ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

ಮಂಗಳವಾರ, ಮಾರ್ಚ್ 26, 2019
26 °C

ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

ಈಶಾನ್ಯ ರಾಜ್ಯಗಳ ರಾಜಕೀಯ ಬೆಳವಣಿಗೆಗಳು ಕೊನೆಗೂ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಲೆಬರಹಗಳಾಗಿ ಲಗ್ಗೆ ಇಟ್ಟಿವೆ. ಇಷ್ಟು ದಿನ ಅಲ್ಲಿನ ಬೆಳವಣಿಗೆಗಳು ಅಷ್ಟೇನೂ ಪ್ರಮುಖವಲ್ಲದ ಸಣ್ಣಪುಟ್ಟ ಸುದ್ದಿಗಳಂತೆ ತಡವಾಗಿ ಪ್ರಕಟವಾಗುತ್ತಿದ್ದವು. ಇದೀಗ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಚುನಾವಣಾ ಫಲಿತಾಂಶಗಳು ಹಲವು ಕಾರಣಗಳಿಗಾಗಿ ರಾಷ್ಟ್ರೀಯ ಗಮನವನ್ನು ತಮ್ಮೆಡೆಗೆ ಸೆಳೆದಿವೆ.

ಮೊದಲನೆಯದಾಗಿ, ಈ ಚುನಾವಣೆಗಳಲ್ಲಿ ಬಿಜೆಪಿಯ ಗಮನಾರ್ಹ ಸಾಧನೆಯು ಆ ಪಕ್ಷವು ಪ್ರಜ್ಞಾಪೂರ್ವಕವಾಗಿ ‘ರಾಷ್ಟ್ರೀಯ ಹೆಜ್ಜೆಜಾಡು’ ಮೂಡಿಸಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಎರಡನೆಯದಾಗಿ, ಸುಮಾರು ಕಾಲು ಶತಮಾನ ಕಾಲ ತ್ರಿಪುರಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಎಡಪಕ್ಷದ ಸೋಲು, ರಾಜ್ಯ ರಾಜಕಾರಣದ ವೈಖರಿಯಲ್ಲಿ ಆಗಿರುವ ಪ್ರಮುಖ ಸ್ಥಿತ್ಯಂತರದ ಗುರುತಾಗಿದೆ. ಮೂರನೆಯದಾಗಿ, ಮೇಘಾಲಯದಲ್ಲಿ ಕಾಂಗ್ರೆಸ್‍ನ ಸೋಲು, ತ್ರಿಪುರಾ ಮತ್ತು ನಾಗಾಲ್ಯಾಂಡ್‍ನಲ್ಲಿ ಅದಕ್ಕೆ ಖಾತೆ ತೆರೆಯಲೂ ಆಗದಿದ್ದುದು ಆ ಪಕ್ಷವು ಈ ಪ್ರದೇಶದ ರಾಜಕೀಯದಿಂದ ನಿರಂತರವಾಗಿ ಹಿಮ್ಮುಖವಾಗಿ ನಡೆಯುತ್ತಿರುವುದರ ಸೂಚಕವಾಗಿದೆ.

ನಾಲ್ಕನೆಯದಾಗಿ, ಸ್ವತಂತ್ರ ಪಕ್ಷಗಳಾಗಿ ಅಥವಾ ರಾಷ್ಟ್ರೀಯ ಪಕ್ಷಗಳ ಮೈತ್ರಿಕೂಟದ ಸದಸ್ಯ ಪಕ್ಷವಾಗಿ ರಾಜ್ಯ ನೆಲೆಯ ಪಕ್ಷಗಳ ಇರುವಿಕೆಯ ಮುಂದುವರಿಕೆಯು ಈ ಪ್ರದೇಶದ ಚುನಾವಣಾ ರಾಜಕೀಯದ ಸ್ವರೂಪವನ್ನು ಸೂಚಿಸುತ್ತದೆ. ಕೊನೆಯದಾಗಿ, ಈ ಮೂರು ರಾಜ್ಯಗಳಲ್ಲಿನ ಚುನಾವಣಾ ತೀರ್ಪು ನಿಸ್ಸಂದೇಹವಾಗಿಯೂ ಬದಲಾವಣೆಗಾಗಿ ಮತ್ತು ಆಡಳಿತಾರೂಢ ಪಕ್ಷಗಳಿಗೆ ವಿರುದ್ಧವಾಗಿ ನೀಡಿದ ಮತವಾಗಿದೆ. ರಾಷ್ಟ್ರೀಯ ಮತ್ತು ಸ್ಥಳೀಯ ರಾಜಕಾರಣಗಳೆರಡರ ಮೇಲೆ ಈ ಎಲ್ಲ ಅಂಶಗಳೂ ಪರಿಣಾಮ ಬೀರುವಂಥವು.

ತ್ರಿಪುರಾ ರಾಜ್ಯದ ತೀರ್ಪಿನ ಸ್ವರೂಪವು ತಕ್ಷಣವೇ ಗಮನ ಸೆಳೆಯುವಂಥದ್ದಾಗಿದೆ. ಆಡಳಿತದಲ್ಲಿರುವ ಪಕ್ಷ ಅಥವಾ ಮೈತ್ರಿಕೂಟವನ್ನು ಸೋಲಿಸುವುದು ಎಷ್ಟು ಕಷ್ಟ ಎಂಬುದನ್ನು ಹಿಂದಿನ ಪಶ್ಚಿಮ ಬಂಗಾಳ ಮತ್ತು ಗುಜರಾತ್ ಚುನಾವಣೆಗಳು ತೋರಿಸಿದ್ದವು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಆದರೆ ತ್ರಿಪುರಾದಲ್ಲಿ ಬಿಜೆಪಿ, ಯೋಜಿತ ಪ್ರಚಾರಾಂದೋಲನದ ನೆರವಿನೊಂದಿಗೆ ಎಡಪಕ್ಷದ ಭದ್ರಕೋಟೆಯನ್ನು ಯಶಸ್ವಿಯಾಗಿ ಭೇದಿಸಿದೆ.

ಈ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ‘ಶೂನ್ಯ ಸಂಪಾದನೆ’ ಮಾಡಿದ್ದ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೂಡ ಒಂದೇ ಒಂದು ಗೆಲುವು ದಾಖಲಿಸದಿದ್ದ ಬಿಜೆಪಿ ಇಲ್ಲಿ ಚುನಾವಣಾ ಅಸ್ತಿತ್ವವನ್ನೇ ಹೊಂದಿರಲಿಲ್ಲ ಎಂಬುದನ್ನು ದಾಖಲಿಸುವುದು ಈ ಸಂದರ್ಭದಲ್ಲಿ ಅತ್ಯಂತ ಮುಖ್ಯ. ಎಡಪಂಥೀಯ ವಿರೋಧಿ ಮನಸ್ಥಿತಿ, ಸಿಪಿಎಂನ ಎರಡೂವರೆ ದಶಕಗಳ ಆಡಳಿತದ ಬಗೆಗಿನ ಭ್ರಮನಿರಸನ, ಬುಡಕಟ್ಟು ಸಮುದಾಯಗಳು ಹಾಗೂ ಬುಡಕಟ್ಟೇತರ ಸಮುದಾಯಗಳ ನಡುವೆ ಹೆಚ್ಚುತ್ತಿರುವ ಕಂದಕದ ಲಾಭವನ್ನು ಪಡೆಯುವಲ್ಲಿ ಅದು ಯಶಸ್ವಿಯಾಯಿತು. ತ್ರಿಪುರಾದಲ್ಲಿ ಲೋಕನೀತಿ- ಸಿಎಸ್‍ಡಿಎಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯು ಇದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇಲ್ಲಿ ಮತದಾರರು ಅಭ್ಯರ್ಥಿ

ಗಳಿಗಿಂತ ಪಕ್ಷ ಮುಖ್ಯ ಎಂದು ಭಾವಿಸಿದ ಅಪರೂಪದ ಚುನಾವಣೆಗಳಲ್ಲಿ ಇದೂ ಒಂದಾಗಿದೆ. ಸಮೀಕ್ಷೆಯ ವೇಳೆ ಶೇಕಡ 50ಕ್ಕಿಂತ ಹೆಚ್ಚು ಮತದಾರರು ತಾವು ಅಭ್ಯರ್ಥಿ ಯಾರು ಎಂಬುದನ್ನು ಬದಿಗಿಟ್ಟು ಪಕ್ಷವನ್ನು ಮನಸ್ಸಿನಲ್ಲಿರಿಸಿಕೊಂಡು ಮತ ಚಲಾಯಿಸಿದ್ದಾಗಿ ತಿಳಿಸಿದ್ದಾರೆ.

ಮಾಣಿಕ್ ಸರ್ಕಾರ್ ನೇತೃತ್ವದ ಸರ್ಕಾರದ ಬಗ್ಗೆ ಜನರಲ್ಲಿ ಸಾಧಾರಣವಾದ ಮಟ್ಟಿಗೆ ಸಮಾಧಾನ ಇತ್ತು ಎಂದು ಅನ್ನಿಸುತ್ತದೆ. ಸಮೀಕ್ಷೆ ವೇಳೆ ಶೇ 50ಕ್ಕಿಂತ ಹೆಚ್ಚು ಮಂದಿ ಮುಖ್ಯಮಂತ್ರಿ ಬಗ್ಗೆ ತಮಗೆ ತೃಪ್ತಿ ಇದೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಮೂರನೇ ಒಂದು ಭಾಗದಷ್ಟು ಜನರು ಸರ್ಕಾರದ ಬಗೆಗೆ ‘ತೀವ್ರ ಅತೃಪ್ತಿ’ ಹೊಂದಿದ್ದ ಅಂಶವು ಆಡಳಿತಾರೂಢ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿ, ಅಂತಿಮವಾಗಿ ಆ ಸರ್ಕಾರದ ಪದಚ್ಯುತಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಇನ್ನೊಂದು ಅವಧಿಗೆ ಗೆಲ್ಲಬೇಕೆಂದರೆ, ಹೆಚ್ಚಿನ ಸಂಖ್ಯೆಯ ಮತದಾರರು ಸರ್ಕಾರದ ಕಾರ್ಯಸಾಧನೆ ಬಗ್ಗೆ ತೃಪ್ತಿ ವ್ಯಕ್ತಪಡಿಸುವುದಷ್ಟೇ ಸಾಲದು ಎಂಬುದು ಹಿಂದಿನ ಸಮೀಕ್ಷೆಗಳಿಂದ ವೇದ್ಯವಾಗಿದೆ; ಅದರಲ್ಲೂ ಆರನೇ ಬಾರಿಗೆ ಅಧಿಕಾರ ಕೋರುವಾಗಲಂತೂ ಇದು ಇನ್ನಷ್ಟು ಪರಿಣಾಮ ಬೀರುವ ಸಂಗತಿಯಾಗಿದೆ!

ಎಡ ವಿರೋಧಿ ಮತಗಳು ಬಿಜೆಪಿಯೆಡೆಗೆ ಕ್ರೋಡೀಕರಣಗೊಂಡಿದ್ದು ಮತ್ತೊಂದು ವಿದ್ಯಮಾನ. ಕಾಂಗ್ರೆಸ್ಸಿನ ಸಾಂಪ್ರದಾಯಿಕ ಬೆಂಬಲಿಗರು ಆ ಪಕ್ಷವನ್ನು ತೊರೆಯುವುದರ ಜತೆಗೆ ಎಡಪಕ್ಷವನ್ನು ಸೋಲಿಸಲು ಬಿಜೆಪಿಯೇ ಅತ್ಯುತ್ತಮ ಆಯ್ಕೆ ಎಂದು ತೀರ್ಮಾನಿಸಿದರು. ಬಿಜೆಪಿಯು ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‍ಟಿ) ಜತೆ ಮೈತ್ರಿ ಮಾಡಿಕೊಂಡಿದ್ದು ಬುಡಕಟ್ಟು ಸಮುದಾಯದ ಮತಗಳು ಎಡಪಕ್ಷದಿಂದ ಬಿಜೆಪಿಯತ್ತ ವಾಲಲು ಅನುಕೂಲಕರವಾಯಿತು.

ಲೋಕನೀತಿ- ಸಿಎಸ್‍ಡಿಎಸ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಬುಡಕಟ್ಟು ಸಮುದಾಯದ ಶೇ 50ಕ್ಕಿಂತ ಹೆಚ್ಚು ಮತಗಳು ಬಿಜೆಪಿ-ಐಪಿಎಫ್‍ಟಿ ಮೈತ್ರಿಕೂಟಕ್ಕೆ ಹೋಗಿದ್ದರೆ, ಎಡಪಕ್ಷಗಳಿಗೆ ಈ ಸಮುದಾಯದ ಮೂರನೇ ಒಂದು ಭಾಗದಷ್ಟು ಮತಗಳು ಮಾತ್ರ ಬಿದ್ದಿವೆ. ಬಿಜೆಪಿಯು ತ್ರಿಪುರಾದಲ್ಲಿನ ತನ್ನ ವಿಜಯದ ಮೂಲಕ ಆಡಳಿತಾರೂಢ ಪಕ್ಷವನ್ನು ಸೋಲಿಸುವ ಜತೆಗೆ ಕಾಂಗ್ರೆಸ್ ಪಕ್ಷವನ್ನು ಚುನಾವಣಾ ಫಲಿತಾಂಶದಿಂದ ನಿರ್ಮೂಲನೆ ಮಾಡಿದೆ. ಆ ಮೂಲಕ ತನ್ನ ಎರಡು ರಾಜಕೀಯ ಎದುರಾಳಿಗಳಿಗೆ ಅರಗಿಸಿಕೊಳ್ಳಲು ಕಷ್ಟವೆನ್ನಿಸುವಂತಹ ಪ್ರತ್ಯುತ್ತರ ನೀಡಿದೆ.

ಈಶಾನ್ಯದ ಇನ್ನೆರಡು ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್ ಫಲಿತಾಂಶಗಳು ಆಡಳಿತ ವಿರೋಧಿ ಮತಗಳ ವಿಷಯದಲ್ಲಿ ತ್ರಿಪುರಾವನ್ನೇ ಹೋಲುತ್ತವೆ; ಆದರೆ ವ್ಯತ್ಯಾಸವೇನೆಂದರೆ, ಈ ಎರಡೂ ರಾಜ್ಯಗಳಲ್ಲಿ ಮೈತ್ರಿ ರಾಜಕಾರಣದ ಸ್ವರೂಪವು ಸರ್ಕಾರ ರಚನೆಗೆ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ನಿರ್ಧರಿಸಲಿದೆ. ತ್ರಿಪುರಾದಲ್ಲಿ ಮತದಾರರು ಅಭ್ಯರ್ಥಿಗಿಂತ ಪಕ್ಷಕ್ಕೆ ಪ್ರಾಮುಖ್ಯ ನೀಡಿದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲಿ ಇದಕ್ಕೆ ವ್ಯತಿರಿಕ್ತವಾದ ಧೋರಣೆ ವ್ಯಕ್ತವಾಯಿತು. ಈ ಎರಡು ರಾಜ್ಯಗಳಲ್ಲಿ ಲೋಕನೀತಿ- ಸಿಎಸ್‍ಡಿಎಸ್ ನಡೆಸಿದ್ದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮೂವರಲ್ಲಿ ಇಬ್ಬರು, ತಮಗೆ ಪಕ್ಷಕ್ಕಿಂತ ಅಭ್ಯರ್ಥಿಯೇ ಮುಖ್ಯವಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು.

ಮೇಘಾಲಯದಲ್ಲಿ ಆಡಳಿತಾರೂಢ ಕಾಂಗ್ರೆಸ್‍ನ ಸ್ಥಾನಬಲ ಇಳಿಮುಖವಾದರೂ ಸರ್ಕಾರದ ಸಾಧನೆ ಬಗ್ಗೆ ದೊಡ್ಡ ಪ್ರಮಾಣದ ಅತೃಪ್ತಿ ಇಲ್ಲದಿದ್ದುದರಿಂದ ಏಕೈಕ ದೊಡ್ಡ ಪಕ್ಷವಾಗಿ ಅದು ಹೊರಹೊಮ್ಮಿದೆ. ಆದರೆ ನಾಗಾಲ್ಯಾಂಡ್‍ನಲ್ಲಿ ಝೆಲಿಯಾಂಗ್ ನೇತೃತ್ವದ ಎನ್‍ಪಿಎಫ್ ಮೈತ್ರಿ ಸರ್ಕಾರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಳೆದುಕೊಂಡಿತ್ತು. ಸಮೀಕ್ಷೆ ವೇಳೆ, ಶೇ 50ಕ್ಕಿಂತ ಹೆಚ್ಚು ಜನರು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು; ಈ ಪೈಕಿ ನಾಲ್ವರಲ್ಲಿ ಒಬ್ಬರು ಸಂಪೂರ್ಣ ಅತೃಪ್ತಿ ಪ್ರಕಟಿಸಿದ್ದರು. ಮಾಜಿ ಮುಖ್ಯಮಂತ್ರಿ ನೈಫಿಯು ರಿಯೊ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದ ಎನ್‍ಡಿಪಿಪಿಯ ಉತ್ತಮ ಸಾಧನೆಗೆ ಬಹುಶಃ ಇದು ಕಾರಣವಿರಬಹುದು. ಎನ್‍ಡಿಪಿಪಿ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿಯು ರಾಜ್ಯದಲ್ಲಿನ ಶಾಂತಿ ಪ್ರಕ್ರಿಯೆಯನ್ನು ಗಮನದಲ್ಲಿರಿಸಿಕೊಂಡು ರಿಯೊ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜಿಸಲು ಒಲವು ತೋರಬಹುದು.

ಈಶಾನ್ಯ ರಾಜ್ಯಗಳ ಚುನಾವಣಾ ತೀರ್ಪಿನ ದೀರ್ಘಾವಧಿ ಪರಿಣಾಮಗಳಾದರೂ ಏನು? ಈಶಾನ್ಯ ರಾಜ್ಯಗಳ ‘ರಾಜಕೀಯ ಬಣ್ಣ’ವನ್ನು ಇದು ವರ್ತಮಾನದ ಆಯ್ಕೆಯಾಗಿರುವ ‘ಕೇಸರಿ’ಯಾಗಿ ಬದಲಾಯಿಸುವುದರಲ್ಲಿ ಅನುಮಾನವೇ ಇಲ್ಲ. ಇದು ಈ ವರ್ಷ ಚುನಾವಣೆಗೆ ಸರದಿಯಲ್ಲಿ ಕಾದಿರುವ ಇತರ ರಾಜ್ಯಗಳ ಬಿಜೆಪಿ ಕಾರ್ಯಕರ್ತರಿಗೆ ಹುರುಪನ್ನೂ ತುಂಬಲಿದೆ. ತ್ರಿಪುರಾದ ತೀರ್ಪು ಕರ್ನಾಟಕದಲ್ಲಿ ಪುನರಾವರ್ತನೆ ಆಗಲಿದೆ ಎಂಬ ಹೇಳಿಕೆಗಳನ್ನು ಬಿಜೆಪಿ ಈಗಾಗಲೇ ನೀಡಿದೆ. ಆದರೆ, ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿರುವ ಭಾವದಲ್ಲಿದ್ದರೂ ಕರ್ನಾಟಕದ ಸಂಗತಿಗಳು ಸಂಪೂರ್ಣವಾಗಿ ಭಿನ್ನವೂ ಹೌದು.

ಕರ್ನಾಟಕವು ಎರಡು ಪ್ರಮುಖ ಪಕ್ಷಗಳ ನಡುವೆ ತುರುಸಿನ ಸ್ಪರ್ಧೆಯನ್ನು ಕಾಣಲಿದೆ: ಕೇಂದ್ರದ ನಿರ್ದೇಶನದಂತೆ ನಡೆಯಲಿರುವ ಬಿಜೆಪಿ ಪ್ರಚಾರಾಂದೋಲನ ಮತ್ತು ಕಾಂಗ್ರೆಸ್ಸಿನ ಸ್ಥಳೀಯ ಕಾರ್ಯಸೂಚಿಯ ಜತೆಗೆ ಜೆಡಿಎಸ್ ಕೂಡ ಅಧಿಕಾರಕ್ಕಾಗಿ ಜನಮತ ಕೋರಲಿದೆ.

ಕರ್ನಾಟಕದ ತೀರ್ಪು ಮುಂದೆ ಬಿಜೆಪಿಯು ಆಡಳಿತ ವಿರೋಧಿ ಅಲೆಯನ್ನು ಮೀರಲು ಬಯಸುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ಚುನಾವಣೆಗಳ ಜತೆಗೆ 2019ರ ಲೋಕಸಭಾ ಚುನಾವಣೆಗೆ ಭೂಮಿಕೆಯನ್ನೂ ಸಜ್ಜುಗೊಳಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry