ಗುರುವಾರ , ಮೇ 26, 2022
30 °C

ಒಂದು ತಮಾಷೆಯೂ ಎರಡು ಸಮಸ್ಯೆಯೂ

ಶಿವರಾಮ್ Updated:

ಅಕ್ಷರ ಗಾತ್ರ : | |

ಜನ ತಮ್ಮ ಮನೆಗೆ ಹಾವು ಹೊಕ್ಕರೆ ಬೇರೆ ದಾರಿ ಕಾಣದೆ ಪೊಲೀಸರಿಗೆ ಫೋನ್ ಮಾಡುವುದು ಸಹಜ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ವೇಮಗಲ್ ನಾರಾಯಣ ಸ್ವಾಮಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಆಗಿದ್ದರು. ಆಗ ಅರ್ಜುನ್ ಎಂಬುವರು ಅಪರಾಧ ವಿಭಾಗದಲ್ಲಿ ಸಬ್ ಇನ್ಸ್‌ಪೆಕ್ಟರ್. ಶ್ರೀರಾಮುಲು ಎಂಬುವರು ಭದ್ರತಾ ವಿಭಾಗದ ಅಧಿಕಾರಿ. ಅವರು ಉರಗಪ್ರೇಮಿ, ಪರಿಸರಪ್ರೇಮಿ. ಆಗ ಎಚ್‌ಎಎಲ್ ಬೆಂಗಳೂರಿನ ಹೊರವಲಯದಲ್ಲಿತ್ತು. ಹೊಸ ಬಡಾವಣೆಗಳು ತಲೆಎತ್ತಿದ್ದವು.ಹಿಂದೆ ಗಿಡ-ಮರಗಳಿದ್ದ ಅಥವಾ ಬಯಲಿದ್ದ ಜಾಗದಲ್ಲಿ ದಿಢೀರನೆ ಮನೆಗಳೆದ್ದವು. ಹಾಗಾಗಿ ಧಗೆಯಲ್ಲಿ ಹಾವುಗಳು ಮನೆಗೆ ನುಗ್ಗುವುದು ಸಾಮಾನ್ಯವಾಯಿತು. ಹಾವು ಬಂದಿತೆಂದು ನಾಗರಿಕರು ಫೋನ್ ಕರೆ ಮಾಡುವುದು ವ್ಯಾಪಕವಾಯಿತು. ಆಗ ಇಲಾಖೆಗೆ ನೆನಪಾಗಿದ್ದು ಶ್ರೀರಾಮುಲು. ಜನ ಹಾವು ಬಂದಿದೆ ಎಂದು ಅಹವಾಲು ಕೊಟ್ಟರೆ, ಅವರ ಮನೆಗೆ ಹೋಗಿ ಹಾವನ್ನು ಹಿಡಿದು ತನ್ನಿ ಎಂದು ಶ್ರೀರಾಮುಲು ಅವರಿಗೆ ಅನುಮತಿ ಕೊಟ್ಟಿತು. ನಾಲ್ಕೈದು ಹಾವುಗಳನ್ನು ಹಿಡಿದ ನಂತರ ಅವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಬೇಕು ಎಂದು ತೀರ್ಮಾನವಾಯಿತು. ಹಾವನ್ನು ಹಿಡಿದು ತರಲು ಹಾಗೂ ಅವನ್ನು ಬಿಟ್ಟು ಬರಲು ಮೆಟಡೋರ್ ವಾಹನ ವ್ಯವಸ್ಥೆಯನ್ನೂ ಇಲಾಖೆ ಮಾಡಿಕೊಟ್ಟಿತು.ಒಂದು ವಾರ ಪ್ರತಿದಿನವೂ ಹಾವನ್ನು ಹಿಡಿಯಲು ಕರೆಬಂದಿತು. ಶ್ರೀರಾಮುಲು ಅವನ್ನು ಹಿಡಿದು ತರುವು ದರಲ್ಲೇ ನಿರತರಾದರು. ಹಿಡಿದ ಹಾವುಗಳನ್ನು ಕಾಡಿಗೆ ಬಿಡಲು ಸಮಯವಾಗಲಿಲ್ಲ. ಏಳೆಂಟು ಹಾವುಗಳನ್ನು ಡಬ್ಬದಲ್ಲಿ ಹಿಡಿದಿಟ್ಟರು. ಅವರಿಗೆ ಹಾವುಗಳ ಆಹಾರ ಪದ್ಧತಿ, ಅವುಗಳ ವರ್ತನೆ ಎಲ್ಲವೂ ಚೆನ್ನಾಗಿ ಗೊತ್ತಿತ್ತು. ಹೆಚ್ಚು ದಿನ ಉಪವಾಸ ಇಟ್ಟರೆ ಹಾವುಗಳ ಜೀವಕ್ಕೇ ಅಪಾಯ. ಹಾಗಾಗಿ ಅವನ್ನು ಕಾಡಿಗೆ ಬೇಗ ಬಿಡಬೇಕೆಂದು ಅವರು ನಿರ್ಧರಿಸಿದರು. ಹಾವುಗಳನ್ನು ಬಿಟ್ಟು ಬರಲು ವಾಹನ ವ್ಯವಸ್ಥೆ ಮಾಡುವಂತೆ ಒಂದು ದಿನ ಮುಂಚಿತವಾಗಿಯೇ ತಿಳಿಸಿದರು. ಮರುದಿನ ಬೆಳಗ್ಗೆ ಹಾವುಗಳನ್ನು ಹಿಡಿದಿಟ್ಟಿದ್ದದ ಡಬ್ಬಗಳನ್ನೆಲ್ಲಾ ಎಚ್‌ಎಎಲ್ ಠಾಣೆಗೆ ತಂದರು.ವೇಮಗಲ್ ನಾರಾಯಣಸ್ವಾಮಿ ಅದಾಗಲೇ ಕೆಲಸಕ್ಕೆ ಹಾಜರಾಗಿದ್ದರು. ಅರ್ಜುನ್ ವಯಸ್ಸಿನಲ್ಲಿ ತುಂಬಾ ಹಿರಿಯರು. ಕಪ್ಪಗೆ ಮಿರಮಿರ ಮಿಂಚುವ ದೇಹ. ಅಜಾನುಬಾಹು. ಹಣೆ ಮೇಲೆ ಢಾಳು ವಿಭೂತಿ ಪಟ್ಟೆ, ಅದರ ಮಧ್ಯೆ ರಾರಾಜಿಸುವ ಕುಂಕುಮ. ನಿತ್ಯ ಮನೆಯಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದ ಅವರು ಠಾಣೆಯಲ್ಲೂ ಕಿಟಕಿಗಳನ್ನೆಲ್ಲಾ ತೆಗೆದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರವೇ ಕೆಲಸ ಪ್ರಾರಂಭಿಸುತ್ತಿದ್ದದ್ದು. ಸಜ್ಜನ. ಅವರು ಠಾಣೆಯನ್ನು ತುಂಬಾ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು. ದೊಡ್ಡ ಮೇಜನ್ನು ತರಿಸಿಕೊಂಡು, ಅದರ ಮೇಲೆ ನುಣುಪಾದ ಗಾಜನ್ನು ಹಾಕಿಸಿದ್ದರು.ಆ ದಿನ ಅವರು ಠಾಣೆಯಲ್ಲಿ ತಮ್ಮ ಇಷ್ಟದೇವರಿಗೆ ಪೂಜೆ ಮಾಡುವ ಹೊತ್ತಿಗಾಗಲೇ ಶ್ರೀರಾಮುಲು ಪ್ರತ್ಯಕ್ಷರಾದರು. ಹಾವುಗಳನ್ನು ಬಿಟ್ಟುಬರಲು ವ್ಯಾನ್ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದರು. `ಅಯ್ಯೋ, ಒಂದೆರಡು ಕೇರೆ ಹಾವು ಬಿಡೋಕೆ ವ್ಯಾನ್ ಬೇರೆ ಬೇಕೆ... ಹಾಗೇ ಎಲ್ಲಾದರೂ ಬಿಡ್ರಿ~ ಎಂದು ಅರ್ಜುನ್ ತಮಾಷೆ ಯಾಗಿ ಪ್ರತಿಕ್ರಿಯಿಸಿದರು.ಏಳೆಂಟು ಹಾವುಗಳಿವೆ ಎಂದು ಶ್ರೀರಾಮುಲು ಹೇಳಿದರೂ ಅವರು ನಂಬಲಿಲ್ಲ. ಅವರ ತಮಾಷೆ ಮಾತನ್ನು ಮುಂದುವರಿಸಿದರು. ಶ್ರೀರಾಮುಲು ಕೂಡ ಹಾಸ್ಯಪ್ರಜ್ಞೆ ಇದ್ದವರೇ. `ಬೇಕಾದರೆ ನೀವೇ ನೋಡಿ... ಸರ್~ ಎಂದು ಡಬ್ಬದಲ್ಲಿದ್ದ ಹಾವುಗಳನ್ನೆಲ್ಲಾ ಗಾಜಿನ ಹೊದಿಕೆ ಇದ್ದ ಮೇಜಿನ ಮೇಲೆ ಎಸೆದರು. ಹಾವುಗಳು ನುಣುಪಾದ ಮೇಲ್ಮೈನಲ್ಲಿ ಸಲೀಸಾಗಿ ಹರಿದಾಡಲು ಸಾಧ್ಯವಾಗುವುದಿಲ್ಲ. ಇದನ್ನು ಅರಿತಿದ್ದ ಶ್ರೀರಾಮುಲು ಬೇಕೆಂದೇ ತಮಾಷೆ ಮಾಡಲು ಹಾವುಗಳನ್ನು ಹಾಗೆ ಎಸೆದರು.ಹಾವುಗಳು ನುಣ್ಣನೆ ಗಾಜಿನ ಮೇಲೆ ಕಷ್ಟಪಟ್ಟು ತೆವಳತೊಡಗಿದವು. ಎಲ್ಲವೂ ವಿಷಪೂರಿತ ನಾಗರ ಹಾವುಗಳು. ಅರ್ಜುನ್ ಮುಖ ಪೆಚ್ಚಾಯಿತು. ಹಾವುಗಳು ಅವರು ಕೂತಿದ್ದ ದಿಕ್ಕಿನತ್ತಲೇ ಚಲಿಸತೊಡಗಿ ದಾಗಲಂತೂ ಅವರಿಗೆ ಸಹಜವಾಗಿಯೇ ಹೆದರಿಕೆ ಯಾಯಿತು. ಮೆಲುದನಿಯಲ್ಲೇ `ಶ್ರೀರಾಮುಲು... ತೆಗೀರಿ...~ ಎನ್ನುತ್ತಾ ಅವರು ಕೈಯೆತ್ತಿದರೆ, ಹಾವುಗಳು ಕೈ ಆಡಿದ ಲಯದಲ್ಲೇ ಭುಸ್ಸನೆ ಹೆಡೆಯನ್ನೂ ಆಡಿಸು ತ್ತಿದ್ದವು. ಪೀಕಲಾಟದಲ್ಲಿ ಅರ್ಜುನ್ ಹೊಮ್ಮಿಸುತ್ತಿದ್ದ ದನಿ ಕೇಳುತ್ತಾ ಕೂತಿದ್ದ ವೇಮಗಲ್ ನಾರಾಯಣಸ್ವಾಮಿ ಯವರಿಗೆ ನಗು ಬಂದಿತಂತೆ. ಶ್ರೀರಾಮುಲು ತಮಾಷೆಗೆ ಹಾಗೆ ಮಾಡಿದ್ದಾರೆಂಬುದು ಅವರಿಗೂ ಗೊತ್ತಿತ್ತು. ಸ್ವಲ್ಪ ಹೊತ್ತು ಅರ್ಜುನ್ ಅವರನ್ನು ಸತಾಯಿಸಿದ ಶ್ರೀರಾಮುಲು ಆಮೇಲೆ ಹಾವುಗಳನ್ನು ಎತ್ತಿಕೊಂಡು ಮತ್ತೆ ಡಬ್ಬಕ್ಕೆ ಹಾಕಿದರು. ತಕ್ಷಣ ವ್ಯಾನ್ ವ್ಯವಸ್ಥೆಯಾಯಿತು.ಪೊಲೀಸ್ ವ್ಯವಸ್ಥೆ ಎಷ್ಟು ಸಮಾಜಮುಖಿ ಯಾಗಿರುತ್ತದೆ ಹಾಗೂ ಅಲ್ಲಿಯೂ ಮನುಷ್ಯ ಸಹಜ ವಾದ ಎಷ್ಟೋ ಹಾಸ್ಯ ಪ್ರಸಂಗಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.

* * *

ಖಲಿಸ್ತಾನ, ಜಮ್ಮು-ಕಾಶ್ಮೀರ, ಉಲ್ಫಾ, ಸಿಖ್ ಭಯೋತ್ಪಾದನೆ, ಮುಸ್ಲಿಂ ಭಯೋತ್ಪಾದನೆ, ಈಶಾನ್ಯ ರಾಜ್ಯಗಳ ಭಯೋತ್ಪಾದನೆ ಇವೆಲ್ಲವೂ ವ್ಯಾಪಕವಾಗಿದ್ದ ಕಾಲಘಟ್ಟ ಅದು. ನಾನು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತ್ದ್ದಿದೆ. ಜಾರ್ಜ್ ಫರ್ನಾಂಡಿಸ್ ಅವರ ತಮ್ಮ ಲಾರೆನ್ಸ್ ಫರ್ನಾಂಡಿಸ್ ಆಗ ಬೆಂಗಳೂರಿನ ಮೇಯರ್ ಆಗಿದ್ದರು. ರಿಚ್‌ಮಂಡ್ ಟೌನ್‌ನಲ್ಲಿ ಅವರ ಮನೆಯಿತ್ತು.ನಿತ್ಯವೂ ಅವರನ್ನು ನೋಡಲು ಜನಜಂಗುಳಿ. ಅವರ ಮನೆಯ ಆವರಣದಲ್ಲಿ ಯಾರೋ ಟ್ರಾನ್‌ಸಿಸ್ಟರ್ ಬಿಟ್ಟು ಹೋಗಿದ್ದರು. ಆ ಮಾಹಿತಿ ಠಾಣೆಗೆ ಬಂತು. ಆಗ ಬಾಂಬ್ ದಾಳಿಯ ಭೀತಿ ಇದ್ದ ಕಾರಣ ವಾರಸುದಾರರಿಲ್ಲದ ವಸ್ತುಗಳನ್ನು ಕಂಡರೆ ಸಹಜವಾಗಿಯೇ ಜನ ಹೆದರುತ್ತಿದ್ದರು. ಅದರಲ್ಲೂ ಮೇಯರ್ ಮನೆಯಲ್ಲಿ ಯಾರೋ ಟ್ರಾನ್‌ಸಿಸ್ಟರ್ ಬಿಟ್ಟುಹೋಗಿದ್ದಾರೆ ಅಂದಮೇಲೆ ಅದನ್ನು ಅನುಮಾನಿಸಲೇಬೇಕು. ನಮ್ಮ ತಂಡ ಅಲ್ಲಿಗೆ ಹೋದಾಗ ಆತಂಕದ ವಾತಾವರಣವಿತ್ತು. ಅಲ್ಲಿ ಇದ್ದ ಯಾರೋ ಒಬ್ಬರು ಹೊಸಕೋಟೆಯ, ಗೊತ್ತಿರುವವರೇ ಆ ಟ್ರಾನ್‌ಸಿಸ್ಟರ್ ಬಿಟ್ಟುಹೋಗಿದ್ದಾರೆ ಎಂದರು. ಅದನ್ನು ನಂಬಿ ಸುಮ್ಮನಾಗುವ ಹಾಗಿರಲಿಲ್ಲ. `ಬಾಂಬ್... ಬಾಂಬ್...~ ಎಂದು ಎಲ್ಲೆಡೆ ಹುಯಿಲೆದ್ದಿತು. ಕೊನೆಗೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಪರೀಕ್ಷಿಸಿದಾಗ, ಅದು ಟ್ರಾನ್‌ಸಿಸ್ಟರ್ ಅಷ್ಟೆ, ಬಾಂಬ್ ಅಲ್ಲವೆಂಬುದು ಸ್ಪಷ್ಟವಾಯಿತು. ಅದರಿಂದ ನಮಗೇನೂ ಬೇಸರವಾಗಲಿಲ್ಲ. ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ ತೃಪ್ತಿ ಸಿಕ್ಕಿತು. ಎರಡು ಗಂಟೆ ಜನ ಉಸಿರು ಬಿಗಿಹಿಡಿದು ನೋಡಿದ್ದ ಘಟನೆ ಅದು.ಅದೇ ಕಾಲಘಟ್ಟದಲ್ಲಿ ಸಿದ್ದಾಪುರದ ಹೇರ್ ಕಟಿಂಗ್ ಸಲೂನ್‌ನಲ್ಲಿ ಇಬ್ಬರು ಕಟಿಂಗ್ ಮಾಡಿಸಿಕೊಂಡು ಹೋದರು. ವೈರ್‌ಬ್ಯಾಗ್‌ನಲ್ಲಿ ಟ್ರಾನ್‌ಸಿಸ್ಟರ್ ಇತ್ತು. ಹೇರ್ ಕಟಿಂಗ್ ಮಾಡುತ್ತಿದ್ದವರಿಗೆ ಮಧ್ಯಾಹ್ನ ಬಿಡುವು ಸಿಕ್ಕಿತು. ವೈರ್‌ಬ್ಯಾಗ್‌ನಲ್ಲಿದ್ದ ಟ್ರಾನ್‌ಸಿಸ್ಟರ್ ಕಣ್ಣಿಗೆ ಬಿದ್ದದ್ದೇ ಆಗ. ಅವರು ಅದನ್ನು ಅನುಮಾನಿಸದೆ, `ಆನ್~ ಮಾಡಿದರು. ತಕ್ಷಣ ಸ್ಫೋಟ ಸಂಭವಿಸಿತು. ಈ ಇಬ್ಬರಲ್ಲಿ ಒಬ್ಬ ಮೃತಪಟ್ಟ. ವಾರಸುದಾರರಿಲ್ಲದ ಟಿಫನ್ ಬಾಕ್ಸ್, ಟ್ರಾನ್‌ಸಿಸ್ಟರ್ ಬಗ್ಗೆ ಜನರಿಗೆ ಅನುಮಾನ ಇರಲೇಬೇಕು ಎಂದು ಪೊಲೀಸರು ಪದೇಪದೇ ಹೇಳುವುದು ಇದೇ ಕಾರಣಕ್ಕೆ.

* * *

2005ರ ಪ್ರಾರಂಭದಲ್ಲಿ ವಿಧಾನಸೌಧದ ಶೌಚಾಲಯ, ಶಾಸಕರ ಭವನದಲ್ಲಿ ಜಿಲೆಟಿನ್ ಕಡ್ಡಿಗಳಿಂದ ತಯಾರಿಸಲಾದ ಬಾಂಬ್‌ಗಳು ಸಿಕ್ಕವು. ಅನಾಮಧೇಯನೊಬ್ಬ ಇಂತಿಂಥ ಕಡೆ ಬಾಂಬ್ ಇಟ್ಟಿದ್ದೇನೆ  ಎಂದು ಫೋನ್ ಮಾಡಿ ತಾನೇ ಮಾಹಿತಿ ಕೊಟ್ಟಿದ್ದ.  ಈ ಸುದ್ದಿ ಬೇಗ ಹಬ್ಬಿತು. ಸರ್ಕಾರ ಆಡಳಿತ ನಡೆಸುವ ಆಯಕಟ್ಟಿನ ಜಾಗಕ್ಕೇ ಬಾಂಬ್ ಇಡಲಾಗಿದೆ ಎಂಬ ಕಾರಣಕ್ಕೆ ಮಾಧ್ಯಮದಲ್ಲಿ ವ್ಯಾಪಕವಾಗಿ ಸುದ್ದಿ ಪ್ರಸಾರ ವಾಯಿತು. ಫೋನ್ ಮಾಡಿದವನು ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಸಂಘಟನೆಯವನು ತಾನೆಂದು ಹೇಳಿಕೊಂಡಿದ್ದ.ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ಆಗ ಸಬ್ ಇನ್ಸ್‌ಪೆಕ್ಟರ್ ಆಗಿದ್ದವರು ರಾಜೇಂದ್ರ ಬಾಬು. ಬಾಂಬ್ ಇಟ್ಟವನು ಫೋನ್ ಮಾಡಿದಾಗ ಪ್ರತಿಕ್ರಿಯಿಸಿದ್ದು ಅವರೇ. ಅವರು ಎಲ್ಲಿಂದ ಕರೆ ಬಂದಿತ್ತೋ ಆ ನಂಬರಿಗೆ ಮತ್ತೆ ಫೋನ್ ಮಾಡಿದರು. ಅದು ಸಂಪಂಗಿರಾಮನಗರದಲ್ಲಿದ್ದ ಎಸ್‌ಟಿಡಿ ಬೂತ್‌ನ ನಂಬರ್ ಆಗಿತ್ತು. ಸತತವಾಗಿ ರಾಜೇಂದ್ರ ಬಾಬು ರಿಂಗ್ ಕೊಟ್ಟಾಗ ಬೂತ್ ಮಾಲೀಕ ಫೋನ್ ಎತ್ತಿಕೊಂಡ.ಯುವಕನೊಬ್ಬ ಅಲ್ಲಿಂದ ಫೋನ್ ಮಾಡಿದ್ದನೆಂಬುದು ಗೊತ್ತಾಯಿತು. ಫೋನ್ ಮಾಡಿದ ವನು ಹೆಲ್ಮೆಟ್ ಬಿಟ್ಟು ಹೋಗಿದ್ದಾನೆಂಬ ವಿಷಯವನ್ನು ಕೂಡ ಮಾಲೀಕ ಹೇಳಿದ. ಅವನು ಹೆಲ್ಮೆಟ್ ತೆಗೆದು ಕೊಂಡು ಹೋಗಲು ಮತ್ತೆ ಬಂದಾಗ ಗಾಡಿ ನಂಬರ್ ನೋಟ್ ಮಾಡಿಕೊಳ್ಳಿ; ಸಾಧ್ಯವಾದರೆ ಅಲ್ಲಿಂದ ಅವನು ತಕ್ಷಣ ಹೋಗದಂತೆ ತಡೆಯಲು ಯತ್ನಿಸಿ ಎಂದು ರಾಜೇಂದ್ರ ಬಾಬು ಸಮಯಪ್ರಜ್ಞೆಯಿಂದ ಸೂಚನೆ ಕೊಟ್ಟರು. ತಕ್ಷಣ  ಸಂಪಂಗಿರಾಮನಗರ ಪೊಲೀಸ್ ಠಾಣೆಯವರಿಗೂ ಮಾಹಿತಿ ಹೋಯಿತು. ಹೆಲ್ಮೆಟ್ ತೆಗೆದು ಕೊಂಡು ಹೋಗಲು ಆ ವ್ಯಕ್ತಿ ಬಂದಾಗ ಬೂತ್ ಮಾಲೀಕ ಗಾಡಿ ನಂಬರ್ ನೋಟ್ ಮಾಡಿಕೊಂಡು ಪೊಲೀಸರಿಗೆ ಕೊಟ್ಟರು. ಬಾಂಬ್ ಇಟ್ಟವನ ಪತ್ತೆಗೆ ನಾನು, ಶಂಕರ್ ಕರ್ನಿಂಗ, ಸುಬ್ಬಣ್ಣ ಮತ್ತಿತರರಿದ್ದ ತಂಡವನ್ನು ಇಲಾಖೆ ನಿಯೋಜಿಸಿತು. ಬೈಕ್ ನಂಬರ್ ಮೂಲಕ ಅದರ ಮಾಲೀಕನ ವಿಳಾಸ ಪತ್ತೆಮಾಡಿದೆವು. ಸಂಜಯನಗರ ದಾಚೆಯ ಚೋಳನಾಯಕನ ಹಳ್ಳಿಯವನಿಗೆ ಸೇರಿದ್ದ ಬೈಕ್ ಅದು. ಅವನ ಬಳಿಗೆ ಹೋದಾಗ ಗೊತ್ತಾಯಿತು, ಅದನ್ನು ಸಬ್ ಇನ್ಸ್‌ಪೆಕ್ಟರ್ ಒಬ್ಬನಿಗೆ ಮಾರಿದ್ದ. ಉತ್ತರ ಕರ್ನಾಟಕದಲ್ಲಿ ಎಲ್ಲೋ ಸಬ್ ಇನ್‌ಸ್ಪೆಕ್ಟರ್ ಆಗಿದ್ದೇನೆಂದು ಹೇಳಿಕೊಂಡಿದ್ದ ವ್ಯಕ್ತಿ ಬೈಕ್ ಕೊಂಡಿದ್ದ. ಅವನು ವ್ಯವಸ್ಥೆಯ ವಿರುದ್ಧ ಮಾತನಾಡುತ್ತಿದ್ದ ಎಂಬ ಸಂಗತಿ ಗೊತ್ತಾಯಿತು. ಯಾರ‌್ಯಾರು ಆ ರೀತಿ ವರ್ತಿಸುತ್ತಿದ್ದಾರೆ ಎಂದು ಇಲಾಖೆಯ ವಿವಿಧೆಡೆಗಳಲ್ಲಿ ಮಾಹಿತಿ ಸಂಗ್ರಹಿಸಿದೆವು. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಸಬ್ ಇನ್ಸ್‌ಪೆಕ್ಟರ್ ಒಬ್ಬರು ತರಬೇತಿಯಲ್ಲಿದ್ದು, ಅವರು ಆ ರೀತಿ ವರ್ತಿಸುತ್ತಾರೆಂಬುದು ಗೊತ್ತಾಯಿತು. `ಜೂನಿಯರ್ ಪೊಲೀಸ್ ಮೆಸ್~ನ ಕೋಣೆಯಲ್ಲಿ ಅವರು ತಂಗಿದ್ದರು. ಅಲ್ಲಿಗೆ ನಾನು ಹೋದೆ. ಕೋಣೆಯಲ್ಲಿ ಭಗತ್‌ಸಿಂಗ್ ಚಿತ್ರವಿತ್ತು.ದೇಶಭಕ್ತರ ಕುರಿತ ಬರಹಗಳ ಪ್ರತಿಗಳಿದ್ದವು. ನಾವು ಅನುಮಾನಿಸಿದ್ದ ವ್ಯಕ್ತಿ ನನ್ನನ್ನು ಗುರುತುಹಿಡಿದು ಬರಮಾಡಿಕೊಂಡ. ಕೋಣೆಯಲ್ಲಿ ಹಾಗೇ ಸುತ್ತುಹಾಕಿದ ಮೇಲೆ ಜಿಲೆಟಿನ್ ಕಡ್ಡಿಗಳು ಕಣ್ಣಿಗೆ ಬಿದ್ದೆವು. ಆತ ತಾನೇ ಬಾಂಬ್ ಇಟ್ಟಿದ್ದು ಎಂಬುದನ್ನು ಒಪ್ಪಿಕೊಂಡು ಶರಣಾ ದದ್ದೂ ಆಯಿತು. ಇನ್ನೂ ತರಬೇತಿಯಲ್ಲಿದ್ದ ಕಾರಣ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಆತನಿಗೆ ದಕ್ಕಲಿಲ್ಲ. ಈಗ ಸಮಿತಿಯೊಂದರ ಅಧ್ಯಕ್ಷನಾಗಿ ಆತ ಕೆಲಸ ಮಾಡುತ್ತಿದ್ದಾರೆ.ರಾಜೇಂದ್ರ ಬಾಬು ಅವರ ಸಮಯಪ್ರಜ್ಞೆಯಿಂದ ಪ್ರಮುಖ ಪ್ರಕರಣವೊಂದು ಪತ್ತೆಯಾಯಿತು. ಕಂಟ್ರೋಲ್ ರೂಮ್‌ನಲ್ಲಿದ್ದವರೂ ಜಾಗರೂಕರಾಗಿದ್ದರಷ್ಟೇ ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.

ಮುಂದಿನ ವಾರ: ಕಾನೂನನ್ನು ಜನರೇ ಕೈಗೆತ್ತಿಕೊಂಡಾಗ...

ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.