ ಹತ್ತಿಯನ್ನೆಲ್ಲ ಈತನೇ ಖರೀದಿಸುತ್ತಾನೆ. ಈತನನ್ನು ಹೊರತು ಪಡಿಸಿದರೆ ಬೇರೆ ಖರೀದಿದಾರರೇ ಮಾರುಕಟ್ಟೆಯಲ್ಲಿ ಇರುವುದಿಲ್ಲ. ಈತನಿಂದ ಹತ್ತಿ ಖರೀದಿಸಿದವರೂ ಅದನ್ನು ಈತನಿಗೇ ಮರಳಿ ಮಾರಾಟ ಮಾಡಿರುತ್ತಾರೆ. ಇದರಿಂದ ಅವನು ಅದೆಷ್ಟರ ಮಟ್ಟಿಗೆ ಹತಾಶೆಗೆ ಒಳಗಾಗುತ್ತಾನೆ ಎಂದರೆ, ಹತ್ತಿ ಉಂಡೆಗಳನ್ನು ಚಾಕಲೇಟ್‌ನಲ್ಲಿ ಅದ್ದಿ ತನ್ನ ಸೈನಿಕರ ಊಟದ ಮನೆಗಳಿಗೆ ಮಾರಾಟ ಮಾಡುತ್ತಾನೆ. ಸ್ವತಃ ತಾನೇ ಏಕಸ್ವಾಮ್ಯದ ವರ್ತಕನಾಗಿ ಹತ್ತಿ ಮಾರುಕಟ್ಟೆಯನ್ನೇ ಆತ ನಾಶಪಡಿಸಿರುತ್ತಾನೆ. ಆದರೆ, ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಆತ ಈ ಸರಕನ್ನು ಸರ್ಕಾರಕ್ಕೆ ಏಕೆ ಮಾರಾಟ ಮಾಡುವುದಿಲ್ಲ. ಪಕ್ಕಾ ಬಂಡವಾಳಶಾಹಿ ಆಗಿರುವ ಆತ, ವ್ಯಾಪಾರ ವಹಿವಾಟಿನಲ್ಲಿ ಸರ್ಕಾರವು ಯಾವುದೇ ವಹಿವಾಟು ನಡೆಸಲು ಆಸ್ಪದವೇ ಇಲ್ಲ ಎಂದೇ ದೃಢವಾಗಿ ನಂಬಿರುತ್ತಾನೆ.

ಅಮೆರಿಕದ ಅಧ್ಯಕ್ಷರಾಗಿದ್ದ ಕಾಲ್ವಿನ್‌ ಕೂಲಿಡ್ಜ್‌ ಅವರ ‘ಸರ್ಕಾರದ ತಟಸ್ಥ ನೀತಿ’ ಧೋರಣೆ ಕುರಿತ ಮಾತು ಕೂಡ ಇಲ್ಲಿ ಪ್ರಯೋಜನಕ್ಕೆ ಬರಲಿದೆ. ‘ವ್ಯಾಪಾರ ವಹಿವಾಟಿನಲ್ಲಿ ತೊಡಗುವುದು ಸರ್ಕಾರದ ಜವಾಬ್ದಾರಿ ಆಗಿದೆ’ ಎಂದು ಕಾಲ್ವಿನ್‌ ಪ್ರತಿಪಾದಿಸುತ್ತಾರೆ. ಅಧ್ಯಕ್ಷನ ಮಾತು ಖಂಡಿತವಾಗಿಯೂ ಸರಿ ಇದೆ ಎಂದು ಮಿಲೊ ಅಭಿಪ್ರಾಯಪಟ್ಟಿರುತ್ತಾನೆ. ಹಾಗಿದ್ದರೆ ಆತ, ಹತ್ತಿಯನ್ನು ಅಮೆರಿಕದ ಸರ್ಕಾರಕ್ಕೆ ಮಾರುವುದಿಲ್ಲ ಏಕೆ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ.

ನಾವೀಗ ಮಿಲೊ ಮಿಂಡರ್‌ಬಿಂಡರ್‌ನ ಜಾಗದಲ್ಲಿ ಭಾರತದ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಳ್ಳೋಣ. 1969ರ ನಂತರ, ಹತ್ತಿ ವಹಿವಾಟನ್ನು ಭಾರತದ ಬ್ಯಾಂಕ್‌ಗಳ ವಹಿವಾಟಿನ ಜತೆಗೆ ಹೋಲಿಸಿ ನೋಡೋಣ. ಅರ್ಥಶಾಸ್ತ್ರವನ್ನು ಇಲ್ಲಿ ಬದಿಗೆ ಇರಿಸೋಣ.

ಇಂದಿರಾ ಗಾಂಧಿ ಅವರು ಮೊದಲಿಗೆ ದೇಶದ ಪ್ರಮುಖ‌ಬ್ಯಾಂಕ್‌ಗಳನ್ನೆಲ್ಲ ರಾಷ್ಟ್ರೀಕರಣಗೊಳಿಸಿದರು. ಈ ಮೂಲಕ ಬ್ಯಾಂಕಿಂಗ್‌ ಮತ್ತು ಹಣಕಾಸು ಕ್ಷೇತ್ರದಲ್ಲಿ ಸರ್ಕಾರದ ಏಕಸ್ವಾಮ್ಯ ಸೃಷ್ಟಿಸಿದರು. ವಿಮೆ ವಹಿವಾಟಿನ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳೂ ಸರ್ಕಾರದ ಸುಪರ್ದಿಗೆ ಬಂದವು. ಆನಂತರ ಸರ್ಕಾರವು ತನ್ನಿಂದಲೇ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿತು. ತನ್ನದೇ ಆದ ಬಾಂಡ್‌ಗಳಲ್ಲಿ ಬ್ಯಾಂಕ್‌ಗಳು ಹಣ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿತು. ಸರ್ಕಾರಿ ಯೋಜನೆಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ಈ ಬ್ಯಾಂಕ್‌ಗಳಿಂದ ಸಾಲ ಕೊಡಿಸಲು ಮುಂದಾಯಿತು. ಸಾಲ ಮೇಳಗಳನ್ನೂ ಆಯೋಜಿಸಿ ಉದಾರವಾಗಿ ಸಾಲ ವಿತರಿಸಿತು. ಕೆಲ ಸಮಯದ ನಂತರ ಬ್ಯಾಂಕ್‌ಗಳಿಂದ ನೀಡಿದ್ದ ಸಾಲಗಳನ್ನೇ ಮನ್ನಾ ಕೂಡ ಮಾಡಿತು. ಹೀಗೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸರ್ಕಾರ ಹೊಂದಿದ ಏಕಸ್ವಾಮ್ಯವು ವೋಟ್‌ಗಳನ್ನು ಖರೀದಿಸುವ ಸುಲಭ ವಹಿವಾಟಿಗೂ ಆಸ್ಪದ ಮಾಡಿಕೊಟ್ಟಿತ್ತು. ಈ ಪ್ರಕ್ರಿಯೆಯಲ್ಲಿ ನಿಯಮಿತ ಅಂತರದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೆಲ್ಲ ದಿವಾಳಿ ಅಂಚಿನತ್ತ ಸಾಗತೊಡಗಿದ್ದವು.

ಬ್ಯಾಂಕ್‌ಗಳೆಲ್ಲ ತನ್ನ ಸ್ವಾಮ್ಯದಲ್ಲಿ ಇದ್ದ ಕಾರಣಕ್ಕೆ ಅವುಗಳು ವಿಫಲಗೊಳ್ಳಲು ಸರ್ಕಾರ ಅವಕಾಶ ಮಾಡಿಕೊಡಲಿಲ್ಲ. ಇನ್ನೊಂದೆಡೆ ಬ್ಯಾಂಕ್‌ಗಳ ವೈಫಲ್ಯದ ಹೊಣೆ ಹೊತ್ತುಕೊಳ್ಳಲು ಸರ್ಕಾರವೂ ಸಿದ್ಧ ಇರಲಿಲ್ಲ. ತೆರಿಗೆ ವಿಧಿಸುವ ಮತ್ತು ನೋಟುಗಳನ್ನು ಮುದ್ರಿಸುವ ಅಧಿಕಾರವೂ ಅದರ ಬಳಿ ಇದೆ. ಈ ಕಾರಣಕ್ಕೆ ಸರ್ಕಾರವು ತನ್ನ ಒಡೆತನದಲ್ಲಿ ಇರುವ ಬ್ಯಾಂಕ್‌ಗಳಿಗೆ ಬಂಡವಾಳ ಮರುಪೂರಣ ಮಾಡುವ ಮೂಲಕ ಮತ್ತೆ ತಾನೇ ಅವುಗಳನ್ನು ಖರೀದಿಸಲು ಹೊರಟಿದೆ. ಬಜೆಟ್‌ ನೆರವಿಗೆ ಹೊರತಾದ ಮಾರ್ಗದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಬಂಡವಾಳ ನೆರವು ಒದಗಿಸಲು ಮುಂದಾದರೆ, ಬ್ಯಾಂಕ್‌ಗಳು ಮುಕ್ತಮಾರುಕಟ್ಟೆಯಲ್ಲಿ ಬಾಂಡ್‌ಗಳನ್ನು ಬಿಡುಗಡೆ ಮಾಡಿ ಹಣ ಸಂಗ್ರಹಿಸಲಿವೆ. ಇದನ್ನೆಲ್ಲ ನೋಡಿದರೆ ನಮ್ಮ ಸರ್ಕಾರವು ಮಿಲೊ ಮಿಂಡರ್‌ಬಿಂಡರ್‌ಗಿಂತ ಹೆಚ್ಚು ಜಾಣ ಬಂಡವಾಳಶಾಹಿಯಂತೆ ವರ್ತಿಸುತ್ತಿರುವಂತೆ ಭಾಸವಾಗುವುದಿಲ್ಲವೇ? ವಾಸ್ತವದಲ್ಲಿ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವಂತೆ ಕಂಡು ಬರುತ್ತದೆ. ಮಿಲೊನ ಆರ್ಥಿಕ ಚಿಂತನೆ ‘ಕ್ಯಾಚ್‌–22’ ಎಂದಾಗಿದ್ದರೆ, ಭಾರತ ಸರ್ಕಾರದ ಆಲೋಚನಾ ಕ್ರಮವು ‘ಕ್ಯಾಚ್‌–23’ ಆಗಿದೆ ಎಂದೇ ಹೇಳಬಹುದು.

ಬ್ಯಾಂಕ್‌ಗಳಿಗೆ ಬಂಡವಾಳ ನೆರವು ನೀಡುವ ಸರ್ಕಾರದ ಚಿಂತನೆಯು ಉತ್ತಮ ಯೋಜನೆಯಾಗಿದೆ. ಸದ್ಯದ ಸಂದರ್ಭದಲ್ಲಿ ಅದೊಂದೇ ಕಾರ್ಯಸಾಧ್ಯವಾದ ಪರಿಹಾರವಾಗಿದೆ. ಆಸ್ತಮಾ ಪೀಡಿತರಿಗೆ ಕಾಯಿಲೆ ಉಲ್ಬಣಿಸಿ ಉಸಿರು ಕಟ್ಟಿದಂತೆ ಆದಾಗ ಸಂಬಂಧಿಕರು ಮತ್ತು ವೈದ್ಯರು ಆ ಕ್ಷಣದಲ್ಲಿ ಅಡ್ಡ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ಟಿರಾಯ್ಡ್‌ಗಳನ್ನು ನೀಡಿ ಉಪಶಮನಗೊಳಿಸಲು ಪ್ರಯತ್ನಿಸುತ್ತಾರೆ. ಸರ್ಕಾರವು ಕೂಡ ಈಗ ಬ್ಯಾಂಕ್‌ಗಳ ವಿಷಯದಲ್ಲಿ ಅದನ್ನೇ ಮಾಡಲು ಹೊರಟಿದೆ.

ಬಹುಪಾಲು (ಶೇ 70) ಸರ್ಕಾರದ ನಿಯಂತ್ರಣದಲ್ಲಿ ಇರುವ ದೇಶಿ ಬ್ಯಾಂಕಿಂಗ್‌ ಕ್ಷೇತ್ರವು ಸದ್ಯಕ್ಕೆ ವಸೂಲಾಗದ ಸಾಲ ಪ್ರಮಾಣದ ಭಾರಕ್ಕೆ ನಲುಗಿ ದಿವಾಳಿ ಅಂಚಿಗೆ ಬಂದು ನಿಂತಿದೆ. ಬ್ಯಾಂಕ್‌ಗಳ ಒಟ್ಟಾರೆ ಬಂಡವಾಳಕ್ಕಿಂತ ಅವುಗಳ ಸಾಲದ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಇಡೀ ಬ್ಯಾಂಕಿಂಗ್‌ ವ್ಯವಸ್ಥೆಯೇ ಕುಸಿಯುವ ಭೀತಿ ನಿರ್ಮಾಣವಾಗಿದೆ. ಇದು ಬರೀ ಬ್ಯಾಂಕ್‌ಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದೊಂದು ಸರಣಿ ಪರಿಣಾಮಗಳಿಗೂ

ಕಾರಣವಾಗಿರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಏನು ಮಾಡಲು ಸಾಧ್ಯ? ಅಳಿದುಳಿದ ಭಗ್ನಾವಶೇಷಗಳನ್ನು ಆಯ್ದುಕೊಳ್ಳುತ್ತ ಕುಳಿತುಕೊಳ್ಳಲು ಸಾಧ್ಯವೇ? ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಏನಾದರೂ ರಚನಾತ್ಮಕವಾದುದನ್ನು ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪರಿಹಾರ ಕೊಡುಗೆಯು ದಿಟ್ಟ ಮತ್ತು ನಿರ್ಣಾಯಕ ನಿರ್ಧಾರವಾಗಿರುತ್ತದೆ. ಬಾಂಡ್‌ ನೀಡಿಕೆ ಮೂಲಕ ಬಂಡವಾಳ ಸಂಗ್ರಹಿಸುವುದು ಜಾಣ ನಿರ್ಧಾರವಾಗಿರಲಿದೆ. ನ್ಯಾಯಯುತವಾಗಿ ಹೇಳುವುದಾದರೆ ಇದೊಂದು ಸೃಜನಾತ್ಮಕ ನಿರ್ಣಯವೂ ಆಗಿದೆ. ಸಮೃದ್ಧ ಪ್ರಮಾಣದಲ್ಲಿ ನಗದು ಸಂಪತ್ತು ಹೊಂದಿರುವ, ತೈಲ ಮಾರಾಟದಲ್ಲಿ ಏಕಸ್ವಾಮ್ಯ ಹೊಂದಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಈ ಬಾಂಡ್‌ಗಳನ್ನು ಖರೀದಿಸುವಂತೆ ಉತ್ತೇಜಿಸಬೇಕು ಎನ್ನುವ ಸಲಹೆಯನ್ನು

ಕಾರ್ಯಗತಗೊಳಿಸುವುದು ಮಾತ್ರ ಜಾಣ ನಿರ್ಧಾರ ಆಗಿರಲಾರದು.

ಇದಕ್ಕಿಂತ ಭಿನ್ನ, ದಿಟ್ಟತನದ ಮತ್ತು ಹೆಚ್ಚು ನಿರ್ಣಾಯಕವಾದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯ ಇದೆ. ಮಹಾನ್‌ ನಾಯಕರು ಬಿಕ್ಕಟ್ಟುಗಳನ್ನು ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ. ತಮ್ಮ ನಾಯಕತ್ವಕ್ಕೆ ಎದುರಾದ ಇಂಥ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ನರೇಂದ್ರ ಮೋದಿ ಅವರು ಇಲ್ಲಿ ಕೈಚೆಲ್ಲಿದಂತೆ ಕಂಡುಬರುತ್ತದೆ.

ಇಂದಿರಾ ಗಾಂಧಿ ಅವರು ಕೈಗೊಂಡಿದ್ದ ಬ್ಯಾಂಕ್‌ಗಳ ರಾಷ್ಟ್ರೀಕರಣ ನೀತಿಯನ್ನು ಸಂಪೂರ್ಣವಾಗಿ ತಿರುವು ಮುರುವು ಮಾಡಿ ಅವುಗಳನ್ನು ಖಾಸಗೀಕರಣ ಮಾಡಬೇಕು ಎಂದು ನಾವು ಹಕ್ಕೊತ್ತಾಯ ಮಾಡುವುದು ಸಮಂಜಸವಾಗಿ ಕಾಣುವುದಿಲ್ಲ. ಜನಸಮುದಾಯಕ್ಕೆ ಹಿತಕಾರಿಯಲ್ಲದ ಆರ್ಥಿಕ ವಿಚಾರಗಳಿಗೆ ಹೆಚ್ಚಿನ ಆಯುಷ್ಯವೂ ಇರುವುದಿಲ್ಲ.

ಆದರೂ, ಹೆಚ್ಚಿನ ಆರ್ಥಿಕ ನಷ್ಟಕ್ಕೆ ಗುರಿಯಾಗಿರುವ ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಆರಂಭದಲ್ಲಿ ಖಾಸಗೀಕರಣ ಮಾಡಲು ಮೋದಿ ಅವರು ಮನಸ್ಸು ಮಾಡಬೇಕು. ಹೆಚ್ಚು ನಷ್ಟಪೀಡಿತವಾಗಿರುವ ಒಂದೊಂದೇ ಬ್ಯಾಂಕ್‌ ಅನ್ನು ಪ್ರತಿ ವರ್ಷ ಖಾಸಗಿಯವರಿಗೆ ಮಾರಾಟ ಮಾಡುವುದಾಗಿಯೂ ಘೋಷಿಸಬೇಕು. ಒಂದು ವೇಳೆ ಇಂತಹ ನಿರ್ಧಾರವನ್ನು ಕಾರ್ಯಗತಗೊಳಿಸಿದರೆ, ಅದರಿಂದ ಮಾರುಕಟ್ಟೆಯಲ್ಲಿ ಮಿಂಚು ಹರಿಯಲಿದೆ. ಇತರ ಬ್ಯಾಂಕ್‌ಗಳ ಪಾಲಿಗೆ ಇದು ಆಘಾತಕಾರಿಯಾಗಿರುತ್ತದೆ. ಅವುಗಳು ತಮ್ಮ ಕಾರ್ಯನಿರ್ವಹಣೆಯನ್ನು ಗಮನಾರ್ಹವಾಗಿ ಬದಲಾಯಿಸಿಕೊಳ್ಳಲು ಮುಂದಾಗಲಿವೆ. ತೆರಿಗೆದಾರರ ಹಣವನ್ನು ವೋಟ್ ಖರೀದಿಸಲು ಬಳಸುವ ರಾಜಕಾರಣಿಗಳ ಧೋರಣೆಗೂ ಕಡಿವಾಣ ವಿಧಿಸಲಿದೆ. ಭಾರಿ ಆರ್ಥಿಕ ಸುಧಾರಣಾವಾದಿಗಳ ಸಾಲಿಗೆ ಮೋದಿ ಅವರೂ ಸೇರ್ಪಡೆಯಾಗಲಿದ್ದಾರೆ.

ಮೋದಿ ಅವರು ಬಯಸುತ್ತಿರುವುದಾದರೂ ಏನನ್ನು. ತಾವೊಬ್ಬ ಆರ್ಥಿಕ ಸುಧಾರಣಾವಾದಿ ಎಂದೇ ಜನರು ತಮ್ಮನ್ನು ನೆನಪಿಸಿಕೊಳ್ಳಬೇಕು ಎನ್ನುವುದು ಅವರ ಮನೋಬಯಕೆ ಆಗಿರುವುದೇ? ಕೇಂದ್ರೋದ್ಯಮಗಳಿಗೆ ಬದ್ಧವಾಗಿರುವುದು ಅಥವಾ ಸರ್ಕಾರವೊಂದು ವಹಿವಾಟಿನಲ್ಲಿ ಪಾಲುದಾರನಾಗಿರು

ವುದು, ಸುಧಾರಣಾವಾದಿಯನ್ನು ಪರೀಕ್ಷಿಸುವ ಏಕೈಕ ಮಾನದಂಡವೂ ಆಗಿರಲಾರದು. ಆದರೆ, ಅದೊಂದು ಮಹತ್ವದ ಅಳತೆಗೋಲು ಆಗಿರುವುದಂತೂ ನಿಜ. ದೇಶದ ಯಾವೊಬ್ಬ ಮುಖಂಡನೂ ಕೇಂದ್ರೋದ್ಯಮಗಳನ್ನು ಅದರಲ್ಲೂ ವಿಶೇಷವಾಗಿ ಲಾಭದಲ್ಲಿ ಇರುವ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಧೈರ್ಯ ಪ್ರದರ್ಶಿಸಿಲ್ಲ. ಮನಮೋಹನ್‌ ಸಿಂಗ್‌, ಪಿ. ವಿ. ನರಸಿಂಹರಾವ್‌ ಮತ್ತು ಪಿ. ಚಿದಂಬರಂ ಅವರು ಇಂತಹ ನಿರ್ಧಾರ ಕೈಗೊಳ್ಳಲು ಯಾವತ್ತೂ ಮನಸ್ಸು ಮಾಡಿರಲಿಲ್ಲ.

ಸಂಸತ್ತಿನ ಅನುಮೋದನೆ ಇಲ್ಲದೆ ಕೇಂದ್ರೋದ್ಯಮಗಳ ಷೇರು ವಿಕ್ರಯ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ನಿರ್ಬಂಧಿಸಿದೆ. ಕೋರ್ಟ್‌ ಮಧ್ಯಪ್ರವೇಶದಿಂದಲೇ ತೈಲ ಮಾರಾಟದ ದೈತ್ಯ ಸಂಸ್ಥೆಗಳಾದ ಎಚ್‌ಪಿಸಿಎಲ್‌ ಮತ್ತು ಬಿಪಿಸಿಎಲ್‌ಗಳನ್ನು ಖಾಸಗಿಯವರಿಗೆ ಮಾರುವ ಪ್ರಯತ್ನವನ್ನು ಕೈಬಿಡಲಾಗಿತ್ತು. ಸರ್ಕಾರದ ಒಡೆತನದಲ್ಲಿ ಇರುವ ‘ಎಚ್‌ಪಿಸಿಎಲ್‌’ ಅನ್ನು ಸರ್ಕಾರದ ಇನ್ನೊಂದು ಸಂಸ್ಥೆಯಾಗಿರುವ ‘ಒಎನ್‌ಜಿಸಿ’ಗೆ ಮಾರಾಟ ಮಾಡುವುದು ಹಿಂದೊಮ್ಮೆ ಸರ್ಕಾರದ ಆಲೋಚನೆಯಾಗಿತ್ತು. ಇಲ್ಲಿ ಮತ್ತೆ ಮಿಲೊ ನೆನಪಿಗೆ ಬರುತ್ತಾನೆ. ಸರ್ಕಾರಿ ಸಂಸ್ಥೆಯೊಂದನ್ನು ಸರ್ಕಾರದ ಇನ್ನೊಂದು ಸಂಸ್ಥೆಗೆ ಸರ್ಕಾರಕ್ಕೆ ಸೇರಿದ ಹಣದಿಂದಲೇ ಮಾರಾಟ ಮಾಡುವುದು ‘ಕ್ಯಾಚ್‌–23’ ಚಿಂತನೆಗೆ ನಿದರ್ಶನವಾಗಿದೆ.

1991ರ ನಂತರ ಆರ್ಥಿಕ ಸುಧಾರಣಾ ಕ್ರಮಗಳನ್ನು ಹೆಚ್ಚಿನ ಸದ್ದುಗದ್ದಲ ಇಲ್ಲದೇ ಜಾರಿಗೆ ತರಲಾಗಿತ್ತು. ಆದರೆ, ಇಂದು ಪ್ರತಿಯೊಂದು ನಿರ್ಧಾರವೂ ಭಾರಿ ಸದ್ದು ಮಾಡುತ್ತಿದೆ. ಜತೆಗೆ, ಅದರ ರಾಜಕೀಯ ಪರಿಣಾಮಗಳೂ ಇರಲಿವೆ. ಜನಾಭಿಪ್ರಾಯವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಮೋದಿ ಅವರ ಚಾಕಚಕ್ಯತೆಗೆ ಯಾರೊಬ್ಬರೂ ಸರಿಸಾಟಿಯಾಗುವುದಿಲ್ಲ. ಹಾಗಿದ್ದರೆ ಮೋದಿ ಅವರು ಬ್ಯಾಂಕ್‌ಗಳ ಸುಧಾರಣಾ ಕ್ರಮಗಳನ್ನು ದಿಟ್ಟತನದಿಂದ ಏಕೆ ಜಾರಿಗೆ ತರುತ್ತಿಲ್ಲ. ಹಾಗೆ ಮಾಡಲು ಅವರು ಈಗಲೂ ಬಯಸುತ್ತಿರುವರೇ. ಅಂತಹ ಮನೋಭಾವ ಅವರಲ್ಲಿ ಇದ್ದಿರದಿದ್ದರೆ ಅವರು ನಿಜವಾಗಿಯೂ ಬಯಸುತ್ತಿರುವುದಾದರೂ ಏನನ್ನು ಎನ್ನುವ ಪ್ರಶ್ನೆಗಳೂ ಇಲ್ಲಿ ಉದ್ಭವಿಸುತ್ತವೆ.

ಇದಕ್ಕೆಲ್ಲ ಅವರು ಅನುಸರಿಸುತ್ತಿರುವ ರಾಜಕೀಯ ನೀತಿಯಲ್ಲಿಯೇ ಉತ್ತರ ಇದೆ. ವಾಜಪೇಯಿ ಅವರಿಗೆ ಹೋಲಿಸಿದರೆ ಮೋದಿ ಅವರು ಸಂಘ ಪರಿವಾರದ ಚಿಂತನೆಗೆ ಹೆಚ್ಚು ಬದ್ಧರಾದ ಸ್ವಯಂಸೇವಕರಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್‌) ಸಾಮಾಜಿಕ – ಆರ್ಥಿಕ ಸಿದ್ಧಾಂತಗಳ ಬಗ್ಗೆ ಹೆಚ್ಚು ನಂಬಿಕೆ ಹೊಂದಿದವರಾಗಿದ್ದಾರೆ.

ಆರೆಸ್ಸೆಸ್‌ನ ಹಾಲಿ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಂತೆ ಸ್ವಯಂಸೇವಕನಾಗುವ ಬಗ್ಗೆ ಅವರಲ್ಲಿ ಅಪಾರ ಭಕ್ತಿ ಮತ್ತು ಶ್ರದ್ಧಾ ಭಾವನೆಗಳಿವೆ. ಈ ತತ್ವಗಳು ಅವರಲ್ಲಿ ಆಳವಾಗಿ ಬೇರುಬಿಟ್ಟಿವೆ. ಇನ್ನೊಂದೆಡೆ ವಾಜಪೇಯಿ ಅವರಂತೆ ಆಧುನಿಕ ಸುಧಾರಣಾವಾದಿಯಾಗಿಯೂ ಗಮನ ಸೆಳೆಯಬೇಕು ಎನ್ನುವುದು ಅವರ ಇರಾದೆಯಾಗಿದೆ. ಈ ಎರಡು ಬಗೆಯ ವಿಭಿನ್ನ ವ್ಯಕ್ತಿತ್ವಗಳ ಮಧ್ಯೆ ಸಿಲುಕಿರುವ ಮೋದಿ ಅಂತಿಮವಾಗಿ ಇಂದಿರಾ ಗಾಂಧಿ ಅವರಂತೆ ಅಧಿಕಾರ ಕೇಂದ್ರಿತ ವ್ಯಕ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯಕ್ಕೆ ಮಹಾನ್‌ ಅರ್ಥಶಾಸ್ತ್ರಜ್ಞ ಮತ್ತು ರಾಷ್ಟ್ರೀಯವಾದಿಯು ನಿಯಂತ್ರಣ ಕ್ರಮಗಳನ್ನು ವಿಸ್ತರಿಸುವ ಮತ್ತು ಹೆಚ್ಚಿಸುವ ವಿಲಕ್ಷಣ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

ಪ್ರಾಮಾಣಿಕವಾಗಿ ಮತ್ತು ಜಾಣತನದಿಂದ ಸರ್ಕಾರ ಮುನ್ನಡೆಸುವವರೆಗೆ ಸರ್ಕಾರವು ಅರ್ಥವ್ಯವಸ್ಥೆಯನ್ನು ನಿಭಾಯಿಸುವುದರಲ್ಲಿ ಯಾವುದೇ ತಪ್ಪು ಕಂಡು ಬರುವುದಿಲ್ಲ. ಪರಿಪೂರ್ಣ ಸರ್ಕಾರದ ಹುಡುಕಾಟವು ಯಾವತ್ತೂ ಸಫಲವೂ ಆಗುವುದಿಲ್ಲ. ಈ ಸಂದರ್ಭದಲ್ಲಿಯೂ ಈ ಮಾತು ಅನ್ವಯಿಸುತ್ತದೆ.

ಮೋದಿ ಅವರ ಯೌವನ ಮತ್ತು ಮಧ್ಯವಯಸ್ಸು ಪೂರ್ಣ ಪ್ರಮಾಣದಲ್ಲಿ ಸ್ವಯಂ ಸೇವಕನಾಗಿ ಕಾರ್ಯನಿರ್ವಹಿಸುವುದರ

ಲ್ಲಿಯೇ ಕಳೆದುಹೋಗಿದೆ. ಅಂತಹ ಸಾಂಪ್ರದಾಯಿಕ ಮನೋಭಾವವು ಸಂಪೂರ್ಣವಾಗಿ ಆವಿಯಾಗಿ ಹೋಗಲಾರದು. ಇತ್ತೀಚಿನ ದಿನಗಳಲ್ಲಿ ಅವರು ಇಡೀ ವಿಶ್ವಕ್ಕೆ ತೆರೆದುಕೊಂಡ ಪರಿ, ಜಾಗತಿಕ ಮುಖಂಡರ ಜತೆಗಿನ ಭೇಟಿ, ವಿಶ್ವದಾದ್ಯಂತ ಆರ್ಥಿಕತೆಗಳು ಮತ್ತು ಸಮುದಾಯಗಳು ಯಶಸ್ವಿಯಾಗಿ ಮುನ್ನಡೆದಿರುವುದು ಅವರಲ್ಲಿಯೂ ಹೊಸ ಉದಾರವಾದ ಆಲೋಚನೆಗಳು ಮೊಳಕೆ ಒಡೆಯಲು ಪ್ರೇರಣೆ ನೀಡುತ್ತಿವೆ.

ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯವಾದ ಮತ್ತು ನವ್ಯ ಉದಾರೀಕರಣ ಶಕ್ತಿಗಳ ದೋಷಗಳೇನೇ ಇರಲಿ, ಅವುಗಳು ಮೂಲತಃ ಪರಸ್ಪರ ವಿರೋಧಾಭಾಸಗಳಿಂದ ಕೂಡಿವೆ. ಇವೆರಡೂ ಚಿಂತನೆಗಳು ಯಾವತ್ತೂ ಜತೆಯಾಗಿ ಇರಲಾರವು. ಮೋದಿ ಅವರ ಆರ್ಥಿಕತೆಯು ಇಂತಹ ಗೋಜಲಿನಲ್ಲಿ ಸಿಲುಕಿಕೊಂಡಿದೆ. ಈ ಗೊಂದಲವನ್ನು ನಾವು ಏನೆಂದು ಕರೆಯಬಹುದು. ನನಗೆ ಕೇಳಿದರೆ, ಇದನ್ನು ‘ಕ್ಯಾಚ್‌–24’ ಎಂದೇ ಬಣ್ಣಿಸಬೇಕು ಎಂದು ಅನಿಸುತ್ತದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ

ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)