ಶುಕ್ರವಾರ, ಮಾರ್ಚ್ 5, 2021
30 °C

ಊಹಿಸಲಾಗದ ಪೇಟೆಯ ದಿಕ್ಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಊಹಿಸಲಾಗದ ಪೇಟೆಯ ದಿಕ್ಕು

ಷೇರುಪೇಟೆಗಳು ವಿಸ್ಮಯಕಾರಿಯಾಗಿ ಚಲಿಸುತ್ತಿವೆ ಎಂಬುದಕ್ಕೆ ಈ ವಾರ ಕಂಡ ಏರಿಳಿತಗಳು ಸಾಕ್ಷಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ದೇಶದ ಆರ್ಥಿಕತೆ ಅಧಿಕ ಪ್ರಭಾವಿಯಾಗಿದೆ. ಎಷ್ಟರಮಟ್ಟಿಗೆ ಇದು ಪ್ರಭಾವಿ ಎಂದರೆ ವಿಶ್ವದ ಇತರೆ ಪೇಟೆಗಳೂ ಕುಸಿಯತೊಡಗಿದವು. ಯೂರೋಪ್, ಅಮೆರಿಕ ಸೇರಿ ಹಲವಾರು ಪೇಟೆಗಳ ಸೂಚ್ಯಂಕಗಳು ಭಾರಿ ಪ್ರಮಾಣದಲ್ಲಿ ಕುಸಿಯತೊಡಗಿವೆ. ಸ್ಥಳೀಯವಾಗಿ ಯಾವುದೇ ಪರಿಣಾಮಕಾರಿಯಾಗಿರುವ ಬೆಳವಣಿಗೆಗಳು ಇಲ್ಲದಿದ್ದರೂ ಮುಂಬೈ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಸಂವೇದಿ ಸೂಚ್ಯಂಕವು 479 ಅಂಶಗಳ ಇಳಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 648 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 869 ಅಂಶಗಳಷ್ಟು ಭಾರಿ ಕುಸಿತ ಕಂಡವು. ಇಂತಹ ಕುಸಿತದ ವಾತಾವರಣ ದಲ್ಲಿ ಕೆಲವು ವಿಶ್ಲೇಷಕರು ಸಂವೇದಿ ಸೂಚ್ಯಂಕವು ಇಪ್ಪತ್ತೆರಡು ಸಾವಿರಕ್ಕೆ ಇಳಿಕೆ ಕಾಣಬಹುದೆಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ಬಂಡವಾಳ ಮೌಲ್ಯ: 2014 ರ ನವೆಂಬರ್‌ನಲ್ಲಿ ಪೇಟೆಯ ಬಂಡವಾಳ ಮೌಲ್ಯವು ದಿನದ ಮಧ್ಯಂತರದ ಚಟುವಟಿಕೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳಿಗೆ ದಾಟಿದ ಸಂದರ್ ಭದಲ್ಲಿ ಅಲ್ಲಿಂದ ಹನ್ನೆರಡು ತಿಂಗಳಲ್ಲಿ ಸಂವೇದಿ ಸೂಚ್ಯಂಕವು ಮೂವತ್ತಮೂರು ಸಾವಿರದ ಗಡಿ ತಲುಪುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಸಂವೇದಿ ಸೂಚ್ಯಂಕವು 30 ಸಾವಿರದ ಗಡಿ ದಾಟಿ ಸ್ಥಿರತೆ ಕಂಡುಕೊಳ್ಳಲಾಗದೆ ಸತತವಾದ ಇಳಿಕೆ ಕಾಣುತ್ತಿದೆ. ಅಂದರೆ ಈಗಿನ ಪೇಟೆಗಳು ಯಾವ ತಜ್ಞರ ವಿಶ್ಲೇಷಣೆಗೂ ಸಿಲುಕದೆ ತಮ್ಮದೇ ಆದ ದಾರಿಯಲ್ಲಿ ಸಾಗಿವೆ.  ಕಳೆದವಾರ ಸಂವೇದಿ ಸೂಚ್ಯಂಕವು 479 ಅಂಶಗಳ ಕುಸಿತವು ಹೆಚ್ಚಿನ ಪ್ರಭಾವಿಯಾಗದಂತೆ ಕಂಡರು ವಾಸ್ತವವಾಗಿ ಅನೇಕ ಕಂಪೆನಿಗಳು ವಿಶೇಷವಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರ್ರೇಣಿಯ ಕಂಪೆನಿಗಳು ಆಘಾತಕಾರಿ ಮಟ್ಟದ ಕುಸಿತ ಕಂಡವು.ಅಗ್ರಮಾನ್ಯ ಕಂಪೆನಿಗಳು ಬುಧವಾರ ದಿನದ ಮಧ್ಯಂತರದಲ್ಲಿ ಭಾರಿ ಕುಸಿತ ಪ್ರದರ್ಶಿಸಿ ನಂತರ ಪುಟಿದೆದ್ದವು. ಆದರೆ ಶುಕ್ರವಾರ ಸುರಕ್ಷಿತ ವಲಯವಾಗಿದ್ದ ಫಾರ್ಮಾ ವಲಯದ ಕಂಪೆನಿಗಳಾದ ವೋಕಾರ್ಡ್, ಸ್ಟ್ರೈಡ್ಸ್ ಶಾಸುನ್ , ಗ್ಲೆನ್ ಮಾರ್ಕ್ ಫಾರ್ಮಾ, ಟೊರೆಂಟ್ ಫಾರ್ಮಾ, ಇಪ್ಕಾ ಲ್ಯಾಬೊರೆಟರೀಸ್, ಮುಂತಾದವುಗಳು ಭಾರಿ ಕುಸಿತ ಪ್ರದರ್ಶಿಸಿವೆ.ವೋಕಾರ್ಡ್ ಕಂಪೆನಿಯ ಇನ್ಸ್ಪೆಕ್ ಶನ್‌ನಲ್ಲಿ ಅಮೆರಿಕದ ಎಫ್‌ಡಿಎ ಒಂಬತ್ತು ಅಂಶಗಳನ್ನು ಗಮನಕ್ಕೆ ತಂದಿದ್ದು ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದೆಂದು ಕಂಪೆನಿ ತಿಳಿಸಿದ್ದರೂ ಷೇರಿನ ಬೆಲೆಯು ₹1,515ರಿಂದ ₹1,257 ರ ಸಮೀಪಕ್ಕೆ ಕುಸಿದು ನಂತರ ₹1,288 ರ ಸಮೀಪದಲ್ಲಿ ಕೊನೆಗೊಂಡಿತು. ಆದರೆ ಕಂಪೆನಿಗಳಾದ  ಸ್ಟ್ರೈಡ್ಸ್ ಶಾಸುನ್ , ಗ್ಲೆನ್ ಮಾರ್ಕ್ ಫಾರ್ಮಾ, ಟೊರೆಂಟ್ ಫಾರ್ಮಾ, ಇಪ್ಕಾ ಲ್ಯಾಬೊರೇಟರೀಸ್ ಕುಸಿಯಲು ಕಾರಣವೇ ಇಲ್ಲವಾದರೂ ಭಾರಿ ಕುಸಿತಕಂಡವು. ಆದರೆ ಇತ್ತೀಚಿನ ದಿನಗಳಲ್ಲಿ ಯುಎಸ್‌ ಎಫ್‌ಡಿಎ ಕ್ರಮದ ಕಾರಣ ಭಾರಿ ಕುಸಿತಕ್ಕೊಳಗಾಗಿದ್ದ ಡಾಕ್ಟರ್ ರೆಡ್ಡಿ ಲ್ಯಾಬ್, ಕ್ಯಾಡಿಲ್ಲ ಹೆಲ್ತ್ ಕೇರ್‌ಗಳು ಅಲ್ಪ ಇಳಿಕೆ ಕಂಡವು.ಇನ್ನು ಬ್ಯಾಂಕಿಂಗ್ ವಲಯದ ಅಗ್ರಮಾನ್ಯ ಕಂಪೆನಿಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ವಾರದಲ್ಲಿ ₹207 ರ ಸಮೀಪದಿಂದ ₹181ರ ವಾರ್ಷಿಕ ಕನಿಷ್ಠಕ್ಕೆ ಇಳಿದಿದೆ. ಕೆನರಾ ಬ್ಯಾಂಕ್  ಹೆಚ್ಚು ಒತ್ತಡಕ್ಕೊಳಗಾಗಿ ಶುಕ್ರವಾರ  ₹178 ರ ಸಮೀಪಕ್ಕೆ ಕುಸಿದು ಒಂದು ವಾರದಲ್ಲಿ  ನಲವತ್ತು  ರೂಪಾಯಿಗಳಿಗೂ ಹೆಚ್ಚಿನ ಇಳಿಕೆಯಿಂದ ವಾರ್ಷಿಕ ಕನಿಷ್ಠ ಬೆಲೆ ದಾಖಲಿಸಿತು. ಖಾಸಗಿ ವಲಯದ ಸುಮಾರು ಐವತ್ತಾ ಮೂರು ರೂಪಾಯಿಗಳ ಕುಸಿತದಿಂದ, ಐ ಸಿ ಐ ಸಿ ಐ ಬ್ಯಾಂಕ್ ಸಹ ₹22 ರ ವರೆಗೂ ಕುಸಿದು ಕನಿಷ್ಠ ದಾಖಲೆ ನಿರ್ಮಿಸಿವೆ. ಟಾಟಾ ಸ್ಟೀಲ್ ಕಂಪೆನಿಯನ್ನು ರೇಟಿಂಗ್ ಸಂಸ್ಥೆ ಕೆಳ ದರ್ಜೆಗೆ ಇಳಿಸಿದೆ ಎಂಬ ಕಾರಣಕ್ಕೆ ಮಾರಾಟದ ಒತ್ತಡ ಎದುರಿಸಿ ವಾರದಲ್ಲಿ ₹255 ರಿಂದ ₹228 ರವರೆಗೂ ಇಳಿಕೆ ಕಂಡಿತು.ಈ ತಿಂಗಳ 20 ರಂದು ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ ಕಂಪೆನಿ ಸಹ ಮಾರಾಟದ ಒತ್ತಡದಿಂದ ವಾರದಲ್ಲಿ ₹592 ರಿಂದ ₹482 ರ ವರೆಗೂ ಕುಸಿದು ನಂತರ ₹493 ರಲ್ಲಿ ವಾರಾಂತ್ಯ ಕಂಡಿತು. ಈ ಷೇರು ಕಳೆದ ಆಗಸ್ಟ್ ನಲ್ಲಿ ₹282 ರ ಸಮೀಪದಿಂದ ಜನವರಿಯಲ್ಲಿ ₹622 ಕ್ಕೆ ಜಿಗಿದು ನಂತರ ಕುಸಿಯತೊಡಗಿದೆ. ಷೇರು ಪೇಟೆ ಬಂಡವಾಳ ಮೌಲ್ಯವು ₹ 98 ಲಕ್ಷ ಕೋಟಿಯಿಂದ ₹93 ಲಕ್ಷ ಕೋಟಿಗೆ ಇಳಿದು ಸುಮಾರು ನಾಲ್ಕು ಲಕ್ಷ ಕೋಟಿ ಗೂ ಹೆಚ್ಚು ಮೌಲ್ಯ ಕಳೆದುಕೊಂಡಿತು.ವಿದೇಶಿ ವಿತ್ತೀಯ ಸಂಸ್ಥೆಗಳು ₹4,281 ಕೋಟಿ ಮೌಲ್ಯದ ಷೇರು ಗಳನ್ನು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹3,876 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಪೇಟೆ ಯಲ್ಲಿ ಮಾರಾಟದ ಒತ್ತಡದ ಕಾರಣ ಸೂಚ್ಯಂಕವು ಬುಧವಾರ 24,387 ಕ್ಕೆ ಕುಸಿದು ವಾರ್ಷಿಕ ಕನಿಷ್ಠಕ್ಕೆ ತಲುಪಿತು.ಬೋನಸ್ ಷೇರು: ಅಸೋಸಿಯೇಟೆಡ್ ಆಲ್ಕೊಹಾಲ್ ಅಂಡ್ ಬ್ರಿವರೀಸ್ ಲಿ ಕಂಪೆನಿ 22 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ. ರಾಮ ಸ್ಟೀಲ್ ಟ್ಯೂಬ್ ಕಂಪೆನಿಯು 27 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ. ಮುಖಬೆಲೆ ಸೀಳಿಕೆ: ವಿವಿ ಮೆಡ್ ಲ್ಯಾಬ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ರಾಮ ಸ್ಟೀಲ್ ಟ್ಯೂಬ್ ಲಿಮಿಟೆಡ್ ಕಂಪೆನಿಯು 27 ರಂದು  ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.***

ಪ್ರತಿ ದಿನವೂ ಷೇರಿನ ಬೆಲೆಗಳಲ್ಲಿ ಅತಿಯಾದ ಏರಿಳಿತ  ಪ್ರದರ್ಶಿತ ವಾಗುತ್ತಿದೆ. ಸಂವೇದಿ ಸೂಚ್ಯಂಕವು ಸಹ ಮುನ್ನೂರರಿಂದ ಐದು ನೂರು ಪಾಯಿಂಟುಗಳಿಗೂ ಹೆಚ್ಚಿನ ಏರಿಳಿತ ಪ್ರದರ್ಶಿಸಿ, ಪೇಟೆಯ ದಿಸೆಯನ್ನು ನಿರ್ದಿಷ್ಟವಾಗಿ ಊಹಿಸಲು ಸಾಧ್ಯವಾಗದ ಹಂತದಲ್ಲಿದೆ.ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿತ, ಸರಕು ಪೇಟೆಗಳ ಕುಸಿತ, ಸೂಚ್ಯಂಕಗಳ ಕುಸಿತದೊಂದಿಗೆ ಸ್ಥಳೀಯವಾಗಿ ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟ ಮಾಡುತ್ತಿದ್ದು, ಸ್ಥಳೀಯ ಸಂಸ್ಥೆಗಳ ಕೊಳ್ಳುವಿಕೆ  ಇಳಿಕೆಯನ್ನು ತಡೆಯಲು ಸಾಲದಾಗಿದೆ.  ಕೇವಲ ಸಂವೇದಿ ಸೂಚ್ಯಂಕವಲ್ಲದೆ ಮುಂಬೈ ಷೇರು ವಿನಿಮಯ ಕೇಂದ್ರದ ಪಿ ಎಸ್ ಯು,  ಬ್ಯಾಂಕೆಕ್ಸ್,  ಕ್ಯಾಪಿಟಲ್ ಗೂಡ್ಸ್ ನಂತಹ ಉಪ  ಸೂಚ್ಯಂಕಗಳು ವಾರ್ಷಿಕ ಕನಿಷ್ಠಕ್ಕೆ ಕುಸಿದರೆ ಮಧ್ಯಮ ಶ್ರೇಣಿಯ ಮತ್ತು ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕಗಳು, ಮೆಟಲ್, ಹೆಲ್ತ್ ಕೇರ್, ಆಟೊ ಸೂಚ್ಯಂಕಗಳು ವಾರ್ಷಿಕ ಕನಿಷ್ಠಕ್ಕೆ ಸಮೀಪ ಇವೆ. 

ಪೇಟೆಯಲ್ಲಿ ಅನಿಶ್ಚಿತತೆ ಎಷ್ಟರ ಮಟ್ಟಿಗೆ ತಾಂಡವವಾಡುತ್ತಿದೆ.  ವಿವಿಧ ವಲಯದ ಹತ್ತಾರು ಕಂಪೆನಿಗಳು ದಿನದ ಮಧ್ಯಂತರದಲ್ಲಿ ಭಾರಿ ಅವಕಾಶವನ್ನು ಸಾಮೂಹಿಕವಾಗಿ ಒದಗಿಸಿದ ಅಪರೂಪದ ದಿನ ಅದಾಗಿತ್ತು.-  ಇದೇ ರೀತಿ ಶುಕ್ರವಾರ ವೋಕಾರ್ಡ್, ಸ್ಟ್ರೈಡ್ಸ್ ಶಾಸುನ್, ಟೊರೆಂಟ್ ಫಾರ್ಮ, ರಿಲಯನ್ಸ್ ಇನ್ಫ್ರಾ, ಕೆನರಾ ಬ್ಯಾಂಕ್, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಭಾರತ್ ಫೋರ್ಜ್ ಮುಂತಾದವು ಕುಸಿತ ಕಂಡವಾದರೂ ಏರಿಕೆಗೆ ಸಮಯವಿಲ್ಲದಾಯಿತು.ಈ ರೀತಿಯ ತ್ವರಿತ ಬದಲಾವಣೆಗಳನ್ನು ನಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವ ಕೌಶಲ್ಯತೆಯನ್ನು ನಾವು ಅಳವಡಿಸಿಕೊಂಡಲ್ಲಿ ಮಾತ್ರ ಷೇರುಪೇಟೆಯ ಉಪಯೋಗ ಪಡೆದುಕೊಂಡಂತಾಗುತ್ತದೆ. ಹಾಗಾಗಿ ಹೂಡಿಕೆ ಮಾಡುವಾಗ ಮಿತವಾಗಿ ಹಲವಾರು ಕಂಪೆನಿಗಳಲ್ಲಿ ಮಾಡುವುದು ಸೂಕ್ತ. ಕೇವಲ ಒಂದೆರಡು ಕಂಪೆನಿಗಳಿಗೆ ಸೀಮಿತವಾದಲ್ಲಿ ಅಪಾಯದ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವ್ಯಾಲ್ಯೂ ಪಿಕ್ -ಪ್ರಾಫಿಟ್ ಬುಕ್ ಸಮೀಕರಣವು ಈಗಿನ ಪೇಟೆಗಳಿಗೆ ಅನ್ವಯಿಸುತ್ತದೆ.ಕಚ್ಚಾ ತೈಲ ಬೆಲೆ ಕುಸಿತ, ದೇಶದ ಜಿಡಿಪಿ ಉತ್ತಮವಾಗಿರುತ್ತದೆಂಬ ವಿಶ್ವ ಬ್ಯಾಂಕ್ ಅಭಿಪ್ರಾಯ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಅಗತ್ಯ ಬಂಡವಾಳ ನೀಡುವ ಸರ್ಕಾರದ ಆಶ್ವಾಸನೆ, ಅಗ್ರಮಾನ್ಯ ಕಂಪೆನಿಗಳ ಷೇರಿನ ಬೆಲೆಗಳಲ್ಲಿ ಭಾರಿ ಕುಸಿತ, ಮುಂತಾದವುಗಳು ದೀರ್ಘಕಾಲೀನ ಹೂಡಿಕೆಯ ಅಭಿಲಾಶೆಯುಳ್ಳವರಿಗೆ ಅಪರೂಪದ ಅವಕಾಶ ದೊರಕಿಸಿಕೊಟ್ಟಂತಾಗಿದೆ. ಕಂಪೆನಿಗಳು ನೀಡುವ ಲಾಭಾಂಶ ಪ್ರಮಾಣವನ್ನಾಧರಿಸಿ, ಕಂಪೆನಿಗಳ ಘನತೆಯನ್ನು ಪರಿಶೀಲಿಸಿ, ಮುಖ್ಯವಾಗಿ ಅರಿತು ಹೂಡಿಕೆ ಮಾಡಿ ಯಶಸ್ವಿಯಾಗಿರಿ.ಮೊ: 9886313380 (ಸಂಜೆ 4.30ರ ನಂತರ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.